HomePage_Banner
HomePage_Banner
HomePage_Banner
HomePage_Banner

ನೆಲ್ಯಾಡಿ: ಗ್ರಾ.ಪಂ.ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಆಯ್ಕೆಗೆ ಶ್ರಮಿಸಿದ ಮತದಾರ ಬಾಂಧವರಿಗೆ, ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಒಗ್ಗಟ್ಟು ಇಲ್ಲದಿರುವುದೇ ಗ್ರಾ.ಪಂ.ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣ; ನಂದಕುಮಾರ್


ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಆಯ್ಕೆಗೆ ಶ್ರಮಿಸಿದ ಮತದಾರ ಬಾಂಧವರಿಗೆ, ಕಾರ್ಯಕರ್ತರಿಗೆ ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನಾ ಕಾರ್ಯಕ್ರಮ ಜ.೧೨ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಪಿಸಿಸಿ ಕಡಬ ಬ್ಲಾಕ್ ಉಸ್ತುವಾರಿ ನಂದಕುಮಾರ್‌ರವರು ಮಾತನಾಡಿ, ಕಾಂಗ್ರೆಸ್ ಜಾತ್ಯಾತೀತ ಪಕ್ಷವಾಗಿದ್ದು ಈ ಪಕ್ಷ ಸೋಲಲು ಸಾಧ್ಯವಿಲ್ಲ. ಪಕ್ಷದೊಳಗಿನ ಒಳಜಗಳದಿಂದ ಪಕ್ಷಕ್ಕೆ ಸೋಲಾಗುತ್ತಿದೆ. ಒಗ್ಗಟ್ಟು ಇಲ್ಲದೇ ಇದುದ್ದರಿಂದಲೇ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಮುಖಂಡರು, ಕಾರ್ಯಕರ್ತರು ಮುಂದಿನ ದಿನಗಳಲ್ಲಿ ತಮ್ಮೊಳಗಿನ ಮನಸ್ತಾಪವನ್ನು ಪಕ್ಷಕ್ಕಾಗಿ ಮರೆಯಬೇಕೆಂದು ಹೇಳಿದರು. ಬಿಜೆಪಿಯವರು ನಿರಂತರವಾಗಿ ಮತದಾರರ ಸಂಪರ್ಕದಲ್ಲಿರುತ್ತಾರೆ. ಆದರೆ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಮಾತ್ರ ಮತದಾರರ ಸಂಪರ್ಕ ಮಾಡುತ್ತಿದೆ. ಇದೂ ಪಕ್ಷದ ಹಿನ್ನಡೆಗೆ ಕಾರಣವಾಗಿದೆ.

