ಸಿದ್ದಿಕ್ ಕುಂಬ್ರ
ಕಳೆದ ಕೆಲವು ದಿನಗಳಿಂದ ಪುತ್ತೂರು ತಾಲೂಕಿನ ಗ್ರಾಮಾಂತರ ಭಾಗದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿದೆ ಎಂಬ ಸುದ್ದಿ ದಿನೇ ದಿನೇ ಬರುತ್ತಿದೆ. ಇದರಿಂದ ಒಂದಷ್ಟು ಜನರಿಗೆ ಭಯವೂ ಶುರುವಾಗಿದೆ. ನಮ್ಮ ಮನೆ ಕಡೆಯೂ ಬರಬಹುದೇ? ರಾತ್ರಿ ವೇಳೆ ಮನೆಯಿಂದ ಹೊರಗಡೆ ಹೋಗುವುದಾದರೂ ಹೇಗೆ ಎಂಬ ಜನರಲ್ಲಿ ಕಾಡುತ್ತಿದೆ. ಈ ಭಯದ ವಾತಾವರಣಕ್ಕೆ ಕಾರಣ ಚಿರತೆ ಎನ್ನುವುದಕ್ಕಿಂತಲೂ ಚಿರತೆಯ ಬಗ್ಗೆ ನಮಗೆ ಇರುವ ಮಾಹಿತಿಯ ಕೊರತೆಯಿಂದಾಗಿದೆ ಎಂದರೂ ತಪ್ಪಾಗಲಾರದು. ಹಾಗಾದರೆ ಚಿರತೆಯ ಬಗ್ಗೆ ಭಯಬೇಡವೇ? ಚಿರತೆ ಮನುಷ್ಯರಿಗೆ ಏನೂ ತೊಂದರೆ ಕೊಡುವುದಿಲ್ವ? ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಚಿರತೆಯ ಬಗ್ಗೆ ಎಚ್ಚರ ಇರಬೇಕೇ ವಿನ ಅದರ ಬಗ್ಗೆ ಭಯ ಆತಂಕ ಬೇಡ ಯಾಕೆಂದರೆ ಚಿರತೆಗಳು ಕಾಡಿನಿಂದ ನಾಡಿಗೆ ಬರುವುದು ಸರ್ವೆ ಸಾಮಾನ್ಯ ಜೊತೆಗೆ ಇತರೆ ಪ್ರಾಣಿಗಳೂ ರಾತ್ರಿ ವೇಳೆ ಆಹಾರ ಹುಡುಕಿ ನಾಡಿಗೆ ಬರುತ್ತದೆ. ಈ ಸಂದರ್ಭದಲ್ಲಿ ಅದು ಕೆಲವರ ಕಣ್ಣಿಗೆ ಬಿದ್ದರೆ ಅದು ದೊಡ್ಡ ರಾದ್ದಾಂತ ಅಥವಾ ಆತಂಕವನ್ನೂ ಸೃಷ್ಟಿಸುತ್ತದೆ.


ಚಿರತೆ ಹೇಗಿರುತ್ತದೆ?
ಸಾಧಾರಣವಾಗಿ ಚಿರತೆಗಳು ಕಾಡಿನಲ್ಲಿ ಇರುವುದು ಎಂಬುದು ಎಲ್ಲರಿಗೂ ಗೊತ್ತು. ನಾವು ಟಿವಿಯಲ್ಲಿ ಅಥವಾ ಮೃಗಾಲಯದಲ್ಲಿ ಚಿರತೆಯನ್ನು ನೋಡಿರುತ್ತೇವೆ. ಚಿರತೆಗಳು ಇತರೆ ಪ್ರಾಣಿಗಳನ್ನು ಕೊಂದು ತಿನ್ನುವ ಭಯಾನಕ ದೃಶ್ಯವನ್ನು ಕಂಡಿರುತ್ತೇವೆ. ಅದೇ ಚಿರತೆಯನ್ನು ನಾವು ನಮ್ಮ ತೋಟದಲ್ಲಿ ಅಥವಾ ಮನೆಯಂಗಳದಲ್ಲಿ ಕಂಡರೆ ಏನಾಗಬಹುದು? ಅದೇ ಇಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವುದು.
