- ನವೋದಯ ಬ್ಯಾಂಕ್ ಪ್ರತಿ ಮನೆಯನ್ನು ಮುಟ್ಟಲಿ – ಸಂಜೀವ ಮಠಂದೂರು
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ‘ಜನರ ಬಳಿಗೆ ನಮ್ಮ ಬ್ಯಾಂಕ್ ಅಭಿಯನದ’ ಉದ್ಘಾಟನಾ ಕಾರ್ಯಕ್ರಮ ಜ.14ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ ಆರ್ಥಿಕ ಕ್ಷೇತ್ರದಲ್ಲಿ ಪುತ್ತೂರು ಪ್ರಯೋಗ ಶೀಲವಾಗಿದೆ. ರಾಷ್ಟ್ರಿಕ್ರತ ಮತ್ತು ಸಹಕಾರಿ ಬ್ಯಾಂಕ್ ಗಳು ಪುತ್ತೂರಿನಿಂದಲೇ ಆರಂಭವಾಗಿದೆ. ಅದೇ ರೀತಿ ನವೋದಯ ಬ್ಯಾಂಕ್ ಪ್ರತಿ ಮನೆಯನ್ನು ಮುಟ್ಟಬೇಕು. ಸರಕಾರದ ಸಹಾಯಧನ ಬ್ಯಾಂಕ್ ಖಾತೆ ಮೂಲಕ ಬರಲಿ ಎಂದ ಅವರು ಜನ ಸ್ನೇಹಿ ಬ್ಯಾಂಕ್ ಆದಾಗ ಬ್ಯಾಂಕ್ ಕೂಡಾ ಉತ್ತರೋತ್ತರ ಅಭಿವ್ರದ್ದಿ ಹೊಂದಲಿದೆ ಎಂದರು.
ನೂತನ ಸ್ವಸಹಾಯ ಗುಂಪುಗಳ ಉದ್ಘಾಟನೆ:
ನೂತನವಾಗಿ ರಚನೆಗೊಂಡ ೪೪ ಸ್ವಸಹಾಯ ಗುಂಪುಗಳ ಅಧ್ಯಕ್ಷರುಗಳಿಗೆ ಪುಸ್ತಕ ಹಸ್ತಾಂತರಿಸುವ ಮೂಲಕ ಗುಂಪುಗಳ ಉದ್ಘಾಟನೆಯನ್ನು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಅವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ನಾನು ನಗರಸಭೆ ಅಧ್ಯಕ್ಷನಾಗಿ ಸನ್ಮಾನ ಸ್ವೀಕರಿಸುವ ಬದಲು ಬ್ಯಾಂಕ್ ನ ಸದಸ್ಯನಾಗಿ ಸನ್ಮಾನ ಸ್ವೀಕರಿಸಿದ್ದು ಸಂತೋಷ ಆಗುತ್ತಿದೆ ಎಂದ ಅವರು ಕೇಂದ್ರ ಸಹಕಾರಿ ರಾಷ್ಟ್ರಕ್ರತ ಬ್ಯಾಂಕ್ ಸಿಬ್ಬಂದಿಗಳ ನಗುಮೊಗ ಪ್ರೀತಿ ವಿಶ್ವಾಸದ ಹಿನ್ನಲೆಯಲ್ಲಿ ರಾಷ್ಟ್ರಕ್ರತ ಬ್ಯಾಂಕ್ ನ ಖಾತೆಯನ್ನು ಕೇಂದ್ರ ಸಹಕಾರಿ ಬ್ಯಾಂಕ್ ಗೆ ವರ್ಗಾಹಿಸಿದ್ದೇನೆ ಎಂದರು.
ಸಹಕಾರಿ ಬ್ಯಾಂಕ್ ಮಾಡುವ ಕೆಲಸ ಯಾವ ವಾಣಿಜ್ಯ ಬ್ಯಾಂಕ್ ಮಾಡುವುದಿಲ್ಲ:
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಮಟ್ಟದ ಸಹಕಾರಿ ಸಂಘಗಳಿಗೆ ಆದ್ಯತೆ ನೀಡುವುದು ಮತ್ತು ಜನರ ಕಷ್ಟದಲ್ಲಿ ಭಾಗಿಯಾಗುವುದು ಸಹಕಾರಿ ಬ್ಯಾಂಕ್ ಮಾತ್ರ. ಹಾಗಾಗಿ ಇವತ್ತು ಸಹಕಾರಿ ಸಂಘದಿಂದ ಯಾವ ರೀತಿ ಜೀವನ ನಡೆಸಬಹುದು ಎಂದು ತಿಳಿಸಲು ನಾವು ಜನರ ಬಳಿಗೆ ಹೋಗುತ್ತಿದ್ದೇವೆ. ಸಹಕಾರಿ ಬ್ಯಾಂಕ್ ಮಾಡುವ ಕೆಲಸ ಬೇರೆ ಯಾವ ವಾಣಿಜ್ಯ ಬ್ಯಾಂಕ್ ಕೂಡಾ ಮಾಡುವುದಿಲ್ಲ. ಬ್ಯಾಂಕ್ ಲಾಭಕ್ಕಿಂತ ಸೇವೆ ಮಾಡುವುದು ನಮ್ಮ ಮುಖ್ಯ ದ್ಯೇಯ. ಹಾಗಾಗಿ ಈ ಬ್ಯಾಂಕ್ ಜನರ ಬ್ಯಾಂಕ್ ಆಗಿದೆ. ಜನರಿಗೆ ಬೇಕಾದ ರೀತಿಯಲ್ಲಿ ಈ ಬ್ಯಾಂಕ್ ನಲ್ಲಿ ಕೆಲಸ ಮಾಡಲಾಗುತ್ತದೆ. ಕೊರೋನಾ ಸಂದರ್ಭದಲ್ಲೂ ಕೂಡಾ ಜನರಿಗೆ ಬೇಕಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದೆವೆ ಎಂದರು.