ಜಿ.ಪಂ.,ತಾ.ಪಂ.,ಗ್ರಾ.ಪಂ.ಸದಸ್ಯರಿಗೆ ಶಾಸಕರನ್ನು ಗೆಲ್ಲಿಸುವ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಅವರು ನಿರಂತರವಾಗಿ ಮತದಾರರ ಸಂಪರ್ಕದಲ್ಲಿರಬೇಕು ಎಂದು ಹೇಳಿದ ನಂದಕುಮಾರ್, ಗ್ರಾ.ಪಂ.ಚುನಾವಣೆಯಲ್ಲಿ ಗೆಲ್ಲಲು ಸಾಮರ್ಥ್ಯವಿರುವವರಿಗೆ ಹಾಗೂ ಪಕ್ಷ ನಿಷ್ಠೆ ಉಳ್ಳವರಿಗೆ ಅವಕಾಶ ನೀಡಲಾಗಿದೆ. ಗೆದ್ದವರಿಗೆ ವಾರ್ಡ್‌ನ ಅಭಿವೃದ್ಧಿಯ ಜವಾಬ್ದಾರಿ ಜನತೆ ಕೊಟ್ಟಿದ್ದಾರೆ. ಕಾರ್ಯಕರ್ತರಿಗೆ, ಮತದಾರರಿಗೆ ನೀಡಿರುವ ಭರವಸೆ ಈಡೇರಿಸಿ, ಸೋತವರು ಮುಂದಿನ ಚುನಾವಣೆ ದೃಷ್ಟಿಯಲ್ಲಿಕೊಟ್ಟುಕೊಂಡು ಕೆಲಸ ಮಾಡಿ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ ಮಾತನಾಡಿ, ೧೩೫ ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಜನರಿಗೆ ಎಲ್ಲವನ್ನೂ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ಭವಿಷ್ಯವಿದೆ. ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ನಳಿನ್‌ಕುಮಾರ್ ಕಟೀಲ್‌ರವರ ಆದರ್ಶ ಗ್ರಾಮ ಬಳ್ಪದಲ್ಲಿ ಕಾಂಗ್ರೆಸ್ ಬೆಂಬಲಿತರು ೫ ಸ್ಥಾನಗಳಲ್ಲಿ ಜಯಭೇರಿಗಳಿಸಿರುವುದು ಬಿಜೆಪಿಗೆ ರಾಜ್ಯಮಟ್ಟದಲ್ಲಿ ಇರಿಸುಮುರಿಸು ತಂದಿದೆ ಎಂದರು. ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರ ಸೂಚನೆ ಮೇರೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿ ರಚಿಸಿ ಗ್ರಾಮಸ್ಥರ ನೋವಿಗೆ ಸ್ಪಂದಿಸುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ. ಕಡಬ ತಾಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಪಡೆದುಕೊಂಡಿರುವ ನೆಲ್ಯಾಡಿ, ಬಿಳಿನೆಲೆ, ಶಿರಾಡಿ ಗ್ರಾಮ ಪಂಚಾಯತ್‌ಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವ ಕೆಲಸವೂ ಆಗಲಿದೆ. ನೆಲ್ಯಾಡಿ ಹೋಬಳಿ ಕೇಂದ್ರ,ನೆಲ್ಯಾಡಿಯಲ್ಲಿ ಸರಕಾರಿ ಕಾಲೇಜು ಆರಂಭ ಸೇರಿದಂತೆ ನೆಲ್ಯಾಡಿಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವುದಾಗಿ ಗಣೇಶ್ ಕೈಕುರೆ ಹೇಳಿದರು.

ಕೆಪಿಸಿಸಿ ಸದಸ್ಯ ಡಾ.ರಘು ಮಾತನಾಡಿ, ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಅಲ್ಲ ಎಂಬುದು ನೆಲ್ಯಾಡಿ ಗ್ರಾ.ಪಂ.ಚುನಾವಣೆಯಲ್ಲಿ ಸಾಬೀತುಗೊಂಡಿದೆ. ಇಲ್ಲಿ ಸಂಘಟಿತ ಹೋರಾಟದಿಂದ ಗೆಲುವು ಸಿಕ್ಕಿದೆ. ಗ್ರಾ.ಪಂ.ಸದಸ್ಯರಾಗಿ ಚುನಾಯಿತರಾದವರಿಗೆ ತಳಮಟ್ಟದಲ್ಲಿ ಜನಸೇವೆಗೆ ಇದೊಂದು ಸಿಕ್ಕಿರುವ ಅವಕಾಶ. ಮುಂದೆ ಹಲವು ಸವಾಲುಗಳಿದ್ದು ಇವೆಲ್ಲವನ್ನೂ ಮೆಟ್ಟಿ ನಿಂತು ಕೆಲಸ ಮಾಡಿ ಎಂದು ವಿಜೇತ ಅಭ್ಯರ್ಥಿಗಳಿಗೆ ಕಿವಿ ಮಾತು ಹೇಳಿದರು. ಇನ್ನೋರ್ವ ಕೆಪಿಸಿಸಿ ಸದಸ್ಯ ಕೆ.ಪಿ.ತೋಮಸ್‌ರವರು ಮಾತನಾಡಿ, ಸುಳ್ಳು ಭರವಸೆ ನೀಡಿ ನೆಲ್ಯಾಡಿಯಲ್ಲಿ ಕಾಂಗ್ರೆಸ್ ಬೆಂಬಲಿತರ ಸೋಲಿಗೆ ಬಿಜೆಪಿ ಸತ ಪ್ರಯತ್ನ ಮಾಡಿದೆ. ಆದರೆ ಮತದಾರ ಯಾವುದೇ ಆಮಿಷಕ್ಕೆ ಒಳಗಾಗದೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಚುನಾಯಿತ ಸದಸ್ಯರು ಪ್ರತಿವರ್ಷವೂ ಮತದಾರರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿ ಬಗೆಹರಿಸಲು ಪ್ರಯತ್ನಿಸಬೇಕೆಂದರು.

ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್‌ರವರು ಮಾತನಾಡಿ, ಸದಸ್ಯರಾಗಿ ಆಯ್ಕೆಯಾದವರಿಗೆ ೫ ವರ್ಷ ಜನಸೇವೆ ಮಾಡಲು ಮತದಾರರು ಅವಕಾಶ ಮಾಡಿಕೊಟ್ಟಿದ್ದಾರೆ. ಹಿರಿಯರು, ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ, ಕಡಬ ತಾಲೂಕಿನಲ್ಲಿ ನೆಲ್ಯಾಡಿ ಮಾದರಿ ಗ್ರಾಮ ಪಂಚಾಯತ್ ಆಗಿ ಮೂಡಿಬರಲಿ ಎಂದರು. ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು ಮಾತನಾಡಿ, ಹಣ, ತೋಳ್ಬಲ, ಚುನಾವಣೆ ಸಮೀಪಿಸುತ್ತಿದ್ದಂತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವ ಮೂಲಕ ಈ ಬಾರಿ ನೆಲ್ಯಾಡಿ ಗ್ರಾ.ಪಂ.ನಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿತ್ತು. ಆದರೆ ಅವರ ಕನಸು ವಿಫಲಗೊಂಡಿದೆ ಎಂದು ಹೇಳಿದ ಅವರು, ಈ ಬಾರಿ ನೆಲ್ಯಾಡಿ ಗ್ರಾ.ಪಂ.ವ್ಯಾಪ್ತಿಗೆ ಜಿ.ಪಂ.ನಿಂದ ೩೫ ಲಕ್ಷ ರೂ.ಅನುದಾನ ನೀಡಲಾಗಿದೆ. ಅಭಿವೃದ್ಧಿ ಬಹಳಷ್ಟು ಮಾಡಿದ್ದೇವೆ. ಆದರೆ ಪಕ್ಷ ಸಂಘಟನೆಗೆ ಒತ್ತು ನೀಡದೇ ಇರುವುದರಿಂದ ಬಹುತೇಕ ಕಡೆಗಳಲ್ಲಿ ಸೋಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಜೊತೆಗೆ ಪಕ್ಷ ಸಂಘಟನೆಗೂ ಒತ್ತು ನೀಡಲಾಗುವುದು ಎಂದರು.

