ಪುತ್ತೂರು: ನಮ್ಮ ಸಮಾಜಕ್ಕಿಂದು ಅತ್ಯುತ್ತಮ ಪತ್ರಕರ್ತರು ಬೇಕಾಗಿದ್ದಾರೆ. ಭಾಷಾ ಶುದ್ಧತೆಯಳ್ಳ, ಸಾಕಷ್ಟು ಜ್ಞಾನ ಹೊಂದಿರುವ ವ್ಯಕ್ತಿಗಳು ಪತ್ರಿಕೋದ್ಯಮದಲ್ಲಿದ್ದಾಗ ಒಳ್ಳೆಯ ಮಾಧ್ಯಮ ವ್ಯವಸ್ಥೆ ರೂಪುಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳಿಗೂ, ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೂ ಬಹುದೊಡ್ಡ ಜವಾಬ್ಧಾರಿ ಇದೆ ಎಂದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಹೇಳಿದರು. ಅವರು ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ರೂಪಿಸಿರುವ ‘ಆಮ್ ಜರ್ನಲಿಸಂ’ ಎಂಬ ಫೇಸ್ ಬುಕ್ ಪುಟವನ್ನು ಅನಾವರಣಗೊಳಿಸಿ ಮಾತನಾಡಿದರು. ಪತ್ರಿಕೋದ್ಯಮದಲ್ಲಿ ನಮ್ಮತನವನ್ನು ತರಬೇಕಾದ ಅವಶ್ಯಕತೆ ಇದೆ. ಕೆಲವೊಂದು ವಾಹಿನಿಗಳಲ್ಲಿನ ನಿರೂಪಕರನ್ನು ಕಾಣುವಾಗ, ಅವರನ್ನು ಪ್ರಸ್ತುತಪಡಿಸಲಾಗುತ್ತಿರುವ ರೀತಿಯನ್ನು ನೋಡುವಾಗ ಖೇದವೆನಿಸುತ್ತದೆ. ದೇಸೀಯ ಸೊಗಡಿಲ್ಲದ, ನಮ್ಮತನವಿಲ್ಲದ ವಸ್ತ್ರವಿನ್ಯಾಸ, ನಿರೂಪಣಾಶೈಲಿಯನ್ನು ಗಮನಿಸುವಾಗ ಬೇಸರಮೂಡುತ್ತದೆ. ಇಂತಹ ವ್ಯವಸ್ಥೆಗಳು ಬದಲಾಗಬೇಕಿದೆ. ಈ ಹಿನ್ನೆಲೆಯಲ್ಲಿ ಯೋಚಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಮಾತನಾಡಿ ‘ಆಮ್’ ಅನ್ನುವುದು ‘ಓಂ’ ಪದದೊಳಗೆ ಅಡಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳ ಚಟುವಟಿಕೆಗೆ ‘ಆಮ್ ಜರ್ನಲಿಸಂ’ ಮೂಲಕ ಓಂಕಾರ ದೊರೆತಿದೆ. ಪ್ರಾಯೋಗಿಕವಾಗಿ ತಯಾರಾಗಬೇಕಾದದ್ದು ಮಾಧ್ಯಮ ವಿದ್ಯಾರ್ಥಿಗಳ ಕರ್ತವ್ಯ. ಸರಿಯಾದ ಮಾರ್ಗದರ್ಶನದೊಂದಿಗೆ ಸಮರ್ಪಕವಾಗಿ ರೂಪುಗೊಂಡಾಗ ಮಾತ್ರ ಒಳ್ಳೆಯ ಪತ್ರಕರ್ತರ ಸೃಷ್ಟಿ ಸಾಧ್ಯವಾಗುತ್ತದೆ. ಸುಸಂಸ್ಕೃತ, ಸದಾಶಯಭರಿತ ಪತ್ರಕರ್ತರನ್ನು ತಯಾರುಮಾಡಬೇಕಿದೆ ಎಂದರು. ಪತ್ರಿಕೋದ್ಯಮ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಸಾಮಾಜಿಕ ಮಾಧ್ಯಮಗಳ ವ್ಯಾಪ್ತಿಗೆ ಮಿತಿಯಿಲ್ಲ. ಪುತ್ತೂರಿನಲ್ಲಾದ ಸಣ್ಣ ಘಟನೆಯೊಂದು ಸಾಮಾಜಿಕ ಮಾಧ್ಯಮದ ಮೂಲಕ ಪ್ರಪಂಚದಾದ್ಯಂತ ತಲಪಬಲ್ಲುದು. ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಾಧನೆ, ಪ್ರಕಟಣೆ, ಚಟುವಟಿಕೆಗಳನ್ನು ಮಾಧ್ಯಮದ ಮಂದಿ ಗುರುತಿಸುವಂತೆ ಮಾಡುವಲ್ಲಿ ಫೇಸ್ ಬುಕ್ ಪುಟದಂತಹ ಸಾಧನಗಳು ಸಹಾಯಮಾಡುತ್ತವೆ. ವಿದ್ಯಾರ್ಥಿಗಳು ಸಾಧನೆಯನ್ನೇ ಗುರಿಯಾಗಿ ಮುನ್ನಡೆದಾಗ ಅನೇಕ ಸಾಧ್ಯತೆಗಳು ಸಾಕಾರಗೊಳ್ಳುತ್ತವೆ ಎಂದು ನುಡಿದರು. ವಿಭಾಗದ ವಿದ್ಯಾರ್ಥಿನಿ ವೈಷ್ಣವಿ ಪ್ರಾರ್ಥಿಸಿ, ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅದಿತಿ ವಂದಿಸಿ, ಶ್ರೀಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.