ಪುತ್ತೂರು: ಮುಂಡೂರು ಉದಯಗಿರಿ ಶ್ರೀವಿಷ್ಣುಮೂರ್ತಿ ಭಜನಾ ಮಂಡಳಿಯ ೨೭ನೇ ವಾರ್ಷಿಕೋತ್ಸವ ಹಾಗೂ ೧೮ ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜ.೧೪ ಮಕರ ಸಂಕ್ರಾಂತಿಯ ದಿನ ಬೆಳಿಗ್ಗೆ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವದ ಸನ್ನಿದಿಯ ಆವರಣದಲ್ಲಿ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ವೇ.ಮೂ ಶ್ರೀವತ್ಸ ಕೆದಿಲಾಯರವರ ನೇತೃತ್ವದಲ್ಲಿ ಮಹಾಗಣಪತಿ ಹೋಮ ನಡೆದ ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಮಧ್ಯಾಹ್ನ ನಡೆದ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಗೌರವಾಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಆಸ್ತಿ, ಅಂತಸ್ತು, ಹಣ ಸಂಪಾದನೆಯೇ ಜೀವನದ ಪ್ರಮುಖ ಗುರಿಯಲ್ಲ. ನಾವು ಮಾಡುವ ಕಾರ್ಯವನ್ನು ನಿಷ್ಠೆಯಿಂದ ಮಾಡಬೇಕು. ಆಗ ಭಗವಂತನಿಂದ ಪ್ರತಿಫಲ ಖಂಡಿತಾ ದೊರೆಯಲಿದೆ. ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಏನೆಲ್ಲಾ ಅನಾಹುತಗಳ ನಡೆಯಬಹುದು ಎಂಬುದನ್ನು ಕೊರೋನಾ ಮಹಮಾರಿಯೂ ಇಡೀ ಜಗತ್ತಿಗೇ ಪಾಠ ಕಳಿಸಿದೆ ಎಂದ ಅವರು ಮಕ್ಕಳನ್ನು ಸಂಸ್ಕಾರ ವಂತರನ್ನಾಗಿ ಬೆಳೆಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡಿಡಬಾರದು. ಅವರನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಒತ್ತೆಕೋಲ ಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಪಟ್ಟೆ ಮಾತನಾಡಿ, ಊರ, ಪರವೂರ ಭಕ್ತಾದಿಗಳ ಸಹಕಾರ ಹಾಗೂ ಭಜನಾ ಮಂಡಳಿಯವರ ಒಗ್ಗಟ್ಟು ಹಾಗೂ ಪರಿಶ್ರಮದಿಂದ ದೈವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ದೈವಸ್ಥಾನದಲ್ಲಿ ಅಷ್ಟಮಂಗಲ ಚಿಂತನೆ ನಡೆದಿದ್ದು ಮುಂದಿನ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ ಮನವಿ ಮಾಡಿದರು.
ಸನ್ಮಾನ
ದೈವಸ್ಥಾನಕ್ಕೆ ವಿದ್ಯುತ್ ಉಚಿತವಾಗಿ ಸಂಪರ್ಕ ಒದಗಿಸಿದ ರಮೇಶ್ ಎನ್. ಕನ್ನರ್ನೂಜಿ, ವಿಷ್ಣು ಇಲೆಕ್ಟ್ರಿಕಲ್ನ ಮ್ಹಾಲಕ ಸುಧಾಕರ ಸಂಪ್ಯ, ಉಚಿತ ಧ್ವನಿ ವರ್ಧಕ ಒದಗಿಸಿದ ಪ್ರಸಾದ ಶೆಟ್ಟಿ ಪಂಜಳ, ಶಾಶ್ವತ ಅನ್ನದಾನ ಸೇವೆ ಮಾಡಿದ ಅರುಣಾ ಅನಿಲ್ ಕನ್ನರ್ ನೂಜಿ, ಯಶ ಕನ್ನರ್ ನೂಜಿ, ಶಾಂತಾ ಹಿಂದಾರು, ಜಯರಾಮ ಗೌಡ ಬೊಳ್ಳಗುಡ್ಡೆ ಹಾಗೂ ಗುಣಕರರವರನ್ನು ಗೌರವಿಸಲಾಯಿತು.
ಭಜನ ಮಂಡಳಿ ಅಧ್ಯಕ್ಷ ಕೆ.ವಿನೋದ್ ಶೆಟ್ಟಿ ಸ್ವಾಗತಿಸಿದರು. ದೇವಿದಾಸ್ ಬಿ.ಕುರಿಯ ಕಾರ್ಯಕ್ರಮ ನಿರೂಪಿಸಿದರು. ಜಯರಾಮ ದಂಡ್ಯನಕುಕ್ಕು ವಂದಿಸಿದರು. ಹರಿಪ್ರಸಾದ್ ಸನ್ಮಾನಿತ ಪರಿಚಯ ಮಾಡಿದರು. ಪುರುಷೋತ್ತಮ ಬಂಗೇರ, ಪ್ರವೀಣ್ ಕೊರುಂಗು ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ, ವಿತರಣೆ, ಅನ್ನಸಂತರ್ಪಣೆ ಹಾಗೂ ಹನುಮಗಿರಿ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.