ಪುತ್ತೂರು: ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಮತ್ತು ಬೀಡಿ ಬ್ರಾಂಚ್ ಸಹಿತ ನಾಲ್ಕು ಅಂಗಡಿಗಳಿಂದ ಕಳ್ಳತನ ನಡೆದ ಘಟನೆ ಜ.12ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಪೂರ್ವ ಭಾಗದ ಗೋಪುರದ ಕಂಬ ಏರಿ ಒಳಾಂಗಣ ಪ್ರವೇಶಿಸಿದ ಕಳ್ಳರು ದೇವರ ಗರ್ಭಗುಡಿಯ ಬಾಗಿಲು ಮುರಿದು ಒಳನುಗ್ಗಿ ದೇವರ ಚಿನ್ನದ ಪದಕವುಳ್ಳ ಬೆಳ್ಳಿಯ ಮಾಲೆ, ಬೆಳ್ಳಿಯ ಕವಳಿಗೆ ಸೌಟು, ಶಂಖ ಮತ್ತು ಒಳಗಾಣದ ಗೋಪುರದಲ್ಲಿ ಇರಿಸಲಾಗಿದ್ದ ಗಂಧದ ಕೊರಳನ್ನು ಕಳವು ಮಾಡಿ ಗೋಪುರದಲ್ಲಿದ್ದ ಕಬ್ಬಿಣದ ಕಪಾಟಿನ ಬಾಗಿಲು ಮುರಿದು ಒಳಗಿದ್ದ ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ದೇವಳದ ಅರ್ಚಕ ಸದಾಶಿವ ಹೊಳ್ಳ ಅವರು ನಸುಕಿನ ಜಾವ ಸುಮಾರು 5 ಗಂಟೆಯ ಸುಮಾರಿಗೆ ದೇವಳದ ಬಾಗಿಲು ತೆರೆದು ಗರ್ಭಗುಡಿಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ದೇವಳದ ಎದುರಿನ ಎರಡು ಅಂಗಡಿಯಿಂದ ಕಳವು:
ದೇವಳದ ಎದುರು ಭಾಗದಲ್ಲಿ ತಿಮ್ಮಪ್ಪ ಗೌಡ ಎಂಬವರ ಅಂಗಡಿಯ ಹಿಂಬದಿಯಿಂದ ಒಳನುಗ್ಗಿದ್ದ ಕಳ್ಳರು ಅಂಗಡಿಯ ಒಳಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಒಕ್ಕಲಿಗ ಸ್ವಸಹಾಯ ಸಂಘದ ಸುಮಾರು ರೂ.30 ಸಾವಿರ ನಗದು ಮತ್ತು ಅಂಗಡಿಯ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಅವರ ಅಂಗಡಿಯ ಪಕ್ಕದ ಶಿವಪ್ಪ ಪೂಜಾರಿ ಎಂಬವರು ಬೀಡಿ ಬ್ರಾಂಚ್ಗೂ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ್ದಾರೆ.
ಕೆಮ್ಮಾಯಿ ಜಂಕ್ಷನ್ ಅಂಗಡಿಗಳಲ್ಲೂ ಕಳವು:
ಕೆಮ್ಮಾಯಿ ಜಂಕ್ಷನ್ ಬಳಿಯ ಪತ್ರಿಕಾ ವಿತರಕ ಲಿಂಗಪ್ಪ ಎಂಬವರ ಅಂಗಡಿಯ ಬಾಗಿಲು ಮುಗಿದು ಕಳವಿಗೆ ವಿಪಲ ಯತ್ನ ನಡೆಸಿದ್ದಾರೆ. ಪ್ರಯಾಣಿಕರ ತಂಗುದಾಣದ ಬಳಿಯ ಬರ್ನಾಂಡಿಸ್ ಎಂಬವರ ಅಂಗಡಿಯ ಹಿಂಬದಿಯಿಂದ ಬಾಗಿಲು ಮುರಿದು ನುಗ್ಗಿದ ಕಳ್ಳರು ನಗದು ಕಳವು ಮಾಡಿದ್ದಾರೆ.
ವಿಕೃತ ಮೆರೆದ ಕಳ್ಳರು:
ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಒಳನುಗ್ಗಿದ ಕಳ್ಳರು ದೇವಳ ಒಳಗೆ ಕಳವು ಮಾಡುವ ಜೊತೆಗೆ ದೇವಳದಲ್ಲಿ ಇರಿಸಲಾಗಿದ್ದ ಸೀಯಾಳ ಕುಡಿದು, ಬಾಳೆಹಣ್ಣು ತಿಂದು, ಅಮಲು ಪದಾರ್ಥ ಸೇವಿಸಿ ಉಗಿದಿದ್ದಾರೆ. ಬಿಯರ್ ಬಾಟಲಿಯೂ ದೇವಳದ ಗೋಪುರದಲ್ಲಿ ಕಂಡು ಬಂದಿದೆ.