HomePage_Banner
HomePage_Banner
HomePage_Banner
HomePage_Banner

ತಿಂಗಳಾಡಿ ಜಂಕ್ಷನ್‌ನಲ್ಲಿ ಅಟೋ ರಿಕ್ಷಾ ತಂಗುದಾಣ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರಿಕ್ಷಾ ಚಾಲಕರು ಗ್ರಾಮದ ಆಪತ್ಫಾಂಧವರು: ಸಂಜೀವ ಮಠಂದೂರು


ಚಿತ್ರ: ಸೂರ್ಯ ತಿಂಗಳಾಡಿ

ಪುತ್ತೂರು: ರಿಕ್ಷಾ ಚಾಲಕರು ಪ್ರತಿ ಗ್ರಾಮದ ಆಪತ್ಫಾಂಧವರಾಗಿದ್ದಾರೆ. ಸರಕಾರ, ಶಾಸಕರ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿ, ಕೆಲಸದ ಬಗ್ಗೆಯೂ ರಿಕ್ಷಾ ಚಾಲಕರು ಅರಿತುಕೊಂಡಿದ್ದಾರೆ ಮತ್ತು ಈ ಬಗ್ಗೆ ಮಾತನಾಡುತ್ತಾರೆ. ಕೊರೋನ ಕಾಲದಲ್ಲಿ ಪ್ರಧಾನಿ ಮೋದಿಜಿಯವರು ಪ್ರಥಮವಾಗಿ ರಿಕ್ಷಾ ಚಾಲಕರಿಗೆ ಮತ್ತು ಬೀದಿ ಬದಿ ವ್ಯಾಪಾರಸ್ಥರ ಅಕೌಂಟ್‌ಗೆ ಹಣ ಹಾಕುವ ವ್ಯವಸ್ಥೆಯನ್ನು ಮಾಡಿದ್ದಾರೆ. ರಿಕ್ಷಾ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿಂಗಳಾಡಿಯಲ್ಲಿ ರಿಕ್ಷಾ ತಂಗುದಾಣ ನಿರ್ಮಾಣ ಮಾಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ತಿಂಗಳಾಡಿಯಲ್ಲಿ ಶಾಸಕರ ಅನುದಾನ ಸುಮಾರು ೫ ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಅಟೋ ರಿಕ್ಷಾ ತಂಗುದಾಣವನ್ನು ಜ.೨೩ ರಂದು ರಿಬ್ಬನ್ ತುಂಡರಿಸಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕೆದಂಬಾಡಿ ಗ್ರಾಮಕ್ಕೆ ಬೇರೆ ಬೇರೆ ಕಾಮಗಾರಿಗಳಿಗೆ ಲಕ್ಷಗಟ್ಟಲೆ ಅನುದಾನವನ್ನು ಕೊಡಲಾಗಿದೆ. ಇದರಲ್ಲಿ ಹಲವು ಕಾಮಗಾರಿಗಳ ಉದ್ಘಾಟನೆಯಾಗಿದೆ ಮುಂದಕ್ಕೆ ೫೦ ಲಕ್ಷದ ಕಾಮಗಾರಿಗಳ ಶಂಕುಸ್ಥಾಪನೆಯಾಗಲಿದೆ ಎಂದು ಶಾಸಕರು ಹೇಳಿದರು. ಕೆದಂಬಾಡಿ ಗ್ರಾಮ ಒಂದು ಮಾದರಿ ಗ್ರಾಮವಾಗಬೇಕು ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರುಗಳು ಶ್ರಮಪಡಬೇಕು ಎಂದರು. ಗ್ರಾಮಕ್ಕೆ ೩೫ ಮನೆ ಕೊಡುವ ಕೆಲಸವನ್ನು ಸರಕಾರ ಮಾಡಿದ್ದು ಮುಂದಿನ ದಿನಗಳಲ್ಲಿ ಫಲಾನುಭವಿಗಳಿಗೆ ಆದೇಶ ಪ್ರತಿ ಕೊಡುವ ಕೆಲಸ ನಡೆಯಲಿದೆ. ನರೇಗಾದಲ್ಲಿ ೧೦೦ ಮಾನವ ದಿನಗಳನ್ನು ೧೫೦ ಮಾನವ ದಿನಗಳಿಗೆ ಹೆಚ್ಚಿಸಲಾಗಿದ್ದು ಪಂಚಾಯತ್‌ಗೆ ನರೇಗಾದಲ್ಲಿ ೧ ಕೋಟಿ ಅನುದಾನವಿದ್ದದ್ದನ್ನು ೧.