- ಸಾವಿರಕ್ಕಿಂತಲೂ ಮಿಕ್ಕಿ ಸೇರಿದ ಭಕ್ತರು
ಪುತ್ತೂರು: ಧನುರ್ಮಾಸದ ಕೊನೆಯ ದಿನದ ಜ.14ರಂದು ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಧನುಪೂಜೆ ಸಮಾರೋಪ ಹಾಗೂ ಕೃತಜ್ಞತಾ ಸಭೆ ನಡೆಯಿತು. ಈ ದಿನ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಬೆಳಿಗ್ಗೆ ಧನುಪೂಜೆ ನಡೆದ ಬಳಿಕ ಕೃತಜ್ಞತಾ ಸಭೆ ಹಾಗೂ ಸಮಾರೋಪ ಸಮಾರಂಭ ನಡೆಯಿತು. ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್ ಟಿ.ಕೆ.ರವರು ಧನುಪೂಜೆಯ ಮಹತ್ವವನ್ನು ತಿಳಿಸಿ ಧನುಪೂಜೆಯ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ದೇವಾಲಯದ ವತಿಯಿಂದ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಅನುವಂಶಿಕ ಆಡಳಿತ ಮೋಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಮಾತನಾಡಿ ಪ್ರಥಮ ಬಾರಿಗೆ ದೇವಾಲಯದಲ್ಲಿ ಪ್ರಾರಂಭಿಸಲಾದ ಒಂದು ತಿಂಗಳ ಧನುಪೂಜಾ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದೆಯೂ ಎಲ್ಲರ ಸಹಕಾರ ಬೇಕು ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಆಡಳಿತ ಮೋಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಅರ್ಚಕ ದಿವಾಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಪ್ರಸಾದ್ ತಲೆಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಅಧಿಕ ಸಂಖ್ಯೆಯಲ್ಲಿ ಭಕ್ತರು: ಧನುಪೂಜೆಯ ಕೊನೆಯ ದಿನದ ಜ.14ರಂದು ಸಾವಿರಕ್ಕಿಂತಲೂ ಮಿಕ್ಕಿ ಭಕ್ತರು ಆಗಮಿಸಿದ್ದು ದೇವಾಲಯದಲ್ಲಿ ಜಾತ್ರಾ ಸಂಭ್ರಮದಂತೆ ಕಂಡು ಬಂದಿತ್ತು. ವಿವಿಧ ಭಜನಾ ಮಂಡಳಿಗಳಿಂದ ವಿಶೇಷ ಭಜನಾ ಸೇವೆ, ರೆಂಜ ಮಣಿಕಂಠ ಚೆಂಡೆ ಮೇಳದವರಿಂದ ವಿಶೇಷ ಚೆಂಡೆ ವಾದನ, ವಿಶೇಷ ಬೆಡಿ ಸೇವೆ ನಡೆಯಿತು. ಆಗಮಿಸಿದ ಎಲ್ಲಾ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಟ್ಟಂಪಾಡಿ ಮಂಡಲದ ಪಕರ ಸಂಕ್ರಾತಿ ಉತ್ಸವ ಈ ಸಂದರ್ಭದಲ್ಲಿ ನಡೆಯಿತು.