HomePage_Banner
HomePage_Banner
HomePage_Banner
HomePage_Banner

ಸುದ್ದಿ ಬಿಡುಗಡೆ ಹಿರಿಯ ವರದಿಗಾರರಾಗಿದ್ದ ನಾರಾಯಣ ನಾಯ್ಕ್ ಕುಟುಂಬಕ್ಕೆ ಮುಖ್ಯಮಂತ್ರಿಯವರಿಂದ ಐದು ಲಕ್ಷ ರೂ ಮಂಜೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜಿಲ್ಲಾ ಪತ್ರಕರ್ತರ ಸಂಘದ ಶ್ರೀನಿವಾಸ ನಾಯಕ್, ಇಬ್ರಾಹಿಂ ಅಡ್ಕಸ್ಥಳರವರ ಪ್ರಯತ್ನ ಪ್ರಮುಖ ಕಾರಣ-ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

ಪುತ್ತೂರು: ಕಳೆದ ಆಗಸ್ಟ್ ತಿಂಗಳಿನಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾಗಿರುವ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರರಾಗಿದ್ದ ನಾರಾಯಣ ನಾಯ್ಕ ಅಮ್ಮುಂಜೆರವರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪರವರಿಂದ ಐದು ಲಕ್ಷ ರೂಪಾಯಿ ಮಂಜೂರಾಗಲು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳರವರ ಪ್ರಯತ್ನವೇ ಪ್ರಮುಖ ಕಾರಣ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರುರವರು ತಿಳಿಸಿದ್ದಾರೆ.

‘ಸುದ್ದಿ’ಯೊಂದಿಗೆ ಮಾತನಾಡಿದ ವಿಜಯವಾಣಿ ಪತ್ರಿಕೆಯ ಹಿರಿಯ  ವರದಿಗಾರರೂ ಆಗಿರುವ ಶಿವಾನಂದ ತಗಡೂರುರವರು, ಅಕಾಲಿಕವಾಗಿ ನಿಧನರಾದ ನಾರಾಯಣ ನಾಯ್ಕರವರ ಮನೆಯವರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಶ್ರೀನಿವಾಸ ನಾಯಕ್ ಮತ್ತು ಇಬ್ರಾಹಿಂರವರು ತಿಳಿಸಿದ್ದರಲ್ಲದೆ ನಾರಾಯಣ ನಾಯ್ಕರವರ ಮನೆಯವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ದೊರಕಿಸಿಕೊಡುವಂತೆ ಆಗ್ರಹಿಸಿ ಕಳೆದ ನ.೨ರಂದು ಮುಖ್ಯಮಂತ್ರಿಯವರಿಗೆ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವರ ಮುಖಾಂತರ ಮನವಿ ಪತ್ರ ನೀಡಿದ್ದರು. ಈ ಮನವಿಯನ್ನು ನಾನು ಖುದ್ದಾಗಿ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದೆ. ನಮ್ಮ ಮನವಿಗೆ ಸ್ಪಂದಿಸಿದ ಯಡಿಯೂರಪ್ಪರವರು ಐದು ಲಕ್ಷ ರೂ ಬಿಡುಗಡೆಗೊಳಿಸಿದ್ದಾರೆ, ಕೆಲವೇ ದಿನಗಳಲ್ಲಿ ಈ ಮೊತ್ತ ನಾರಾಯಣ ನಾಯ್ಕ ಅವರ ಮನೆಯವರಿಗೆ ಸೇರುತ್ತದೆ. ಮುಂದೆ ನಾನು ಪುತ್ತೂರಿಗೆ ಬಂದಾಗ ನಾರಾಯಣ ನಾಯ್ಕರವರ ಮನೆಗೆ ಭೇಟಿ ನೀಡೋಣ ಎಂದು ತಿಳಿಸಿರುವ ಶಿವಾನಂದ ತಗಡೂರುರವರು ಕಳೆದ ದಶಂಬರ್ ತಿಂಗಳಿನಲ್ಲಿ ನಿಧನರಾಗಿರುವ ಸುದ್ದಿ ಬಿಡುಗಡೆಯ ಕಡಬದ ಹಿರಿಯ ಪ್ರತಿನಿಧಿಯಾಗಿದ್ದ ಖಾದರ್ ಸಾಹೇಬ್ ಕಲ್ಲಗುಡ್ಡೆರವರ ಮನೆಯವರಿಗೂ ಆರ್ಥಿಕ ನೆರವು ನೀಡಲು ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕೋವಿಡ್ ಸಂದರ್ಭ ಮೃತಪಟ್ಟ ಹಲವು ಪತ್ರಕರ್ತರ ಕುಟುಂಬಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೋರಾಟದ ಫಲವಾಗಿ ನೆರವು ಸಿಗುವಂತಾಯಿತು. ದಕ್ಷಿಣ ಕನ್ನಡದ ನಾರಾಯಣ ನಾಯ್ಕ, ಸೀತಾಲಕ್ಷ್ಮೀ ಕರ್ಕಿಕೋಡಿ ಸೇರಿದಂತೆ ರಾಜ್ಯದ ವಿವಿಧೆಡೆ ಮೃತಪಟ್ಟ ೨೩ ಪತ್ರಕರ್ತರ ಕುಟುಂಬಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಒತ್ತಡದ ಮೂಲಕ ರಾಜ್ಯ ಸರಕಾರ ನೆರವಿಗೆ ಧಾವಿಸಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ಹಲವು ರೀತಿಯ ನೆರವು ನೀಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಹಲವು ಪತ್ರಕರ್ತರು ನಮ್ಮ ನಡುವೆ ಇದ್ದಾರೆ. ಅಂತಹವರು ಕೋವಿಡ್ ಸಂದರ್ಭ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಅಂತಹವರನ್ನು ಗುರುತಿಸಿ, ಅವರಿಗೆ ಆಹಾರ ಕಿಟ್‌ಗಳನ್ನು ನೀಡಿzವೆ. ಇದಲ್ಲದೆ, ಸರಕಾರದಿಂದ ಸಿಗುವ ಹಲವು ಸವಲತ್ತುಗಳನ್ನು ಪತ್ರಕರ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಘ ಹೋರಾಡುತ್ತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸುದೀರ್ಘವಾದ ಇತಿಹಾಸ ಇದೆ ಎಂದು ಅವರು ಹೇಳಿದರು.

ಸಿಎಂಗೆ ಅಭಿನಂದನೆ: ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಹಣದ ನೆರವು ನೀಡಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸಲೇ ಬೇಕು. ಒಂದು ವೇಳೆ ಮುಖ್ಯಮಂತ್ರಿಗಳು ಮನಸ್ಸು ಮಾಡದೇ ಇದ್ದರೆ ಖಂಡಿತವಾಗಿಯೂ ಈ ಯೋಜನೆಯ ನೆರವು ಪತ್ರಕರ್ತರ ಕುಟುಂಬಕ್ಕೆ ಸಿಗುತ್ತಿರಲಿಲ್ಲ. ಪತ್ರಕರ್ತರಿಗೆ ಈ ಯೋಜನೆ ದೊರಕುವುದರ ನಿಟ್ಟಿನಲ್ಲಿ ಯಾವೊಬ್ಬ ಅಧಿಕಾರಿಯೂ ಪರವಾಗಿ ಮಾತನಾಡಿಯೇ ಇಲ್ಲ. ಒಂದು ವೇಳೆ ಪತ್ರಕರ್ತರಿಗೆ ಈ ನೆರವು ನೀಡಿದರೆ, ಭವಿಷ್ಯದಲ್ಲಿ ತಮ್ಮ ಪಿಂಚಣಿ ಮೊತ್ತಕ್ಕೆ ಧಕ್ಕೆ ಬರಬಹುದೇನೋ ಎಂಬ ಕಲ್ಪನೆ ಅವರದ್ದಾಗಿತ್ತು. ಆದ್ದರಿಂದ ಪ್ರತಿಯೊಂದು ಹಂತದಲ್ಲೂ ಅಡ್ಡಗಾಲು ಹಾಕುತ್ತಲೇ ಇದ್ದರು. ಈ ಎಲ್ಲಾ ಪ್ರಭುತ್ವವನ್ನು ಬಗ್ಗಿಸೋದು ಸುಲಭದ ಮಾತಾಗಿರಲಿಲ್ಲ. ಕೊನೆಯಲ್ಲಿ ಮುಖ್ಯಮಂತ್ರಿಗಳು ಸಭೆಯನ್ನು ಕರೆದಿದ್ದರು. ಆ ಸಭೆಯಲ್ಲಿ ನೇರವಾಗಿಯೇ ಹೇಳಿಬಿಟ್ಟಿದ್ದೆ – ನಿಮ್ಮಂತಹ ಹೋರಾಟಗಾರರು