೦೫ ಕೋಟಿ ಅನುದಾನಕ್ಕೆ ಹೆಚ್ಚಿಸಲಾಗಿದೆ. ಪ್ರತಿ ಪಂಚಾಯತ್‌ಗೆ ೧ ಕೋಟಿ ಅನುದಾನವನ್ನು ಕೇಂದ್ರ ಸರಕಾರ ಕೊಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಜಿಯವರು ಹೇಳಿದ್ದಾರೆ ಎಂದು ಶಾಸಕರು ತಿಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಸದಸ್ಯೆ ಭವಾನಿ ಚಿದಾನಂದ್, ಟಿಎಪಿಸಿಎಂಸಿ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ತಾಲೂಕು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಕೆದಂಬಾಡಿ ಬಿಜೆಪಿ ಗ್ರಾಮ ಪ್ರಮುಖ್ ನಾರಾಯಣ ಪೂಜಾರಿ ಕುರಿಕ್ಕಾರ, ನವೋದಯ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮಹಮ್ಮದ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ತಾಲೂಕು ಬಿಜೆಪಿ ಯುವ ಮೋರ್ಛಾ ಪ್ರ.ಕಾರ್ಯದರ್ಶಿ ರತನ್ ರೈ ಕುಂಬ್ರ, ನೆಟ್ಟಣಿಗೆಮುಡ್ನೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಗುತ್ತಿಗೆದಾರ ಯುವರಾಜ್ ಶೆಟ್ಟಿ ಮೇರ್ಲ, ಕೆದಂಬಾಡಿ ಗ್ರಾಪಂ ಸದಸ್ಯರುಗಳಾದ ಕೃಷ್ಣ ಕುಮಾರ್ ಇದ್ಯಪೆ, ಭಾಸ್ಕರ ರೈ ಮಿತ್ರಂಪಾಡಿ, ವಿಠಲ ರೈ ಮಿತ್ತೋಡಿ, ಜಯಲಕ್ಷ್ಮೀ ಬಲ್ಲಾಳ್ ಬೀಡು, ರೇವತಿ ಬಿ, ಸುಜಾತ, ಗ್ರಾಪಂ ಮಾಜಿ ಸದಸ್ಯರುಗಳಾದ ರಾಘವ ಗೌಡ ಕೆರೆಮೂಲೆ,ಪುಷ್ಪಾ ಬೋಳೋಡಿ, ಮಂಡಲ ಬಿಜೆಪಿ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಮಂಡಲ ಯುವ ಮೋರ್ಛಾ ಮಾಜಿ ಅಧ್ಯಕ್ಷ ಮೋಹನ್ ಆಳ್ವ ಮುಂಡಾಲ, ಬೂತ್ ಸಮಿತಿ ಅಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ, ಟಿಎಪಿಸಿಎಂಸಿ ನಿರ್ದೇಶಕ ಜಯರಾಮ ರೈ ಬಾಲಯ, ಮುಂಡೂರು ಗ್ರಾಪಂ ಸದಸ್ಯ ಮಹಮ್ಮದ್ ಅಲಿ, ಒಳಮೊಗ್ರು ಶಕ್ತಿ ಕೇಂದ್ರದ ಪ್ರಮುಖ್ ರಾಜೇಶ್ ರೈ ಪರ್ಪುಂಜ ಸೇರಿದಂತೆ ರಿಕ್ಷಾ ಚಾಲಕ,ಮಾಲಕರು ಗ್ರಾಮಸ್ಥರು ಉಪಸ್ಥಿತರಿದ್ದರು. ಶರತ್ ಸ್ವಾಗತಿಸಿದರು. ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸೂರ್ಯಪ್ರಸನ್ನ ರೈ ವಂದಿಸಿದರು.

