ಪುತ್ತೂರು: ಪುತ್ತೂರು ಸಮಗ್ರ ಅಭಿವೃದ್ಧಿಗೆ ಮಹಾಯೋಜನೆ ಅಗತ್ಯವಿದ್ದು, ಪುತ್ತೂರು ನಗರಯೋಜನಾ ಪ್ರಾಧಿಕಾರದ ಮೂಲಕ ಕಾಲ ಮಿತಿಯೊಳಗೆ ಮಹಾ ಯೋಜನೆಯನ್ನು ಸಿದ್ದಪಡಿಸಲಾಗುವುದು. ಪಾರದರ್ಶಕ ಆಡಳಿತ ನಡೆಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಪುತ್ತೂರು ನಗರಯೋಜನಾ ಪ್ರಾಧಿಕಾರದಲ್ಲಿ ಜ.11ರಂದು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ಗಳೊಂದಿಗೆ ಅವರು ಸಭೆ ನಡೆಸಿ ನಗರಾಭಿವೃದ್ಧಿ ಕುರಿತು ಸಮಾಲೋಚನೆ ನಡೆಸಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ನಗರಸಭೆಯಾಗಿದೆ. ಮುಂದೆ ನಗರಾಭಿವೃದ್ಧಿಯನ್ನು ವಿಟ್ಲಕ್ಕೂ ವಿಸ್ತರಣೆ ಮಾಡಬೇಕು. ಈಗಾಗಲೇ ವಿಟ್ಲ ಪಟ್ಟಣ ಪಂಚಾಯತ್ ಆಗಿದೆ. ಮುಂದೆ ಉಪ್ಪಿನಂಗಡಿ ಪಟ್ಟಣ ಪಂಚಾಯತ್ ಆಗಲಿದೆ. ಈ ಮೂರು ನಗರಗಳು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವುದರಿಂದ ಅದನ್ನು ಪುತ್ತೂರಿಗೆ ಸೇರಿಸಿಕೊಂಡರೆ ಮಹಾನಗರ ಪಾಲಿಕೆ ರೀತಿಯಲ್ಲಿ ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಮಹಾಯೋಜನೆ ಮಾಡಲು ಸುಲಭವಾಗಲಿದೆ ಎಂದರು. ಈ ನಿಟ್ಟಿನಲ್ಲಿ ಸಾರ್ವಜನಿಕರ, ಇಂಜಿನಿಯರ್ಗಳ, ವರ್ತಕರ ವಿವಿಧ ಸಂಘಟನೆಗಳೊಂದಿಗೆ ಚರ್ಚಿಸಿ ಮಹಾಯೋಜನೆಯನ್ನು ಸಿದ್ಧ ಪಡಿಸಲಾಗುವುದು. ಇದಕ್ಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಭಿಪ್ರಾಯವನ್ನೂ ಸಹ ಪಡೆಯಬಹುದು ಎಂದ ಅವರು ಪುತ್ತೂರು ನಗರಕ್ಕೆ ಒಳ ಚರಂಡಿ ಯೋಜನೆಯನ್ನು ಜಾರಿಗೊಳಿಸುವುದು ಕೂಡಾ ವರ್ತಮಾನದ ಅವಶ್ಯಕತೆಯಾಗಿದೆ ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಇಂಜಿಯರ್ಗಳು ಹಲವಾರು ಸಮಸ್ಯೆಗಳ ಕುರಿತು ಶಾಸಕರೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.
ಸಭೆಯಲ್ಲಿ ಪೇಸ್ ಗೌರವಾಧ್ಯಕ್ಷ ಎಸ್.ಕೆ. ಆನಂದ ಕುಮಾರ್, ಪಿ. ರವೀಂದ್ರ, ಪಿ.ಜಿ. ಜಗನ್ನಿವಾಸ್ ರಾವ್, ವಸಂತ ಭಟ್, ಶಂಕರ್ ಭಟ್, ವೆಂಕಟ್ರಾಜ್, ಕಿಶೋರ್, ಸಂತೋಷ್ ಶೆಟ್ಟಿ, ಸತ್ಯಗಣೇಶ್, ಶಿವಪ್ರಸಾದ್, ಅಕಾಶ್ ಸಭೆಯಲ್ಲಿ ಭಾಗವಹಿಸಿದ್ದರು. ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಪುತ್ತೂರು ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ಪಿ. ವಾಮನ ಪೈ, ಜಯಶ್ರೀ ಎಸ್. ಶೆಟ್ಟಿ, ರಮೇಶ್ ಭಟ್ ಉಪಸ್ಥಿತರಿದ್ದರು. ಪುತ್ತೂರು ಪುಡಾದ ಸದಸ್ಯ ಕಾರ್ಯದರ್ಶಿ ಅಭಿಲಾಷ್ ಸ್ವಾಗತಿಸಿ, ವಂದಿಸಿದರು.