ಪುತ್ತೂರು: ಈ ವರ್ಷದ ಪ್ರಾರಂಭದಲ್ಲಿ ಗೇರು ಬೆಳೆಗಾರನ ಮೊಗದಲ್ಲಿ ನಗುವಿನ ವಾತಾವರಣವಿತ್ತು. ಉತ್ತಮ ಗೇರು ಫಸಲು ಪಡೆಯಲು ಹವಾಮಾನ ಪೂರಕವಾಗಿರಬೇಕು. ಕಳೆದ ವರ್ಷ ಹವಾಮಾನ ವೈಪರೀತ್ಯದಿಂದಾಗಿ ಗೇರು ಫಸಲು ನಿರೀಕ್ಷಿತ ಫಸಲು ಸಿಗಲಿಲ್ಲ. ಈ ವರ್ಷವಾದರೂ ಉತ್ತಮ ಫಸಲು ಪಡೆಯುವ ಆಶಾಭಾವನೆಯಲ್ಲಿ ರೈತನಿದ್ದ. ಜನವರಿ ತಿಂಗಳ ಪ್ರಾರಂಭದಲ್ಲಿ ಹವಾಮಾನ ಉತ್ತಮವಿದ್ದು ಗೇರು ಯಾನೆ ಗೋಡಂಬಿ ಮರಗಳು ಭಾರೀ ಪ್ರಮಾಣದಲ್ಲಿ ಹೂ ಬಿಟ್ಟು ಕಾಯಿ ಕಟ್ಟುವ ಸಂದರ್ಭವಿತ್ತು. ಆದರೆ ಪ್ರತಿನಿತ್ಯ ರಾತ್ರಿ ಸುರಿದ ಅಕಾಲಿಕ ಮಳೆ ಮತ್ತು ದಿನ ಪೂರ್ತಿ ಮೋಡ ಕವಿದ ವಾತಾವರಣದಿಂದಾಗಿ ಹೂ ಬಿಟ್ಟ ಗೇರು ಫಸಲು ಕರಿ ಮೋಡದಿಂದಾಗಿ ಕರಟಿತು. ಮುಂದಕ್ಕೆ ಮಳೆ ನಿಂತು ವಾತಾವರಣ ಪೂರಕವಾದರೆ ಮಾತ್ರ ಗೇರು ಫಸಲು ನಿರೀಕ್ಷಿಸಬಹುದು.
ಪ್ರಕೃತ ಸುರಿದ ಅಕಾಲಿಕ ಮಳೆ ಅಡಿಕೆ, ರಬ್ಬರ್, ಮಾವು ಬೆಳೆಗಳಿಗೂ ಹಾನಿಕಾರಕವಾಗಿದೆ. ಅಡಿಕೆಯಲ್ಲಿ ಹಿಂಗಾರ ಬಿಡುವ ಸಂದರ್ಭ ಇದಾಗಿದ್ದು, ಅರಳಲು ತಯಾರಾದ ಹಾಳೆಯ ಒಳಗಿದ್ದ ಹಿಂಗಾರ ತೇವಾಂಶದಿಂದಾಗಿ ಶಿಲೀಂಧ್ರದ ಮೂಲಕ ಕೊಳೆತುಹೋಗುತ್ತದೆ. ಈಗ ಬೀಡುವ ಹಿಂಗಾರ ನಾಶವಾದರೆ ಮುಂದಿನ ವರ್ಷದ ಫಸಲು ಕುಂಠಿತಗೊಳ್ಳುತ್ತದೆ. ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆ ನೀರಿನಲ್ಲಿ ತೋಯ್ದು ಗುಣಮಟ್ಟ ಕಾಪಾಡಲಾಗುವುದಿಲ್ಲ. ಅಡಿಕೆಗೂ ಹಾನಿ.
ರಬ್ಬರ್ ತೋಟ ಹೊಂದಿದವರು ಮಳೆಗೆ ರಬ್ಬರ್ ಟ್ಯಾಪಿಂಗ್ ಮಾಡಲಾಗದೆ ಚಿಂತಾಕ್ರಾಂತರಾಗಿದ್ದಾರೆ. ಬೆಳಗಿನ ಜಾವ ರಬ್ಬರ್ ಟ್ಯಾಪಿಂಗ್ ಮಾಡಲಾಗದೇ ಟ್ಯಾಪರ್ಸ್ಗಳಿಗೂ ಕೆಲಸವಿಲ್ಲ. ರಬ್ಬರ್ ತೋಟಗಾರನಿಗೂ ಆದಾಯವಿಲ್ಲ
ಕೈಗೆ ಬಂದ ತುತ್ತು ಬಾಯಿಗಿಲ್ಲ
ಒಂದು ಕಡೆ ಅಡಿಕೆಗೆ ಏರುತ್ತಿರುವ ಧಾರಣೆಯಿಂದಾಗಿ ಅಡಿಕೆ ಕೃಷಿಕನ ಮೊಗದಲ್ಲಿ ಮಂದಹಾಸ ಬೀರಿದ್ದರೂ ಅಕಾಲಿಕ ಮಳೆಯಿಂದಾಗಿ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎಂಬಂತಾಗಿ ನಿರಾಶಭಾವ ಮೂಡಿದೆ. ಕಳೆದ ವರ್ಷವೂ ಮಾವು ಹೂ ಬಿಡಲಿಲ್ಲ. ಈ ವರ್ಷವು ಹೂ ಬಿಟ್ಟ ಮಾವು ಫಸಲು ನೀಡುವ ಭರವಸೆಯಿಲ್ಲ. ಅಕಾಲಿಕ ಮಳೆಯಿಂದಾಗಿ ರೈತನ ಬದುಕು ಕಂಗಾಲು : ಕಡಮಜಲು ಸುಭಾಸ್ ರೈ . ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಕೃಷಿಕರು