HomePage_Banner
HomePage_Banner
HomePage_Banner
HomePage_Banner

ಮಣ್ಣಾಪು ಕೊರಗಜ್ಜ ದೈವಸ್ಥಾನದ ನೇಮೋತ್ಸವಕ್ಕೆ ಕ್ಷಣಗಣನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 380 ವರ್ಷಗಳ ಇತಿಹಾಸವಿರುವ ದೈವಸ್ಥಾನ | ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಾಣ | ನಾಳೆ ನೇಮೋತ್ಸವ

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಸರಿಸುಮಾರು ೩೮೦ ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಹಾಗೂ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಜ.೨೫ ರಂದು ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ. ನೇಮೋತ್ಸವಕ್ಕೆ ಶ್ರೀ ಕ್ಷೇತ್ರದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಭಕ್ತರ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.

ರೂ.೫ ಲಕ್ಷ ವೆಚ್ಚದಲ್ಲಿ ನಿರ್ಮಾಣ:
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಪದ್ಮಭೂಷಣ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ೨೦೨೦ನೇ ವರ್ಷದ ಆರಂಭದಲ್ಲಿಯೇ ಶ್ರೀ ಕ್ಷೇತ್ರದಲ್ಲಿ ಕಾರ್ಯಕ್ರಮ ವಿಜ್ರಂಭಣೆಯಲ್ಲಿ ನಡೆಯಬೇಕಾಗಿತ್ತು ಮಾತ್ರವಲ್ಲದೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ ಮಹಾಮಾರಿ ಕೋವಿಡ್‌ನಿಂದಾಗಿ ಸ್ಥಗಿತಗೊಂಡಿತ್ತು. ಇಲ್ಲಿನ ಕಾರಣಿಕ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಮೂಲ ಶಿಲಾ ಪುನರ್ ಪ್ರತಿಷ್ಠೆಯು ಒಟ್ಟು ರೂ.೫ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಶ್ರೀ ಕೊರಗಜ್ಜ ದೈವದ ನೂತನ ಕಟ್ಟೆ ನಿರ್ಮಾಣ ಕಾರ್ಯವು ಈಗಾಗಲೇ ಮುಗಿದಿದ್ದು ಹೆಚ್ಚೆಚ್ಚು ಭಕ್ತರನ್ನು ಸೆಳೆಯುವಂತೆ ಮಾಡುತ್ತಿದೆ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸುಲಭವಾಗಿ ದಾರಿ ಸಿಗುವ ಸಲುವಾಗಿ ಮೊಟ್ಟೆತ್ತಡ್ಕ ಜಂಕ್ಷನ್‌ನಲ್ಲಿನ ಬಸ್‌ಸ್ಟ್ಯಾಂಡ್ ಎದುರು `ಕೊರಗಜ್ಜ ದೈವಸ್ಥಾನ ಮಣ್ಣಾಪು’ ಎಂಬ ಬೋರ್ಡ್‌ನ್ನು ಅಳವಡಿಸಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ ನಿರೀಕ್ಷೆ:
ಶ್ರೀ ಕ್ಷೇತ್ರದಲ್ಲಿ ಈಗಾಗಲೇ ಚಪ್ಪರದ ಕಾರ್ಯ, ಅಲಂಕಾರ ಕಾರ್ಯಗಳು ಮುಗಿದಿದ್ದು ಶ್ರೀ ಕ್ಷೇತ್ರವು ರಾತ್ರಿ ಹೊತ್ತು ಬಣ್ಣಬಣ್ಣದ ಲೈಟಿಂಗ್ಸ್ ಹಾಗೂ ಬಂಟಿಂಗ್ಸ್‌ಗಳಿಂದ ಅಲಂಕೃತಗೊಳ್ಳುವ ಮೂಲಕ ಕಂಗೊಳಿಸುತ್ತಿದೆ. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟ ಸ್ಥಳೀಯರು ಅಲ್ಲದೆ ಆಸುಪಾಸಿನ ಭಕ್ತರು ಶ್ರೀ ಕ್ಷೇತ್ರದ ಮಹಿಮೆಯನ್ನು ಎಲ್ಲೆಡೆ ಪಸರಿಸಲು ಕೈಜೋಡಿಸುತ್ತಿದ್ದಾರೆ. ೩೮೦ ವರ್ಷಗಳ ಇತಿಹಾಸವಿರುವ ಪುರಾತನ ಕಾಲದ ಇಲ್ಲಿನ ಶ್ರೀ ಕೊರಗಜ್ಜ ದೈವಕ್ಕೆ ವಿಶೇಷ ಶಕ್ತಿಯಿದೆ ಎಂದು ಈ ಭಾಗಕ್ಕೆ ಭೇಟಿ ನೀಡಿದ ಭಕ್ತರು ಹೇಳಿಕೊಳ್ಳುತ್ತಿದ್ದಾರೆ. ನಾಳೆ ನಡೆಯುವ ನೇಮೋತ್ಸವಕ್ಕೆ ಸುಮಾರು ಮೂರು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂದು ಇಲ್ಲಿನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಹಾಗೂ ಸ್ಥಳೀಯರು `ಸುದ್ದಿ’ಗೆ ತಿಳಿಸಿದ್ದಾರೆ.

ಮಣ್ಣಾಪುದ ಮಾಯೆ ಆಲ್ಬಂ ಬಿಡುಗಡೆ:
ಎಸ್.ಬಿ.ಎಂ ಕ್ರಿಯೇಷನ್ಸ್‌ನಡಿಯಲ್ಲಿ ರಚಿಸಲಾದ `ಮಣ್ಣಾಪುದ ಮಾಯೆ’ ವೀಡಿಯೋ ಆಲ್ಬಂ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಕೊರಗಜ್ಜ ದೈವಸ್ಥಾನದ ನೇಮೋತ್ಸವ ದಿನದಂದು ಲೋಕಾರ್ಪಣೆಯಾಗಲಿದ್ದು, ಯೂಟ್ಯೂಬ್ ಚ್ಯಾನೆಲ್‌ನಲ್ಲಿ ಈ ವೀಡಿಯೋ ಆಲ್ಬಂನ್ನು ವೀಕ್ಷಿಸಬಹುದಾಗಿದೆ. ಈ ವೀಡಿಯೋ ಆಲ್ಬಂಗೆ ತರುಣ ನವೀನ್ ಎಂ.ರವರು ಸಾಹಿತ್ಯ ಬರೆದು, ಹಿನ್ನಲೆ ಸಂಗೀತ ನೀಡಿ ನಿರ್ದೇಶಿಸಿದ್ದಾರೆ. ಹಾಡುಗಾರರಾದ ಭರತ್ ಎ.ಜಿ ಹಾಗೂ ಸವಿತರವರ ಮಧುರ ಕಂಠವು ಈ ಆಲ್ಬಂ ಹೊಂದಿದೆ. ರಾಕೇಶ್ ಎಣ್ಮೂರುರವರ ಸಹ ನಿರ್ದೇಶನ ಹಾಗೂ ಪ್ರೋತ್ಸಾಹ, ಜನನಿ ಕ್ರಿಯೇಷನ್ಸ್‌ನ ಮಹೇಶ್‌ರವರ ಕ್ಯಾಮೆರಾ ಕೈಚಳಕದಲ್ಲಿ ಎಡಿಟಿಂಗ್, ಕಬಕ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಇದರ ಮಿಥುನ್ ರಾಜ್ ವಿದ್ಯಾಪುರರವರ ಮಿಕ್ಸಿಂಗ್ ಮತ್ತು ಮಸ್ಟರಿಂಗ್ ಉತ್ತಮವಾಗಿ ಮೂಡಿ ಬಂದಿದೆ.

ಶ್ರೀ ಕ್ಷೇತ್ರದಲ್ಲಿಯೇ ಹೊರೆ ಕಾಣಿಕೆಯನ್ನು  ಸಲ್ಲಿಸುವಂತೆ ಭಕ್ತರಲ್ಲಿ ಮನವಿ…
ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಭಕ್ತಾಧಿಗಳಿಂದ ಹಸಿರು ಕಾಣಿಕೆಯನ್ನು ಸ್ವೀಕರಿಸಲಾಗುತ್ತಿದ್ದು, ಹಸಿರು ಕಾಣಿಕೆಯನ್ನು ಬಹಳ ಅದ್ದೂರಿಯಿಂದ ಬ್ಯಾಂಡ್-ವಾದ್ಯಗಳ ಮುಖೇನ ಮೆರವಣಿಗೆಯಲ್ಲಿ ಮೊಟ್ಟೆತ್ತಡ್ಕ-ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿಯಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಕೋವಿಡ್ ಮಹಾಮಾರಿಯಿಂದಾಗಿ ಹಸಿರು ಕಾಣಿಕೆಯ ಮೆರವಣಿಗೆಯನ್ನು ರದ್ದುಗೊಳಿಸುತ್ತಾ ಆಚರಣೆಯನ್ನು ಸರಳವಾಗಿ ಮತ್ತು ಶಿಸ್ತುಬದ್ಧವಾಗಿ ಮಾಡುವ ಮೂಲಕ ಮಾರ್ಪಾಡು ಮಾಡಲಾಗಿದ್ದು, ಭಕ್ತಾಧಿಗಳು ತಮ್ಮ ಹಸಿರು ಕಾಣಿಕೆಯನ್ನು ಒಂದು ದಿನದ ಮುಂಚಿತವಾಗಿ ಅಂದರೆ ಆದಿತ್ಯವಾರ ದಿನದಂದು ಶ್ರೀ ಕ್ಷೇತ್ರಕ್ಕೆ ತಂದು ಒಪ್ಪಿಸಬಹುದಾಗಿದೆ. ಕಳೆದ ವರ್ಷ ಕೊರೋನಾ ಬಿಕ್ಕಟ್ಟಿನಿಂದಾಗಿ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಭಕ್ತಾಧಿಗಳು ಇದುವೇ ವೈಯಕ್ತಿಕ ಆಮಂತ್ರಣವೆಂದು ಪರಿಗಣಿಸಿ ಆಗಮಿಸಬೇಕಾಗಿ ವಿನಂತಿ. -ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ

ಬೆಳ್ಳಿ, ಬಂಗಾರದ ಹರಕೆ ಬೇಡ..
ಶ್ರೀ ಕೊರಗಜ್ಜ ದೈವರಿಗೆ ಅವರ ಪ್ರೀತಿಯ ವಸ್ತುಗಳನ್ನು ನೀಡಿದಾಗ ಮತ್ತು ಹೃದಯಾಂತರಾಳದಿಂದ ಪ್ರಾರ್ಥಿಸಿದಾಗ ಕೊರಗಜ್ಜ ದೈವ ಭಕ್ತರನ್ನು ಆಶೀರ್ವದಿಸುತ್ತಾರೆ. ಆದ್ದರಿಂದ ಇಲ್ಲಿನ ಶ್ರೀ ಕ್ಷೇತ್ರದಲ್ಲಿ ಬೆಳ್ಳಿ, ಬಂಗಾರ, ವಜ್ರ ವೈಡೂರ್ಯಗಳನ್ನು ಹರಕೆಯ ರೂಪದಲ್ಲಿ ಭಕ್ತರಲ್ಲಿ ಕೇಳಲಾಗುವುದಿಲ್ಲ. ಭಕ್ತರ ಭಕ್ತಿಯನುಸಾರ ಕಾಣಿಕೆಯನ್ನು ನೀಡಿದ್ದಲ್ಲಿ ಮಾತ್ರ ಸ್ವೀಕರಿಸಲಾಗುವುದು ಎಂದು ಶ್ರೀ ಕ್ಷೇತ್ರವು ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ ೨೩ ರಂದು ಬೆಳಿಗ್ಗೆ ಅರ್ಚಕ ಉದಯ ನಾರಾಯಣ ಕಲ್ಲೂರಾಯರವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಜರಗಿದ್ದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪ್ರತೀ ಸಂಕ್ರಮಣದಂದು ಅಗೇಲು ಸೇವೆ ನಡೆಯಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.