- ಶಾಸಕ ಯು.ಟಿ ಖಾದರ್ ಭೇಟಿ
ಪುತ್ತೂರು: ಗೋಳಿಕಟ್ಟೆಯಲ್ಲಿ ಯೂತ್ ಕಾಂಗ್ರೆಸ್ ಚುನಾವಣಾ ಕ್ಯಾನ್ವಾಸ್ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಿದ್ದು, ಘಟನೆಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತ ಗೋಳಿಕಟ್ಟೆ ನಿವಾಸಿ ಮಹಮ್ಮದ್ ಆಲಿ(೩೧ಚ.)ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮಹಮ್ಮದ್ ಅಲಿ ಮತ್ತು ಎಸ್ಡಿಪಿಐ ಕಾರ್ಯಕರ್ತ ನೌಫಲ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಮಧ್ಯಾಹ್ನ ಗೋಳಿಕಟ್ಟೆಯಲ್ಲಿ ಮಾತಿನ ಚಕಮಕಿ ನಡೆದಿದೆ.ಈ ವೇಳೆ ಅಲ್ಲಿನ ಪರಿಸರದವರು ಸೇರಿ ಘಟನೆಯನ್ನು ರಾಜಿಯಲ್ಲಿ ಇತ್ಯರ್ಥ ಪಡಿಸಿದ್ದರು.ಆದರೆ ಬಳಿಕದ ಬೆಳವಣಿಗೆಯಲ್ಲಿ ವಳತ್ತಡ್ಕ ನಿವಾಸಿಗಳಾದ ಸಿರಾಜ್, ಮುನೀರ್, ನೌಫಲ್ ಶರೀಫ್ ಎಂಬವರು ಗೋಳಿಕಟ್ಟೆಗೆ ಬಂದು ಮಹಮ್ಮದ್ ಆಲಿ ಅವರಿಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.ಹಲ್ಲೆ ನಡೆಸಿದವರೆನ್ನಲಾದ ಸಿರಾಜ್, ಮುನೀರ್, ನೌಫಲ್ ಮತ್ತು ಶರೀಫ್ ಅವರನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಹಲ್ಲೆಗೊಳಗಾದ ಮಹಮ್ಮದ್ ಆಲಿಯವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಮುಖಕ್ಕೆ ಗಲ್ಲಕ್ಕೆ ಗಾಯವಾಗಿದೆ.
ಹಲ್ಲೆ ನಡೆಸಿದವರ ಮಟ್ಟ ಹಾಕಲು ಕ್ರಮಕ್ಕೆ ಯು.ಟಿ.ಖಾದರ್ ಆಗ್ರಹ: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಹಮ್ಮದ್ ಆಲಿ ಅವರನ್ನು ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಅವರು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು.ಬಳಿಕ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಯು.ಟಿ.ಖಾದರ್ ಅವರು, ಇವತ್ತು ಮಾರಣಾಂತಿಕವಾಗಿ ಹಲ್ಲೆಗೊಳಗಾದ ಯೂತ್ ಕಾಂಗ್ರೆಸ್ ಮುಖಂಡ ಮಹಮ್ಮದ್ ಆಲಿ ಅವರು ಗುಣಮುಖರಾಗಿ ಬರುವುದು ನಮ್ಮ ಮೊದಲ ಆಶಯ.ಎರಡನೆಯದಾಗಿ ಹಲ್ಲೆ ನಡೆಸಿದವರ ವಿರುದ್ಧ ಈಗಾಗಲೇ ಕೇಸು ದಾಖಲಾಗಿದೆ.ಇದರ ಜೊತೆಗೆ ಈ ರೀತಿ ಹಲ್ಲೆ ನಡೆಸಿದ ಕಿಡಿಗೇಡಿಗಳು ಯಾರಿದ್ದಾರೋ ಅವರನ್ನು ಮಟ್ಟ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು.ಹಲ್ಲೆ ಪ್ರಕರಣ ಎರಡು ಮೂರು ಕಡೆ ಆಗಿದೆ.ಈ ಕುರಿತು ನಮ್ಮ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಆದರೆ ದ್ವೇಷಕ್ಕೆ ದ್ವೇಷ ನಮ್ಮ ತತ್ವ ಅಲ್ಲ.ಕಾಂಗ್ರೆಸ್ ಇದನ್ನು ಕಲಿಸಿಲ್ಲ.ಆದ್ದರಿಂದ ಇವತ್ತು ಕಾಂಗ್ರೆಸ್ ಕಾರ್ಯಕರ್ತರು ಸಮಾಧಾನದಿಂದ ಇದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡನೀಯ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಗರಸಭಾ ಸದಸ್ಯರಾದ ಯೂಸುಫ್ ಡ್ರೀಮ್, ರಿಯಾಜ್ ಪರ್ಲಡ್ಕ, ಇಬ್ರಾಹಿಂ ಬಾತಿಷ ಒಳತ್ತಡ್ಕ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ನೂರುದ್ದೀನ್ ಸಾಲ್ಮರ ಸೇರಿದಂತೆ ಹಲವಾರು ಮಂದಿ ಮಾಜಿ ಸಚಿವರ ಭೇಟಿ ಸಂದರ್ಭ ಉಪಸ್ಥಿತರಿದ್ದರು.