ಪುತ್ತೂರು;ಪುತ್ತೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಆವಶ್ಯಕತೆ ಇರುವವರಿಗೆ ಹೊಸ ಕೊಳವೆ ಬಾವಿಕೊರೆಯಲು ಅವಕಾಶ ನೀಡಬೇಕು. ಈ ಬಗ್ಗೆ ಶಾಸಕರು ಸರಕಾರಕ್ಕೆ ಒತ್ತಡ ತರುವಂತೆ ಕಾಂಗ್ರೆಸ್ ಮುಖಂಡ ಇಸಾಖ್ ಸಾಲ್ಮರ ಆಗ್ರಹಿಸಿದರು.
ಜ.8ರಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಹೊರತು ಪಡಿಸಿ ಇತರ ಎಲ್ಲಾ ತಾಲೂಕುಗಳಲ್ಲಿಯೂ ಹೊಸ ಕೊಳವೆ ಬಾವಿ ಕೊರೆಯಲು ಅವಕಾಶ ಅವಕಾಶವಿದೆ. ಆದರೆ ಪುತ್ತೂರು ತಾಲೂಕಿನ ಜನತೆ ಮಾತ್ರ ಇದರಿಂದ ವಂಚಿತರಾಗಿದ್ದಾರೆ. ಹೊಸ ಕೊಳವೆ ಬಾವಿಗೆ ಅನುಮತಿ ನೀಡುವಂತೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಸ್ಥಳೀಯಾಡಳಿತದ ನಿರಾಕ್ಷೇಪನಾ ಪತ್ರವನ್ನು ಹೇಳುತ್ತಾರೆ. ನಿರಾಕ್ಷೇಪನಾ ಪತ್ರ ಕೇಳಿದರೆ ಪುತ್ತೂರು ತಾಲೂಕಿನಲ್ಲಿ ಕೊಳವೆ ಬಾವಿಗೆ ಅವಕಾಶವಿಲ್ಲ ಎಂದು ಸರಕಾರದ ಆದೇಶವಿರುವುದಾಗಿ ಹಿಂಬರಹ ನೀಡುವುದಾಗಿ ತಿಳಿಸುತ್ತಾರೆ. 500 ಮೀಟರ್ ಅಂತರದಲ್ಲಿ ಬೇರೆ ಕೊಳವೆ ಬಾವಿ ಇಲ್ಲ ಎಂದು ನಿರಾಕ್ಷೇಪನೆ ಇಲ್ಲದೆ ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸುತ್ತಿದ್ದು ಜನತೆ ಗೊಂದಲದಲ್ಲಿದ್ದಾರೆ.
ಹೀಗಾಗಿ ಈ ಹಿಂದೆ ಹೇರಲಾದ ನಿರ್ಬಂಧಗಳನ್ನು ತೆರವು ಮಾಡಬೇಕು. ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರಿಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಆವಶ್ಯಕತೆ ಇರುವವರಿಗೆ ಕೊಳವೆ ಬಾವಿ ಕೊರೆಯಲು ಅವಕಾಶ ನೀಡಬೇಕು. ಶಾಸಕರು, ಕಂದಾಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಸರಕಾರಕ್ಕೆ ಒತ್ತಡ ಹೇರಿ ಈಗಾಗಲೇ ಇರುವ ಕಾನೂನುಗಳನ್ನು ತೆರವುಗೊಳಿಸಿ ನೀರಿನ ಆವಶ್ಯಕತೆ ಇರುವವರಿಗೆ ಕೊಳವೆ ಬಾವಿ ಕೊರೆಯಲು ಅವಕಾಶ ನೀಡುವಂತೆ ಅವರು ಒತ್ತಾಯಿಸಿದರು.