ಪುತ್ತೂರು; ದೇಶದಲ್ಲಿ ಕೊರೋನಾ ವೈರಸ್ ಪತ್ತೆಯಾದ ಬರೋಬ್ಬರಿ ಹತ್ತು ತಿಂಗಳ ಬಳಿಕ ಲಸಿಕೆ ವಿತರಣೆ ಅಗುತ್ತಿದ್ದು ಜ.16 ರಂದು ಪುತ್ತೂರಿನಲ್ಲಿಯೂ ಲಸಿಕೆ ವಿತರಣೆಗೆ ಚಾಲನೆ ನೀಡಲಾಯಿತು.
ಪ್ರಧಾನಿ ಮೋದಿಯವರು ವರ್ಚುವಲ್ ಮೂಲಕ ಲಸಿಕೆ ವಿತರಣೆ ಉದ್ಘಾಟಿಸಿದ ಬಳಿಕ ವಿತರಣೆಗೆ ಚಾಲನೆ ನೀಡಲಾಯಿತು. ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ದೀಪ ಬೆಳಗಿಸಿ ಉದ್ಘಾಟಿಸಿ, ಚಾಲನೆ ನೀಡಿದರು. ಬಳಿಕ ಸರಕಾರಿ ಆಸ್ಪತ್ರೆಯ ಆರೋಗ್ಯ ಮಿತ್ರ ಸಿಬಂದಿ ಹರೀಶ್ ರವರಿಗೆ ಪ್ರಥಮ ಲಸಿಕೆ ವಿತರಿಸಲಾಯಿತು.
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಸಭಾ ಉಪಾಧ್ಯಕ್ಷೆ ವಿದ್ಯಾಗೌರಿ, ತಹಶಿಲ್ದಾರ್ ರಮೇಶ್ ಬಾಬು, ನಗರ ಸಭಾ ಪೌರಾಯುಕ್ತೆ ರೂಪಾ ಶೆಟ್ಟಿ, ಚುಚ್ಚು ಮದ್ದು ವಿತರಣೆಯ ತಾಲೂಕು ನೋಡೆಲ್ ಅಧಿಕಾರಿ ಡಾ.ಬದ್ರುದ್ದೀನ್ , ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಲ್ತಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಕ್ ರೈ, ಸರಕಾರಿ ಆಸ್ಪತ್ರೆಯ ಆರೋಗ್ಯಾ ರಕ್ಷಾ ಸಮಿತಿ ಸದಸ್ಯರಾದ ರಾಜೇಶ್ ಬನ್ನೂರು, ರಫೀಕ್ ದರ್ಬೆ, ಚಂದ್ರಶೇಖರ ರಾವ್ ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಸ್ವಾಗತಿಸಿದರು. ಡಾ.ಅಮಿತ್ ಕುಮಾರ್ ವಂದಿಸಿದರು. ಕಿರಿಯ ಆರೋಗ್ಯ ಸಹಾಯಕಿ ಲೀನಾ ಕಾರ್ಯಕ್ರಮ ನಿರೂಪಿಸಿದರು.
100 ಮಂದಿಗೆ ಪ್ರಥಮ ಲಸಿಕೆ;
ಆರೋಗ್ಯ ಇಲಾಖೆಯ ಕೋವಿಡ್ ಆಪ್ ಡೌನ್ ಲೋಡ್ ಮಾಡಿ ನೋಂದಾಯಿಸಿದ ಕೊರೋನಾ ಯೋಧರಾಗಿ ದುಡಿಯುವ ಆರೋಗ್ಯ ಇಲಾಖೆಯ ವೈದ್ಯರು, ಸಿಬಂದಿಗಳು, ಆಶಾ ಕಾರ್ಯಕರ್ತೆಯರಿಗೆ ಪ್ರಥಮವಾಗಿ ಲಸಿಕೆ ವಿತರಣೆ ನಡೆಯಲಿದೆ. ಬೇಡಿಕೆಯ ಶೇ.50ರಷ್ಟು ಲಸಿಕೆ ಪುತ್ತೂರಿಗೆ ಬಂದಿದೆ. ಕೊರೋನಾ ನಿಯಂತ್ರಣದಲ್ಲಿ ಮುಂಚೂನಿಯಲ್ಲಿ ಕೆಲಸ ಮಾಡುವ ಆರೋಗ್ಯ ಇಲಾಖೆ ಸಿಬಂದಿಗಳಿಗೆ ಪ್ರಥಮ ಲಸಿಕೆ ನೀಡಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಮಾಹಿತಿ ನೀಡಿದರು.