HomePage_Banner
HomePage_Banner
HomePage_Banner
HomePage_Banner

ಸೋಲಿಲ್ಲದ ಸರದಾರನಿಗೆ ಸಚಿವ ಪಟ್ಟ – ಪುತ್ತೂರಿನ ಪಾಸಿಟಿವ್ ಪಾಲಿಟಿಕ್ಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಶಿವಪ್ರಸಾದ್ ರೈ ಪೆರುವಾಜೆ


ಎಸ್.ಅಂಗಾರ ಅವರಿಗೆ ಸಚಿವ ಸ್ಥಾನದ ಸಿಂಗಾರ. ಪುತ್ತೂರು ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ಮೊದಲ ಸಚಿವ ಎನ್ನುವ ಹೆಗ್ಗಳಿಕೆ ಎಸ್.ಅಂಗಾರ ಅವರಿಗೆ ಸಲ್ಲುತ್ತದೆ.

ಪುತ್ತೂರು ಹಾಗೂ ಸುಳ್ಯ ರಾಜಕೀಯವಾಗಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ರಾಜಕೀಯವಾಗಿ ಅನೇಕ ನಾಯಕರನ್ನು ರಾಜ್ಯ ಹಾಗೂ ಕೇಂದ್ರಕ್ಕೆ ನೀಡಿದ ಕೀರ್ತಿ ಈ ಭಾಗಕ್ಕಿದೆ.ಈ ಬಾರಿ ಪ್ರಥಮ ಬಾರಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರಿಗೆ ಸಚಿವ ಸ್ಥಾನ ಒಲಿದು ಬಂದಿದ್ದು ಈ ಭಾಗದ ಜನರಲ್ಲಿ ಸಹಜವಾಗಿಯೇ ಸಂಭ್ರಮದ ವಾತಾವರಣ ಮನೆ ಮಾಡಿದೆ.ಪುತ್ತೂರು, ಸುಳ್ಯ ಭಾಗದ ರಾಜಕೀಯದ ಕಡೆಗೆ ಕಣ್ಣು ಹಾಯಿಸುವಾಗ ಈ ಭಾಗದಲ್ಲಿ ಬೆಳೆದು ಬಂದ ಕೆಲವು ಪ್ರಮುಖರು ಕಾಣಸಿಗುತ್ತಾರೆ.

೧೯೬೭ರಲ್ಲಿ ಪುತ್ತೂರಿನಿಂದ ಮೊದಲ ಸಚಿವರ ಆಯ್ಕೆ :
೧೯೬೭ರಲ್ಲಿ ಮೈಸೂರು ರಾಜ್ಯ ಸರ್ಕಾರದಲ್ಲಿ ಪುತ್ತೂರಿಗರೊಬ್ಬರು ಮೊದಲ ಬಾರಿಗೆ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದರು.ಪುತ್ತೂರಿನಲ್ಲಿ ಆ ಕಾಲದಲ್ಲಿ ಪ್ರಸಿದ್ದರಾಗಿದ್ದ ವಿಠಲ್ ಶೆಟ್ಟಿ ಎಂಬವರು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವನ್ನು ಕಂಡಿದ್ದರು.ಆ ಬಳಿಕ ಆಗಿನ ಮೈಸೂರು ರಾಜ್ಯ ಸರ್ಕಾರದಲ್ಲಿ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದ್ದರು.ಈ ಮೂಲಕ ಪುತ್ತೂರು ವಿಧಾನಸಭೆಯಿಂದ ಆಯ್ಕೆಯಾಗಿ ಸಚಿವರಾದ ಮೊದಲಿಗರೆಂಬ ಗೌರವಕ್ಕೆ ಪಾತ್ರರಾಗುತ್ತಾರೆ.ಆ ಬಳಿಕದ ರಾಜಕೀಯ ಬೆಳವಣಿಗೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರು ಸಚಿವರಾದ ಬಗ್ಗೆ ಉಲ್ಲೇಖವಿಲ್ಲ.ಪ್ರಸ್ತುತ ಸಂಜೀವ ಮಠಂದೂರು ಶಾಸಕರಾಗಿ ಕೆಲಸ ಮಾಡುತ್ತಿದ್ದು ಪಕ್ಷದ ನೆಲೆಯಲ್ಲಿ ಉನ್ನತ ಜವಾಬ್ದಾರಿಗಳು ಇವರಿಗೆ ಪ್ರಾಪ್ತವಾಗಿದ್ದರೂ ಸರ್ಕಾರ ಮಟ್ಟದಲ್ಲಿ ಉನ್ನತ ಸ್ಥಾನ ದೊರಕಿಲ್ಲ.ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವುದರಿಂದ ಈ ಕುರಿತು ಪಕ್ಷದೊಳಗೂ ಯಾವುದೇ ಗೊಂದಲಗಳಿರಲಿಲ್ಲ.

