- ಕೋಮುವಾದ ಇಸ್ಲಾಂ ವೈರಿ- ಜಿಫ್ರಿ ತಂಙಳ್
- ಸಮುದಾಯ ಅನ್ಯಾಯಕ್ಕೊಳಗಾಗಬಾರದು-ಹಮೀದಲಿ ತಂಙಳ್
- ದ್ವೇಷಕ್ಕೆ ದ್ವೇಷ ಪರಿಹಾರವಲ್ಲ-ಯು.ಟಿ ಖಾದರ್
- ಸಮುದಾಯ ನಿರಾಶೆಗೊಳಗಾಗಬೇಕಿಲ್ಲ-ಅನೀಸ್ ಕೌಸರಿ
ಚಿತ್ರ: ಯೂಸುಫ್ ರೆಂಜಲಾಡಿ
ಪುತ್ತೂರು: ಈ ದೇಶ ಯಾರದೋ ಒಬ್ಬರ ಸೊತ್ತಲ್ಲ ಇದು ನಮ್ಮೆಲ್ಲರ ಸೊತ್ತು ದೇಶದ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ್ದು ದೇಶದ ಏಕತೆ ಮತ್ತು ಐಕ್ಯತೆ ಸಂವಿಧಾನದ ಆಶಯವಾಗಿದೆ, ಆದರೆ ಇಂದು ದೇಶದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿರುವ ಕಾನೂನುಗಳು, ನಿಯಮಗಳು, ಮೇಳೈಸುತ್ತಿದ್ದು ದೇಶಕ್ಕೆ ಕೊಡುಗೆ ನೀಡಿದವರಿಗೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಬೆಲೆಯೇ ಇಲ್ಲದಂತಾಗಿದೆ ಇವೆಲ್ಲದರ ವಿರುದ್ಧ ಜಾಗೃತರಾಗಿ ಸುಭದ್ರ ದೇಶ ಕಟ್ಟುವುದು ನಮ್ಮ ನಿಮ್ಮೆಲ್ಲರ ಮೇಲಿನ ಹೊಣೆಗಾರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಧಾನಸಭಾ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಕೇಂದ್ರಿಯ ಸಮಿತಿಯು `ಅಸ್ತಿತ್ವ, ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೇತೃತ್ವದಲ್ಲಿ ಕೇರಳದಿಂದ ಆರಂಭಿಸಿರುವ ಮುನ್ನಡೆ ಯಾತ್ರೆಯ ಅಂಗವಾಗಿ ಸಂಪ್ಯ ಸಾದಾತ್ ನಗರದಲ್ಲಿ ಜ.11ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಸ್ಕೆಎಸ್ಸೆಸ್ಸೆಫ್ ಅಸ್ತಿತ್ವ ಧಕ್ಕೆಯ ವಿಚಾರವನ್ನೆತ್ತಿಕೊಂಡು ಮುನ್ನಡೆ ಯಾತ್ರೆ ಕೈಗೊಂಡಿದ್ದು ಇಲ್ಲಿ ಎಲ್ಲರಿಗೂ ಸಮಾನ ಅಸ್ತಿತ್ವ ಸಿಗಬೇಕಾಗಿರುವುದು ಸಂವಿಧಾನದ ಭಾಗವಾಗಿದೆ ಅಸ್ತಿತ್ವ ಉಳಿದರೆ ಮಾತ್ರ ನಮ್ಮ ರಾಷ್ಟ್ರಗೀತೆಯ ಗೌರವ ಉಳಿಯಬಹುದು ಪ್ರಾಣವನ್ನು ಕೊಟ್ಟಾದರೂ ಅಸ್ತಿತ್ವವನ್ನು ಇಲ್ಲಿ ಉಳಿಸಲೇಬೇಕಾಗಿದೆ ಅಸ್ತಿತ್ವದ ವಿಚಾರ ಯಾರ ಪರವೂ, ವಿರುದ್ಧವೂ ಅಲ್ಲ, ಈ ದೇಶ ಎಲ್ಲರದ್ದಾದ ಕಾರಣ ಅಸ್ತಿತ್ವವೂ ಎಲ್ಲರ ಹಕ್ಕಾಗಿದೆ ಎಂದು ಅವರು ಹೇಳಿದರು.
