- ಮಳೆ ಕಡಿಮೆ ಆಗುತ್ತಿದ್ದಂತೆ ಮರಳು ಮಾಫಿಯಾ ಚುರುಕು
- ನದಿಯಲ್ಲಿ ಅಕ್ರಮವಾಗಿ ಸಂಪರ್ಕ ರಸ್ತೆ ನಿರ್ಮಾಣ
- ನದಿಯಲ್ಲಿ ಹಿಟಾಚಿ ಯಂತ್ರ ಅಳವಡಿಸಿ ಮರಳು ಸಂಗ್ರಹ
- ರಸ್ತೆಗಳು ಹಾನಿ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಅಕ್ರಮ ಮರಳು ದಂಧೆಯ ಮಹಾಪೂರ ನಡೆಯುತ್ತಿರುವ ಬಗ್ಗೆ ದೂರುಗಳು ವ್ಯಕ್ತವಾಗಿದೆ.
ಉಪ್ಪಿನಂಗಡಿ ಕಡೆಯಿಂದ ಹರಿದು ಬರುವ ನೇತ್ರಾವತಿ ನದಿಯಲ್ಲಿ ಬಿಳಿಯೂರು ಎಂಬಲ್ಲಿ ನದಿಯಿಂದ ಮರಳು ಸಂಗ್ರಹಿಸಲಾಗುತ್ತಿದ್ದು, ಸಂಗ್ರಹಿಸಿದ ಮರಳನ್ನು ಹಿಟಾಚಿ ಮೂಲಕ ಲಾರಿಗಳಿಗೆ ಹಾಕಲಾಗಿ ಸಾಗಿಸಲಾಗುತ್ತಿದೆ. ಹಗಲು ಮತ್ತು ರಾತ್ರಿಯಲ್ಲಿಯೂ ಮರಳು ತೆಗೆಯಲಾಗುತ್ತಿದ್ದು, ದಿನನಿತ್ಯ ೨೫ರಿಂದ ೩೦ ಲಾರಿ ಮರಳು ಅಕ್ರಮವಾಗಿ ಸಂಗ್ರಹಿಸಲಾಗಿ ಯಾವುದೇ ದಾಖಲೆ ಪತ್ರಗಳಿಲ್ಲದೆ ನೇರವಾಗಿ ಬೆಂಗಳೂರು ಕಡೆಗೆ ಸಾಗಾಟ ನಡೆಯುತ್ತಿರುವುದಾಗಿ ದೂರುಗಳು ವ್ಯಕ್ತವಾಗಿದೆ.
ನದಿಯಲ್ಲಿ ಸುಮಾರು ಅರ್ಧ ಕಿಮೀ. ತನಕ ಮರಳು ತೆಗೆಯಲಾಗುತ್ತಿದ್ದು, ನದಿಯ ಬದಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದ್ದು, ಪ್ರಕೃತಿದತ್ತವಾಗಿ ಹರಿಯುವ ನದಿ ನೀರನ್ನು ಇಲ್ಲಿ ತಡೆ ಹಿಡಿಯಲಾಗಿದ್ದು, ಈ ರೀತಿಯಾಗಿ ವಿಸ್ತಾರವಾಗಿ ಮರಳು ತೆಗೆಯುತ್ತಿರುವ ದೃಶ್ಯ ಕಂಡು ಬಂದಿದೆ.
ಮಳೆ ಕಡಿಮೆ ಆಗುತ್ತಿದ್ದಂತೆ ಮರಳು ಮಾಫಿಯಾ ಚುರುಕು:
ಮಳೆ ಕಡಿಮೆ ಆದ ಬಳಿಕ ಕಳೆದ ೨ ತಿಂಗಳಿನಿಂದ ಮರಳು ತೆಗೆಯಲಾಗುತ್ತಿದ್ದು, ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಮರಳುಗಾರಿಕೆ ನಿಲುಗಡೆಗೊಂಡಿತ್ತು. ಇದೀಗ ಮಳೆ ಕಡಿಮೆ ಆಗುತ್ತಿದ್ದಂತೆ ಇಲ್ಲಿ ಮತ್ತೆ ಮರಳುಗಾರಿಕೆ ಆರಂಭಗೊಂಡಿದೆ ಎಂದು ಹೇಳಲಾಗಿದೆ.
ರಸ್ತೆಗಳು ಹಾನಿ:
ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ನದಿ ತಟದಿಂದ ಕೇವಲ ೧೦೦ ಮೀಟರ್ ಅಂತರದಲ್ಲಿ ಬಿಳಿಯೂರು-ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ಇದ್ದು, ಈ ರಸ್ತೆಯ ಮೂಲಕ ಮರಳು ಸಾಗಾಟ ನಡೆಯುತ್ತಿದ್ದು, ದಿನನಿತ್ಯ ರಾತ್ರಿ ಹಗಲೆನ್ನದೆ ೩೫ಕ್ಕೂ ಅಧಿಕ ಲಾರಿಗಳಲ್ಲಿ ಅಧಿಕ ಭಾರದಲ್ಲಿ ಮರಳು ತುಂಬಿದ ಲಾರಿ ಓಡಾಡುತ್ತಿದ್ದು, ರಸ್ತೆಯ ಮೇಲಿನ ಪ್ರಮಾಣಕ್ಕಿಂತ ಅಧಿಕ ತೂಕದಲ್ಲಿ ಲಾರಿ ಮರಳು ಸಾಗಾಟ ಮಾಡುವುದರಿಂದಾಗಿ ರಸ್ತೆಯೂ ಹಾನಿಗೀಡಾಗುತ್ತಿದ್ದು, ಸ್ಥಳೀಯ ವಾಹನ ಓಡಾಟಗಳಿಗೂ ಸಮಸ್ಯೆ ಎದುರಾಗಿದ್ದು, ವಾಹನ ಅಪಘಾತಗಳ ಸಂಖ್ಯೆಯೂ ಹೆಚ್ಚಳವಾಗತೊಡಗಿದೆ ಎಂದು ಹೇಳಲಾಗಿದೆ.
ಎಲ್ಲೆಡೆಯಲ್ಲಿ ಅಕ್ರಮ ಮರಳುಗಾರಿಕೆ…!!
ನೇತ್ರಾವತಿಯಲ್ಲಿ ನದಿಯಲ್ಲಿ ತೆಕ್ಕಾರು, ಬಿಳಿಯೂರು, ಕಡೇಶಿವಾಲಯ ಮೊದಲಾದ ಕಡೆಗಳಲ್ಲಿ ಮತ್ತು ಕುಮಾರಧಾರ ನದಿಯಲ್ಲಿ ಕಡಬದಿಂದ ಆರಂಭಗೊಂಡು ಆಲಂಕಾರು, ಕೊಲ, ಹಿರೇಬಂಡಾಡಿ, ಅಡೇಕಲ್ ಮತ್ತು ಗುಂಡ್ಯ ಹೊಳೆಯಲ್ಲಿ ಗುಂಡ್ಯ, ಉದನೆ, ಇಚ್ಲಂಪಾಡಿ, ನೂಜಿಬಾಳ್ತಿಲ ಮೊದಲಾದ ಕಡೆಗಳಲ್ಲಿ ಮರಳು ಮಾಫಿಯ ಚುರುಕುಗೊಂಡಿದೆ ಎಂಬ ದೂರುಗಳು ವ್ಯಕ್ತವಾಗಿದ್ದು, ಪ್ರಕೃತಿದತ್ತವಾಗಿ ಇರುವ ಸಂಪತ್ತು ಲೂಟಿ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಗಣಿ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.