ರಾಜಕೀಯದಲ್ಲಿ ರಾರಾಜಿಸಿದ ಸದಾನಂದ ಗೌಡ..
ಪುತ್ತೂರು ಭಾಗದಿಂದ ರಾಜಕೀಯದಲ್ಲಿ ಅನೇಕ ಸಾಧನೆಗಳನ್ನು ಮಾಡಿದವರಿದ್ದಾರೆ. ಅವರಲ್ಲಿ ಪ್ರಮುಖರು ಸದಾನಂದ ಗೌಡರು.ಸುಳ್ಯ ತಾಲೂಕಿನ ದೇವರ ಗುಂಡದವರಾದ ಸದಾನಂದ ಗೌಡರು ನಗುನಗುತ್ತಲೇ ರಾಜಕೀಯದಲ್ಲಿ ಪುತ್ತೂರಿನಿಂದಲೇ ಸಾಧನೆಯ ಮೆಟ್ಟಿಲೇರಿದವರು.೧೯೯೪ರಲ್ಲಿ ಪುತ್ತೂರಿನಿಂದ ಸ್ಪರ್ದಿಸಿ ಗೆಲುವನ್ನು ಪಡೆದು ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದ ಅವರು ಆ ಬಳಿಕ ಹಿಂದಿರುಗಿ ನೋಡಿಲ್ಲ.ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ತನ್ನ ಚತುರ ಸಂಘಟನಾತ್ಮಕ ಕೆಲಸಗಳಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ರಾಜ್ಯ ರಾಜಕಾರಣದ ಪ್ರಮುಖರಾದರು.೨೦೧೪ರ ಮೇ ೨೬ರಂದು ತನ್ನ ರಾಜಕೀಯ ಜೀವನದಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಸದಾನಂದ ಗೌಡರು ಕರ್ನಾಟಕ ರಾಜ್ಯದ ಇಪ್ಪತ್ತನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ಆ ಬಳಿಕ ಕೇಂದ್ರದಲ್ಲೂ ತನ್ನ ಛಾಪು ಮೂಡಿಸಿದ ಇವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿ,ಕಾನೂನು ಸಚಿವರಾಗಿ,ಅಂಕಿ ಅಂಶ ಹಾಗೂ ಯೋಜನಾ ಜಾರಿ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿ ಪ್ರಸ್ತುತ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗೆ ಪ್ರತಿಪಕ್ಷದ ನಾಯಕನಾಗಿ, ರಾಜ್ಯ ಬಿಜೆಪಿ ಅಧ್ಯಕ್ಷನಾಗಿ, ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲೂ ಪ್ರಮುಖ ಹುದ್ದೆ ನಿಭಾಯಿಸಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಿ ಗುರುತಿಸಿಕೊಂಡ ಪ್ರಮುಖ ರಾಜಕೀಯ ನಾಯಕರಾದ ಸದಾನಂದ ಗೌಡರ ರಾಜಕೀಯ ಜೀವನ ಪುತ್ತೂರಿನಿಂದ ಆರಂಭಗೊಂಡಿತ್ತು.

ಬಿಜೆಪಿಗೆ ಶುಭ ತಂದ ಶೋಭಾ ಕರಂದ್ಲಾಜೆ: ಬಿಜೆಪಿಯ ಪ್ರಮುಖ ಮಹಿಳಾ ಮುಖಂಡರಾದ ಶೋಭಾ ಕರಂದ್ಲಾಜೆ ಪುತ್ತೂರು ಮೂಲದವರು.ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದ ಇವರು ರಾಜಕೀಯಕ್ಕೆ ಪ್ರವೇಶಿಸಿ ೨೦೦೮ರಲ್ಲಿ ಬೆಂಗಳೂರಿನ ಯಶವಂತಪುರದಿಂದ ಶಾಸನ ಸಭೆಗೆ ಆಯ್ಕೆಯಾದರು.ಬಿ.ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿ ಮೊದಲ ಬಾರಿಗೆ ಸಚಿವೆಯಾದರು.ಆ ಬಳಿಕ ರಾಜಕೀಯದಲ್ಲಿ ಅನೇಕ ಸಾಧನೆಯ ಮೆಟ್ಟಿಲು ಏರಿದ ಇವರ ಮೂಲ ಕೂಡ ಪುತ್ತೂರೇ ಆಗಿತ್ತು.ಆದರೆ ಇವರು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿಲ್ಲ ಬದಲಾಗಿ ಇತರೆ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು.