ರೈತರ ಬಗ್ಗೆ ಕಾಳಜಿಯೇ ಇಲ್ಲ: ದೇಶದ ರೈತ ಚಳಿಯಲ್ಲಿ ನಡುಗುತ್ತಾ ದೆಹಲಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ ಅದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ದೇಶದ ಆಡಳಿತ ಕಣ್ಮುಚ್ಚಿ ಕುಳಿತಿದೆ, ದೇಶವಾಸಿಗಳಾದ ನಾವೂ ಸುಮ್ಮನಾಗಿzವೆ, ನಮ್ಮೆಲ್ಲರ ಚರ್ಮ, ಕಿವಿ ದಪ್ಪಗಾಗಿ ಅನ್ನದಾತರ ಕೂಗು ನಮಗೆ ಕೇಳದಾಗಿದೆ, ರೈತರು, ಸೈನಿಕರು ಜಾತಿ, ಧರ್ಮ ಬಿಟ್ಟು ದೇಶಕ್ಕೆ ಕೊಡುಗೆ ನೀಡುವಾಗ ರಾಜಕೀಯದವರು ಜಾತಿ, ಧರ್ಮಗಳನ್ನು ತಂದು ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಎಂದರು.
ನಾವು ಒಂದು ಹೇಳಿದರೆ ಕೆಲ ಮಾದ್ಯಮಗಳು ಇನ್ನೊಂದನ್ನು ಬರೆಯುತ್ತವೆ. ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಮಾದ್ಯಮಗಳು ಜವಾಬ್ದಾರಿ ಮರೆತು ಕಾರ್ಯ ನಿರ್ವಹಿಸುತ್ತಿದೆ ಎಂದು ರಮೇಶ್ ಕುಮಾರ್ ಆರೋಪಿಸಿದರು.
ಕೋಮುವಾದ ಇಸ್ಲಾಂ ವೈರಿ- ಜಿಫ್ರಿ ತಂಙಳ್: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್ ಮಾತನಾಡಿ ಭಾರತ ಜಾತ್ಯಾತೀತ ಪರಂಪರೆಯ ಸುಂದರ ದೇಶವಾಗಿದ್ದು ಇಲ್ಲಿ ಎಲ್ಲ ಸಮುದಾಯದವರೂ ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ, ಭಾರತದ ಬಹುತ್ವ, ಜಾತ್ಯಾತೀತ ಪರಂಪರೆ ಮತ್ತು ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಸಮಸ್ತ ಮತ್ತು ಅದರ ಪೋಷಕ ಸಂಘಟನೆ ಮುಂಚೂಣಿಯಲ್ಲಿರಲಿ ಎಂದು ಹೇಳಿದರು. ಅಲ್ಪ ಸಂಕ್ಯಾತರ ಹಾಗೂ ಹಿಂದುಳಿದ ವರ್ಗದ ಅಸ್ತಿತ್ವ, ಹಕ್ಕುಗಳನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯತೆಯಾಗಿದ್ದು ಅದು ನಮ್ಮ ಜವಾಬ್ದಾರಿಯೂ ಆಗಿದೆ, ನಮಗೆ ಸಿಗಬೇಕಾದ ಹಕ್ಕುಗಳನ್ನು ಸಮಸ್ತವು ಶಾಂತಿಯುತವಾದ ಹಾದಿಯಲ್ಲಿ ಸಂಚರಿಸಿ ಪಡೆದುಕೊಳ್ಳಲಿದೆ ಎಂದು ಹೇಳಿದ ಅವರು, ಕೋಮುವಾದವು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಮತ್ತು ಸಮಸ್ತ ಎಂಬ ಉಲಮಾ ಸಂಘಟನೆಯಿಂದ ದೇಶದ ಧಾರ್ಮಿಕ ಸಾಮರಸ್ಯದ ವಿರುದ್ಧವಾದ ಘಟನೆಗಳಿಗೆ ಯಾವುದೇ ಅವಕಾಶ ನೀಡುದಿಲ್ಲ ಎಂದು ಹೇಳಿದರು.
