ಉಪ್ಪಿನಂಗಡಿ: ಯುವಕನೋರ್ವ ತನ್ನನ್ನು ಅತ್ಯಾಚಾರಗೈದು ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಿ ಕಾರ್ಕಳದ ಯುವತಿಯೋರ್ವಳು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಪ್ರಾಣೇಶ್ ಎಂಬಾತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜ.೨೦ರಂದು ಕಾರ್ಕಳ ನಗರ ಠಾಣೆಗೆ ದೂರು ನೀಡಿರುವ ಸಂತ್ರಸ್ಥ ಯುವತಿಯು ೨೦೨೦ನೇ ಜನವರಿಯಲ್ಲಿ ಕಾರ್ಕಳ ಎಂಪಿಎಂ ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿರುವ ಸಂದರ್ಭ ತನ್ನ ದೊಡ್ಡಪ್ಪನ ಪರಿಚಯದ ಪ್ರಾಣೇಶ ಎಂಬಾತ ತನ್ನನ್ನು ಕಾಲೇಜಿಗೆ ಬಿಡುವುದಾಗಿ ತಿಳಿಸಿ, ಬಳಿಕ ಪುಸಲಾಯಿಸಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಎಂಪಿಎಂ ಕಾಲೇಜು ಸಮೀಪ ನಿಲ್ಲಿಸದೇ ನೇರವಾಗಿ ಉಪ್ಪಿನಂಗಡಿಯ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಲ್ಲದೆ, ಮತ್ತು ಭರಿಸುವ ಲೆಮೆನ್ ಜ್ಯೂಸ್ ನೀಡಿ ಉಪ್ಪಿನಂಗಡಿಯ ಬಂದಾರು ಎಂಬಲ್ಲಿರುವ ಒಂದು ಹೆಂಚು ಛಾವಣಿಯ ಮನೆಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೇ, ಈತ ಅತ್ಯಾಚಾರ ದೃಶ್ಯಾವಳಿಯ ವಿಡೀಯೋ ಚಿತ್ರೀಕರಣ, ನಗ್ನಾವಸ್ಥೆಯ ಛಾಯಾಚಿತ್ರಗಳಿದ್ದು, ಘಟನೆಯ ಕುರಿತು ಯಾರಿಗಾದರೂ ತಿಳಿಸಿದರೆ ವಿಡಿಯೋ ಪ್ರಸಾರ ಮಾಡಿ ಮಾನ ಹರಾಜು ಹಾಕುತ್ತೇನೆ. ಅಲ್ಲದೇ, ಯಾರಿಗಾದರೂ ಹೇಳಿದ್ದಲ್ಲಿ ಕೊಂಡು ಬಿಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಪೋನ್ ಕರೆ ಮಾಡಿ ಕರೆದಲ್ಲಿಗೆ ಬರುವಂತೆ ಈತ ತಿಳಿಸುತ್ತಿದ್ದು, ಬಾರದೇ ಇದ್ದಲ್ಲಿ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆಯೊಡ್ಡುತ್ತಾನೆ. ಇದೇ ತಿಂಗಳ ಜ.೧೨ರಂದು ಕಾರ್ಕಳಕ್ಕೆ ಕಂಪ್ಯೂಟರ್ ಕ್ಲಾಸಿಗೆ ಬಂದ ಸಮಯ ತನ್ನನ್ನು ಬೈಲೂರಿಗೆ ಬರುವಂತೆ ಈತ ಬೆದರಿಸಿದ್ದು, ತಾನು ಹೆದರಿ ಬೈಲೂರಿಗೆ ಹೋದಾಗ ಮೋಟಾರು ಸೈಕಲ್ನಲ್ಲಿ ಕುಳ್ಳಿರಿಸಿಕೊಂಡು ಆತನ ಧಣಿಯ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.