ರಾಜಕೀಯದ ವಿನಯತೆಯ ಸಾಕಾರಮೂರ್ತಿ ವಿನಯಕುಮಾರ್ ಸೊರಕೆ:
ಪುತ್ತೂರಿನ ಪಾಲಿಗೆ ವಿನಯ್ ಕುಮಾರ್ ಸೊರಕೆ ಹೆಸರು ಚಿರಪರಿಚಿತ,ಪುತ್ತೂರಿನ ಸರ್ವೆ ಗ್ರಾಮದ ಸೊರಕೆಯವರಾದ ವಿನಯ್ ಕುಮಾರ್ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಗೆಲುವು ಕಂಡರು.ಆ ಬಳಿಕ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಪಡೆದು ಸಚಿವರಾಗಿ ಗುರುತಿಸಿಕೊಂಡಿದ್ದರು.ಪುತ್ತೂರು ಮೂಲದವರೇ ಆಗಿರುವ ಇವರು ಕಾಂಗ್ರೆಸ್‌ನ ಪ್ರಭಾವಿ ನಾಯಕ.ಇಷ್ಟೇ ಅಲ್ಲದೇ ಪಕ್ಷದ ನೆಲೆಯಲ್ಲೂ ಹಲವು ಉನ್ನತ ಜವಾಬ್ಧಾರಿಗಳು ಇವರ ಪಾಲಿಗೆ ಬಂದಿದ್ದವು.

ಸಂಸದೀಯ ಕಾರ್ಯದರ್ಶಿಯಾಗಿದ್ದ ಪುತ್ತೂರಿನ “ಅಕ್ಕೆ”: ಪುತ್ತೂರಿಗರ ಪಾಲಿಗೆ ಅಕ್ಕೆ ಎಂದೇ ಗುರುತಿಸಿಕೊಂಡಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ರಾಜ್ಯ ಸರ್ಕಾರದ ಹುದ್ದೆಯೊಂದರಲ್ಲಿ ಗುರುತಿಸಿಕೊಂಡಿದ್ದರು.ಬಿಜೆಪಿ ಪಕ್ಷದಲ್ಲಿ ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿ ಆ ಬಳಿಕ ಕಾಂಗ್ರೆಸ್ ಸೇರಿ ಆ ಬಾರಿಯೂ ಶಾಸಕಿಯಾಗಿ ಆಯ್ಕೆಯಾಗಿದ್ದರು ಈ ವೇಳೆ ಅವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ರಾಷ್ಟ್ರೀಯ ಪಕ್ಷವೊಂದರ ನೇತಾರರಾದ ನಳೀನ್ ಕುಮಾರ್ ಕಟೀಲ್: ನಳಿನ್ ಕುಮಾರ್ ಕಟೀಲ್ ಅವರು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟಿರುವ ಸವಣೂರು ಪಾಲ್ತಾಡಿ ಕುಂಜಾಡಿಯವರು. ದ.ಕ. ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಚುನಾಯಿತರಾಗಿರುವ ನಳಿನ್ ಕುಮಾರ್ ಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷದಲ್ಲಿ ಉನ್ನತ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪುತ್ತೂರು ಹಾಗೂ ಸುಳ್ಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಇವರೂ ಕೂಡ ಸುಳ್ಯ ಭಾಗದಿಂದ ಬೆಳೆದ ರಾಜಕೀಯ ಮುಖಂಡ

