ವಿಟ್ಲ: ಒಡಿಯುರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ಬಂಟ್ವಾಳ ತಾಲೂಕು ಸಮಿತಿಯ ಪದಗ್ರಹಣ ಹಾಗೂ ಪೂರ್ವಭಾವಿ ಸಭೆ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಗುರುದೇವಾನಂದ ಸ್ವಾಮೀಜಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿ ಜ್ಞಾನವಾಹಿನಿ ನಮ್ಮ ಮಧ್ಯೆಯೇ ಇದೆ. ಅದನ್ನು ಆವಿಷ್ಕಾರ ಮಾಡಿ ಅನಾವರಣಗೊಳಿಸುವ ಕಾರ್ಯ ಆಗಬೇಕು. ಷಷ್ಠ್ಯಬ್ದ ಕಾರ್ಯಕ್ರಮದ ಮೂಲಕ ಧರ್ಮ ಸಂಸ್ಕೃತಿಯ ಜಾಗೃತಿಯಾಗಬೇಕು ಎಂದರು. ಆಚಾರ ವಿಚಾರ ಉತ್ತಮವಾಗಿರುವುದರ ಜೊತೆಗೆ ಆರೋಗ್ಯಯುತ ಬದುಕು ನಮ್ಮದಾಗಬೇಕು, ಋಷಿ ಕೃಷಿ, ಸಂಸ್ಕೃತಿಯನ್ನು ಬೆಳೆಸುವುದರೊಂದಿಗೆ ಜನಪ್ರೀತಿ ಗಳಿಸುವ ಕಾರ್ಯಕ್ರಮ ಇದಾಗಬೇಕು ಎಂದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಧಾರ್ಮಿಕ ಮೌಲ್ಯದ ವೈಭವೀಕರಣ ಹಾಗೂ ಆಡಂಬರದಿಂದಾಗಿ ಸಮಾಜದಲ್ಲಿ ಹಾವು ಏಣಿ ಆಟದಂತಹ ಏರುಪೇರುಗಳು ಉಂಟಾಗಿವೆ. ನಾನು, ನನ್ನದು, ನನ್ನ ಸಂಪತ್ತು, ಅಧಿಕಾರ ಎಂಬುದನ್ನು ಬಿಟ್ಟು ಸಮಷ್ಠಿಯ ಏಳಿಗೆಗಾಗಿ ಬದುಕ ಬೇಕು. ಉಪಕಾರ ಸ್ಮರಣೆ, ಕರ್ತವ್ಯ ಪ್ರಜ್ಞೆಯ ಸಾರ್ಥಕ ಕಾರ್ಯಕ್ರಮ ಇದಾಗಬೇಕು ಎಂದರು. ಬಂಟ್ವಾಳ ಸಮಿತಿಯ ಮೂಲಕ ನಡೆಯುವ ಗೋ ಸಮ್ಮೇಳನದ ಮೂಲಕ ಗೋವಿನ ಮಹತ್ವ ವಿಶ್ವಕ್ಕೆ ತಿಳಿಯಬೇಕು ಎಂದರು. ಸಾಧ್ವಿ ಮಾತಾನಂದಮಯಿ ಹನುಮಾನ್ ಚಾಲೀಸಾ ಪಠಿಸಿದರು.
ಬಂಟ್ವಾಳ ತಾಲೂಕು ಸಮಿತಿಯ ಗೌರವಾಧ್ಯಕ್ಷ, ಶಾಸಕ ರಾಜೇಶ್ ನಾಯ್ಕ್ ಯು,ಮಾಜಿ ಸಚಿವ ಬಿ. ರಮಾನಾಥ ರೈ, ಒಡಿಯೂರು ಕೇಂದ್ರ ಸಮಿತಿ ಅಧ್ಯಕ್ಷ ಡಾ. ಮೋಹನ್ ಆಳ್ವ, ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಕೋಶಾಧಿಕಾರಿ ಸುರೇಶ್ ರೈ ಮಕರ ಜ್ಯೋತಿ ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ರಾಜೇಶ್ ನಾಯ್ಕ್, ಅಧ್ಯಕ್ಷರಾಗಿ ಜಗನ್ನಾಥ ಚೌಟ ಬದಿಗುಡ್ಡೆ, ಕಾರ್ಯಧ್ಯಕ್ಷರಾಗಿ ಡಾ. ತುಕರಾಂ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೆಲ್ ಗುತ್ತು, ಕೋಶಾಧಿಕಾರಿಯಾಗಿ ಸುಭಾಶ್ಚಂದ್ರ ಜೈನ್, ಸಹ ಕೋಶಾಧಿಕಾರಿಯಾಗಿ ವಸಂತ ಶೆಟ್ಟಿ ಕೇದಗೆ ಹಾಗೂ ಇತರ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿದರು.
ಕೇಂದ್ರ ಸಮಿತಿ ಕಾರ್ಯಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು, ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ ಬಂಟ್ವಾಳ ಸಮಿತಿಯ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದರು. ರಾಮದಾಸ ಬಂಟ್ವಾಳ ವಂದಿಸಿದರು. ಸಂಯೋಜಕ ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.