ಪತ್ರಕರ್ತರಿಗೆ ಯೋಜನೆಯ ನೆರವು ನೀಡದೇ ಹೋದರೆ, ಇನ್ಯಾರಿಂದಲೂ ಇಂತಹ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿ ಸಭೆಯಿಂದ ಹೊರಡಲು ಅನುವಾದೆ. ಅಷ್ಟರಲ್ಲಿ ಮುಖ್ಯಮಂತ್ರಿಗಳೇ ನನ್ನನ್ನು ಸಮಾಧಾನಿಸಿ, ನಮ್ಮ ಎದುರಿನಲ್ಲಿಯೇ ಯೋಜನೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿದರು. ಇದು ನನ್ನ ಜೀವನದಲ್ಲಿ ಮರೆಯಲಾರದ ಘಟನೆಯೂ ಹೌದು ಎಂದು ಶಿವಾನಂದ ತಗಡೂರು ಹೇಳಿದರು. ಸುಲಭವಾಗಿ ಈ ಸವಲತ್ತನ್ನು ಪಡೆದುಕೊಂಡು ಬರಲಾಗಿದೆ ಎಂದು ಭಾವಿಸಿದರೆ ತಪ್ಪಾದೀತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಾಕಷ್ಟು ಹೋರಾಟದ ಫಲವಾಗಿ ಈ ಯೋಜನೆ ಪತ್ರಕರ್ತರ ಮನೆಗೆ ತಲುಪಿದೆ ಎಂದು ಅವರು ಹೇಳಿದರು.

ದ.ಕ. ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಆಡಳಿತ ಮಂಡಳಿಯವರು ಸುದ್ದಿ ವರದಿಗಾರ ನಾರಾಯಣ ನಾಯ್ಕರ ಮನೆಯವರಿಗೆ ಸರಕಾರದಿಂದ ಪರಿಹಾರ ದೊರಕಿಸುವ ಬಗ್ಗೆ ಯೋಚನೆ ಮಾಡಿದ್ದರ ಪರಿಣಾಮವಾಗಿ ಸುದ್ದಿ ಜಿಲ್ಲಾ ವರದಿಗಾರ ಹಾಗೂ ಕಾರ್‍ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈಯವರು ಪುತ್ತೂರು ಸುದ್ದಿ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ರವರಿಗೆ ಸಂಬಂಧಿಸಿದ ದಾಖಲೆ ಒದಗಿಸುವಂತೆ ಕೇಳಿದ್ದರು. ಸಂತೋಷ್‌ರವರು ಆ ಮಾಹಿತಿಯನ್ನು ನಾರಾಯಣ ನಾಯ್ಕರ ಪತ್ನಿ ಪೂರ್ಣಿಮಾರಿಗೆ ತಿಳಿಸಿದ್ದರು. ಈ ನಡುವೆ ಸುದ್ದಿ ವರದಿಗಾರ ಹಾಗೂ ಜಿಲ್ಲಾ ಸಂಘದ ಕಾರ್‍ಯದರ್ಶಿ ಸಿದ್ಧಿಕ್ ನೀರಾಜೆಯವರು ಸುದ್ದಿ ವರದಿಗಾರ ಜೈನುದ್ಧೀನ್‌ರಿಗೆ ತಿಳಿಸಿ ಅವರ ಮೂಲಕ ನಾರಾಯಣ ನಾಯ್ಕರ ನಿಧನದ ಸರ್ಟಿಫಿಕೇಟ್ ಸೇರಿದಂತೆ ಇತರ ದಾಖಲೆಗಳನ್ನು ಅವರ ಮನೆಯವರಿಂದ ಪಡೆದು ಮಂಗಳೂರು ಜಿಲ್ಲಾ ಸಂಘಕ್ಕೆ ನೀಡಿದ್ದರು. ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್‍ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಮತ್ತು ಸಂಘದವರು ವಿಶೇಷ ಮುತುವರ್ಜಿವಹಿಸಿ ನಾರಾಯಣ ನಾಯ್ಕರ ಮನೆಯವರಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರುರವರ ಮುಖಾಂತರ ನ.೨ರಂದು ರವಾನಿಸಿದ್ದರು. ಶಿವಾನಂದ ತಗಡೂರುರವರ ಶ್ರಮದಿಂದ ಮತ್ತು ಮುಖ್ಯಮಂತ್ರಿಯವರೊಡನೆ ಅವರಿಗಿರುವ ಸಂಪರ್ಕದಿಂದ ಸುದ್ದಿ ವರದಿಗಾರ ದಿ. ನಾರಾಯಣ ನಾಯ್ಕರ ಕುಟುಂಬಕ್ಕೆ ರೂ. ೫ಲಕ್ಷ ಪರಿಹಾರ ಮಂಜೂರಾಗಿದೆ.