ರೂ.೪.೦೫ ಕೋಟಿ ವೆಚ್ಚದಲ್ಲಿ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ
ತಿಂಗಳಾಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಕಮ್ಯೂಟಿನಿ ಹೆಲ್ತ್ ಸೆಂಟರ್ ಮಾಡಲಾಗುತ್ತದೆ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು ಅನುಮೋದನೆ ಹಂತದಲ್ಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಸುಮಾರು ೪.೦೫ ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ಕಮ್ಯೂಟಿನಿ ಹೆಲ್ತ್ ಸೆಂಟರ್ ಆಗಲಿದ್ದು ೫೦ ಬೆಡ್‌ಗಳ ಆಸ್ಪತ್ರೆಯಾಗಲಿದೆ. ಈ ಭಾಗದ ಹಲವು ಗ್ರಾಮಗಳಿಗೆ ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆ ಬಿಟ್ಟರೆ ತಿಂಗಳಾಡಿಯೇ ದೊಡ್ಡ ಆಸ್ಪತ್ರೆಯಾಗಲಿದೆ ಎಂದರು. ಜನರ ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಜನರಿಗೆ ಸರಿಯಾದ ರೀತಿಯಲ್ಲಿ ಮುಟ್ಟಿಸುವಲ್ಲಿ ಸರಕಾರ ಪ್ರಯತ್ನಿಸುತ್ತಿದೆ. ಈಗಾಗಲೇ ಗ್ರಾಮದ ಎಲ್ಲಾ ವಾರ್ಡ್‌ಗಳಿಗೂ ಸಮಾನ ರೀತಿಯಲ್ಲಿ ಅನುದಾನ ಕೊಡುವ ಆಗಿದೆ ಮುಂದಿನ ದಿನಗಳಲ್ಲಿ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಬಿಜೆಪಿ ಸರಕಾರ ಮತ್ತು ಜನಪ್ರತಿನಿಧಿಗಳು ಸಾಧ್ಯವಾಗುವ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.

ತಿಂಗಳಾಡಿ ಬ್ಲ್ಯಾಕ್ ಸ್ಪಾಟ್ ಆಗಲಿದೆ
ಅಪಘಾತಗಳು ಹೆಚ್ಚು ನಡೆಯುವ ಸ್ಥಳಗಳನ್ನು ಗುರುತಿಸಿ ಅದನ್ನು ಬ್ಲ್ಯಾಕ್ ಸ್ಪಾಟ್‌ಗೆ ಸೇರಿಸುವ ಕೆಲಸ ನಡೆಯುತ್ತಿದೆ. ಈ ಜಾಗದಲ್ಲಿ ವೃತ್ತ ಅಥವಾ ರಸ್ತೆಯನ್ನು ಸಮತಟ್ಟು ಮಾಡುವ ಕೆಲಸ ನಡೆಯಲಿದೆ. ಈಗಾಗಲೇ ತಿಂಗಳಾಡಿ ಜಂಕ್ಷನ್ ಅನ್ನು ಕೂಡ ಬ್ಲ್ಯಾಕ್ ಸ್ಪಾಟ್‌ಗೆ ಸೇರಿಸಲಾಗಿದ್ದು ಮುಂದಿನ ದಿನಗಳಲ್ಲಿ ರಸ್ತೆ ಸಮತಟ್ಟು ಹಾಗೂ ವೃತ್ತ ನಿರ್ಮಾಣ ಕೆಲಸ ನಡೆಯಲಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.

ತಿಂಗಳಾಡಿ ತೆಗ್ಗು ರಸ್ತೆ ದುರಸ್ತಿಗೆ ಮನವಿ
ತಿಂಗಳಾಡಿಯಿಂದ ಅಂಙತ್ತಡ್ಕ ತೆಗ್ಗು ರಸ್ತೆಯು ಸಂಪೂರ್ಣ ಹಾಳಾಗಿದ್ದು ಈ ರಸ್ತೆಯನ್ನು ಶೀಘ್ರವಾಗಿ ದುರಸ್ತಿ ಮಾಡಿಕೊಡುವಂತೆ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಅಧ್ಯಕ್ಷ ಮಹಮ್ಮದ್‌ರವರು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಉತ್ತರಿಸಿದ ಶಾಸಕರು ರಸ್ತೆ ಅವ್ಯವಸ್ಥೆಯ ಬಗ್ಗೆ ನಾನೇ ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿಗೆ ಅನುದಾನ ಕೊಡುವ ಬಗ್ಗೆ ಭರವಸೆ ನೀಡಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.