ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕರಾಯ ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮುಂಭಾಗದ ಬಾಗಿಲ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ನಗ ನಗದನ್ನು ದೋಚಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಕಲ್ಲೇರಿ ಎಂಬಲ್ಲಿ ಅಯ್ಯಂಗಾರ್ ಬೇಕರಿ ವ್ಯವಹಾರ ನಡೆಸುತ್ತಿರುವ ಶರತ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯ ಕಪಾಟೊಳಗಿದ್ದ ೧೮೦ ಗ್ರಾಮ್ ತೂಕದ ಚಿನ್ನಾಭರಣ, ಹತ್ತು ಸಾವಿರಕ್ಕೂ ಮಿಕ್ಕಿದ ನಗದು ಹಣ, ಹಾಗೂ ದೇವರ ಮಂಟಪದಲ್ಲಿದ್ದ ಬೆಳ್ಳಿ ಸಾಮಾಗ್ರಿಗಳನ್ನು ದೋಚಿದ್ದಾರೆ. ಕಲ್ಲೇರಿಯಲ್ಲಿನ ಅಂಗಡಿ ಬಾಗಿಲು ಮುಚ್ಚಿ ಮನೆಗೆ ಬಂದಾಗಲೇ ಈ ಕಳ್ಳತನದ ಕೃತ್ಯ ಗಮನಕ್ಕೆ ಬಂದಿರುವುದಾಗಿದೆ. ಆ ಕೂಡಲೇ ಉಪ್ಪಿನಂಗಡಿ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.
ನಗ ನಗದಿನೊಂದಿಗೆ ದಾಖಲೆಯನ್ನೂ ದೋಚಿದರು. . . ಬಳಿಕ ಬೆಂಕಿ ಹಚ್ಚಿದರು ಶರತ್ರವರ ಪತ್ನಿ ಕಾನೂನು ಪದವೀಧರೆಯಾಗಿದ್ದು, ತನ್ನ ಪದವಿಗೆ ಸಂಬಂಧಿಸಿದ ಸರ್ಟಿಫಿಕೇಟುಗಳನ್ನು ಬ್ಯಾಗೊಂದರಲ್ಲಿ ಮನೆಯ ಕವಾಟಿನೊಳಗಿರಿಸಿದ್ದರು. ಕಳ್ಳತನ ನಡೆಸಿದ ಕಳ್ಳರು ಕವಾಟಿನೊಳಗಿದ್ದ ಬ್ಯಾಗನ್ನೂ ಎಗರಿಸಿ ಮನೆಯಿಂದ ಸುಮಾರು ೨೦೦ ಮೀ ದೂರದಲ್ಲಿ ಅವುಗಳನ್ನು ಜಾಲಾಡಿಸಿ ಬಳಿಕ ಸರ್ಟಿಫಿಕೇಟುಗಳ ಸಹಿತ ಬೆಲೆ ಬಾಳುವ ದಾಖಲೆಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಬೆಳ್ಳಿಯ ದೇವರ ವಿಗ್ರಹವನ್ನು ಮಾತ್ರ ಅಲ್ಲೇ ಬಿಟ್ಟು ಹೋಗಿದ್ದಾರೆ.
ರಾತ್ರಿ ಗಂಟೆ ೭ ರಿಂದ ೯.೩೦ ರ ಮಧ್ಯ ನಡೆದ ಈ ಕಳ್ಳತನದ ಕೃತ್ಯದ ಬಳಿಕ ಕಳ್ಳರು ಸಮೀಪದ ಮನೆಯ ಬಾಗಿಲು ತಟ್ಟಿದ್ದು, ಮನೆ ಮಂದಿ ಬಾಗಿಲು ತೆಗೆಯಲು ನಿರಾಕರಿಸಿ ಬೊಬ್ಬೆ ಹಾಕಿದಾಗ ಸಮೀಪದ ಮನೆ ಮಂದಿ ಕಳ್ಳರನ್ನು ಬೆನ್ನಟ್ಟಿದರಾದರೂ ಕಳ್ಳರು ಪರಾರಿಯಾಗುವಲ್ಲಿ ಯಶಸ್ವಿಯಾದರು.