ಪುತ್ತೂರಿನ ಪತ್ರಕರ್ತರ ನಡುವಿನ ಗೊಂದಲಕ್ಕೆ ತೆರೆ ಎಳೆಯಲು ಪ್ರಯತ್ನ
ಪುತ್ತೂರಿನ ಪತ್ರಕರ್ತರ ನಡುವೆ ಇರುವ ಗೊಂದಲಕ್ಕೆ ತೆರೆ ಎಳೆಯಲು ಪ್ರಯತ್ನ ಮಾಡುತ್ತೇನೆ, ಖುದ್ದಾಗಿ ಪುತ್ತೂರಿಗೆ ಬಂದು ಪತ್ರಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರುರವರು ಭರವಸೆ ನೀಡಿದ್ದಾರೆ. ಪುತ್ತೂರು ತಾಲೂಕು ಪತ್ರಕರ್ತರ ಸಂಘ ಇಬ್ಭಾಗ ಆಗಿರುವುದು, ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಸದಸ್ಯರಾಗಿದ್ದ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರ ಮೇಲೆ ಅದೇ ಪತ್ರಕರ್ತರ ಸಂಘದವರು ಸುಳ್ಳು ಕೇಸು, ಸುಳ್ಳು ಸಾಕ್ಷಿ ಹಾಕಿರುವುದು, ಸುದ್ದಿ ಬಳಗದವರ ಕುರಿತಾಗಿ ಅವಹೇಳನ, ಅಪಪ್ರಚಾರ ಮಾಡುತ್ತಿದ್ದ ವಾಟ್ಸಪ್ ಗ್ರೂಪಿನವರ ಜತೆ ಸುದ್ದಿ ಬಳಗದವರಿಗೆ ಚಕಮಕಿ ನಡೆದರೂ ಸಂಬಂಧವೇ ಇಲ್ಲದ ಪತ್ರಕರ್ತರ ಸಂಘದವರು ಮಧ್ಯ ಪ್ರವೇಶಿಸಿ ಸುದ್ದಿ ಬಳಗದವರಿಗೆ ತೊಂದರೆ ನೀಡುವುದು, ಅಕಾಲಿಕವಾಗಿ ನಿಧನರಾಗಿರುವ ಸುದ್ದಿ ಬಿಡುಗಡೆ ಹಿರಿಯ ವರದಿಗಾರ ನಾರಾಯಣ ನಾಯ್ಕರವರ ವಿರುದ್ಧವೂ ಪುತ್ತೂರು ತಾಲೂಕು ಪತ್ರಕರ್ತರ ಸಂಘದವರೇ ಸುಳ್ಳು ಕೇಸು ದಾಖಲಿಸಿರುವುದು ಸುದ್ದಿ ಬಳಗಕ್ಕೆ ತೊಂದರೆ ನೀಡುವುದು, ಅಪಪ್ರಚಾರ ಮಾಡುವುದು ಮುಂತಾದ ಅನಪೇಕ್ಷಿತ ಘಟನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಶಿವಾನಂದ ತಗಡೂರುರವರು ಪತ್ರಕರ್ತರ ನಡುವೆ ಇಂತಹ ಭಿನ್ನಾಭಿಪ್ರಾಯ, ಗೊಂದಲ ಬೇಡ. ಸರಿಪಡಿಸಿಕೊಳ್ಳೋಣ ಎಂದರು. ರಾಜಕಾರಣಿಗಳು ಎಷ್ಟೇ ಬೈದಾಡಿಕೊಂಡರೂ ಅವರು ಪರಸ್ಪರ ಒಗ್ಗಟ್ಟಾಗಿರುತ್ತಾರೆ, ನಾವು ಪತ್ರಕರ್ತರು ಬೇರೆ ಬೇರೆಯಾಗಿರುವುದು ಬೇಡ, ನಮ್ಮೊಳಗೆ ಒಡಕು ಬೇಡ ಎಂದು ಶಿವಾನಂದ ತಗಡೂರು ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.