ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಪ್ರಾಚ್ಯ ಕಟ್ಟಗಳಲ್ಲೊಂದಾದ ಸರಕಾರಿ ಶಿಕ್ಷಣ ಸಂಸ್ಥೆ ಪುತ್ತೂರಿನ ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ (ಸರಕಾರಿ ಪ್ರೌಢ, ಪದವಿ ಪೂರ್ವ ಕಾಲೇಜು, ಕೊಂಬೆಟ್ಟು, ಪುತ್ತೂರು) ಈ ಕಟ್ಟಡದ ಮಾಡನ್ನು ತುರ್ತು ದುರಸ್ಥಿಗೊಳಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡ ಸಪ್ತಾಹ ಮಾದರಿಯ ಕರಸೇವೆ ಕೊನೆ ಹಂತ ತಲುಪಿದ್ದು ಒಂದನೇ ಹಂತದ ನಿತ್ಯ ಕರಸೇವೆ ಪೂರ್ಣಗೊಂಡಿದೆ.
ಜ.೩ರಂದು ಆರಂಭಗೊಂಡ ನಿತ್ಯ ಕರಸೇವೆಯಲ್ಲಿ ಶಾಲೆಯ ಕಟ್ಟಡದ ಹಂಚು ತೆಗೆದು ಶುಚಿಗೊಳಿಸಿ, ಕೆಟ್ಟು ಹೋಗಿರುವ ಪಕ್ಕಾಸು, ರೀಪುಗಳನ್ನು ಬದಲಾಯಿಸಿ, ಅದಕ್ಕೆ ಗೆದ್ದಲು ಹಿಡಿದಂತೆ ತೈಲ ಭಂಜನ ಮಾಡಿ, ಹಂಚುಗಳಿಗೆ ಪೈಂಟ್ ಮಾಡಿ ಮತ್ತೆ ಯಥಾಸ್ಥಿತಿಯಲ್ಲಿ ಇಡುವ ಕಾರ್ಯ ಒಂದು ಹಂತದಲ್ಲಿ ಜ.೧೭ಕ್ಕೆ ಪೂರ್ಣಗೊಂಡಿದೆ.
ಉಳಿದಂತೆ ಶಾಲಾ ಕೊಠಡಿಗೆ ವಿದ್ಯುತ್ ಸಂಪರ್ಕ, ನೆಲ ದುರಸ್ಥಿತಿ ಕಾರ್ಯ ನಡೆಯುತ್ತಿದ್ದು, ನುರಿತ ಕಾರ್ಮಿಕರು ಚಾಲನೆ ನೀಡಿದ್ದಾರೆ. ಸದ್ಯ ಕೊಠಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಶಾಲೆಯ ಹಿರಿಯ ವಿದ್ಯಾರ್ಥಿಗಳ ಜೊತೆ ಶಾಲೆ ಪ್ರಾಂಶುಪಾಲ ವಸಂತ್ ಮತ್ತು ಹಿರಿಯ ಶಿಕ್ಷಕಿ ಗೀತಾಮಣಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಕರಸೇವೆಯಲ್ಲಿ ಭಾಗಿಯಾಗಿದ್ದಾರೆ.