ಕಳ್ಳರು ಪಕ್ಕದ ಮನೆಯ ಬಾಗಿಲು ತಟ್ಟಿದರು: ಕಳ್ಳತನ ನಡೆಸಿದ ಬೆನ್ನಲ್ಲೇ ಅದೇ ಕಳ್ಳರು ಪಕ್ಕದ ಮನೆಯ ಬಾಗಿಲು ಮುರಿಯಲು ಯತ್ನಿಸಿದರು. ಇದೇ ವೇಳೆ ಮನೆ ಮಾಲಿಕನ ಪುತ್ರ ಮನೆಯ ಎಲ್ಲ ದೀಪ ನಂದಿಸಿ ಟಿ.ವಿ. ನೋಡುತ್ತಿದ್ದ. ಕೂಡಲೇ ಎಚ್ಚರಗೊಂಡು ಬೊಬ್ಬೆ ಹೊಡೆದು ಸಮೀಪದ ದೇವಸ್ಥಾನಕ್ಕೆ ತೆರಳಿದ ಮನೆ ಮಂದಿಗೆ ತಿಳಿಸಿ ಬರುವಷ್ಟರಲ್ಲಿ ಕಳ್ಳತನ ಪಕ್ಕದ ಮನೆಯಲ್ಲಿ ನಡೆದಿರುವುದು
ಅರಿವಿಗೆ ಬಂತು ದೇವರ ಮುಂದೆ ಇಟ್ಟ ನಗದು ಹಾಗೇ ಬಿಟ್ಟು ಹೋದ ಕಳ್ಳರು: ಮನೆಮಂದಿ ಗುರುವಾರ ಸಂಜೆ ಆರರ ವೇಳೆ ಮಕರ ಸಂಕ್ರಮಣ ಅಂಗವಾಗಿ ಸಂಪ್ರದಾಯದಂತೆ ನಗದು ಇಟ್ಟು ವಿಧಿ ವಿಧಾನ ನಡೆಸುವುದು ವಾಡಿಕೆ. ಆದರೆ ಒಳ ಹೊಕ್ಕ ಕಳ್ಳರು ಕಪಾಟನ್ನು ಚೆಲ್ಲಾಪಿಲ್ಲಿಗೊಳಿಸಿ ಬೀರುವಿನಲ್ಲಿಟ್ಟ ಸೀರೆ ಒಳಗೆ ಬಚ್ಚಿಟ್ಟಿದ್ದ ಚಿನ್ನ ಹಾಗೂ ನಗದು ದೋಚಿದರು.
ಮನೆ ಮುಂದೆ ಉರಿಯುವ ದೀಪ ಹೊಡೆದು ಹಾಕಿದರು: ಕಳ್ಳತನ ನಡೆಸಲು ಬಂದ ಕಳ್ಳರು ವಿದ್ಯುತ್ ಸಂಪರ್ಕ ತಪ್ಪಿಸಿ ಮುಂಭಾಗದಲ್ಲಿ ಉರಿಯುವ ಎರಡು ದೀಪಗಳನ್ನು ಒಡೆದು ಅಲ್ಲೇ ಪಕ್ಕದ ಬಾವಿಗೆ ಎಸೆದು ಬಿಟ್ಟಿರುವುದು ಮನೆ ಮಂದಿಗೆ ಕುಡಿಯುವ ನೀರು ಕುಡಿಯದಂತೆ ಭಯ ಉಂಟಾಗುವಂತೆ ಮಾಡಿರುವುದು ಶುಕ್ರವಾರ ಮುಂಜಾನೆ ಅರಿವಿಗೆ ಬಂತು.
ಕಳ್ಳತನ ನಡೆಸಿದ ಮನೆಯ ಬಚ್ಚಲು ಮನೆಯಲ್ಲೆ ಕೈಕಾಲು ತೊಳೆದು ಹೋದರು
ಕಳ್ಳರು ನಗದು ಕೈಗೆ ಸಿಕ್ಕ ಬೆನ್ನಲ್ಲೆ ಪೋಲಿಸರಿಗೆ ತಮ್ಮ ಬೆರಳಚ್ಚು ಗುರುತು ಪತ್ತೆಯಾಗದಂತೆ ಮನೆ ಬಚ್ಚಲು ಮನೆಯಲ್ಲಿ ಕೈಕಾಲು ತೊಳೆದು ಹಿಂತಿರುಗಿದರು ಎಂಬ ಮಾಹಿತಿ ಲಭಿಸಿದೆ.
ಕಳ್ಳರ ಪಾಲಿಗೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿ ಸ್ವರ್ಗವಾಯಿತೇ ? : ಕಳೆದ ಎರಡು ತಿಂಗಳಾವಧಿಯಲ್ಲಿ ಉಪ್ಪಿನಂಗಡಿಯಲ್ಲಿದ್ದ ಖಾಯಂ ಎಸೈ ಯವರನ್ನು ಎಸ್ಪಿ ಕಚೇರಿಯಲ್ಲಿ ನಿಯೋಜಿಸಿ , ಉಪ್ಪಿನಂಗಡಿ ಠಾಣೆಯಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದುರಾದೃಷ್ಟವಶಾತ್ ಇವರ ಕರ್ತವ್ಯಾವಧಿಯಲ್ಲಿ ಉಪ್ಪಿನಂಗಡಿ ಪೇಟೆಯ ಹೃದಯ ಭಾಗದಲ್ಲಿ ಸರಣಿ ಕಳ್ಳತನಗಳು ನಡೆದವು, ಸೌತಡ್ಕದಲ್ಲಿ ಲಕ್ಷಾಂತರ ರೂ ಮೌಲ್ಯದ ನಗ ನಗದನ್ನು ದರೋಡೆ ಮಾಡಲಾಯಿತು. ಇದೀಗ ಕರಾಯದಲ್ಲೂ ಲಕ್ಷಾಂತರ ರೂ ಮೌಲ್ಯದ ನಗ ನಗದನ್ನು ಕಳವು ಮಾಡಲಾಗಿದ್ದು, ಯಾವುದೇ ಪ್ರಕರಣದಲ್ಲೂ ಪೊಲೀಸರಿಂದ ಕಳ್ಳರನ್ನು, ದರೋಡೆಕೋರರನ್ನು ಪತ್ತೆ ಹಚ್ಚಲು ಸಾಧ್ಯವಾಗದಿರುವುದಕ್ಕೆ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಉಪ್ಪಿನಂಗಡಿ ಪೋಲೀಸರು ಪ್ರಕರಣ ದಾಖಲಿಸಿದ್ದು ಗ್ರಾಮಾಂತರ ವೃತ್ತನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರಾಯ ಪೇಟೆಯಲ್ಲಿ ವರ್ಷವೊಂದಕ್ಕೆ ಕಳ್ಳತನ ಗ್ಯಾರಂಟಿ. ಕಳೆದ ಐದು ವರ್ಷಗಳಲ್ಲಿ ಐದು ಕಳ್ಳತನ ನಡೆದು ಎಲ್ಲಾ ಪ್ರಕರಣಗಳಲ್ಲಿ ಚಿನ್ನ ನಗದು ದೋಚಲಾಗಿದ್ದು ಈ ಹಿಂದೆ ಫೆನಾನ್ಸ್ ಮಾಲಿಕರ ಮನೆಯಿಂದ ಅಪಾರ ಪ್ರಮಾಣದ ಚಿನ್ನಭರಣ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಕೆ.ಶಾಹುಲ್ ಮನೆಯಿಂದ ಸಿ.ಸಿ.ಟಿವಿಯ ಡಿವಿಡರ್, ಚಿನ್ನ, ಅಡಿಕೆ ಉದ್ಯಮಿ ಮನೆಯಿಂದ ಚಿನ್ನಾಭರಣ ಮತ್ತು ನಗದು, ಶಾಲಾ ಬಳಿಯ ಕೂಲಿ ಕಾರ್ಮಿಕ ಅಬ್ಬಾಸ್ ಎಂಬವರ ಮನೆಯಿಂದ ವಿವಾಹಕ್ಕಾಗಿ ತಂದಿರಿಸಿದ ಚಿನ್ನಾಭರಣ ಪ್ರಕರಣಗಳು ನಡೆದಿದ್ದು ಯಾವುದೇ ಪ್ರಕರಣ ಬೇದಿಸಲು ಅಸಾಧ್ಯವಾಗಿಲ್ಲ ಎಂದು ನಾಗರಿಕರಿಂದ ಅಕ್ರೋಶ ವ್ಯಕ್ತವಾಗುತ್ತಿದೆ.
ಠಾಣೆಗೆ ಮಾಹಿತಿ ನೀಡಿದರೂ ತಡವಾಗಿ ಬಂದ ಪೋಲಿಸರು
ಮನೆ ಮಾಲೀಕ ಕಳ್ಳತನ ಅರಿವಿಗೆ ಬಂದೊಡನೆ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ್ದರು. ಆದರೂ ಪೊಲೀಸರು ಬರದೇ ಇದ್ದುದರಿಂದ ಕಾದು ಕಾದು ಸುಸ್ತಾಗಿ ಅವರು ನೇರ ಠಾಣೆಗೆ ಬಂದ ಒಂದು ಗಂಟೆಯ ಬಳಿಕ ಬಂದ ಪೋಲಿಸರು ಕಳ್ಳತನ ನಡೆದ ಮನೆ ಮಂದಿಯನ್ನೇ ಕಳ್ಳರಂತೆ ಗದರಿಸಿದರು. ರಾತ್ರಿ ಹೆದ್ದಾರಿ ಗಸ್ತು ಪಡೆ ಹೊಯ್ಸಳ ವಾಹನದಲ್ಲಿ ಮನೆಯಂಗಳಕ್ಕೆ ಬಂದು ಇಳಿದ ಬೆನ್ನಲ್ಲೇ ಮನೆ ಮಾಲೀಕ ಹಾಗೂ ಆತನ ಪತ್ನಿಯನ್ನು ಏಕವಚನದಲ್ಲಿ ಸಂಬೋಧಿಸಿ ಯಾಕೆ ಚಿನ್ನ ಮನೆಯಲ್ಲಿ ಇಟ್ಟಿರಿ? ಬೇರೆ ಎಲ್ಲೂ ಜಾಗವಿಲ್ಲವೆ ಎಂದು ಪ್ರಶ್ನಿಸಿದ್ದರು ಎಂದು ಆರೋಪ ವ್ಯಕ್ತವಾಗಿದೆ.