ಪುತ್ತೂರು: ಡಾ.ಬಿ.ಆರ್ ಅಂಬೇಡ್ಕರ್ ಅವರ ಆದರ್ಶಗಳು ಕೇವಲ ಕೃತಿಯಲ್ಲಿ ಮಾತ್ರ ಉಳಿಯದೆ ಅದು ನಮ್ಮ ದೈನಂದಿನ ಬಳಕೆಯಲ್ಲೂ ಆಗಬೇಕು ಎಂದು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಹೇಳಿದರು.
ಪುತ್ತೂರು ಹೃದಯ ಭಾಗದ ಗಾಂಧಿಕಟ್ಟೆಯ ಎದುರು ಜ.೬ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ “ಮಹಾನಾಯಕ” ಧಾರವಾಹಿಯ ಬ್ಯಾನರ್ ಅನಾವರಣಗೊಳಿಸಿದದ ಬಳಿಕ ಮಾಯಿದೆ ದೇವುಸ್ ಚರ್ಚ್ ಸಭಾಂಗಣಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಮಾಜದ ಏಳಿಗೆಗಾಗ ಎಲ್ಲಾ ಆಯಾಮಗಳಲ್ಲಿ ವಿಶಿಷ್ಟ ಕೊಡುಗೆಗಳನ್ನು ಕೊಟ್ಟಂತಹ ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನೆಯಿಂದ ಹಿಡಿದು, ಹಲವಾರು ಕಾನೂನುಗಳ ರಚನೆ ಮೂಲಕ ಭಾರತದ ಮೊದಲ ಕಾನೂನು ಮಂತ್ರಿಯಾಗಿ ಅವರು ನೀಡಿದ ಕೊಡುಗೆಗಳು, ಸಾಮಾಜಿಕ ವ್ಯವಸ್ಥೆಯ ವಿರುದ್ಧ ಮಾಡಿದ ಹೋರಾಟ, ಅವರ ವಿದ್ಯೆಯಲ್ಲಿ ಅವಿತುಕೊಂಡ ಸಾಧನೆಗಳು, ಐತಿಹಾಸಿಕ ಭಾಷಣ ಚುಳವಳಿಗಳನ್ನು ಇವತ್ತಿನ ಜನಾಂಗಕ್ಕೆ ತೋರಿಸುವ ವಿಶಿಷ್ಟವಾದ ದಾರವಾಹಿ ಎಲ್ಲರಿಗೂ ತಲುಪಿಸುವ ಕೆಲಸ ಈ ಬ್ಯಾನರ್ ಮೂಲಕ ಆಗಲಿದೆ. ತಮ್ಮ ಜೀವನದಲ್ಲಿ ಯಾವ ರೀತಿಯಲ್ಲಿ ಅವರ ಜೀವನ ಶೈಲಿ, ಜ್ಞಾನ, ಸಾಧನೆ, ಯಾವುದೇ ಸಂಕುಚಿತ ಭಾವನೆಗಳಿಗೆ ಒಳಗಾಗದೆ ಮಹೋನ್ನತವದ ನಾಯಕನಾಗಿರುವ ಅಂಬೇಡ್ಕರ್ ಅವರನ್ನು ನಾವು ಸ್ಮರಿಸಬೇಕು ಎಂದರು.
ಎಲ್ಲರ ಸಮಾನ ಬೆಳವಣಿಗೆಗೆ ಅವಕಾಶ:
ಬ್ಯಾನರ್ ಅನಾವರಣಗೊಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮಾತನಾಡಿ ಸರ್ವ ಜನಾಂಗಗಳ, ಸಮುದಾಯಗಳ ಏಳಿಗೆಗೆ ಹಾಗೂ ತಳ ಸಮುದಾಯಗಳ ಬದುಕಿನ ಜೀವನ ಮಟ್ಟ ಸುಧಾರಿಸಲು ಹಗಲಿರುಳು ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಯ ಕುರಿತಾದ ಮಹಾನಾಯಕ ಧಾರವಾಹಿ ಎಲ್ಲಾ ಸಮುದಾಯಗಳ ಜನರಿಗೆ ಆದರ್ಶವಾಗಿದೆ. ಅವರು ಸಮಾನತೆಯ ಕುರಿತು ಆದ್ಯತೆ ಕೊಟ್ಟಿದ್ದಾರೆ ಎಂದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಂದಾಗಿ ಇವತ್ತು ಹಿಂದುಳಿದ ವರ್ಗದವರಿಗೆ ಉತ್ತಮ ಸ್ಥಾನ ಮಾನ ಲಭಿಸಿದೆ ಎಂದರು. ಪೌರಯುಕ್ತೆ ರೂಪಾ ಶೆಟ್ಟಿಯವರು ಮಾತನಾಡಿ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಿದ ಡಾ. ಬಿ.ಆರ್ ಅಂಬೇಡ್ಕರ್ ಅವರು ಸ್ವಚ್ಛತೆಗೂ ಆದ್ಯತೆ ನೀಡಿದ್ದರು. ಅವರ ಪರಿಕಲ್ಪನೆಯಂತೆ ಪುತ್ತೂರು ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು. ಬ್ಯಾನರ್ ಅನಾವರಣದ ರೂವಾರಿ ಮಹೇಶ್ ಪಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಮ್, ಮೆಸ್ಕಾಂ ಕಿರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಸುಂದರ್ ಕೇಪುಳು, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗಡೆ, ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಪುತ್ತೂರು ಕಡಬ, ದ.ಕ.ದಲಿತ್ ಸೇವಾ ಸಮಿತಿ, ಮುಗೇರ ಯುವ ವೇದಿಕೆ ಪುತ್ತೂರು, ಡಾ| ಅಂಬೇಡ್ಕರ್ ಅಭಿಮಾನಿಗಳು, ಅನುಯಾಯಿಗಳು ಪುತ್ತೂರು ನಿಡ್ಪಳ್ಳಿಯವರು ಕಾರ್ಯಕ್ರಮ ಆಯೋಜಿಸಿದ್ದರು. ಕೊರಗಪ್ಪ ಈಶ್ವರಮಂಗಲ ಸ್ವಾಗತಿಸಿ, ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ವಂದಿಸಿದರು. ಹರೀಶ್ ಅಂಕಜಾಲು ಕಾರ್ಯಕ್ರಮ ನಿರೂಪಿಸಿದರು. ದ.ಕ.ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ದಲಿತ ಸಂಘರ್ಷ ಸಮಿತಿಯ ಸುಂದರ ನಿಡ್ಪಳ್ಳಿ, ಶೇಖರ್ ಮಾಡಾವು, ಬಾಬು ಎನ್. ಸವಣೂರು, ಕೃಷ್ಣ ನಿಡ್ಪಳ್ಳಿ, ವಿಶ್ವನಾಥ ಪುಣ್ಚತ್ತಾರು, ನಿವೃತ್ತ ಅರಣ್ಯಾಧಿಕಾರಿ ನಾರಾಯಣ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.