- ಫ್ಯಾಕ್ಟ್ ಚೆಕ್ನಲ್ಲಿ ಸತ್ಯಾಂಶ ಬಹಿರಂಗ
– ಇಬ್ರಾಹಿಂ ಖಲೀಲ್ ಬನ್ನೂರು
ಪುತ್ತೂರು: ಕಳೆದ ನಾಲ್ಕೈದು ವಾರಗಳಿಂದ ವಾಟ್ಸಾಪ್, ಫೇಸ್ಬುಕ್ನಲ್ಲಿ ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟ್ಯಾಪ್ ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂಬ ಸುಳ್ಳು ಸಂದೇಶ ರವಾನೆಯಾಗುತ್ತಿದೆ. ಈ ನಕಲಿ ಲಿಂಕ್ ವಿದ್ಯಾರ್ಥಿಗಳ ಹಾಗೂ ಪೋಷಕರ ಮೊಬೈಲ್ ಫೋನ್ಗಳ ಇನ್ಬಾಕ್ಸ್ಗಳಿಗೆ ರವಾನೆಯಾಗುತ್ತಿರುವ ಬಗ್ಗೆ ತಾಲೂಕಿನಲ್ಲೂ ವರದಿಯಾಗಿವೆ. ಅನ್ಲಾಕ್ ಪ್ರಾರಂಭದಿಂದ ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ಮಧ್ಯೆ ಮತ್ತೊಂದು ಮಾಸ್ಟರ್ ಪ್ಲ್ಯಾನ್ನೊಂದಿಗೆ ಆನ್ಲೈನ್ ದರೋಡೆಕೋರರು ಲಗ್ಗೆ ಇಟ್ಟಿದ್ದಾರೆ. ಕೋವಿಡ್-19 ನಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೆಟ್ಟ ಪರಿಣಾಮ ಬೀರಿದ್ದು, ಇಂತಹ ಸಂದರ್ಭದಲ್ಲಿ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಳಸುತ್ತಿರುವ ಮೊಬೈಲ್ ಫೋನ್ಗಳಿಗೆ ಸರಕಾರದ ಹೆಸರಿನಲ್ಲಿ ಅನಾಮಿಕ ಸಂದೇಶ ಬರುತ್ತಿದೆ. ಆನ್ಲೈನ್ ಶಿಕ್ಷಣ ಮತ್ತು ವಿದ್ಯಾರ್ಥಿಗಳಿಗೆ ಡಿಜಿಟಲ್ ಪ್ರಕಾರದ ವಿದ್ಯಾಭ್ಯಾಸಕ್ಕೆ ನೆರವು ಆಗುವ ದೃಷ್ಟಿಯಿಂದ ಉಚಿತ ಲ್ಯಾಪ್ಟಾಪ್ ಸ್ಕೀಂನಲ್ಲಿ ನೀವೂ ಆಯ್ಕೆಯಾಗಿದ್ದೀರಿ ಎಂದು ಲಿಂಕ್ನ ಮೇಲ್ಭಾಗದ ಶೀರ್ಷಿಕೆಯಾಗಿರುತ್ತದೆ. ಬಳಿಕ ಲಿಂಕ್ನ್ನು ಕ್ಲಿಕ್ಕಿಸಿ ಒಳಹೋದಂತೆ ಹೆಸರು, ತಂದೆಯ ಹೆಸರು, ಇಮೇಲ್ ಮತ್ತು ಮೊಬೈಲ್ ನಂಬರ್ನ್ನು ನೋಂದಾಯಿಸುವಂತೆ ತಿಳಿಸುತ್ತದೆ. ಆದರೆ ಇದು ಅಕ್ಷರಶಃ ನಕಲಿ ವೆಬ್ಸೈಟ್ ಲಿಂಕ್ ಎಂದು ಕೇಂದ್ರ ಸರಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ(ಪಿಐಬಿ) ಫ್ಯಾಕ್ಟ್ ಚೆಕ್ನಲ್ಲಿ ಬಹಿರಂಗಪಡಿಸಿದೆ.
