ಬೆಟ್ಟಂಪಾಡಿ: ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಗಳನ್ನು ಸಮರ್ಥವಾಗಿ ಎದುರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇಲ್ಲಿನ ಸಹ ಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಕೆ ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿ ‘ವಾಣಿಜ್ಯ ಸಂಘ’ದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಾಣಿಜ್ಯ ವಿಷಯದ ಬಗ್ಗೆ ಪರಿಣತಿ ಪಡೆಯುವುದರ ಜೊತೆಗೆ ಅತೀ ಹೆಚ್ಚು ಬೇಡಿಕೆಯಿರುವ ಕೌಶಲ್ಯಗಳನ್ನು ಕೂಡ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಾಣಿಜ್ಯ ಸಂಘದ ಕಾರ್ಯಕ್ರಮಗಳು ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೆ ಪೂರಕವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಮಾತನಾಡಿ ಪ್ರಸ್ತುತ ಅತೀ ಹೆಚ್ಚು ಬೇಡಿಕೆ ಇರುವ ಬಿ.ಕಾಂ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮುಂದೆ ಹೆಚ್ಚಿನ ಸವಾಲುಗಳನ್ನು ಕೂಡ ಎದುರಿಸಬೇಕಾಗುತ್ತದೆ. ವಾಣಿಜ್ಯ ಸಂಘದ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸವಾಲನ್ನು ಎದುರಿಸುವ ಶಕ್ತಿಯನ್ನು ತುಂಬಲಿ ಎಂದು ಹೇಳಿದರು. ಇತ್ತೀಚೆಗೆ ಭಾರತೀಯರ ವಿಶ್ವವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಡಾ. ಗೋಪಾಲಕೃಷ್ಣ ಕೆ ಇವರಿಗೆ ವಾಣಿಜ್ಯ ವಿಭಾಗದ ವತಿಯಿಂದ ಗೌರವ ಸಲ್ಲಿಸಲಾಯಿತು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಹರಿಪ್ರಸಾದ್ ಎಸ್ ಮಾತನಾಡುತ್ತಾ ವಾಣಿಜ್ಯ ಸಂಘದಲ್ಲಿನ ಸಕ್ರಿಯ ಭಾಗವಹಿಸುವಿಕೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಪೂರಕ ವೇದಿಕೆಯನ್ನು ನಿರ್ಮಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘದ ಸಂಚಾಲಕರಾಗಿರುವ ದೀಕ್ಷಿತ್ ಕುಮಾರ್, ಉಪನ್ಯಾಸಕ ವೃಂದದ ದಾಮೋದರ ಗೌಡ ಕೆ, ಶ್ರೀ ವೆಂಕಟಕೃಷ್ಣ ಭಾಗವತ್, ರಾಮ ಕೆ, ಡಾ. ಪೊಡಿಯ ಉಪಸ್ಥಿತರಿದ್ದರು. ವಾಣಿಜ್ಯ ಸಂಘದ ಅಧ್ಯಕ್ಷ ಕು. ದೀಪಿಕಾ ಬಿ, ಕಾರ್ಯದರ್ಶಿ ಕು. ಧನ್ಯಶ್ರೀ ಅಂಗ್ರಾಜೆ ಮತ್ತು ಖಜಾಂಜಿ ರಾಕೇಶ ರೈ ಉಪಸ್ಥಿತರಿದ್ದರು. ಹರಿಪ್ರಸಾದ್ ಎಸ್ ಸ್ವಾಗತಿಸಿದರು. ಕು. ಧನ್ಯಶ್ರೀ ಅಂಗ್ರಾಜೆ ವಾರ್ಷಿಕ ಕಾರ್ಯಕ್ರಮಗಳ ಕಾರ್ಯಸೂಚಿಯನ್ನು ಮಂಡಿಸಿದರು. ಶ್ರೀ ಮಹೇಶ್ ಕೆ ಎಂ ವಂದಿಸಿದರು. ಶ್ರೀ ಜೀವನ್ ಜಿ ಕಾರ್ಯಕ್ರಮ ನಿರೂಪಿಸಿದರು.