ಚಿರತೆಗಳಲ್ಲಿ ಚಿರತೆ ಮತ್ತು ಬೆಕ್ಕು ಚಿರತೆ ಎಂಬ ಪ್ರಭೇಧಗಳಿವೆ. ಬೆಕ್ಕು ಚಿರತೆಯ ಮುಖದಲ್ಲಿ ಕಪ್ಪು ಮೀಸೆ ಆಕಾರದ ಗೆರೆಗಳು ಕಂಡು ಬರುತ್ತದೆ. ಬೆಕ್ಕು ಚಿರತೆಯ ಮೈ ಬಣ್ಣ ಚಿರತೆಯ ರೂಪದಲ್ಲೇ ಇರುತ್ತದೆ. ಸಾಧಾರಣ ಮೂರರಿಂದ ಮೂರುವರೆ ಅಡಿ ಉದ್ದವಿದ್ದು ಅಷ್ಟೇ ಎತ್ತರವೂ ಇರುತ್ತದೆ. ಬೆಕ್ಕು ಚಿರತೆ ನಿಶಾಚರಿ. ಅವು ರಾತ್ರಿ ವೇಳೆಯೇ ಕಾಡಿನಿಂದ ನಾಡಿಗೆ ಬರುತ್ತದೆ. ಇವುಗಳು ಹೆಚ್ಚಾಗಿ ಕೋಳಿಗಳನ್ನು ತಿನ್ನುತ್ತದೆ. ಸಿಕ್ಕಿದರೆ ಸಣ್ಣ ಗಾತ್ರದ ಇತರೆ ಪ್ರಾಣಿಗಳನ್ನು ಹಿಡಿದು ತಿನ್ನುತ್ತದೆ. ಮನುಷ್ಯರ ಮೇಲೆ ಇವು ದಾಳಿ ಮಾಡುವುದು ಬಹಳ ಅಪರೂಪ ಒಂದರ್ಥದಲ್ಲಿ ಬೆಕ್ಕು ಚಿರತೆ ಮನುಷ್ಯರನ್ನು ಕಂಡರೆ ಓಡಿ ತಪ್ಪಿಸಿಕೊಳ್ಳುತ್ತದೆ.
ಚರತೆಯ ಮೈ ಪೂರ್ತಿಯಾಗಿ ನಾವು ಮೃಗಾಲಯದಲ್ಲಿ ಕಂಡಂತೆ ಪೂರ್ಣ ಪ್ರಮಾಣದಲ್ಲಿ ಬಿಳಿ ಚುಕ್ಕಿಗಳಿಂದ ಕೂಡಿರುತ್ತದೆ. ಮುಖದಲ್ಲಿ ಕಪ್ಪು ಮೀಸೆಯಾಕಾರದ ಬಣ್ಣಗಳಿರುವುದಿಲ್ಲ. ಇವು ಕೂಡಾ ನಿಶಾಚರಿ. ರಾತ್ರಿ ವೇಳೆ ಆಹಾರಕ್ಕಾಗಿ ಭೇಟೆಯಾಡುತ್ತದೆ. ಚಿರತೆಯ ಅಚ್ಚುಮೆಚ್ಚಿನ ಆಹಾರ ಕೋತಿಗಳು. ಕೋತಿಗಳನ್ನು ಕಂಡರೆ ಅಥವಾ ಕೋತಿಗಳು ಹೆಚ್ಚಾಗಿ ಕಂಡು ಬರುವ ಪ್ರದೇಶದಲ್ಲಿ ಚಿರತೆಗಳು ಕಾಣ ಸಿಗುತ್ತದೆ. ಕೋತಿ ಬಿಟ್ಟರೆ ಚಿರತೆಯ ಇನ್ನೊಂದು ಇಷ್ಟವಾದ ಆಹಾರ ನಾಯಿ. ಅಹಾರ ಹುಡುಕಿ ನಾಡಿಗೆ ಬರುವ ಚಿರತೆಗಳು ಮನೆಯಂಗಳಕ್ಕೆ ಬಂದು ನಾಯಿಯನ್ನು ಕೊಂದು ತಿನ್ನುತ್ತದೆ. ಇವು ಕೂಡಾ ಮನುಷ್ಯರನ್ನು ಕಂಡರೆ ಓಡಿ ತಪ್ಪಿಸಿಕೊಳ್ಳುತ್ತದೆ. ಚಿರತೆಗೆ ತೊಂದರೆ ನೀಡಿದರೆ ಮಾತ್ರ ಅವು ನಮ್ಮ ಮೇಲೆ ಅಕ್ರಮಣ ಮಾಡಬಹುದನ್ನು ಬಿಟ್ಟರೆ ಮತ್ತೇನೂ ಮಾಡುವುದಿಲ್ಲ.
