ಪುತ್ತೂರು: ಕುಂಬ್ರ ವಿಶ್ವ ಯುವಕ ಮಂಡಲದ ಸಹಕಾರದಲ್ಲಿ ಮಂದಾರ ಬಳಗ ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ ಮೂರನೇ ವರ್ಷದ ‘ಮಂದಾರ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.24ರಂದು ಸಂಜೆ ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಶ್ರೀರಾಮಗಿರಿ ಮಂಟಪದಲ್ಲಿ ಆಯೋಜಿಸಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರಿಗೆ ಮಂದಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂದಾರ ಬಳಗ ಕುಂಬ್ರ ಇದರ ಸಂಚಾಲಕ ಸುಂದರ ರೈ ಮಂದಾರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಥಮ ವರ್ಷದಲ್ಲಿ ಮೂವರಿಗೆ, ದ್ವಿತೀಯ ವರ್ಷದಲ್ಲಿ ನಾಲ್ವರಿಗೆ ಹಾಗೆ ಈ ಪ್ರಸ್ತುತ ವರ್ಷದಲ್ಲಿ ಐದು ಮಂದಿ ಸಾಧಕರಿಗೆ ಸನ್ಮಾನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದ ಅವರು ಜನಸ್ನೇಹಿ ಮತ್ತು ಉತ್ತಮ ಕರ್ತವ್ಯಕ್ಕೆ ಸಂಬಂಧಿಸಿ ಪೊಲೀಸ್ ಪೇದೆ ಪ್ರವೀಣ್ ರೈ ಪಾಲ್ತಾಡು, ಸಮಾಜ ಸೇವೆಯಲ್ಲಿ ಸತೀಶ್ ಶೆಟ್ಟಿ ಬೆಂಗಳೂರು, ಮಹಿಳಾ ಸಾಧಕಿಯಾಗಿ ಉಷಾ ನಾರಾಯಣ ಗೌಡ, ಸರಕಾರಿ ಸೇವೆಯಲ್ಲಿ ಉಮೇಶ್ ಪೂಜಾರಿ ಬರೆಮೇಲು, ಯುವ ಉದ್ಯಮಿಯಾಗಿ ಮೋಹನ್ದಾಸ್ ರೈ ಕುಂಬ್ರ ಅವರಿಗೆ ಮಂದಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಗತಿಪರ ಹಿರಿಯ ಕೃಷಿ ತಜ್ಞ ಕಡಮಜಲು ಸುಭಾಷ್ ರೈ ಅವರು ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ. ಹಿರಿಯ ರಂಗಭೂಮಿ ಕಲಾವಿದ ಬೂಡಿಯಾರು ರಾಧಾಕೃಷ್ಣ ರೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕುಂಬ್ರ ಪಂಚಮಿ ಗ್ರೂಪ್ನ ಮಿತ್ರಂಪಾಡಿ ಪುರಂದರ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅಭಿನಂದನಾ ಮಾತನ್ನಾಡಲಿದ್ದಾರೆ. ಕಲಾ ಪೋಷಕ ಪುಷ್ಪರಾಜ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಲಿದ್ದು, ಅಭ್ಯಾಗತರಾಗಿ ಲಲಿತಾ ರೈ ಮಂದಾರ, ಕುಂಬ್ರ ಚಂದನ ಸಂಕೀರ್ಣದ ಮಾಲಕ ರಾಮಮೋಹನ್ ಭಟ್ ಪಟ್ಟೆ, ಕುಂಬ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪ್ರಗತಿಪರ ಕೃಷಿಕ ವಿನೋದ್ ಶೆಟ್ಟಿ ಅರಿಯಡ್ಕ, ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ನ ತಾಲೂಕು ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಕುಂಬ್ರ ವರ್ತಕ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಂ ಸುಂದರ್ ರೈ ಕೊಪ್ಪಲ, ಕುಂಬ್ರ ವರ್ತಕ ಸಂಘದ ಅಧ್ಯಕ್ಷ ಮಾಧವ ರೈ ಕುಂಬ್ರ, ವಿಶ್ವ ಯುವಕ ಮಂಡಲದ ಅಧ್ಯಕ್ಷ ಅಂಕತ್ ರೈ ಕುಯ್ಯಾರು ಭಾಗವಹಿಸಲಿದ್ದಾರೆ ಎಂದು ಸುಂದರ ರೈ ಮಂದಾರ ಹೇಳಿದರು. ರಾತ್ರಿ ಗಂಟೆ ೮ಕ್ಕೆ ಕಲಾವಿದೆರ್ ಮಂಜೇಶ್ವರ ಇವರಿಂದ ಕೃಷ್ಣ ಜಿ ಮಂಜೇಶ್ವರ ರಚಿಸಿ ನವೀನ್ ಡಿ ಪಡೀಲ್ ನಿರ್ದೇಶಿಸಿ ರಂಗ್ದರಾಜೆ ಸುಂದರ ರೈ ಮಂದಾರ ಅಭಿನಯದ ‘ಅಂಚಗೆ ಇಂಚಗೆ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಕೋವಿಡ್ ನಿಯಮವಾಳಿಗನುಸಾರವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂದಾರ ಬಳಗದ ಸದಸ್ಯ ರಾಜಮೋಹನ್ ರೈ , ವಿಶ್ವ ಯುವಕ ಮಂಡಲದ ಕಾರ್ಯದರ್ಶಿ ರಾಜ್ಪ್ರಕಾಶ್ ರೈ ಉಪಸ್ಥಿತರಿದ್ದರು