ನೆಲ್ಯಾಡಿ: ಕೊಣಾಲು ಗ್ರಾಮದ ಬೊಳ್ಳಿಗುಡ್ಡೆಯಲ್ಲಿರುವ ಶ್ರೀ ಕೊಣಾಲು ದೇವತೆ ದೈವಸ್ಥಾನದಲ್ಲಿ ಜ.೪ರಿಂದ ೬ರ ತನಕ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಜರಗಿದ್ದು ಈ ಸಂದರ್ಭದಲ್ಲಿ ಬಿಲ್ಲವರು ಸೇರಿದಂತೆ ಕೆಲವೊಂದು ನಿರ್ದಿಷ್ಟ ಜಾತಿ ಸಮುದಾಯದವರನ್ನು ದೂರವಿಟ್ಟು ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ವ್ಯಕ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ವಿವರಣೆ ಪಡೆಯಲು ಜ.೬ರಂದು ಬಿಲ್ಲವ ಸಂಘದ ಪ್ರಮುಖರು ದೈವಸ್ಥಾನಕ್ಕೆ ಭೇಟಿ ನೀಡಿದ್ದರು.
ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಕೊಣಾಲು ದೇವತೆ ದೈವಸ್ಥಾನದ ಜೀರ್ಣೋದ್ದಾರ ಕೆಲಸಗಳು ನಡೆದಿದ್ದು ಜ.೪ರಿಂದ ೬ರ ತನಕ ಪುನ: ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೊಣಾಲು ದೇವತೆ ಕ್ಷೇತ್ರ ವ್ಯಾಪ್ತಿಯ ಬಿಲ್ಲವರು ಸೇರಿದಂತೆ ಕೆಲವೊಂದು ನಿರ್ದಿಷ್ಟ ಜಾತಿ ಸಮುದಾಯದವರನ್ನು ದೂರ ಇರಿಸಲಾಗಿದೆ. ಈ ಸಮುದಾಯದವರು ದೈವಸ್ಥಾನಕ್ಕೆ ಭಕ್ತಿಪೂರ್ವಕವಾಗಿ ವಂತಿಗೆ ನೀಡಲು ಮುಂದೆ ಬಂದರೂ ಸ್ವೀಕರಿಸಿಲ್ಲ. ಹೊರೆಕಾಣಿಕೆ ತಂದೊಪ್ಪಿಸಿದರೂ ಇತರರಿಗೆ ನೀಡಿದಂತೆ ರಶೀದಿ ನೀಡಿಲ್ಲ ಎಂಬ ಆರೋಪ ವ್ಯಕ್ತಗೊಂಡಿದೆ. ಈ ವಿಚಾರವನ್ನು ಸ್ಥಳೀಯ ಬಿಲ್ಲವ ಸಮುದಾಯದವರು ತಾಲೂಕು ಬಿಲ್ಲವ ಸಂಘದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಜ.೬ರಂದು ದೈವಸ್ಥಾನದಲ್ಲಿ ನಡೆದ ಪುನ: ಪ್ರತಿಷ್ಟೆ ಸಂದರ್ಭದಲ್ಲಿ ಪುತ್ತೂರು ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ನಿಯೋಗ ದೈವಸ್ಥಾನಕ್ಕೆ ಭೇಟಿ ನೀಡಿ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು ಅವರಲ್ಲಿ ಕ್ಷೇತ್ರದ ತಂತ್ರಿಗಳ ಸಮ್ಮುಖದಲ್ಲಿ ಸಾಮಾಜಿಕ ತಾರತಮ್ಯದ ಬಗ್ಗೆ ಮಾಹಿತಿ ಕೇಳಿತ್ತು. ಯಾರನ್ನೂ ಕ್ಷೇತ್ರಕ್ಕೆ ಬರದಂತೆ, ಬರುವಂತೆಯೂ ಹೇಳಿಲ್ಲ, ತಡೆಯೂ ಮಾಡಿಲ್ಲ. ಮೂರು ದಿನಗಳಿಂದ ಉತ್ಸವ ನಡೆಯುತ್ತಿದ್ದು ಎಲ್ಲರೂ ಬಂದು ಹೋಗುತ್ತಿದ್ದಾರೆ. ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ಸಾಕಷ್ಟು ಸಂಗ್ರಹವಾಗಿದ್ದು ಉತ್ಸವ ಸಂದರ್ಭದಲ್ಲಿ ವಂತಿಗೆ ಸ್ವೀಕರಿಸುತ್ತಿಲ್ಲ ಎಂದು ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈಯವರು ಈ ಸಂದರ್ಭದಲ್ಲಿ ಹೇಳಿದರು. ಎಲ್ಲರೂ ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸುವಂತೆ ಕೆಮ್ಮಿಂಜೆ ನಾಗೇಶ್ ತಂತ್ರಿಯವರು ಸಲಹೆ ನೀಡಿದರು. ಭಕ್ತರನ್ನು ಜಾತಿಯ ಹೆಸರಿನಲ್ಲಿ ದೂರ ಇರಿಸುವುದು ಸಂವಿಧಾನದತ್ತ ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧ. ಆದ್ದರಿಂದ ಜಾತಿ ತಾರತಮ್ಯ ಮಾಡದಂತೆ ಬಿಲ್ಲವ ಸಂಘದ ಮುಖಂಡರು ದೈವಸ್ಥಾನದ ಆಡಳಿತ ಸಮಿತಿಗೆ ಸಲಹೆ ಮಾಡಿದರು ಎಂದು ವರದಿಯಾಗಿದೆ. ಬಳಿಕ ಕೆಮ್ಮಿಂಜೆ ನಾಗೇಶ ತಂತ್ರಿಯವರ ಮುಖೇನ ಬಿಲ್ಲವ ಸಂಘದ ಪ್ರಮುಖರಿಗೆ ಪ್ರಸಾದ ನೀಡಲಾಯಿತು.
ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಂ, ಉಪ್ಪಿನಂಗಡಿ ಯುವ ವಾಹಿನಿ ಘಟಕದ ಅಧ್ಯಕ್ಷ ಚಂದ್ರಶೇಖರ್, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಡಾ.ಸದಾನಂದ ಕುಂದರ್, ಅಜಿತ್ ಪಾಲೇರಿ, ನೋಣಯ್ಯ ಪೂಜಾರಿ ಅಂಬರ್ಜೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೊರೋನಾ ಲಾಕ್ಡೌನ್ ಪೂರ್ವದಲ್ಲಿಯೂ ಇಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿರುವ ಬಗ್ಗೆ ದೂರುಗಳು ಬಂದಿತ್ತು. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಅಲ್ಲದೇ ಸಮುದಾಯದ ನಾಯಕರು ಭೇಟಿ ನೀಡಿ ಸಾಮಾಜಿಕ ತಾರತಮ್ಯ ಮಾಡದಂತೆಯೂ ತಿಳಿಸಿದ್ದರು. ಇದೀಗ ದೈವಸ್ಥಾನದಲ್ಲಿ ನಡೆಯುತ್ತಿರುವ ಉತ್ಸವ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯ ಸುಮಾರು ೨೦ ಕುಟುಂಬದವರನ್ನು ದೂರ ಇರಿಸಲಾಗಿದೆ. ಅವರಿಂದ ವಂತಿಗೆ ಸ್ವೀಕರಿಸಿಲ್ಲ, ಹೊರೆಕಾಣಿಕೆ ತಂದೊಪ್ಪಿಸಿದರೂ ರಶೀದಿ ನೀಡಿ, ಪೂಜೆಯ ಸಂದರ್ಭದಲ್ಲಿ ಆರತಿ ನೀಡದೆ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ಅಧ್ಯಕ್ಷರಲ್ಲಿ ವಿಚಾರಿಸಿದರೆ ಹಿಂದಿನ ಕಾಲದ ಸಂಪ್ರದಾಯ ಪಾಲಿಸುತ್ತಿzವೆ ಎಂಬ ಉತ್ತರ ನೀಡುತ್ತಿದ್ದಾರೆ. ಈ ಮೂಲಕ ಮತ್ತೆ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ನಾಗೇಶ್ ತಂತ್ರಿಯವರಿಗೆ ಮಾಹಿತಿ ನೀಡಿದ್ದ ಪುತ್ತೂರು ಬಿಲ್ಲವ ಸಂಘದ ಪದಾಧಿಕಾರಿಗಳು ಜ.೬ರಂದು ಕ್ಷೇತ್ರಕ್ಕೆ ಭೇಟಿ ನೀಡಿ ವಿವರಣೆ ಪಡೆದುಕೊಂಡಿದ್ದಾರೆ.