ಸಮುದಾಯ ಅನ್ಯಾಯಕ್ಕೊಳಗಾಗಬಾರದು-ಹಮೀದಲಿ ತಂಙಳ್: ಮುನ್ನಡೆ ಯಾತ್ರೆ ಅಭಿಯಾನದ ಸಂದೇಶ ಭಾಷಣ ಮಾಡಿದ ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ರವರು ನ್ಯಾಯ ನಿರಾಕರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ, ಮಹತ್ತರ ಉzಶವನ್ನಿಟ್ಟುಕೊಂಡು ಎಸ್ಕೆಎಸ್ಸೆಸ್ಸೆಫ್ ಮುನ್ನಡೆ ಯಾತ್ರೆ ಹಮ್ಮಿಕೊಂಡಿದೆ, ಸಮುದಾಯ ಇಲ್ಲಿ ಅವಗಣನೆಗೆ ಒಳಗಾಗಬಾರದು, ಪ್ರಶ್ನಿಸಲ್ಪಡಬಾರದು, ಅಭಿಮಾನದಿಂದ ಇಲ್ಲಿ ಜೀವನ ನಡೆಸಬೇಕು ಎನ್ನುವುದು ನಮ್ಮ ಉದ್ದೇ ಶವಾಗಿದೆ ಎಂದು ಹೇಳಿದರು.
ದ್ವೇಷಕ್ಕೆ ದ್ವೇಷ ಪರಿಹಾರವಲ್ಲ-ಯು.ಟಿ ಖಾದರ್: ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿ ದ್ವೇಷ ಹರಡುವವರು ಒಂದು ಕಡೆಯಾದರೆ ಪ್ರೀತಿ ಹಂಚುವವರು ಇನ್ನೊಂದು ಕಡೆ ಇದ್ದಾರೆ, ದ್ವೇಷಕ್ಕೆ ದ್ವೇಷ ಪರಿಹಾರವಲ್ಲ, ಪ್ರಜ್ಞಾವಂತ ಯುವಜನತೆ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ, ಎಸ್ಕೆಎಸ್ಸೆಸ್ಸೆಫ್ ಮುನ್ನಡೆ ಯಾತ್ರೆ ದೇಶದ ಶಾಂತಿ, ಸೌಹಾರ್ದತೆಗೆ ಮುನ್ನುಡಿಯಾಗಲಿ ಎಂದು ಹೇಳಿದರು.
ಸಮುದಾಯ ನಿರಾಶೆಗೊಳಗಾಗಬೇಕಿಲ್ಲ-ಅನೀಸ್ ಕೌಸರಿ: ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮಾತನಾಡಿ ಎಸ್ಕೆಎಸ್ಸೆಸ್ಸೆಫ್ ಮುನ್ನಡೆ ಯಾತ್ರೆಯು ಮಹತ್ವದ ಸದುzಶವನ್ನು ಇಟ್ಟುಕೊಂಡು ಹಮ್ಮಿಕೊಳ್ಳಲಾದ ಯಾತ್ರೆಯಾಗಿದ್ದು ಸಮಸ್ತ ಮೇಧಾವಿಗಳ ದೂರದೃಷ್ಟಿ ಮತ್ತು ಚಿಂತನಾ ಶೀಲತೆಯಿಂದ ಸಮಾಜದ ಸುಭಿಕ್ಷೆ ಇಟ್ಟುಕೊಂಡು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕೋಮುವಾದ ವಿಜ್ರಂಭಿಸುವ ಇಂದಿನ ಕಾಲಘಟ್ಟದಲ್ಲಿ ಸಮುದಾಯ ನಿರಾಶರಾಗಬೇಕಾದ ಅಗತ್ಯವಿಲ್ಲ, ದೇಶದ ಬಹುಪಾಲು ಜನರು ಸಂವಿಧಾನದಲ್ಲಿ ನಂಬಿಕೆಯಿಟ್ಟವರಾಗಿದ್ದು ನಾವು ದೇಶವನ್ನು ಕಟ್ಟಬೇಕಾದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ದ.