ರಿಜಿಸ್ಟ್ರಾರ್ ಮಾಡಿದ್ರೆ ನಿಮಗೆ ಕಂಟಕ ಪಕ್ಕಾ!:
ಲಾಕ್ಡೌನ್ನ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ ಆಲಿಸುತ್ತಿದ್ದ ವಿದ್ಯಾರ್ಥಿಗಳ ಸ್ಮಾರ್ಟ್ ಮೊಬೈಲ್ ಫೋನ್ಗಳಿಗೆ ‘http://bit.ly/Register-For-Free-Laptop’ ಸಂದೇಶ ಶೇರ್ ಆಗುತ್ತಿವೆ. ಇದನ್ನು ನಂಬಿ ಲ್ಯಾಪ್ಟಾಪ್ನ ಆಸೆಗೆ ವಿದ್ಯಾರ್ಥಿಗಳು ಖಾಸಗಿ ಮಾಹಿತಿಯನ್ನು ನೋಂದಾಯಿಸುತ್ತಿರುವುದು ತಿಳಿದು ಬಂದಿದೆ. ಈ ಲಿಂಕ್ ಕೇಂದ್ರ ಸರಕಾರವೇ ನಿಯಂತ್ರಿಸುತ್ತದೆ ಎಂಬ ಮಾದರಿಯಲ್ಲಿ ಕಾಣಿಸುತ್ತದೆ, ಆದರೆ ಇದು ಅನಾಮಿಕ ಆನ್ಲೈನ್ ಹಣ ದರೋಡೆಕೋರರು ಸ್ವತಃ ಸೈಟ್ನಲ್ಲಿ ಕೈಚಳಕ ತೋರಿಸುತ್ತಿದ್ದಾರೆ ಎಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.
ಆ್ಯಪ್ ಡೌನ್ಲೋಡ್- ಉಚಿತ ಲ್ಯಾಪ್ಟಾಪ್….:
ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ ಸ್ಕೀಂ ಲಿಂಕ್ನಲ್ಲಿ ರಿಜಿಸ್ಟ್ರಾರ್ ಆದ ಬಳಿಕ ಗೂಗಲ್ ಪ್ಲೇ ಸ್ಟೋರ್ನಲ್ಲಿ `ಫ್ರೀ ಲ್ಯಾಪ್ಟಾಪ್’ ಹೆಸರಿನ ಆ್ಯಪ್ ಒಂದನ್ನು ಡೌನ್ಲೋಡ್ ಮಾಡಿದ ಮೇಲೆ ಪುನಃ ಲಾಗಿನ್ ಮಾಡಲು ಸೂಚಿಸುತ್ತಾರೆ. ಹೆಸರು, ಶಾಲಾ-ಕಾಲೇಜು ಹೆಸರು, ಇಮೇಲ್ ಐಡಿ, ಆಧಾರ್ ಸಂಖ್ಯೆ, ಪಾಸ್ವರ್ಡ್ ನೋಂದಾಯಿಸಬೇಕು. ಅದೇ ಸಂದರ್ಭದಲ್ಲಿ ನಿಮಗೆ ತಿಳಿಯದಂತೆ, ಯಾವುದೇ ನೊಟೀಫಿಕೇಶ್ ಇಲ್ಲದೆನೇ ನಿಮ್ಮ ಕಾಂಟೆಕ್ಟ್ ಲಿಸ್ಟ್ನಲ್ಲಿರುವ ನೂರಕ್ಕೂ ಮಿಕ್ಕಿ ಮಂದಿಗೆ `ರಿಜಿಸ್ಟ್ರಾರ್ ಫ್ರೀ ಲ್ಯಾಪ್ಟಾಪ್’ನ ನಕಲಿ ಲಿಂಕ್ ಅಟೋಮೆಟಿಕ್ ಆಗಿ ಅವರ ಇನ್ಬಾಕ್ಸ್ಗೆ ರವಾನೆಯಾಗುತ್ತದೆ. ಇಷ್ಟಲ್ಲದೇ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವೂ ಅನಾಮಿಕ ವ್ಯಕ್ತಿಯ ಪಾಲಾಗುತ್ತದೆ. ನಕಲಿ ಲಿಂಕ್ ಸಂದೇಶವನ್ನು ಸ್ನೇಹಿತರು, ಸಂಬಂಧಿಕರು ನಂಬಿ ರಿಜಿಸ್ಟ್ರಾರ್ ಮಾಡಿಕೊಂಡರೆ ಅವರು ಕೂಡ ಸೈಬರ್ ಹ್ಯಾಕರ್ಸ್ಗಳ ಕೈಯೊಳಗೆ ಸೆರೆಯಾಗುವ ಸಾಧ್ಯತೆಯಿದೆ.