ರಾತ್ರಿ ವೇಳೆ ಪ್ರಾಣಿ ಸಂಚಾರ ಸಹಜ
ರಾತ್ರಿ ವೇಳೆ ಚಿರತೆ ಸೇರಿದಂತೆ ಕಾಡಾನೆ, ಕೋಡು ಕೋಣ ಸೇರಿದಂತೆ ಬಹುತೇಕ ಕಾಡುಪ್ರಾಣಿಗಳು ಆಹಾರ ಹುಡುಕಿ ನಾಡಿಗೆ ಬರುವುದು ಸರ್ವೆ ಸಾಮಾನ್ಯ ಸಂಗತಿ. ಹಗಲು ಹೊತ್ತು ಅವು ಮನುಷ್ಯರ ಕಣ್ಣಿಗೆ ಬೀಳುವುದೇ ಇಲ್ಲ. ಹಗಲು ವೇಳೆ ಅವುಗಳಿರುವ ಕಡೆ ಮನುಷ್ಯರು ತೆರಳಿದರೆ ಜೀವ ಭಯದಿಂದ ತಪ್ಪಿಸಿಕೊಳ್ಳಲು ನಾಡಿಗೆ ಬರುವ ಸಾಧ್ಯತೆಯೂ ಇದೆ. ಇದೀಗ ಹೆಚ್ಚಾಗಿ ಕಾಡಿನ ಬದಿಯಲ್ಲೇ ಅಥವಾ ರಕ್ಷಿತಾರಣ್ಯದ ಅಂಚಿನಲ್ಲಿ ಅನೇಕ ಕುಟುಂಬಗಳು ಮನೆ ಮಾಡಿಕೊಂಡು ವಾಸ್ತವ್ಯ ಮಾಡುತ್ತಿದೆ. ಕಾಡಿನ ಅಂಚಿನಲ್ಲಿ ಮನೆ ನಿರ್ಮಾಣ ಮಾಡುವಾಗಲೇ ಅರಣ್ಯ ಇಲಾಖೆಯು ಕಾಡುಪ್ರಾಣಿಗಳ ಸಂಚಾರದ ಬಗ್ಗೆ ಮಾಹಿತಿ ನೀಡುತ್ತದೆ. ರಾತ್ರಿ ವೇಳೆ ಎಚ್ಚರದಿಂದ ಇರುವಂತೆಯೂ ಇಲಾಖೆ ಮನೆ ಮಂದಿಗೆ ಎಚ್ಚರಿಕೆಯನ್ನು ನೀಡುತ್ತದೆ. ಊ ಎಲ್ಲಾ ಒಪ್ಪಂದಗಳ ಬಳಿಕವೇ ಅರಣ್ಯ ಇಲಾಖೆ ಅಲ್ಲಿ ಮನೆ ಕಟ್ಟಲು ಅಥವಾ ವಾಸ್ತವ್ಯಕ್ಕೆ ಅನುಮತಿಯನ್ನು ನೀಡುತ್ತದೆ.