ಕ ಜಿಲ್ಲೆಯನ್ನು ಕೋಮುವಾದದ ಪ್ರಯೋಗ ಶಾಲೆ ಎಂದು ಬಿಂಬಿಸಲಾಗುತ್ತಿದೆ, ಆದರೆ ಈ ಜಿಲ್ಲೆ ಕೋಮು ಸೌಹಾರ್ದತೆಯ ಪ್ರಯೋಗ ಶಾಲೆ ಎನ್ನುವುದು ನಮ್ಮ ವಾದವಾಗಿದೆ, ಎಸ್ಕೆಎಸ್ಸೆಸ್ಸೆಫ್ ಇರುವವರೆಗೂ ಕೂಮು ಸೌಹಾರ್ದತೆಯ ಕಾವಲಾಳುಗಳು ನಾವಾಗುತ್ತೇವೆ, ನವ ತಲೆಮಾರಿಗೆ ದೇಶದ ಸೌಹಾರ್ದತೆ ಬಗ್ಗೆ ನಾವು ತಿಳಿಸಿಕೊಡುತ್ತೇವೆ ಎಂದು ಅವರು ಹೇಳಿದರು. ಸಮುದಾಯದ ಮಂದಿ, ಸಂಘಟನೆಗಳು ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡಬೇಕಾದ ಅವಶ್ಯಕತೆ ಎದ್ದು ಕಾಣುತ್ತಿದೆ, ನಮ್ಮ ಸಂಘಟನೆ ಕಾಂಗ್ರೆಸ್ ಧ್ವಜ ಹಿಡಿಯಿರಿ ಎನ್ನುತ್ತಿಲ್ಲ, ಲೀಗ್ ಅಥವಾ ಎಸ್ಡಿಪಿಐ ಪಕ್ಷದ ಧ್ವಜ ಹಿಡಿಯಿರಿ ಎಂದೂ ಹೇಳುತ್ತಿಲ್ಲ, ನಾವು ಕೈಯಲ್ಲಿ ಪುಸ್ತಕ ಹಿಡಿಯಿರಿ ಎಂದಷ್ಟೇ ಹೇಳುತ್ತಿದ್ದೇವೆ ಎಂದ ಅವರು ಸಮುದಾಯದ ಅಸ್ತಿತ್ವ ಪ್ರಶ್ನಿಸಲು ಯಾರಿಗೂ ನೈತಿಕತೆಯಿಲ್ಲ, ಸಧೃಢ ಸಮುದಾಯ ನಮ್ಮದಾಗಬೇಕು ಎಂದು ಹೇಳಿದರು. ಎಸ್ಕೆಎಸ್ಎಸ್ಎಫ್ ಜಿಲ್ಲಾ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಸಂದರ್ಬೋಚಿತ ಮಾತನಾಡಿದರು.
ಧ್ವಜಾರೋಹಣ-ಮಖಾಂ ಝಿಯಾರತ್: ಇದಕ್ಕೂ ಮೊದಲು ನಡೆದ ಧ್ವಜಾರೋಹಣವನ್ನು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷರು, ಸ್ವಾಗತ ಸಮಿತಿ ಕೋಶಾಧಿಕಾರಿಯಾಗಿರುವ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ನೆರವೇರಿಸಿದರು. ಅಮೀರ್ ತಂಙಳ್ ಕಿನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪ್ಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಿತು. ಹಾಫಿಳ್ ಸಯೀದ್ ಮಾಡನ್ನೂರು ಖಿರಾಅತ್ ಪಠಿಸಿದರು.
ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ, ಅನಸ್ ತಂಙಳ್ ಗಂಡಿಬಾಗಿಲು, ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಸಯ್ಯದ್ ಹಾಶಿರ್ ಅಲಿ ಶೀಹಾಬ್ ತಂಙಳ್ ಪಾಣಕ್ಕಾಡ್, ಎಂ.ಎಸ್ ತಂಙಳ್ ಓಲೆಮುಂಡೋವು, ಎಸ್.ಬಿ ಮಹಮ್ಮದ್ ದಾರಿಮಿ, ಉಮ್ಮರ್ ದಾರಿಮಿ ಸಾಲ್ಮರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್, ಹನೀಫ್ ಹುದವಿ ದೇಲಂಪಾಡಿ, ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ಜಲೀಲ್ ಹಾಜಿ ಸಂಪ್ಯ, ಜಾಬಿರ್ ಫೈಝಿ ಬನಾರಿ, ಅಶ್ರಫ್ ಮುಕ್ವೆ, ಅಬೂಬಕ್ಕರ್ ಮುಲಾರ್, ರಫೀಕ್ ಹಾಜಿ ಕೊಡಾಜೆ, ಖಾದರ್ ಹಾಜಿ ಬಾಯಂಬಾಡಿ, ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ, ಉದ್ಯಮಿ ಅಬ್ದುಲ್ ಖಾದರ್ ಹಾಜಿ ಹಿರಾ, ಹಸೈನಾರ್ ಹಾಜಿ ಸಿಟಿ ಬಜಾರ್, ರಿಯಾರ ರಹ್ಮಾನಿ, ರಿಯಾರh ಫೈಝಿ, ತಾಜ್ ಮಹಮ್ಮದ್ ಸಂಪಾಜೆ, ಕೆಎಂಎ ಕೊಡುಂಗಾಯಿ, ಅಬ್ದುಲ್ ರಝಾಕ್ ಮೌಲಾನಾ ಕಬಕ, ಖಾಸಿಂ ದಾರಿಮಿ ಕಿನ್ಯ ಅಬೂಬಕ್ಕರ್ ಹಾಜಿ ಮಂಗಳಾ, ಮನ್ಸೂರ್ ಮೌಲವಿ, ಸಿದ್ದೀಕ್ ಸುಲ್ತಾನ್, ಯೂಸುಫ್ ಮುಂಡೋಳೆ ಸಹಿತ ಹಲವರು ಉಪಸ್ಥಿತರಿದ್ದರು. ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಸತ್ತಾರ್ ಪಂದಲ್ಲೂರು, ಬಶೀರ್ ಫೈಝಿ ದೇಶಮಂಗಲ, ಬಂಬ್ರಾಣ ಅಬ್ದುಲ್ ಖಾದರ್ ಉಸ್ತಾದ್, ರಶೀದ್ ಫೈಝಿ ವೆಲ್ಲಾಯಿಕೋಡ್, ತಾಜುದ್ದೀನ್ ದಾರಿಮಿ ಪಡನ್ನ, ಡಾ.ಕೆ.ಪಿ ಜಲೀಲ್ ಹುದವಿ ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯಾಧ್ಯಕ್ಷ ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿದರು. ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ತಾಜುದ್ದೀನ್ ರಹ್ಮಾನಿ ವಂದಿಸಿದರು.
ಸನ್ಮಾನ: ಎರಡು ವಾರಗಳ ಕಾಲ ತಿರುವನಂತಪುರಂನಿಂದ ಪುತ್ತೂರುವರೆಗೆ ಯಾತ್ರೆಯನ್ನು ಮುನ್ನಡೆಸಿದ ಕೇಂದ್ರ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಾವಿರಾರು ಮಂದಿ ಭಾಗಿ: ಸಂಪ್ಯದಲ್ಲಿ ನಡೆದ ಮುನ್ನಡೆ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಸಂಘಟಕರು ಅತ್ಯಂತ ಶಿಸ್ತು ಬದ್ದವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ನಾಯಕರು, ಕಾರ್ಯಕರ್ತರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಮುಸ್ಲಿಮೇತರರನ್ನು ಶತ್ರುಗಳೆಂದು ಭಾವಿಸುವ ದೃಷ್ಟಿಕೋನವನ್ನು ಪವಿತ್ರ ಧರ್ಮದ ನಿಜವಾದ ಅನುಯಾಯಿಗಳಿಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಸ್ಲಾಂ ಧರ್ಮವು ಸಾರ್ವಜನಿಕವಾಗಿ ಬೋಧಿಸಲ್ಪಟ್ಟ ಒಂದು ಧರ್ಮವಾಗಿದೆ, ಏಕೆಂದರೆ ಧರ್ಮದಲ್ಲಿ ಯಾವುದೇ ಮರೆಮಾಚುವಿಕೆ ಇಲ್ಲ. ಮುಸ್ಲಿಂ ಸಮುದಾಯವು ದೇಶದ ಧಾರ್ಮಿಕ ಸಾಮರಸ್ಯಕ್ಕೆ ನೆರಳಾಗಿ ನಿಂತಿದೆ. ಅದಕ್ಕಾಗಿ ನಮ್ಮಲ್ಲಿ ಬಲವಾದ ಸಂವಿಧಾನವಿದೆ. ಅದನ್ನು ಮುರಿಯಲು ಪ್ರಯತ್ನಿಸುವವರ ವಿರುದ್ಧ ಸಮಸ್ತ ಬಲವಾದ ನಿಲುವು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