ನೆಲ್ಯಾಡಿ ಗ್ರಾ.ಪಂ.ಚುನಾವಣೆಯ ವಿಜೇತ ಸದಸ್ಯ ಜಯಾನಂದ ಬಂಟ್ರಿಯಾಲ್‌ರವರು ಮಾತನಾಡಿ, ಕಳೆದ ೫೦ ವರ್ಷಗಳಿಂದ ನೆಲ್ಯಾಡಿ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇಲ್ಲಿ ಪಕ್ಷ ಬೇದ ಮರೆತು ಕಟ್ಟ ಕಡೆಯ ವ್ಯಕ್ತಿಗೂ ಸವಲತ್ತು ಮುಟ್ಟಿಸುವ ಕೆಲಸ ಮಾಡಲಾಗಿದೆ. ಮುಂದಿನ ೫ ವರ್ಷಗಳಲ್ಲಿ ಮತದಾರರ ಆಶಯಕ್ಕೆ ಚ್ಯುತಿಯಾಗದಂತೆ ಕೆಲಸ ಮಾಡಲು ಸಿದ್ಧರಿದ್ದೇವೆ. ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಸೌಕರ್ಯ ಈಡೇರಿಸುವ ನಿಟ್ಟಿನಲ್ಲಿ ಸ್ಪಂದಿಸುತ್ತೇವೆ. ಮುಂದಿನ ದಿನದಲ್ಲಿ ನೆಲ್ಯಾಡಿ ಗ್ರಾ.ಪಂ.ನ ಎಲ್ಲಾ ೧೪ ಸೀಟುಗಳೂ ಕಾಂಗ್ರೆಸ್ ಬೆಂಬಲಿತರೇ ಜಯಗಳಿಸುವಂತೆ ಮಾಡುತ್ತೇವೆ ಎಂದರು. ಉದ್ಯಮಿ ಯು.ಪಿ.ವರ್ಗೀಸ್, ತಾ.ಪಂ.ಸದಸ್ಯೆಯರಾದ ಉಷಾ ಅಂಚನ್, ಕೆ.ಟಿ.ವಲ್ಸಮ್ಮ ಸಂದರ್ಭೋಚಿತವಾಗಿ ಮಾತನಾಡಿದರು. ಗ್ರಾ.ಪಂ.ವಿಜೇತ ಸದಸ್ಯೆ ಉಷಾ ಜೋಯಿ ಅನಿಸಿಕೆ ವ್ಯಕ್ತಪಡಿಸಿದರು. ಬೂತ್ ಉಸ್ತುವಾರಿ ಜೋಸ್ ಕೆ.ಜೆ.ಮಾತಾ ಸ್ವಾಗತಿಸಿ, ಜಯಾನಂದ ಬಂಟ್ರಿಯಾಲ್ ವಂದಿಸಿದರು. ಬೂತ್ ಸಮಿತಿ ಅಧ್ಯಕ್ಷ ಇಲ್ಯಾಸ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

5 ಲಕ್ಷ ರೂ.,ಅನುದಾನ
ನೆಲ್ಯಾಡಿ 2ನೇ ವಾರ್ಡ್‌ನ ಮತದಾರರ ಭೇಟಿ ವೇಳೆ ರಸ್ತೆ, ಬೀದಿ ದೀಪ ಸಮಸ್ಯೆ ಬಗ್ಗೆ ಮತದಾರರು ಪ್ರಸ್ತಾಪಿಸಿದ್ದರು. ಪಕ್ಷ ಬೆಂಬಲಿತರ ಗೆಲ್ಲಿಸಿಕೊಡುವಂತೆ ಮನವಿ ಮಾಡಿದ್ದೆ. ಚುನಾವಣೆ ವೇಳೆ ಮತದಾರರಿಗೆ ನೀಡಿರುವ ಭರವಸೆಯಂತೆ ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ 5 ಲಕ್ಷ ರೂ.,ಅನುದಾನ ಸರಕಾರದಿಂದ ಮಂಜೂರುಗೊಳಿಸಲು ಪ್ರಯತ್ನಿಸುತ್ತೇನೆ. ಇದು ಸಾಧ್ಯವಾಗದೇ ಇದ್ದಲ್ಲಿ ವೈಯಕ್ತಿಕವಾಗಿ 5 ಲಕ್ಷ ರೂ.,ನೀಡುತ್ತೇನೆ.
ನಂದಕುಮಾರ್, ಕೆಪಿಸಿಸಿ ಕಡಬ ಬ್ಲಾಕ್ ಉಸ್ತುವಾರಿ