ರಾತ್ರಿ ಮಾನವ ಸಂಚಾರ ಸರಿಯಲ್ಲ
ಬಹುತೇಕ ಕಡೆಗಳಲ್ಲಿ ತಡ ರಾತ್ರಿ ರಬ್ಬರ್ ಟ್ಯಾಂಪಿಂಗ್ ಮಾಡುವ ಕಾರ್ಮಿಕರು ರಬ್ಬರ್ ತೋಟಗಳಿಗೆ ತೆರಳುತ್ತಾರೆ. ಆ ವೇಳೆ ಕಾಡುಪ್ರಾಣಿಗಳು ರಬ್ಬರ್ ತೋಟದಲ್ಲಿ ಇರುವ ಸಾಧ್ಯತೆಯೂ ಇದೆ. ಮಾನವನ ರಾತ್ರಿ ಸಂಚಾರದ ಬಗ್ಗೆ ಅರಿವು ಇಲ್ಲದ ಕಾಡುಪ್ರಾಣಿಗಳು ಆಹಾರದ ಭೇಟೆಯ ವೇಳೆ ಮಾನವನ ಮೇಲೆ ಅಕ್ರಮಣ ಮಾಡುವ ಸಾಧ್ಯತೆಯೂ ಇದೆ. ರಾತ್ರಿ ವೇಳೆಯೇ ಹೆಚ್ಚಾಗಿ ಕೆಲವು ಕಡೆ ಚಿರತೆ ಕಾಣಿಸಿಕೊಂಡಿದ್ದು ಇದಕ್ಕೆ ಪುಷ್ಠಿ ನೀಡುತ್ತದೆ. ತಡ ರಾತ್ರಿ ಕಾಡಿಗೆ ತೆರಳುವುದು ಅಥವಾ ಒಂಟಿ ಸಂಚಾರ ಯೋಗ್ಯವಲ್ಲ. ರಾತ್ರಿ ವೇಳೆ ಪ್ರಾಣಿಗಳ ಸಂಚಾರ ಇರುವ ಕಾರಣ ಮನುಷ್ಯರು ಮನೆಯೊಳಗೆ ಇರುವುದೇ ಬೆಟರ್ ಯಾಕೆಂದರೆ ನಾವು ಪೃಕೃತ್ತಿಗೆ ವಿರುದ್ದವಾಗಿ ನಡೆದುಕೊಂಡರೆ ಇಂಥಹ ಅನಾಹುತಗಳಿಗೆ ಕಾರಣವಾಗುತ್ತದೆ.ಒಂದರ್ಥದಲ್ಲಿ ಕಾಡಿನಲ್ಲಿದ್ದ ಚಿರತೆಗಳು ನಾಡಿಗೆ ಬಂದು ನಮ್ಮ ಕಣ್ಣಿಗೆ ಬೀಳಲು ನಾವೇ ಕಾರಣ ಎಂದರೂ ತಪ್ಪಾಗಲಾರದು.
ಇಲಾಖೆಯವರು ಏನು ಮಾಡಬಹುದು?
ಸಾಧಾರಣವಾಗಿ ನಾಡಿಗೆ ಕಾಡುಪ್ರಾಣಿಗಳು ಬಂದಲ್ಲಿ ಅರಣ್ಯ ಇಲಾಖೆಗೆ ಜನರು ತಿಳಿಸುತ್ತಾರೆ. ಅವರು ಬಂದು ಅವುಗಳನ್ನು ಅಟ್ಟುವ ಅಥವಾ ಬೋನು ಹಾಕಿ ಹಿಡಿಯುವ ಕೆಲಸವನ್ನು ಮಾಡುತ್ತಾರೆ. ಅಟ್ಟಿಸಿದಾಗ ಓಡದೇ ಇದ್ದರೆ, ಬೋನಿಗೆ ಬೀಳದೇ ಇದ್ದರೆ ಯಾರಿಗಾದರೂ ಏನು ಮಾಡಲು ಸಾಧ್ಯವಿಲ್ಲ. ಕಾಡುಪ್ರಾಣಿಗಳನ್ನು ಕೊಲ್ಲುವುದು ಅಪರಾಧವಾದ ಕಾರಣ ಇಲಾಖೆಯವರು ಅದನ್ನು ಚಾಣಾಕ್ಷತನದಿಂದ ಕಾಡಿಗೆ ಅಟ್ಟುವ ಕೆಲಸವನ್ನು ಮಾಡಬೇಕಾಗುತ್ತದೆ. ಕಾಡಿನಲ್ಲಿ ಯಾವ ಪ್ರಾಣಿಗಳು ಎಲ್ಲೆಲ್ಲಿ ಇದೆ, ಎಷ್ಟು ಸಂಖ್ಯೆಯಲ್ಲಿ ಇದೆ ಎಂಬ ಲೆಕ್ಕಾಚಾರ ಅಧಿಕಾರಿಗಳಿಗೆ ಸಿಗುವುದಿಲ್ಲ. ಊರಿನಲ್ಲಿ ಬೀದಿ ನಾಯಿಗಳ ಲೆಕ್ಕ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂಬಂತೆ ಕಾಡುಪ್ರಾಣಿಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ.