ಸ್ಕಾಲರ್ಶಿಪ್ ಲಿಂಕ್: ಹ್ಯಾಕರ್ಸ್ ಕಿಲಾಡಿತನದ ಬುದ್ಧಿ!:
ಈಗಾಗಲೇ ರಾಜ್ಯದಲ್ಲಿ ಶಾಲಾ- ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಕೇಂದ್ರ, ರಾಜ್ಯ ಸರಕಾರ ವಿದ್ಯಾರ್ಥಿ ವೇತನ ನೀಡುತ್ತಿರುವ ಬಗ್ಗೆ ವಾಟ್ಸಾಪ್, ಫೇಸ್ಬುಕ್ಗಳಲ್ಲಿ ನೂರಾರು ಸ್ಕಾಲರ್ ಶಿಪ್ ಲಿಂಕ್ಗಳು ಫಾರ್ವರ್ಡ್ ಆಗುತ್ತಿದೆ. ಸರಕಾರದ ಸ್ಕಾಲರ್ಶಿಪ್ನ ಹೆಸರಿನಲ್ಲಿರುವ ಈ ಲಿಂಕ್ಗಳು ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಳಿ ಸೇರುತ್ತಿವೆ. ಇದರಲ್ಲಿ ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ಸಹಿತ ಮಾಹಿತಿ ಕೇಳುತ್ತವೆ. ಎಲ್.ಕೆ.ಜಿ ಯಿಂದ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅರ್ಥಿಕ ನೆರವು ಆಗುವ ಯೋಜನೆಗಳ ಲಿಂಕ್ ಎಷ್ಟು ನಂಬಿಕೆಗೆ ಅರ್ಹವೆಂದು ಪರಿಶೀಲನೆ ನಡೆಸಬೇಕಾದ ಆನಿವಾರ್ಯತೆ ಕೂಡ ಇದೆ. ಸರಕಾರದ ಅಥವಾ ಸಂಬಂಧಿಸಿದ ಇಲಾಖೆಯಡಿಯಲ್ಲಿರುವ ವೆಬ್ ಸೈಟ್ಗಳ ವಿದ್ಯಾರ್ಥಿ ವೇತನದ ಲಿಂಕ್ಗೆ ಮಾತ್ರ ದಾಖಲೆಯನ್ನು ನೀಡಿ. ಕಳೆದ ವರುಷಗಳಲ್ಲಿ ನಾನಾ ಸ್ಕಾಲರ್ಶಿಪ್ ಹೆಸರಲ್ಲಿ ವಂಚನೆಗಳ ದೂರು ದಾಖಲಾಗಿರುವ ಬಗ್ಗೆ ಗಮನಿಸಿದ್ದೇವೆ, ಪ್ರಸ್ತುತ ಅರ್ಥಿಕ ಬಿಕ್ಕಟ್ಟಿನಿಂದಾಗಿ ಆನ್ಲೈನ್ ಸೈಬರ್ ಕ್ರೈಮ್ ಕೇಸುಗಳು ಶೇ.64ರಷ್ಟೂ ಹೆಚ್ಚಳವಾಗುತ್ತಿವೆ ಎಂಬ ಮಾಹಿತಿಯು ಇದೆ.
- ನಕಲಿ ಸ್ಕಾಲರ್ ಶಿಪ್ ಲಿಂಕ್ ನಂಬಿದರೆ ನಿಮ್ಮ ಬ್ಯಾಂಕ್ನಲ್ಲಿರುವ ಹಣ ಮಾಯ!
- ಇತರರಿಗೆ ವೆಬ್ಸೈಟ್ ಲಿಂಕ್ ಫಾರ್ವರ್ಡ್ ಮಾಡುವಾಗ ಜಾಗೃತರಾಗಿರಿ