ಅಭಿಯಾನದ ಮೂಲಕ ಜನರ ಬಳಿಗೆ ಬ್ಯಾಂಕ್:
ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ಬ್ಯಾಂಕ್ ಅಭಿಯಾನದ ಮೂಲಕ ಜನರ ಬಳಿ ಹೋಗುವ ಮೂಲಕ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಥಮ ಎನಿಸಿಕೊಂಡಿದೆ. ಇದಕ್ಕೆ ಕಾರಣ ಎಮ್ ಎನ್ ರಾಜೇಂದ್ರ ಕುಮಾರ್ . ಅವರು ಬ್ಯಾಂಕ್ ನ ಅಧ್ಯಕ್ಷ ಆಗುವ ಮುಂದೆ ಬ್ಯಾಂಕ್ ೧೯೯೪ ರ ತನಕ ೨೪ ಶಾಖೆ ಹೊಂದಿದ್ದ ಬ್ಯಾಂಕ್ ರೂ. ೭೪ ಕೋಟಿ ವ್ಯವಹಾರ ನಡೆಸಿತ್ತು. ಅವರು ಅಧ್ಯಕ್ಷ ಆದ ಬಳಿಕ ೨೭ ವರ್ಷಗಳಲ್ಲಿ ೮೧ ಶಾಖೆ ನಡೆಸಿ ರೂ. ೮೫೦೦ ಕೋಟಿ ವ್ಯವಹಾರ ನಡೆಸಿರುವುದು ಸಾಧನೆ. ಇಂತಹ ಸಂದರ್ಭದಲ್ಲಿ ಇದೀಗ ಜನರ ಬಳಿಗೆ ನಮ್ಮ ಬ್ಯಾಂಕ್ ತಲುಪಲು ಕಳೆದ ೧೦ ದಿನಗಳಿಂದ ನಮ್ಮ ಸಿಬಂದಿಗಳು ೩ ಸಾವಿರ ಸಂಚಯ ಖಾತೆ , ರೂ.೨೦ ಕೋಟಿಗೂ ಮಿಕ್ಕಿ ಸಾಲ ಪತ್ರವು ಅಭಿಯಾನದ ಮೂಲಕ ವ್ಯವಹಾರ ಆಗಿದೆ ಆಗಿರುವುದು ಒಂದು ವಿಶೇಷ ಎಂದರು.
ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ರಾಜ್ಯ ನಿರ್ದೇಶಕ ರಾಜಶೇಖರ್ ಜೈನ್ ಸಾಲ ಪತ್ರದ ವಿತರಣೆ ಮತ್ತು ವಿಮಾ ಆಧಾರಿತ ಸಂಚಯಖಾತೆ ಉದ್ಘಾಟಿಸಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ ಅವರು ಸಂಚಾಯಖಾತೆ ಉದ್ಘಾಟಿಸಿದರು. ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಅವರು ಠೇವಣಿ ಪತ್ರ ವಿತರಣೆ ಮಾಡಿದರು. ರಾಮಕ್ರಷ್ಣ ಪ್ರೌಢ ಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ನವೋದಯ ಟ್ರಸ್ಟ್ ನ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾತಿ ಬೆಟ್ಡಂಪಾಡಿ ಪ್ರಾರ್ಥಿಸಿದರು. ಸಂತೋಷ್ ಮರಕ್ಕಡ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ:
ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮತ್ತು ಬ್ಯಾಂಕ್ ನ ಅತ್ಯುತ್ತಮ ಗ್ರಾಹಕ ಜೀವಂಧರ್ ಜೈನ್ ಅವರನ್ನು ಹಾಗು ಕರ್ನಾಟಕ ರಾಜ್ಯ ಸಹಕಾರಿ ಬ್ಯಾಂಕ್ ನ ನಿರ್ದೆಶಕರಾಗಿ ಆಯ್ಕೆಗೊಂಡ ರಾಜಶೇಖರ್ ಜೈನ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯದಲ್ಲಿ ಯೂರಿಯ ಕಾರ್ಖಾನೆ:
ಸಹಕಾರಿ ಕ್ಷೇತ್ರದ ರಾಜ್ಯದ ರೈತರ ರಸಗೊಬ್ಬರ ಬೇಡಿಕೆಯನ್ನು ಈಡೇರಿಸಲು ರಾಜ್ಯದ ದಾವಣಗೆರೆಯಲ್ಲಿ ಯೂರಿಯ ಕಾರ್ಖಾನೆ ಮಾಡಲು ಸಿದ್ದತೆ ನಡೆಸಲಾಗಿದೆ ಎಂದು ಕೇಂದ್ರ ಸಹಕಾರಿ ಕೇಂದ್ರದ ಅಧ್ಯಕ್ಷ ಎಮ್ ಎನ್ ರಾಜೇಂದ್ರ ಕುಮಾರ್ ಘೋಷಣೆ ಮಾಡಿದರು.