HomePage_Banner
HomePage_Banner
HomePage_Banner
HomePage_Banner

ಚುನಾವಣೆಯಲ್ಲಿ ಸೋತರೂ ಭರವಸೆ ಈಡೇರಿಸಿದ ಅಭ್ಯರ್ಥಿ…! ಶೇಕಮಲೆ ದಲಿತ ಕಾಲನಿ 50 ವರ್ಷಗಳ ಬೇಡಿಕೆ ಈಡೇರಿಸಿದ ಜಾಗದ ಮಾಲೀಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಶೇಕಮಲೆ ದಲಿತ ಕಾಲೋನಿಯ ದಾರಿ ಸಮಸ್ಯೆ ಇತ್ಯರ್ಥಗೊಂಡಿದ್ದು ಸ್ಥಳೀಯ ಜಾಗದ ಮಾಲೀಕ ಹಾಗೂ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷವೊಂದರ ಬೆಂಬಲಿತ ಅಭ್ಯರ್ಥಿಯೋರ್ವರ ಶ್ರಮ ಹಾಗೂ ಮಾನವೀಯತೆಯ ಮೂಲಕ ಕಾಲೋನಿಯ ನಿವಾಸಿಗಳ ೫೦ ವರ್ಷಗಳ ಹಿಂದಿನ ಬೇಡಿಕೆಯೊಂದು ಈಡೇರಿದೆ. ಈ ಬೆಳವಣಿಗಯು ಅರಿಯಡ್ಕ ಗ್ರಾಮಸ್ಥರು ಸೇರಿದಂತೆ ಹಲವರಲ್ಲಿ ಅಚ್ಚರಿಗೂ ಕಾರಣವಾಗಿಸದ್ದು ದಾರಿ ಸಮಸ್ಯೆಯನ್ನು ಪರಿಹರಿಸಿದ ಇಬ್ಬರಿಗೂ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಘಟನೆಯ ವಿವರ:
ಶೇಕಮಲೆಯ ದಲಿತ ಕಾಲೋನಿಯಲ್ಲಿ ಸುಮಾರು ೨೦ಕ್ಕೂ ಮಿಕ್ಕಿ ಬಡ ದಲಿತ ಕುಟುಂಬಗಳ ಮನೆಗಳಿದೆ. ಸುಮಾರು ೭೦ ವರ್ಷಗಳ ಹಿಂದಿನಿಂದಲೂ ಈ ಪ್ರದೇಶದಲ್ಲಿ ಮನೆ ಕಟ್ಟಿಕೊಂಡು ಕುಟುಂಬಗಳಿವೆ. ಈ ಕಾಲೋನಿಗೆ ತೆರಳಲು ದಾರಿಯ ವ್ಯವಸ್ಥೆ ಇರಲಿಲ್ಲ. ಮುಖ್ಯ ರಸ್ತೆಯಿಂದ ಸ್ವಲ್ಪ ದೂರ ನಡೆದು ಬಳಿಕ ತೋಟದ ಕಟ್ಟಪುಣಿ ಮೂಲಕ ಕಾಲೋನಿಗೆ ತೆರಳುತ್ತಿದ್ದರು. ಅಂದು ಈ ವ್ಯಾಪ್ತಿಯಲ್ಲಿ ಎರಡರಿಂದ ಮೂರು ಮನೆಗಳಿದ್ದು ಕಾಲ ಕ್ರಮೇಣ ಈ ಪ್ರದೇಶದಲ್ಲಿ ೨೦ಕ್ಕೂ ಮಿಕ್ಕಿ ದಲಿತ ಕುಟುಂಬಗಳು ವಾಸವಾಗಿದ್ದಾರೆ. ಅಂದಿನಿಂದ ಇಂದಿನವರೆಗೆ ಸುಮಾರು ೫೦ ವರ್ಷಗಳ ಕಾಲ ಕಟ್ಟಪುಣಿ ಮೂಲಕವೇ ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ತೆರಳುತ್ತಿದ್ದರು. ಕಾಲೋನಿಗೆ ರಸ್ತೆ ನಿರ್ಮಾಣ ಮಾಡಬೇಕೆಂದು ಹೋರಾಟ ಆರಂಭಗೊಂಡು ಐದು ದಶಕಗಳೇ ಕಳೆದರೂ ಹೋರಾಟಕ್ಕೆ ಯಾವುದೇ ಫಲ ಸಿಕ್ಕಿರಲಿಲ್ಲ. ಇದಕ್ಕೆ ಕಾರಣವೂ ಇತ್ತು. ಶಾಸಕರಿಂದ ಹಿಡಿದು ಮುಖ್ಯ ಮಂತ್ರಿಗಳ ತನಕ ಮನವಿ ಮಾಡಿದರೂ ಪರಿಣಾಮ ಮಾತ್ರ ಶೂನ್ಯ. ಇನ್ನು ನಮಗೆ ರಸ್ತೆ ಆಗುವುದಿಲ್ಲ ಆ ಕನಸು ನನಸಾಗಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಕುಟುಂಬಗಳು ಬಂದಿದ್ದರೂ ಆಗಬಹುದು ಎಂಬ ನಿರೀಕ್ಷೆಯೂ ಇತ್ತು.

ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದೇನು…?
ಅಷ್ಟಕ್ಕೂ ಈ ಕಾಲೋನಿಗೆ ರಸ್ತೆ ನಿರ್ಮಾಣ ಮಾಡಲು ಅಡ್ಡಿಯಾಗಿರುವುದು ಖಾಸಗೀ ಜಾಗ. ಕಾಲೋನಿ ಜನತೆ ತೆರಳುತ್ತಿದ್ದ ಕಟ್ಟಪುಣಿ ವ್ಯಕ್ತಿಯೋರ್ವರ ವರ್ಗ ಜಾಗವಾಗಿತ್ತು. ವರ್ಗ ಜಾಗದಲ್ಲಿರವ ಅಡಿಕೆ ಮತ್ತು ತೆಂಗಿನ ತೋಟವನ್ನು ಕಡಿದು ರಸ್ತೆ ನಿರ್ಮಾಣ ಮಾಡಲು ಮಾಲಕರು ಒಪ್ಪಿರಲಿಲ್ಲ. ಹಲವು ಬಾರಿ ಕಾಲೋನಿ ನಿವಾಸಿಗಳು ಜಾಗದ ಮಾಲೀಕರಲ್ಲಿ ಮನವಿ ಮಾಡಿದಾಗ ನಿಮಗೆ ನಡೆದು ಹೋಗಲು ದಾರಿ ಮಾಡಿದ್ದೇನೆ, ರಸ್ತೆ ನಿರ್ಮಾಣ ವಿಚಾರದಲ್ಲಿ ಮಾಲೀಕರು ಆಸಕ್ತಿ ತೋರಿರಲಿಲ್ಲ. ನಡೆದುಕೊಂಡು ಹೋಗುವುದಕ್ಕಾದರೂ ಜಾಗ ನೀಡಿದ್ದಕ್ಕೆ ಕಾಲೋನಿ ನಿವಾಸಿಗಳು ಕೃತಜ್ಞರಾಗಿದ್ದರು. ಸುಮಾರು ೧೫೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಾವತಿಯಿಲ್ಲದೇ ಖಾಸಗೀ ಭೂಮಿಯನ್ನು ಬಿಟ್ಟು ಕೊಡಲು ಮಾಲಕರು ತಯಾರಿರಲಿಲ್ಲ. ಈ ಎಲ್ಲಾ ಕಾರಣಕ್ಕೆ ಕಾಲೋನಿ ರಸ್ತೆ ಕನಸು ಕನಸಾಗಿಯೇ ಉಳಿದಿತ್ತು. ಕಟ್ಟಪುಣಿಯ ಒಂದು ಭಾಗದಲ್ಲಿ ಅಡಿಕೆ ತೋಟವಿದ್ದರೆ ಇನ್ನೊಂದು ಭಾಗದಲ್ಲಿ ಕಿರು ಹೊಳೆ ಹರಿಯುತ್ತಿತ್ತು. ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವಾಗ ಕಟ್ಟಪುಣಿಯ ಮೂಲಕ ಸಂಚಾರ ಅಪಾಯಕಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ತೋಟದ ಮಾಲೀಕರು ಬೇಲಿಯನ್ನು ತೆರವುಗೊಳಿಸಿ ತೋಟದ ಮೂಲಕ ಸಂಚಾರಕ್ಕೆ ಅನುವು ಮಾಡಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು. ಈ ಎಲ್ಲಾ ಕಾರಣದಿಂದ ಜಾಗದ ಮಾಲೀಕರು ಒಂದಲ್ಲ ಒಂದು ದಿನ ನಮಗೆ ದಾರಿ ತೋರಿಸಿಯಾರು ಎಂಬ ಆಶಾ ಬಾವನೆ ಕಾಲೋನಿ ನಿವಾಸಿಗಳಲ್ಲಿತ್ತು. ಈ ನಡುವೆ ಸರಕಾರದಿಂದ ಕಿರು ಹೊಳೆಗೆ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿತ್ತು.

ದಾರಿ ನಿರ್ಮಾಣವಾಗಿದ್ದು ಹೇಗೆ…?
ಅರಿಯಡ್ಕ ವಾರ್ಡ್ ೩ನೇ ವ್ಯಾಪ್ತಿಯಲ್ಲಿರುವ ಈ ಕಾಲೋನಿಗೆ ದಾರಿ ನಿರ್ಮಾಣವಾಗಲು ಈ ಬಾರಿಯ ಗ್ರಾ.ಪಂ ಚುನಾವಣೆಯೇ ಹೇತುವಾಯಿತು. ಚುನಾವಣೆಗೆ ಸ್ಪರ್ಧಿಸಿದ್ದ ಸಾಮಾಜಿಕ ಕಾರ್ಯಕರ್ತ, ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ಜಾಬಿರ್ ಅರಿಯಡ್ಕರವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ಗೆದ್ದರೂ, ಸೋತರೂ ಕಾಲೋನಿಗೆ ತೆರಳುವ ಕಾಲು ದಾರಿಯನ್ನು ರಸ್ತೆಯನ್ನಾಗಿ ಮಾರ್ಪಾಡು ಮಾಡಿಸಿಕೊಡುತ್ತೇನೆ, ಜಾಗದ ಮಾಲೀಕರಲ್ಲಿ ಮಾತನಾಡಿಸಿ ಅವರ ಮನವೊಲಿಸುವ ಮೂಲಕ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ನೀಡಿದ್ದರು. ಅವರು ನೀಡಿದ ಭರವಸೆಯಂತೆ ಚುನಾವಣೆಗೆ ಮೊದಲೇ ಜಾಗದ ಮಾಲೀಕ, ಹಿರಿಯ ಉದ್ಯಮಿ ಯೂಸುಫ್ ಹಾಜಿ ದರ್ಖಾಸ್‌ರವರಲ್ಲಿ ಮಾತನಾಡಿ ಕಾಲೋನಿಯ ದಲಿತರ ದಾರಿ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಜಾಬಿರ್ ಅವರಲ್ಲದೇ ಹೇಮನಾಥ ಶೆಟ್ಟಿ ಕಾವು, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮೊದಲಾದವರು ಯೂಸುಫ್ ಹಾಜಿಯವರಲ್ಲಿ ಮಾತುಕತೆ ನಡೆಸಿದ್ದರು. ಕಾಲೋನಿಗೆ ತೆರಳುವ ಕಾಲು ದಾರಿಯನ್ನು ರಸ್ತೆಯನ್ನಾಗಿ ಮಾರ್ಪಡಿಸಲು ಯೂಸುಫ್ ಹಾಜಿ ಕೊನೆಗೂ ಒಪ್ಪಿಕೊಂಡಿದ್ದರು. ಮಾತುಕತೆಗೆ ಬಂದಿರುವ ಜಾಬಿರ್ ಅರಿಯಡ್ಕ ಮತ್ತು ತಂಡದವರ ಜೊತೆ ರಸ್ತೆಗೆ ಜಾಗ ಬಿಡುವ ಭರವಸೆ ನೀಡಿದ ಹಾಜಿಯವರು ನೀನು ಗೆದ್ದು ಬಂದು ರಸ್ತೆಗೆ ಶಂಕು ಸ್ಥಾಪನೆ ಮಾಡಬೇಕು ಎಂದು ಆಶೀರ್ವದಿಸಿದ್ದರು. ಅಂದೇ ರಸ್ತೆ ನಿರ್ಮಾಣಕ್ಕೆ ಮುಹೂರ್ತವೂ ನಿಗದಿಪಡಿಸಲಾಗಿತ್ತು.