-ಸಯ್ಯದ್ ಜಿಫ್ರಿ ತಂಙಳ್
ದೇಶ ಕಷ್ಟಕರ ಸನ್ನಿವೇಶದಲ್ಲಿದೆ
ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲಾರರು, ತ್ಯಾಗ ಮಾಡಿದವನಿಗೆ ಈ ದೇಶದಲ್ಲಿ ಬೆಲೆಯೇ ಇಲ್ಲ. ದೇಶ ಇಂದು ಅತ್ಯಂತ ಕಷ್ಟಕರ ಸನ್ನಿವೇಶಗಳನ್ನು ಎದುರಿಸುತ್ತಿದ್ದು ಸಂವಿಧಾನಾತ್ಮಕ ಸಂಸ್ಥೆಗಳು ನಮ್ಮ ಕಣ್ಣೆದುರಲ್ಲೇ ದುರ್ಬಲ, ಮತ್ತು ದುರುಪಯೋಗವಾಗುತ್ತಿದೆ, ತಿನ್ನುವ ಹಕ್ಕು, ವಿವಾಹ ವಿಚಾರಗಳು ಅಷೇ ಏಕೆ ಬದುಕುವ ಹಕ್ಕನ್ನೇ ಇನ್ನೊಬ್ಬರು ಪ್ರಶ್ನೆ ಮಾಡುವ ಹಂತಕ್ಕೆ ಈ ದೇಶ ಬಂದು ನಿಂತಿದೆ, ಇಷ್ಟೆಲ್ಲಾ ನಡೆಯುತ್ತಿದ್ದರೂ ಇವನ್ನು ಪ್ರಶ್ನಿಸಬೇಕಾದವರು ಸುಮ್ಮನಾಗಿದ್ದಾರೆ. ದೇಶದ ಇಂದಿನ ಪರಿಸ್ಥಿತಿ ಹೇಗಿದೆ ಅಂದ್ರೆ ಕ್ರಿಕೆಟ್ ಮ್ಯಾಚ್ ಎಂದು ಹೇಳಿ ಫುಟ್ಬಾಲ್ ಆಡ್ತಾರೆ, ಫುಟ್ಬಾಲ್ ಆಟವೆಂದು ಹೇಳಿ ಹಾಕಿ ಸ್ಟಿಕ್ ತರ್ತಾರೆ, ಅವರು ಹೇಳಿದ್ದೇ ವೇದವಾಕ್ಯವಾಗಿ ಮಾರ್ಪಾಡಾಗುತ್ತಿದೆ, ಇದು ದೇಶಕ್ಕೆ ಮಾರಕವಾಗಿದೆ.
ರಮೇಶ್ ಕುಮಾರ್, ಮಾಜಿ ಸ್ಪೀಕರ್
ಸರಕಾರದಿಂದ ತಾರತಮ್ಯ ನೀತಿ
ರಾಜ್ಯ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದ್ದು ಅಲ್ಪ ಸಂಖ್ಯಾತ ಸಮುದಾಯಕ್ಕೆ ಮೀಸಲಾಗಿದ್ದ ಹಲವಾರು ಯೋಜನೆಗಳನ್ನು ರದ್ದುಗೊಳಿಸಿದೆ. ಇನ್ನೂ ಹಲವು ಯೋಜನೆಗಳ ಪ್ರಯೋಜನವನ್ನು ಕಡಿತಗೊಳಿಸಿದೆ, ಕೋವಿಡ್ ನೆಪ ಹೇಳಿ ಅಲ್ಪ ಸಂಖ್ಯಾತ ಸಮುದಾಯದ ಅವಕಾಶಗಳನ್ನು ಮೊಟಕುಗೊಳಿಸಿರುವ ಸರಕಾರದ ನೀತಿ ಅಕ್ಷಮ್ಯವಾಗಿದೆ, ಬ್ರಾಹ್ಮಣ ಸಮುದಾಯಕ್ಕೆ ಅದ್ಭುತ ಯೋಜನೆ ಜಾರಿಗೊಳಿಸಿರುವ ಸರಕಾರ ಅಲ್ಪಸಂಖ್ಯಾತರಿಗೆ ಸೇರಿದ ಯೋಜನೆಗಳನ್ನು ಮೊಟಕುಗೊಳಿಸಿರುವುದರ ಹಿಂದಿನ ಉ ಶವೇನು ಎಂದು ಪ್ರಶ್ನಿಸಿದರು. ಸ್ವಾಗತಿಸಿದ ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯಾಧ್ಯಕ್ಷ ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ ಮಾತನಾಡಿ ಸಮುದಾಯದ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿರುವ ಸಮಸ್ತದ ನಾಯಕರು ಮುನ್ನಡೆ ಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
-ಅನೀಸ್ ಕೌಸರಿ, ರಾಜ್ಯಾಧ್ಯಕ್ಷರು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