ಕಾಣಿಯೂರು: ಎಣ್ಮೂರು ಗ್ರಾಮದ ಕೆಮ್ಮಲೆ ಹೇಮಳದಲ್ಲಿರುವ ಪುರಾತನವಾದ ನಾಗಬ್ರಹ್ಮ ದೇವಸ್ಥಾನ ಮತ್ತು ಬ್ರಹ್ಮರ ಮೂಲಸ್ಥಾನ ಉಳ್ಳಾಕುಲು, ಚಾಮುಂಡಿ ಹಾಗೂ ಪರಿವಾರ ದೈವಗಳ ಗುಡಿಗಳು ನವೀಕರಣಗೊಂಡಿದ್ದು, ಜ.೧೬ರಿಂದ ಜ.೧೮ ರ ತನಕ ಪದ್ಮವಿಭೂಷಣ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವುದು.
ಜ.೧೬ ರಂದು ಸಂಜೆ ತಂತ್ರಿಗಳು ಮತ್ತು ಋತ್ವಿಜರ ಆಗಮನ. ರಾತ್ರಿ ದೇವತಾ ಪ್ರಾರ್ಥನೆ ಆಚಾರ್ಯವರಣೆ, ಪ್ರಾಸಾದಾದಿ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾಬಲಿ, ದುರ್ಗಾಪೂಜೆ, ಬ್ರಹ್ಮರ ಮೂಲಸ್ಥಾನದಲ್ಲಿ ಮಹಾಸುದರ್ಶನ ಹೋಮ, ಬಾದಾಕರ್ಷನೆ, ಉದ್ಘಾಟನೆ, ಪ್ರಾಕಾರ ಬಲಿ ನೂತನ ಬಿಂಬ ಜಲಾಧಿವಾಸ, ಪ್ರಸಾದ ವಿತರಣೆ, ಕೇರ್ಪಡ ಮಹಿಷಮರ್ಧಿನಿ ಭಜನಾಮಂಡಳಿ ಮತ್ತು ಎಡಮಂಗಲ ಶ್ರೀ ಪಂಚದುರ್ಗಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಜ.೧೬ ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಚಿವರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ಅಂಗಾರ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಾಸ್ತು ಶಿಲ್ಪಿಗಳಾದ ಎಸ್.ಎಂ.ಮುನಿಯಂಗಳರವ ಗೌರವ ಉಪಸ್ಥಿತಿಯಲ್ಲಿ, ಕೆಮ್ಮಿಂಜೆ ಬ್ರಹ್ಮಶ್ರೀ ಕಾರ್ತಿಕ್ ತಂತ್ರಿಗಳು ಧಾರ್ಮಿಕ ಉಪನ್ಯಾಸ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ಕುಮಾರ್ ಕಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್, ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ಕು. ರಾಜೇಶ್ವರಿ ಕನ್ಯಮಂಗಲ, ಜಿಲ್ಲಾ ಪಂಚಾಯತ್ ಬೆಳ್ಳಾರೆ ಕ್ಷೇತ್ರದ ಸದಸ್ಯ ಎಸ್.ಎನ್. ಮನ್ಮಥ, ಎಣ್ಮೂರು ಆದಿ ನಾಗಬ್ರಹ್ಮ ಬೈದರ್ಕಳ ಗರಡಿ ಆಡಳಿತ ಮೊಕ್ತೇಸರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಪಂಜ ವಲಯಾರಣ್ಯಾಧಿಕಾರಿ ಎನ್. ಮಂಜುನಾಥ್ ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸುವರು, ಎಡಮಂಗಲ ಲಕ್ಷ್ಮಣ ಆಚಾರ್ಯ ಸಾರಥ್ಯದಲ್ಲಿ ಊರ ಮತ್ತು ಪರವೂರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕಾಲಮಿತಿ ಯಕ್ಷಗಾನ ಕೋಟಿ – ಚೆನ್ನಯ್ಯ ನಡೆಯಲಿದೆ. ಜ.