ವಿಜೇತ ಸದಸ್ಯರಿಗೆ ಗೌರವ:
ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ನೆಲ್ಯಾಡಿ 2ನೇ ವಾರ್ಡ್‌ನಿಂದ ವಿಜೇತರಾದ ಮಹಮ್ಮದ್ ಇಕ್ಬಾಲ್ ಮೊರಂಕಳ, ರೇಷ್ಮಾ ಪಡ್ಪಗುಡ್ಡೆ, ನೆಲ್ಯಾಡಿ ೩ನೇ ವಾರ್ಡ್‌ನ ವಿಜೇತರಾದ ಜಯಾನಂದ ಬಂಟ್ರಿಯಾಲ್, ಉಷಾ ಒ.ಕೆ., ಅಬ್ದುಲ್ ಜಬ್ಬಾರ್, ೪ನೇ ವಾರ್ಡ್‌ನಿಂದ ವಿಜೇತರಾದ ಸಲಾಂ ಪಡುಬೆಟ್ಟು, ಪುಷ್ಪಾ ಪಡುಬೆಟ್ಟು ಹಾಗೂ ಜಯಲಕ್ಷ್ಮಿಪ್ರಸಾದ್ ಬೀದಿಮಜಲುರವರಿಗೆ ಶಾಲುಹಾಕಿ. ಹೂ ನೀಡಿ ಗೌರವಿಸಲಾಯಿತು. ನೆಲ್ಯಾಡಿ ೧ನೇ ವಾರ್ಡ್‌ನಲ್ಲಿ ಪರಾಜಿತರಾದ ಕೇಶವ ಗೌಡ ಪುಚ್ಚೇರಿ, ನಿಶಾ ಅಗಸ್ಟಿನ್, ಸುಗುಣಾವತಿ ಹಾಗೂ ವಿಮಲ ಕೆ.ಎಸ್.,ರವರಿಗೂ ಶಾಲುಹಾಕಿ, ಹೂ ನೀಡಿ ಗೌರವಿಸಲಾಯಿತು.

ಪಕ್ಷದ ಮುಖಂಡರಿಗೆ/ಕಾರ್ಯಕರ್ತರಿಗೆ ಗೌರವ:
ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನಿಸಿದ ಪಕ್ಷದ ಮುಖಂಡರಾದ ಗಣೇಶ್ ಕೈಕುರೆ, ನಂದಕುಮಾರ್, ಡಾ.ರಘು, ಕೆ.ಪಿ.ತೋಮಸ್, ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಉಷಾ ಅಂಚನ್, ಕೆ.ಟಿ.ವಲ್ಸಮ್ಮ, ಜೋಸ್ ಕೆ.ಜೆ.ಮಾತಾ, ಬೂತ್ ಅಧ್ಯಕ್ಷರಾದ ವಸಂತ ಪುಚ್ಚೇರಿ, ಮಾರ್ಸಲ್ ಡಿ.ಸೋಜ, ಅಬ್ರಹಾಂ ಕೆ.ಪಿ., ಅಬ್ಬಾಸ್ ಪಡುಬೆಟ್ಟು, ಇಲ್ಯಾಸ್, ಪ್ರಮುಖ ಕಾರ್ಯಕರ್ತರಾದ ಜಾರ್ಜ್‌ಕುಟ್ಟಿ ಉಪದೇಶಿ, ನಝೀರ್, ಝಕಾರಿಯಾ, ಶರೀಫ್, ಸಮೀರ್, ಸಾದಿಕ್, ಫೈಝಲ್, ಗುರುಪ್ರಸಾದ್, ಸಂದೇಶ್, ಪ್ರಸಾದ್, ಹೆನ್ರಿ ಡಿ, ಸೋಜ, ಪೆದ್ರು ಡಿ.ಸೋಜ, ಸೈಮನ್, ಮಾಜಿ ಸದಸ್ಯರಾದ ಶಬ್ಬೀರ್ ಸಾಹೇಬ್, ಮೋಹಿನಿ ಹಾಗೂ ಇತರ ಕಾರ್ಯಕರ್ತರನ್ನು ಗೌರವಿಸಲಾಯಿತು.

ಅಬ್ದುಲ್ ಹಮೀದ್‌ಗೆ ಸಂತಾಪ:
ಗ್ರಾ.ಪಂ.ಮಾಜಿ ಸದಸ್ಯ, ಗ್ರಾ.ಪಂ.ಚುನಾವಣೆಗೆ ಮೂರು ದಿನದ ಮೊದಲು ನಿಧನರಾದ ಅಬ್ದುಲ್ ಹಮೀದ್‌ರವರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯಲ್ಲಿ ೧ ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.