ಪುತ್ತೂರು:ತುಳುನಾಡಿನ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಕಿರುಷಷ್ಠಿ ಉತ್ಸವವು ಜ.೧೭ರಿಂದ ಪ್ರಾರಂಭಗೊಂಡು ಜ.೨೪ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಪೂರ್ವಶಿಷ್ಟ ಸಂಪ್ರದಾಯದಂತೆ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಜ.೧೭ರಂದು ಬೆಳಿಗ್ಗೆ ಗಣಹೋಮ ನಡೆಯಲಿದೆ. ಜ.೧೮ರಂದು ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಉಗ್ರಾಣ ಪೂಜೆ, ಸಂಜೆ ಗಣೇಶ ಪ್ರಾರ್ಥನೆ, ರಾತ್ರಿ ದೀಪಾರಾಧನೆ, ಹಾಗೂ ದೊಡ್ಡ ರಂಗಪೂಜೆ ನಡೆಯಲಿದೆ.
ಜ.೧೯ರಂದು ಬೆಳಿಗ್ಗೆ ಗಣಪತಿ ಹೋಮ, ಸುಬ್ರಹ್ಮಣ್ಯ ದೇವರಿಗೆ ಪವಮಾನಾಭಿಷೇಕ, ನಾಗದೇವರಿಗೆ ಆಶ್ಲೇಷ ಹೋಮ, ಆಶ್ಲೇಷ ಬಲಿ, ಮಧ್ಯಾಹ್ನ ತುಲಾಭಾರ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ದುರ್ಗಾಪೂಜೆ, ರಾತ್ರಿ ದೇವರ ಬಲಿ ಹೊರಟು ಪೆರಿಯ ಬಲಿ ಉತ್ಸವ, ಕಟ್ಟೆಪೂಜೆ ಹಾಗೂ ವಿಶೇಷವಾಗಿ ಕೇರಳ ಸಂಪ್ರದಾಯದ ನೃತ್ಯಬಲಿ ಸೇವೆ ನಡೆಯಲಿದೆ.
ಜ.೨೦ರಂದು ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆ, ಅಪರಾಹ್ನ ವ್ಯಾಘ್ರ ಚಾಮುಂಡಿ ನೇಮೋತ್ಸವ, ಪಂಜುರ್ಲಿ ಹಾಗೂ ಗುಳಿಗ ದೈವಗಳಿಗೆ ತಂಬಿಲ ನಡೆಯಲಿದೆ.
ಜ.24: ಉಳ್ಳಾಲ್ತಿ, ಉಳ್ಳಾಕುಲು ಪರಿವಾರ ದೈವಗಳ ನೇಮ:
ಕ್ಷೇತ್ರದ ಅಧೀನಕ್ಕೆ ಒಳಪಟ್ಟಿರುವ ಉಳ್ಳಾಲ್ತಿ, ಉಳ್ಳಾಕುಲು ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಜ.೨೪ರಂದು ನೇಮೋತ್ಸವ ನಡೆಯಲಿದೆ. ಜ.೨೩ರಂದು ಬೆಳಿಗ್ಗೆ ಉಳ್ಳಾಲ್ತಿ, ಉಳ್ಳಾಕುಲು ಹಾಗೂ ಪರಿವಾರ ದೈವಗಳ ತಂಬಿಲ ನಡೆದು ರಾತ್ರಿ ದೈವಗಳ ಭಂಡಾರ ತೆಗೆದು, ಜ.೨೪ರಂದು ಬೆಳಿಗ್ಗೆ ಉಳ್ಳಾಲ್ತಿ ದೈವದ ನೇಮ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಭೇಟಿ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಉಳ್ಳಾಕುಲು, ಪುರುಷರಾಯ, ಮಹಿಷಂತಾಯ, ರಾತ್ರಿ ಕಲ್ಕುಡ-ಕಲ್ಲುರ್ಟಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ತಿಳಿಸಿದ್ದಾರೆ.
ಜ.18: ದೊಡ್ಡ ರಂಗಪೂಜೆ:
ಕ್ಷೇತ್ರದಲ್ಲಿ ಕಳೆದ ವರ್ಷದಿಂದ ಪ್ರಾರಂಭಗೊಂಡ ಒಂದು ಮಂಡಲ ವಿಶೇಷ ರಂಗಪೂಜೆಯು ಈ ವರ್ಷವೂ ಮುಂದುವರಿದಿದೆ. ಈ ವರ್ಷದ ಕೊರೋನಾದ ಆರ್ಥಿಕ ಸಂಕಷ್ಠದ ಮಧ್ಯೆಯು ದೇವಳದ ಆಡಳಿತ ಮಂಡಳಿ ಈ ವರ್ಷವೂ ಒಂದು ಮಂಡಲ ವಿಶೇಷ ರಂಗಪೂಜೆ ಸೇವೆಯನ್ನು ಮುಂದುವರಿಸಿದೆ. ಇದಕ್ಕೆ ಭಕ್ತಾದಿಗಳ ಸಹಕಾರ, ಪ್ರೋತ್ಸಾಹಗಳು ಉತ್ತಮ ರೀತಿಯಲ್ಲಿ ದೊರೆತಿದೆ. ದ.೨ರಿಂದ ಪ್ರಾರಂಭಗೊಂಡ ರಂಗಪೂಜೆಯು ಜ.೧೭ ತನಕ ನಡೆದ ಪ್ರತಿ ದಿನ ೧೨ ಮಂದಿ ಭಕ್ತಾದಿಗಳಿಗೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಆಡಳಿತ ಮಂಡಳಿ ಕಲ್ಪಿಸಿದೆ. ರಂಗಪೂಜೆಯ ಬಳಿಕ ಭಕ್ತಾದಿಗಳಿಂದ ಸೇವಾ ರೂಪವಾಗಿ ಅನ್ನದಾನವು ನಿರಂತರವಾಗಿ ನಡೆದಿದೆ. ಜ.೧೮ರಂದು ದೊಡ್ಡ ರಂಗಪೂಜೆ ನಡೆಯಲಿದ್ದು ಎ.ಆನಂದ ರಾವ್ ಆರ್ಯಾಪುರವರ ಸೇವಾ ರೂಪದಲ್ಲಿ ನಡೆಯಲಿದೆ. ದೊಡ್ಡ ರಂಗಪೂಜೆಯಲ್ಲಿ ತೆಂಗಿನ ಕಾಯಿಯ ೪೮ ಗಡಿಯಲ್ಲಿ ದೀಪ ಬೆಳಗಿಸಿ ವಿಶೇಷವಾಗಿ ಪೂಜೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.