೧೭ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಖನನಾದಿ ಸ್ಥಳ ಶುದ್ಧಿ, ಬಿಂಬ ಶುದ್ಧಿ, ಪವಮಾನ ಹೋಮ, ಆಶ್ಲೇಷಾ ಬಲಿ, ಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ಬ್ರಹ್ಮಕಲಶಪೂಜೆ, ಆದಿವಾಸ ಹೋಮ, ಕಲಶಾಧಿವಾಸ, ಪ್ರಾಸಾದಿವಾಸ, ಪ್ರಸಾದ ವಿತರಣೆ ಬಳಿಕ ಎಣ್ಮೂರು ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ವಿದ್ವಾಂಸರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಧಾರ್ಮಿಕ ಉಪನ್ಯಾಸ ನೀಡಲಿರುವರು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರು ಹಾಗೂ ಸಂಸದೆ ಶೋಭ ಕರಂದ್ಲಾಜೆ ಸಭಾಧ್ಯಕ್ಷತೆ ವಹಿಸಲಿರುವರು, ಮುಖ್ಯ ಅತಿಥಿಗಳಾಗಿ ಧಾರ್ಮಿಕ ದತ್ತಿ ಇಲಾಖೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ತಾ.ಪಂ. ಸದಸ್ಯೆ ಶುಭಧ ಎಸ್.ರೈ, ಕಂಕನಾಡಿ ಗರಡಿ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ, ದೇಯಿ ಬೈದೆತಿ- ಕೋಟಿ ಚೆನ್ನಯ್ಯ ಮೂಲಸ್ಥಾನ ಕ್ಷೇತ್ರಾಡಳಿತ ಗೆಜ್ಜೆಗಿರಿ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ಭಾಗವಹಿಸಲಿರುವರು.
ಭರತಾಂಜಲಿ ಕೊಟ್ಟಾರ, ಮಂಗಳೂರುರವರು ಪ್ರಸ್ತುತಪಡಿಸುವ ವಿದುಷಿ ಶ್ರೀಮತಿ ಪ್ರತಿಮ ಶ್ರೀಧರ್ ನಿರ್ದೇಶನದಲ್ಲಿ ಜನಪದ ಶೈಲಿಯ ಭರತನಾಟ್ಯ ಜನಪದ ಶೈಲಿಯ ನೃತ್ಯಗಳು ಹಾಗೂ ಪುಣ್ಯಕೋಟಿ ನೃತ್ಯ ರೂಪಕ ನಡೆಯಲಿರುವುದು.
ಜ.೧೮ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ, ಪ್ರತಿಷ್ಠೆ, ಕೆಮ್ಮಲೆ ನಾಗಬ್ರಹ್ಮ ದೇವರು, ಉಳ್ಳಾಕುಲು ಚಾಮುಂಡಿ ದೈವಗಳ ಪ್ರತಿಷ್ಠೆ ಬ್ರಹ್ಮರ ಮೂಲಸ್ಥಾನದಲ್ಲಿ ಕೆಮ್ಮಲೆ ಬ್ರಹ್ಮರ ಬಿಂಬ ಪ್ರತಿಷ್ಠೆ, ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ,
ಅನ್ನಸಂತರ್ಪಣೆ
ಸಂಜೆ ಉಳ್ಳಾಕುಲು ದೈವದ ಭಂಡಾರ ಹಿಡಿದು, ನೇಮೋತ್ಸವ ನಡೆದು ಕೈ ಕಾಣಿಕೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯುವುದು.
ಇಂದು ಶ್ರೀ ಕ್ಷೇತ್ರ ಕೆಮ್ಮಲೆಗೆ ದೇವರ ಬಿಂಬ ಆಗಮನ… ಕಾಣಿಯೂರಿನಲ್ಲಿ ಮೆರವಣಿಗೆಗ ಚಾಲನೆ
ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕೆಮ್ಮಲೆ ನಾಗಬ್ರಹ್ಮ ದೇವರ ಬಿಂಬವು ಕಾರ್ಕಳದಿಂದ ಜ ೧೬ರಂದು ಶ್ರೀ ಕ್ಷೇತ್ರ ಕೆಮ್ಮಲೆಗೆ ಆಗಮನವಾಗಲಿದೆ. ಕಾಣಿಯೂರಿನಿಂದ ಶ್ರೀ ಕ್ಷೇತ್ರ ಕೆಮ್ಮಲೆವರೆಗೆ ಮೆರವಣಿಗೆ ಮೂಲಕ ಆಗಮಿಸುವ ಈ ಮೆರವಣಿಗೆಗೆ ಕಾಣಿಯೂರಿನಲ್ಲಿ ಬೆಳಿಗ್ಗೆ ಗಂಟೆ ೧೦-೩೦ಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ ಹಾಗೂ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲರವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.