ಸೋತರೂ ಭರವಸೆ ಈಡೇರಿಸಿದರು…
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಾಬಿರ್ ಅರಿಯಡ್ಕರವರು ಕೇವಲ ಅಲ್ಪಮತಗಳಿಂದ ಪರಾಭವಗೊಂಡಿದ್ದರು. ತಾನು ಚುನಾವಣೆಯಲ್ಲೂ ಸೋತರೂ ದಲಿತ ಕಾಲೋನಿ ನಿವಾಸಿಗಳಿಗೆ ನೀಡಿದ ಭರವಸೆಯನ್ನು ಚುನಾವಣಾ ಫಲಿತಾಂಶದ ದಿನದ ಸಂಜೆಯೇ ಈಡೇರಿಸಿದ್ದಾರೆ. ಸ್ಥಳಕ್ಕೆ ತೆರಳಿದ ಜಾಬಿರ್ ಅರಿಯಡ್ಕ ಮತ್ತು ತಂಡ ಕಾಲೋನಿ ನಿವಾಸಿಗಳನ್ನು ಕರೆಸಿ ಜಾಗದ ಮಾಲೀಕರನ್ನು ಕರೆಸಿ ಕಾಲೋನಿಗೆ ತೆರಳುವ ವಾಹನ ಸಂಚಾರಕ್ಕೆ ಯೋಗ್ಯವಾದಷ್ಟು ಅಗಲಕ್ಕೆ ರಸ್ತೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯನ್ನು ಫಲಿತಾಂಶದ ದಿನವೇ ಈಡೇರಿಸುವ ಮೂಲಕ ದಲಿತ ಕುಟುಂಬಗಳ ಐದು ದಶಕಗಳ ಬೇಡಿಕೆಯನ್ನುಜ ಈಡೇರಿಸುವ ಮೂಲಕ ನಿವಾಸಿಗಳ ಕಣ್ಣೀರೊರೆಸುವ ಕೆಲಸವನ್ನು ಮಾಡಿದ್ದಾರೆ. ಇದು ಅರಿಯಡ್ಕ ಗ್ರಾಮದಲ್ಲಿ ಮಾತ್ರವಲ್ಲದೇ ದಲಿತ ಕಾಲೋನಿಯ ರಸ್ತೆ ಸಂಕಷ್ಟದ ಕುರಿತು ಅರಿವು ಇದ್ದ ಎಲ್ಲರಿಂದಲೂ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಶೇಕಮಲೆ ದಲಿತ ಕಾಲೋನಿಗೆ ರಸ್ತೆಯಿಲ್ಲದೇ ಬಹು ಕಾಲದಿಂದ ಇಲ್ಲಿನ ನಿವಾಸಿಗಳು ಬಹಳ ಸಂಕಷ್ಟ ಅನುಭವಿಸುತ್ತಿದ್ದರು. ಇತ್ತೀಚೆಗೆ ಗ್ರಾ.ಪಂ ಚುನಾವಣೆ ಸಮೀಪಿಸಿದಾಗ ಈ ಭಾಗದಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್ ಹಾಕಿರುವುದನ್ನು ಗಮನಿಸಿದ ನಾವು ಸ್ಥಳೀಯ ಕಾಲೋನಿ ನಿವಾಸಿಗಳ ಜೊತೆ ಮಾತನಾಡಿದಾಗ ರಸ್ತೆ ಸಮಸ್ಯೆ ಬಗ್ಗೆ ಅಲವತ್ತುಕೊಂಡಿದ್ದರು. ಆ ಬಳಿಕ ನಾನು, ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಕಾವು ಹೇಮನಾಥ ಶೆಟ್ಟಿ, ರಫೀಕ್ ದರ್ಖಾಸ್ ಮೊದಲಾದವರು ಜಾಗದ ಮಾಲೀಕರಾದ ಯೂಸುಫ್ ಹಾಜಿ ಬಂಡಸಾಲೆ ಹಾಗೂ ಅವರ ಪುತ್ರ ರಫೀಕ್ ಬಂಡಸಾಲೆ ಅವರ ಜೊತೆ ಮಾತುಕತೆ ನಡೆಸಿದ್ದು ಸ್ವಯಂಪ್ರೇರಿತವಾಗಿ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುವುದಾಗಿ ಯೂಸುಫ್ ಹಾಜಿ ಒಪ್ಪಿಕೊಂಡು ಹೃದಯವಂತಿಕೆ ಮೆರೆದಿದ್ದಾರೆ. ಜಾಗದ ಮಾಲೀಕರಾದ ಯೂಸುಫ್ ಹಾಜಿ ಬಂಡಸಾಲೆ ಮತ್ತು ರಫೀಕ್ ಬಂಡಸಾಲೆ ಅವರು ಮಾನವೀಯತೆ ಮೆರೆದು ದಲಿತ ಸಮುದಾಯಕ್ಕೆ ಆಸರೆಯಾಗಿದ್ದು ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ಕೂಡಾ ಆಗಿದೆ ಜಾಬಿರ್ ಅರಿಯಡ್ಕ

ನಮ್ಮ ಕಾಲೋನಿಗೆ ರಸ್ತೆ ಮಾಡಿ ಕೊಡಬೇಕೆಂಬುದು ನಮ್ಮ ಬಹು ಕಾಲದ ಬೇಡಿಕೆಯಾಗಿತ್ತು. ಹಲವರಿಗೆ ಮನವಿಯನ್ನೂ ಕೂಡಾ ಹಲವು ಬಾರಿ ಮಾಡುತ್ತಾ ಬಂದಿದ್ದೆವು. ಆದರೆ ಅದು ಬೇಡಿಕೆಯಾಗಿಯೇ ಇತ್ತು. ಇತ್ತೀಚೆಗೆ ನಡೆದ ಗ್ರಾ.ಪಂ ಚುನವಣೆ ಸಂದರ್ಭ ನಾವು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಮಾಡಿದ್ದೆವು. ಅದನ್ನು ಗಮನಿಸಿದ ಸ್ಥಳೀಯ ಮುಖಂಡರಾದ ಜಾಬಿರ್ ಅರಿಯಡ್ಕ ಅವರು ನಮ್ಮ ಜೊತೆ ಮಾತುಕತೆ ನಡೆಸಿ ರಸ್ತೆಗೆ ಸ್ಥಳವನ್ನು ಬಿಟ್ಟುಕೊಡುವ ಬಗ್ಗೆ ಜಾಗದ ಮಾಲೀಕರ ಜೊತೆ ಮಾತನಾಡಿ ವ್ಯವಸ್ಥೆಗೊಳಿಸುವ ಭರವಸೆ ನೀಡಿದ್ದರು. ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿಯವರೂ ಈ ಬಗ್ಗೆ ಪ್ರಯತ್ನಿಸಿದ್ದಾರೆ. ಜಾಗದ ಮಾಲೀಕರಾದ ಯೂಸುಫ್ ಹಾಜಿ ಹಾಗೂ ರಫೀಕ್ ಬಂಡಸಾಲೆರವರಿಗೆ ನಮ್ಮ ಕೃತಜ್ಞತೆಗಳು. ಅದರಲ್ಲೂ ಚುನಾವಣೆಗೆ ಸ್ಪರ್ಧಿಸಿ ಅಲ್ಪಮತಗಳಿಂದ ಸೋತರೂ ನಮಗೆ ನೀಡಿದ ಭರವಸೆ ಈಡೇರಿಸಿದ ಜಾಬಿರ್ ಅರಿಯಡ್ಕರವರಿಗೂ ನಮ್ಮ ಕೃತಜ್ಞತೆಗಳು -ನಾರಾಯಣ ಎಸ್ ಮತ್ತು ಹರೀಶ ಎಸ್(ಕಾಲೋನಿ ನಿವಾಸಿಗಳು)

ಕಾಲೋನಿ ನಿವಾಸಿಗಳು ತಮ್ಮ ಕಾಲೋನಿಗೆ ಹೋಗಲು ರಸ್ತೆಗೆ ಜಾಗ ಬಿಟ್ಟ ಕೊಡುವಂತೆ ನಮ್ಮಲ್ಲಿ ಬಂದು ಮನವಿ ಮಾಡಿದ್ದರು. ಜಾಬಿರ್ ಅರಿಯಡ್ಕ ಅವರು ಮುಂದಾಳತ್ವ ವಹಿಸಿಕೊಂಡು ಜಾಗವನ್ನು ಬಿಟ್ಟು ಕೊಡುವಂತೆ ಮನವಿ, ಮತ್ತು ಮಾತುಕತೆ ನಡೆಸಿದ ಪರಿಣಾಮ ನಾವು ಜಾಗವನ್ನು ಬಿಟ್ಟು ಕೊಟ್ಟಿದ್ದೇವೆ. ದಲಿತ ಸಮುದಾಯದವ ಬೇಡಿಕೆ ಈಡೇರಿಸಿದ ತೃಪ್ತಿ ನಮಗಿದೆ -ಯೂಸುಫ್ ಹಾಜಿ ಬಂಡಸಾಲೆ(ಜಾಗದ ಮಾಲೀಕರು) ಹಾಗೂ ರಫೀಕ್ ಬಂಡಸಾಲೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.