ಕೇರಳ ರಾಜ್ಯದ ಕೊಟ್ಟಾಯಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ ಹಕ್ಕಿ ಜ್ವರ ( ಎಚ್5 ಎನ್8) ಸೋಂಕು ದೃಢಪಟ್ಟಿದ್ದು, ಸದ್ರಿ ರೋಗವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ಹಕ್ಕಿ ಜ್ವರ ಹರಡದಂತೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿರುತ್ತದೆ.
ಆದ್ದರಿಂದ ಜಿಲ್ಲೆಯಲ್ಲಿ ಎಚ್5 ಎನ್8 ಸೋಂಕು ಹರಡದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೆಳಕಂಡ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳ ರಾಜ್ಯದಿಂದ ಎಲ್ಲಾ ರೀತಿಯ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳ ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದೆ. ಕೇರಳ ರಾಜ್ಯಕ್ಕೆ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳನ್ನು ರವಾನಿಸಿ ರಾಜ್ಯಕ್ಕೆ ಹಿಂತಿರುಗಿ ಬರುವ ವಾಹನಗಳಿಗೆ ಮತ್ತು ಕೇರಳದಿಂದ ಕೋಳಿ ಖರೀದಿಸಲು ಬರುವ ವಾಹನಗಳಿಗೆ, ಕಟ್ಟುನಿಟ್ಟಾಗಿ ರಾಜ್ಯದ ಗಡಿಭಾಗದಲ್ಲಿಯೇ ನಂಜುನಾಶಕ ಔಷಧ ಸಿಂಪಡಿಸಿ ಬರುವಂತೆ ಸೂಚಿಸಿದೆ. ಶುಚಿತ್ವ ಕಾಪಾಡದ ಕೋಳಿ ಸಾಗಾಟ ವಾಹನಗಳನ್ನು ಗಡಿಯಲ್ಲಿಯೇ ತಡೆದು ಹಿಂತಿರುಗಿಸಲು ಕ್ರಮ ಕೈಗೊಳ್ಳುವುದು.
ಗಡಿ ಪ್ರದೇಶದ ಚೆಕ್ಪೋಸ್ಟ್ಗಳಲ್ಲಿ ವಾಹನಗಳ ಪರಿಶೀಲನೆಗೆ ಹಾಗೂ ನಂಜುನಾಶಕ ಔಷಧ ಸಿಂಪಡಣೆಗೆ ಅವಶ್ಯ ಕ್ರಮಕೈಗೊಳ್ಳುವುದು. ಜಿಲ್ಲೆಯ ಎಲ್ಲಾ ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲಾ ಕುಕ್ಕುಟ ಕ್ಷೇತ್ರಗಳಲ್ಲಿ ವಿಶೇಷವಾಗಿ ಪಕ್ಷಿ ಧಾಮ ಹಾಗೂ ನೀರು ಸಂಗ್ರಹಣಾ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು. ಜಿಲ್ಲೆಯಲ್ಲಿನ ಕೋಳಿ ಫಾರ್ಮ್ಗಳಲ್ಲಿ ಸ್ವಚ್ಛತೆ ಬಗ್ಗೆ ಸಂಬಂಧಪಟ್ಟ ಮಾಲಕರು ಕ್ರಮ ವಹಿಸುವುದು. ಹಾಗೂ ಅನಗತ್ಯ ಜನರ ಓಡಾಟವನ್ನು ನಿರ್ಭಂಧಿಸಲು ಕ್ರಮಕೈಗೊಳ್ಳುವುದು. ಕೋಳಿಗಳಲ್ಲಿ ಯಾವುದೇ ರೀತಿಯ ಅಸಹಜ ಸಾವು ಮತ್ತು ಹಕ್ಕಿಜ್ವರದ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡುವುದು.
ಕೋಳಿ ಫಾರ್ಮ್ಗಳಿಗೆ ಭೇಟಿ ನೀಡುವ ಕೋಳಿ ಆಹಾರ ಸಾಗಾಟ ವಾಹನಗಳಿಗೆ, ಕೋಳಿ ಸಾಗಾಟ ಮಾಡುವ ರೈಲ್ವೆ ಬ್ರೇಕ್ ವ್ಯಾನ್ಗಳನ್ನು ಸಾಕಷ್ಟೂ ಪ್ರಮಾಣದಲ್ಲಿ ನಂಜುನಾಶಕ ಸಿಂಪಡಿಸಲು ಸೂಚಿಸುವುದು. ರೋಗ ಪರಿಶೀಲನೆ ಮತ್ತು ರೋಗ ಕಣ್ಗಾವಲು ನಿಗಾ ವಹಿಸಲು ಜಿಲ್ಲೆಯಲ್ಲಿ ಕೋಳಿ ಫಾರ್ಮ್ಗಳಿಗೆ ಪಶು ಪಾಲನಾ ಇಲಾಖಾಧಿಕಾರಿಗಳು ಭೇಟಿ ನೀಡಿ ಕ್ರಮ ವಹಿಸುವುದು. ಸಾರ್ವಜನಿಕರು ಅನಗತ್ಯವಾಗಿ ಈ ಬಗ್ಗೆ ಭಯಭೀತರಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯು ವ್ಯಾಪಕವಾಗಿ ಜಾಗೃತಿ ಮೂಡಿಸುವ ಸಂಬಂಧ ಸೂಕ್ತ ಕ್ರಮಕೈಗೊಳ್ಳುವುದು.
ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇಲ್ಲಿಯ ದೂರವಾಣಿ ಸಂಖ್ಯೆ ೦೮೨೪-೨೪೯೨೩೩೭ ಯನ್ನು ಸಂಪರ್ಕಿಸಬಹುದಾಗಿರುತ್ತದೆ. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ವೈಯಕ್ತಿಕ ಗಮನ ಹರಿಸಿ ಅನುಷ್ಠಾನಗೊಳಿಸಲು ಕ್ರಮ ವಹಿಸುವುದು ಎಂದು ಜಿಲ್ಲಾಧಿಕಾರಿಗಳ ಆದೇಶ ತಿಳಿಸಿದೆ.