ಬೆಂಗಳೂರು: ದೇಶದ ಎರಡು ಕಡೆಗಳಿಗೆ ಮಂಜೂರಾದ ಪ್ಲಾಸ್ಟಿಕ್ ಪಾರ್ಕ್ಗಳ ಪೈಕಿ ಒಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗಂಜಿಮಠದಲ್ಲಿ ಸ್ಥಾಪನೆಗೊಳ್ಳಲಿದೆ. ನವದೆಹಲಿಯಲ್ಲಿ ಜ. ೨೦ರಂದು ನಡೆದ ಸಮಿತಿಯ ೨೦ನೇ ಸಭೆಯಲ್ಲಿ ಈ ಆದೇಶ ಹೊರಬಿದ್ದಿದೆ.
ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿ ಪಮೇಲಾ ಕುಮಾರ್ ಅವರು ಈ ವಿಷಯವಾಗಿ ಕರ್ನಾಟಕ ರಾಜ್ಯ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಿಳಿಸಿದಂತೆ, ದೇಶದ ೨ ಕಡೆಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಆದೇಶ ಹೊರಡಿಸಲಾಗಿದೆ. ಇದರಲ್ಲಿ ಒಂದನ್ನು ಕರ್ನಾಟಕ ರಾಜ್ಯಕ್ಕೆ ನೀಡಲು ಉzಶಿಸಿದ್ದು, ಮಂಗಳೂರಿನ ಗಂಜಿಮಠದಲ್ಲಿ ಜಾಗ ಗೊತ್ತು ಪಡಿಸಲಾಗಿದೆ. ರಾಜ್ಯ ಸರಕಾರ ಕಳುಹಿಸಿದ ಪ್ರಸ್ತಾವವನ್ನು ಕೇಂದ್ರ ಸರಕಾರ ಅಂಗೀಕರಿಸಿ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಆದಷ್ಟು ಶೀಘ್ರವಾಗಿ ಯೋಜನೆಯನ್ನು ಜಾರಿಗೆ ತರಬೇಕಾಗಿದೆ ಎಂದು ಉಲ್ಲೇಖಿಸಿದ್ದಾರೆ.ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಗುರಿಯನ್ನು ತಲುಪುವಲ್ಲಿ ಪ್ಲಾಸ್ಟಿಕ್ ಪಾರ್ಕ್ಗಳ ಪಾತ್ರ ತುಂಬಾ ಅಗತ್ಯವಾದದ್ದು. ಮುಂದಿನ ೬ ತಿಂಗಳ ಒಳಗಾಗಿ ಡಿಪಿಆರ್ (ಯೋಜನೆಯ ಸಂಪೂರ್ಣ ವರದಿ) ನೀಡಬೇಕಾಗಿದ್ದು, ಆದಷ್ಟು ಶೀಘ್ರವಾಗಿ ಯೋಜನೆಯು ಜಾರಿಗೊಳ್ಳಬೇಕಾಗಿದೆ ಎಂದು ಪತ್ರದಲ್ಲಿ ಪಮೇಲಾ ಕುಮಾರ್ ತಿಳಿಸಿದ್ದಾರೆ. ದೇಶದಲ್ಲಿ ಪ್ಲಾಸ್ಟಿಕ್ ಪಾರ್ಕ್ಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ೨ ಕಡೆಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ತಲೆ ಎತ್ತಲಿದೆ. ಪ್ಲಾಸ್ಟಿಕ್ಗೆ ಸಂಬಂಧಪಟ್ಟ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉzಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಪ್ಲಾಸ್ಟಿಕ್ ಪಾರ್ಕ್ನಲ್ಲಿ ಪ್ಲಾಸ್ಟಿಕ್ನ ಮರುಬಳಕೆಗೆ ಉತ್ತೇಜನ ನೀಡುವ ಕಂಪೆನಿಗಳು, ಪ್ಲಾಸ್ಟಿಕ್ಗೆ ಸಂಬಂಧಪಟ್ಟ ಸಾಮಗ್ರಿ ಹಾಗೂ ಯಂತ್ರೋಪಕರಣಗಳು ಹಾಗೂ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯೂ ಇಲ್ಲಿರಲಿದೆ.
ಬಹುದೊಡ್ಡ ತಲೆನೋವಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಗೆ ಪ್ಲಾಸ್ಟಿಕ್ ಪಾರ್ಕ್ಗಳ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಯಶಸ್ವಿಯಾದರೆ, ಬಳಸಿ ಎಸೆದ ಪ್ಲಾಸ್ಟಿಕ್ನಿಂದ ಹಲವು ಉತ್ಪನ್ನಗಳು ಹೊರಬರಲಿವೆ. ಅಲ್ಲದೇ, ಪ್ಲಾಸ್ಟಿಕ್ನ ಹಲವು ಉಪಯೋಗಗಳು ಅನಾವರಣಗೊಳ್ಳಲಿವೆ.
ಡಿ.ವಿ. ಸದಾನಂದ ಗೌಡ ಟ್ವೀಟ್
ಮಂಗಳೂರಿಗೆ ಪ್ಲಾಸ್ಟಿಕ್ ಪಾರ್ಕ್ ಮಂಜೂರುಗೊಂಡ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅವರು, ಕರ್ನಾಟಕದ ಜನತೆಗೆ ಸಿಹಿ ಸುದ್ದಿಯೊಂದಿದೆ. ನಮ್ಮ ರಾಸಾಯನಿಕ ಇಲಾಖೆ ವತಿಯಿಂದ ದೇಶದಲ್ಲಿ ಎರಡು ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ರಾಜ್ಯಕ್ಕೆ ಒಂದನ್ನು ಮಂಜೂರು ಮಾಡಲಾಗಿದೆ. ಇದನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ. ಮಂಗಳೂರಿನ ಯೋಜಿತ ಪ್ಲಾಸ್ಟಿಕ್ ಪಾರ್ಕ್ಗೆ ತಾತ್ವಿಗೆ ಒಪ್ಪಿಗೆ ನೀಡಿ ರಾಜ್ಯ ಸರರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಆದಷ್ಟು ಬೇಗ ಯೋಜನಾ ವರದಿ ಕಳುಹಿಸುವಂತೆ ತಿಳಿಸಲಾಗಿದೆ. ಆರು ತಿಂಗಳ ಒಳಗೆ ಅಂತಿಮ ಒಪ್ಪಿಗೆ ನೀಡಿ ಯೋಜನೆ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.