ಪುತ್ತೂರು: ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಜಮೀನು ಅತಿಕ್ರಮಣಕ್ಕೆ ಸಂಬಂಧಿಸಿ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಕೇಸನ್ನು ಹೈಕೋರ್ಟ್ ವಜಾಗೊಳಿಸಿದೆ.
ಕಡಬ ತಾಲೂಕು ಕೊಯಿಲ ಗ್ರಾಮದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಜಮೀನನ್ನು ಕೊಯಿಲ ಗ್ರಾಮದ ನಿವಾಸಿಗಳಾದ ಜತ್ತಪ್ಪ ಗೌಡ ಪುತ್ಯೆ, ಮೋನಪ್ಪ ಗೌಡ ಪುಣಿಕೆತ್ತಡಿ, ಕೇಶವ ಗೌಡ ಪುತ್ಯೆ, ಬೊಮ್ಮಣ್ಣ ಗೌಡ ಪುತ್ಯೆ, ಮೋನಪ್ಪ ಗೌಡ ಯಾನೆ ದಿವಾಕರ ಗೌಡ ಪುತ್ಯೆ, ಆನಂದ ಗೌಡ ಪುತ್ಯೆ, ವೀರಪ್ಪ ದಾಸಯ್ಯ ಪಾಣಿಗ, ಚೆನ್ನಪ್ಪ ಗೌಡ ಪುತ್ಯೆ, ಹೊನ್ನಪ್ಪ ಗೌಡ ಮುಂಡೈಮಾರ್ ಮತ್ತು ಕೊನೆಮಜಲು ಪರಪ್ಪು ನಿವಾಸಿಗಳಾದ ತಿಮ್ಮಪ್ಪ ಮುಗೇರ, ನಕ್ಕುರ ಮುಗೇರ, ಮಾಯಿಲ ಮುಗೇರ, ಮೋನಪ್ಪ ಮುಗೇರ ಮತ್ತು ಪಕೀರ ಮುಗೇರರವರುಗಳು ಅತಿಕ್ರಮಣ ಮಾಡಿದ್ದಾರೆ ಎಂದು ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕರು ನೀಡಿದ ದೂರಿನಂತೆ ಕಡಬ ಆರಕ್ಷಕ ಠಾಣಾಧಿಕಾರಿಯವರು ಕ್ರೈಂ.ನಂ.೧೫೪/೨೦೧೬ರಂತೆ ಪ್ರಥಮ ವರ್ತಮಾನ ವರದಿ ದಾಖಲಿಸಿ ಪುತ್ತೂರಿನ ಅಡಿಷನಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಕೇಶವ ಗೌಡ ಪುತ್ಯೆ, ಬೊಮ್ಮಣ್ಣ ಗೌಡ ಪುತ್ಯೆ, ಮೋನಪ್ಪ ಗೌಡ ಯಾನೆ ದಿವಾಕರ ಗೌಡ ಪುತ್ಯೆ, ಆನಂದ ಗೌಡ ಪುತ್ಯೆ, ವೀರಪ್ಪ ದಾಸಯ್ಯ ಪಾಣಿಗರವರುಗಳು ಈ ಮಧ್ಯೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.
