ಪುತ್ತೂರು: ತಡವಾಗುತ್ತಿರುವ ಕೊರೋನಾ ಪರೀಕ್ಷಾ ವರದಿಯಿಂದಾಗಿ ಮಕ್ಕಳಿಗೆ ಶಾಲಾ ಅನುಮತಿ ಸಿಗುತ್ತಿಲ್ಲ. ೮ ದಿನಗಳಾದರೂ ನನ್ನ ಮಗಳ ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಇದು ಕೊರೋನಾ ಪರೀಕ್ಷೆಯ ನೆಪದಲ್ಲಿ ಸರಕಾರ ಮಾಡುತ್ತಿರುವ ಕಣ್ಣೊರೆಸುವ ತಂತ್ರ ಎಂದು ಕೋಡಿಂಬಾಡಿ ಗ್ರಾ.ಪಂ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಆರಿಗ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ನನ್ನ ಮಗಳು ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಕಲಿತು ಉಜಿರೆ ಎಸ್ ಡಿ ಎಂ ಸಿ ಕಾಲೇಜಿನಲ್ಲಿ ದಾಖಲಾತಿ ಮಾಡಿದ್ದೇನೆ. ಆದರೆ ಕಾಲೇಜಿಗೆ ಹೋಗಲು ಪೋಷಕರ ಮತ್ತು ಕೋವಿಡ್ ಪರೀಕ್ಷಾ ವರದಿ ಅಗತ್ಯವಾಗಿದ್ದು, ಪೋಷಕರ ಅನುಮತಿ ನಾವು ನೀಡಿದರೂ ಕೋವಿಡ್ ಪರೀಕ್ಷೆ ವರದಿ ಮಾತ್ರ ಇನ್ನೂ ಬಂದಿಲ್ಲ. ಜ.೫ ಕ್ಕೆಕೋಡಿಂಬಾಡಿಯಲ್ಲಿ ಕೋವಿಡ್ ಕ್ಯಾಂಪ್ ಇದೆ ಎಂದು ಹೋದಾಗ ಕ್ಯಾಂಪ್ ಕ್ಯಾನ್ಸಲ್ ಆಗಿದೆ ಎಂಬ ಮಾಹಿತಿಯಂತೆ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಕೋವಿಡ್ ಪರೀಕ್ಷೆ ನೀಡಲಾಯಿತು. ಆ ಬಳಿಕ ವರದಿಗಾಗಿ ಎರಡು ಮೂರು ಭಾರಿ ಆಸ್ಪತ್ರೆಗೆ ಅಳೆದಾಡಿದರೂ ಪರೀಕ್ಷಾ ವರದಿ ಬಂದಿಲ್ಲ. ಮಂಗಳೂರಿನಲ್ಲಿ ಇದೆ ಎಂದು ಹೇಳುತ್ತಾರೆ. ಮಂಗಳೂರಿನಲ್ಲಿ ವಿಚಾರಿಸಿದರೂ ಒಟಿಪಿ ನಂಬರ್ ಕೊಡುತ್ತಾರೆ ಹೊರತು ಯಾವುದೇ ಸ್ಪಂದನೆ ಸಿಗುವುದಿಲ್ಲ. ಕೋವಿಡ್ ಪರೀಕ್ಷಾ ವರದಿ ೭೨ ಗಂಟೆಯ ಒಳಗೆ ಬರಬೇಕೆಂದು ನಿಯಮ ಇದ್ದರೂ ಸರಕಾರವೆ ಅದನ್ನು ಗಾಳಿಗೆ ತೂರುತ್ತಿದೆ. ಇದೀಗ ನನ್ನ ಮಗಳ ತರಗತಿಗೂ ತೊಂದರೆ ಆಗುತ್ತಿದೆ. ಇದು ನನ್ನ ಮಗಳಿಗೆ ಆಗುವ ತೊಂದರೆಗಿಂತಲೂ ನಮ್ಮಂತೆ ಎಷ್ಟೋ ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ಸಿಗಬೇಕಾಗಿದೆ. ಆದರೆ ಸರಕಾರ ವಿದ್ಯಾರ್ಥಿಗಳ ಜೀವನವನ್ನು ಕೊಲ್ಲುತ್ತಿದೆ ಎಂದು ಹೇಳಿದರು. ಖಾಸಗಿ ವ್ಯವಸ್ಥೆಯಲ್ಲಿ ಪರೀಕ್ಷೆಗೊಳಪಟ್ಟರೆ ದುಬಾರಿ ಹಣ ಕೊಡುವ ಪರಿಸ್ಥಿತಿ ಇದೆ. ಸರಕಾರ ಕಾಲೇಜಿನಲ್ಲೇ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಬೇಕು ಆಗ ವಿದ್ಯಾರ್ಥಿಗಳ ಸಮಸ್ಯೆ ಬಗೆ ಹರಿಸಬಹುದು ಎಂದರು.
ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರ್ ಅವರು ಮಾತನಾಡಿ ಕೊರೋನಾ ಪರೀಕ್ಷೆ ಮಾಡಿಸುವ ನೆಪದಲ್ಲಿ ಶಾಲಾ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. ಕೋವಿಡ್ ಪರೀಕ್ಷೆಗೆ ಸರಕಾರ ಮತ್ತು ಖಾಸಗಿ ಶಾಲೆ ಒಪ್ಪಂದ ಮಾಡಿಕೊಂಡು ಅಥವಾ ಸರಕಾರವೇ ಕಾಲೇಜಿನಲ್ಲಿ ಕೋವಿಡ್ ಪರೀಕ್ಷಾ ಕ್ಯಾಂಪ್ ಮಾಡುವ ಮೂಲಕ ಮಕ್ಕಳ ಭವಿಷ್ಯವನ್ನು ಬೆಳಗಿಸಬೇಕಾಗಿದೆ ಎಂದರು.