ನಾವು ಏನು ಮಾಡಬೇಕು
ಕಾಡುಪ್ರಾಣಿಗಳು ಹಗಲು ಹೊತ್ತು ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ರಾತ್ರಿ ವೇಳೆ ಅವುಗಳ ಅಂಚಾರ ಇರುವ ಕಾರಣ ನಾವು ರಾತ್ರಿ ವೇಳೆ ಸಂಚಾರ ಮಾಡಬಾರದು. ರಾತ್ರಿ ಮನೆಯಲ್ಲೇ ಇರಬೇಕು. ತಡ ರಾತ್ರಿ ಕಾಡಿನ ಕಡೆ ಅಥವಾ ಕಾಡಿನ ಅಂಚಿನ ಪ್ರದೇಶಕ್ಕೆ ನಾವು ತೆರಳಬಾರದು. ಹೊತ್ತು ಮುಳುಗಿದ ಬಳಿಕ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರಾಣಿಗಳ ಆಹಾರ ಭೇಟೆಗೆ ನಾವು ತೊಂದರೆ ನೀಡಿದಲ್ಲಿ ಅವುಗಳು ನಮಗೆ ತೊಂದರೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಾಡುಪ್ರಾಣಿಗಳ ಆಹಾರವನ್ನು ನಾವು ಕಸಿದಾಗ ಅವು ಆಹಾರಕ್ಕಾಗಿ ನಾಡಿಗೆ ಕಗ್ಗೆ ಇಡುತ್ತದೆ. ನಮ್ಮ ಹಾಗೆ ಪ್ರಾಣಿಗಳಿಗೂ ಬದುಕುವ ಹಕ್ಕು ಇದೆ, ಪ್ರಾಣಿಗಳಿಗೆ ಸ್ವಾರ್ಥ ಇಲ್ಲ, ಹಸಿವು ನೀಗಿಸುವ ಏಕ್ಯಕ ಉದ್ದೇಶದಿಂದ ಅವು ಬೇಟೆಯಾಡುತ್ತದೆ. ಆದರೆ ಮಾನವರ ನಡುವೆ ಅವು ಕಾಣಿಸಿಕೊಳ್ಳಬಾರದು ಅಂದ್ರೆ ಏನರ್ಥ? ಇಲ್ಲಿ ನಮಗೆ ಎಲ್ಲವೂ ಬೇಕು, ಕಾಡಿನಲ್ಲಿದ್ದ ಮರಗಳನ್ನು ನಾಶ ಮಾಡಿದಾಗ ಅಲ್ಲಿರುವ ಪ್ರಾಣಿಗಳು ಏನು ಮಾಡಬೇಕು? ಪೃಕೃತ್ತಿಯಲ್ಲಿ ಒಂದಕ್ಕೊಂದು ಪೂರಕವಾಗಿ ಇರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಪ್ರಾಣಿಗಳು ನಾಡಿಗೆ ಬಂದರೆ ಅವುಗಳಿಗೆ ತೊಂದರೆ ಕೊಡಬೇಡಿ ಅವು ಎನೂ ಮಾಡುವುದಿಲ್ಲ – ನಾರಾಯಣ ಪ್ರಕಾಶ್ ಪಾಣಾಜೆ ಪ್ರಗತಿಪರ ಕೃಷಿಕರು