ಪ್ರಕರಣದ ಬಗ್ಗೆ ಕಡಬ ಆರಕ್ಷಕ ಠಾಣಾಧಿಕಾರಿಯವರು ಪ್ರಥಮ ವರ್ತಮಾನ ವರದಿಯಲ್ಲಿ ಕಾಣಿಸಿದ ೧ನೇ ಆರೋಪಿ ಜತ್ತಪ್ಪ ಗೌಡ ಪುತ್ಯೆರವರನ್ನು ಮತ್ತು ಈ ಸಮಯದಲ್ಲಿ ಮೃತ ಪಟ್ಟಿದ್ದ ಹೊನ್ನಪ್ಪ ಗೌಡ ಮುಂಡೈಮಾರ್ ರವರನ್ನು ಕೈ ಬಿಟ್ಟು, ಉಳಿದ ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು. ಮೋನಪ್ಪ ಗೌಡ ಪುಣಿಕೆತ್ತಡಿ, ಚೆನ್ನಪ್ಪ ಗೌಡ ಪುತ್ಯೆ ಮತ್ತು ಕೊನೆಮಜಲು ಪರಪ್ಪು ನಿವಾಸಿಗಳಾದ ತಿಮ್ಮಪ್ಪ ಮುಗೇರ, ನಕ್ಕುರ ಮುಗೇರ, ಮಾಯಿಲ ಮುಗೇರ, ಮೋನಪ್ಪ ಮುಗೇರ ಮತ್ತು ಪಕೀರ ಮುಗೇರರವರುಗಳು ನ್ಯಾಯಾಲಯದಿಂದ ಜಾಮೀನು ಪಡಕೊಂಡಿದ್ದು, ಸದ್ರಿ ಕ್ರಿಮಿನಲ್ ಕೇಸು ವಿಚಾರಣಾ ಹಂತದಲ್ಲಿರುವಾಗಲೇ ಕೇಶವ ಗೌಡ ಪುತ್ಯೆ, ಬೊಮ್ಮಣ್ಣ ಗೌಡ ಪುತ್ಯೆ, ಮೋನಪ್ಪ ಗೌಡ ಯಾನೆ ದಿವಾಕರ ಗೌಡ ಪುತ್ಯೆ, ಆನಂದ ಗೌಡ ಪುತ್ಯೆ, ವೀರಪ್ಪ ದಾಸಯ್ಯ ಪಾಣಿಗ ಮತ್ತು ಚೆನ್ನಪ್ಪ ಗೌಡ ಪುತ್ಯೆರವರು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕಡಬ ಆರಕ್ಷಕ ಠಾಣಾಧಿಕಾರಿಯವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿಯನ್ನು ರದ್ಧುಪಡಿಸುವಂತೆ ಕೋರಿ ಪಿಟಿಷನ್ ದಾಖಲಿಸಿದ್ದರು. ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ನಂ.೧೩೬೯೩/೨೦೨೦ರಂತೆ ದಾಖಲಾದ ಈ ಪ್ರಕರಣದ ವಿಚಾರಣೆ ನಡೆಸಿದ ಜಸ್ಟೀಸ್ ಸೂರಜ್ ಗೋವಿಂದರಾಜ್ ರವರು ಆರೋಪಿಗಳ ವಿರುದ್ಧ ಸರಕಾರ ಪ್ರಕರಣವನ್ನು ದಾಖಲಿಸುವಾಗ ಅಗತ್ಯವಿರುವ ಅಂಶಗಳನ್ನು ಪರಿಗಣಿಸದೇ ಪ್ರಕರಣ ದಾಖಲಿಸಿರುವುದು ಕ್ರಮ ಬದ್ಧವಲ್ಲವೆಂಬುವುದಾಗಿ ತೀರ್ಮಾನಿಸಿ ಕಡಬ ಆರಕ್ಷಕ ಠಾಣಾಧಿಕಾರಿಯವರು ಕ್ರೈಂ.ನಂ.೧೫೪/೨೦೧೬ರಂತೆ ಪ್ರಥಮ ವರ್ತಮಾನ ವರದಿಯ ಪ್ರಕಾರ ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿಯಂತೆ ದಾಖಲಾದ ಸಿ.ಸಿ.ನಂ.೧೬೮೩/೨೦೧೯ರ ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ನೀಡಿದ್ದಾರೆ. ಉಚ್ಛ ನ್ಯಾಯಾಲಯದಲ್ಲಿ ಕೇಶವ ಗೌಡ ಪುತ್ಯೆ, ಬೊಮ್ಮಣ್ಣ ಗೌಡ ಪುತ್ಯೆ, ಮೋನಪ್ಪ ಗೌಡ ಯಾನೆ ದಿವಾಕರ ಗೌಡ ಪುತ್ಯೆ, ಆನಂದ ಗೌಡ ಪುತ್ಯೆ, ವೀರಪ್ಪ ದಾಸಯ್ಯ ಪಾಣಿಗ ಮತ್ತು ಚೆನ್ನಪ್ಪ ಗೌಡ ಪುತ್ಯೆರವರ ಪರವಾಗಿ ವಕೀಲರಾದ ಸುಯೋಗ್ ಹೇರಳೆ ವಾದಿಸಿದ್ದು, ಪುತ್ತೂರಿನ ವಕೀಲರುಗಳಾದ ಡಿ.ಶಂಭು ಭಟ್ ಮತ್ತು ರವಿಕಿರಣ್ ಕೊಯಿಲರವರು ಸಹಕರಿಸಿದ್ದರು.