ಸುಳ್ಯದ ಬಂಗಾರ ಅಂಗಾರರಿಗೆ ಒಲಿದ ಸಚಿವ ಸ್ಥಾನ: ಸುಳ್ಯದ ಪಾಲಿಗೆ ಸಂಭ್ರಮದ ಸಂಗತಿಯೊಂದು ಒಲಿದು ಬಂದಿದೆ.ಸುಳ್ಯದ ಜನರ ಅನೇಕ ವರ್ಷಗಳ ಕನಸು ನನಸಾಗಿದೆ,ಮೀಸಲಾತಿ ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿ ಗೆದ್ದಿರುವ ಶಾಸಕ ಅಂಗಾರ ಇದೀಗ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕರೋರ್ವರು ಮೊದಲ ಬಾರಿ ಕ್ಯಾಬಿನೆಟ್ ಸಚಿವರಾದ ಸಾಧನೆ ಮಾಡಿದ್ದಾರೆ.ಬಾಲ್ಯದಿಂದಲೇ ಆರ್.ಎಸ್.ಎಸ್ ಮೂಲಕ ಜನರಿಗೆ ಪರಿಚಿತರಾಗಿದ್ದ ಅಂಗಾರರು ೧೯೮೯ರಲ್ಲಿ ಪ್ರಥಮ ಬಾರಿಗೆ ಸಂಘದ ಮುಖಂಡ ಚಂದ್ರಶೇಖರ ತಳೂರುರವರ ಮಾರ್ಗದರ್ಶನದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿ ಸೋಲು ಕಾಣುತ್ತಾರೆ.ಎದೆಗುಂದದ ಅಂಗಾರರು ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿ ಸ್ಪರ್ಧೆ ನಡೆಸಿದ್ದು ೧೯೯೪ರಲ್ಲಿ. ಅಲ್ಲಿ ಗೆಲುವನ್ನು ಕಂಡ ಅಂಗಾರರು ಬಳಿಕ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿ ಗುರುತಿಸಿಕೊಂಡರು.ಸತತವಾಗಿ ಆರು ಬಾರಿ ವಿಧಾನಸಭೆ ಪ್ರವೇಶಿಸಿ ಹಿರಿತನದ ನೆಲೆಯಲ್ಲಿ ಅರ್ಹವಾಗಿಯೇ ಸಚಿವ ಸ್ಥಾನವನ್ನು ಪಡೆದರು.
ಇಡೀ ಜಿಲ್ಲೆಯಲ್ಲಿ ಬಿ.ಜೆ.ಪಿ ಸೋಲು ಕಂಡಿರುವಾಗಲೂ ಅಂಗಾರ ಸುಳ್ಯ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಠಿಸಿದ್ದರು.ಈ ಮೂಲಕ ಬಿಜೆಪಿಯ ಭದ್ರ ಕೋಟೆಯನ್ನು ಬಲಪಡಿಸಿದ ಕೀರ್ತಿ ಇವರದ್ದು.ಸರಳ,ಸಜ್ಜನಿಕೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಅಂಗಾರರಿಗೆ ಸಚಿವ ಸ್ಥಾನ ದೊರಕಬೇಕು ಎಂಬ ಕೂಗು ಕರಾವಳಿ ಭಾಗದ ಮುಖಂಡರಿಂದ ಹಿಂದಿನಿಂದಲೂ ಕೇಳಿಬಂದಿತ್ತು.ಇದೀಗ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನ ಕಾರ್ಯಕ್ರಮಗಳಲ್ಲಿ ಮುತುವರ್ಜಿ ವಹಿಸಿ ಭಾಗವಹಿಸುತ್ತಿದ್ದ ಸಚಿವ ಅಂಗಾರರು ಪುತ್ತೂರಿನೊಡನೆ ಹಾಗೂ ನೂತನ ತಾಲೂಕಾದ ಕಡಬದೊಡನೆ ನಿಕಟ ಸಂಪರ್ಕ ಹೊಂದಿದ್ದರು.

ಎಲ್ಲೆಡೆ ಹರ್ಷಾಚರಣೆ : ಶಾಸಕ ಅಂಗಾರರಿಗೆ ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆ ಸುಳ್ಯ, ಕಡಬ ಹಾಗೂ ಪುತ್ತೂರು ಭಾಗದಲ್ಲಿ ಕಾರ್ಯಕರ್ತರು ಹರ್ಷಾಚರಣೆ ನಡೆಸಿದ್ದಾರೆ.ಅನೇಕ ಬಿಜೆಪಿ ಮುಖಂಡರು ನೂತನ ಸಚಿವರನ್ನು ಅಭಿನಂದಿಸಲು ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚಿನ ಕಾರ್ಯಕರ್ತರು ರಾಜಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಒಟ್ಟಿನಲ್ಲಿ ಪುತ್ತೂರು,ಸುಳ್ಯ ಮತ್ತು ಕಡಬ ಭಾಗದಲ್ಲಿ ಅನೇಕ ನಾಯಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಗುರುತಿಸಿಕೊಂಡಿದ್ದಾರೆ.ಇದೀಗ ಅಂಗಾರ ಈ ಸಾಲಿಗೆ ಸೇರ್ಪಡೆಗೊಂಡಿರುವುದು ಹೆಮ್ಮೆಯೇ ಸರಿ,ರಾಜಕೀಯ ಚಾಣಾಕ್ಷರ ಗೂಡಾಗಿರುವ ಪುತ್ತೂರಿನಿಂದ ಮತ್ತಷ್ಟು ನಾಯಕರು ರಾಜ್ಯ ಹಾಗೂ ಕೇಂದ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿ……

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.