ಪುತ್ತೂರು: ಕೊಯಿಲತ್ತಡ್ಕದಿಂದ ಡಿಂಬ್ರಿಗೆ ತೆರಳುವ ರಸ್ತೆ ಕಳೆದ ಏಳು ವರ್ಷಗಳಿಂದ ಕೆಟ್ಟು ಹೋಗಿತ್ತು. ದುರಸ್ಥಿ ಮಾಡಿ ಎಂದು ಯಾವ ಗ್ರಾಮಸ್ಥರೂ ಯಾರಲ್ಲೂ ಮನವಿ ಮಾಡಿರಲಿಲ್ಲ. ಮನವಿ ಮಾಡಿದರೆ ಆ ಕೆಲಸ ಆಗುವುದಿಲ್ಲ ಎಂದು ಸುಮ್ಮನಾಗಿದ್ದರು. ರಸ್ತೆ ಎಷ್ಟು ನಾದುರಸ್ಥಿಯಲ್ಲಿತ್ತು ಅಂದರೆ ದ್ವಿಚಕ್ರ ವಾಹನಗಳೂ ಇಲ್ಲಿ ತೆರಳಲು ಅಸಾಧ್ಯವಾಗಿತ್ತು. ಮದುವೆ ಮಂಟಪವೊಂದರ ಬಳಿಯೇ ಇರುವ ಕಾರಣಕ್ಕೆ ಹಲವಾರು ಮಂದಿ ಸಾರ್ವಜನಿಕರು ಇಲ್ಲಿನ ಅವ್ಯವಸ್ಥೆಯನ್ನು ಕಂಡು ಮರುಗಿ ಹೋಗಿದ್ದರು.
ಇಲ್ಲಿನ ಸಮಸ್ಯೆಯ ಬಗ್ಗೆ ಕೇಳುವವರೇ ಇಲ್ಲವೇ ಎಂದು ಕೆಲವರು ಮೂದಲಿಸಿದ್ದೂ ಉಂಟು ಜ.3ರಂದು ಈ ರಸ್ತೆಗೆ ಮುಕ್ತಿ ದೊರಕಿದೆ. ಇದಕ್ಕೆ ಕಾರಣ ಕುಂಬ್ರದ ಉದ್ಯಮಿಯೋರ್ವರ ಸಮಾಜ ಸೇವೆ. ಹೊಂಡಗುಂಡಿಗಳಿಂದ ತುಂಬಿದ ರಸ್ತೆಗೆ ಸಿಮೆಂಟ್ ಮಿಶ್ರಿತ ಮಣ್ಣು ತಂದು ಹಾಕುವ ಮೂಲಕ ಜನರ ಭವಣೆಯನ್ನು ನೀಗಿಸಿದ್ದಾರೆ.
ಈ ರಸ್ತೆಯನ್ನು ದುರಸ್ಥಿ ಮಾಡಿದವರು ಕುಂಬ್ರದ ಮಾತೃಶ್ರೀ ಅರ್ಥ್ ಮೂವರ್ಸ್ ಮಾಲಕ ಕುಂಬ್ರ ಮೋಹನ್ದಾಸ್ ರೈ. ಸ್ಥಳೀಯರು ಇವರ ಬಳಿ ರಸ್ತೆಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದರು. ಎಲ್ಲಿಂದಲಾದರೂ ಮಣ್ಣು ತಂದು ಹಾಕಿ ರಸ್ತೆಗೊಂದು ಮುಕ್ತಿ ಕಾಣಿಸಿಕೊಡಿ ಎಂದು ಹೇಳಿಕೊಂಡಿದ್ದರು. ರಸ್ತೆಯನ್ನು ಪರಿಶೀಲಿಸಿದ ಮೋಹನ್ದಾಸ್ ರೈ ಅವರು ಮಣ್ಣು ತಂದು ಹಾಕುವ ಮೂಲಕ ಏಳು ವರ್ಷದ ಸಂಕಷ್ಟಕ್ಕೆ ಮುಕ್ತಿ ಕಾಣಿಸಿದ್ದಾರೆ. ಉದ್ಯಮಿಯ ಸಮಾಜ ಸೇವೆಯನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.