- ಟ್ಯೂಷನ್ ಸೆಂಟರ್ ಮೂಲಕ ಆಲಂಕಾರು ಪರಿಸರದಲ್ಲಿ ‘ಜ್ಞಾನಸುಧೆ’ಪಸರಿಸಲಿ: ಸುಬ್ರಹ್ಮಣ್ಯಶ್ರೀ
- ಪುತ್ತೂರಿನಲ್ಲೂ ಶಾಖೆ ಆರಂಭಿಸಲಿ: ಜಯಂತ ನಡುಬೈಲು
- ವಿದ್ಯೆ, ಆರೋಗ್ಯ ಎಲ್ಲರಿಗೂ ಮುಖ್ಯ: ಕೆ.ಸೇಸಪ್ಪ ರೈ
- ಶಿಕ್ಷಕ ಎಲ್ಲರಿಗೂ ಮಾರ್ಗದರ್ಶಕ: ಪ್ರಮೀಳಾ ಜನಾರ್ದನ
- ಶಿಕ್ಷಣ,ಮನೋತಜ್ಞರಿಂದ ಆಪ್ತಸಮಾಲೋಚನೆಯೂ ಆಗಬೇಕು: ದುಗ್ಗಪ್ಪ ಗೌಡ
- ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ: ಜಗನ್ನಾಥ ಶೆಟ್ಟಿ
- ವಾರದೊಳಗೆ ಕಡಬದಲ್ಲೂ ಶಾಖೆ ಆರಂಭ: ಜನಾರ್ದನ ಬಿ.ಎಲ್.
ಕಡಬ: ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಎಲ್ಕೆಜಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳ ಟ್ಯೂಷನ್ ಸೆಂಟರ್ ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ ಜ.೨೪ರಂದು ಆಲಂಕಾರು ಮುಖ್ಯರಸ್ತೆಯಲ್ಲಿರುವ ಶ್ರೀದುರ್ಗಾ ಟವರ್ಸ್ನಲ್ಲಿ ಶುಭಾರಂಭಗೊಂಡಿತು.
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿ ದೀಪಪ್ರಜ್ವಲನೆ ಮಾಡಿದರು. ಬಳಿಕ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಮಕ್ಕಳಲ್ಲಿನ ಬುದ್ದಿಶಕ್ತಿ ಸದ್ಬಳಕೆಯಾಗಲು ಒಳ್ಳೆಯ ತರಬೇತಿ, ಸಂಸ್ಕಾರ ಸಿಗಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ. ಶಿಕ್ಷಕರೂ ಪ್ರತಿನಿತ್ಯದ ಆಗು ಹೋಗುಗಳ ಬಗ್ಗೆ ಅಧ್ಯಯನ ಮಾಡಿಕೊಂಡಿರಬೇಕು. ಸುಸಂಸ್ಕೃತ ಶಿಕ್ಷಣ ಪಡೆದು ತನಗೆ ಮಾತ್ರವಲ್ಲದೆ ಜಗತ್ತಿಗೆ ಸನ್ಮಂಗಳ ಉಂಟು ಮಾಡಬೇಕೆಂದು ಹೇಳಿದರು. ಕೊರೋನಾದಿಂದ ಮಕ್ಕಳಿಗೆ ಸರಿಯಾಗಿ ಪಾಠ ಪ್ರಚವನ ನಡೆಯುತ್ತಿಲ್ಲ. ಆನ್ಲೈನ್ ಶಿಕ್ಷಣದ ಬಗ್ಗೆಯೂ ಅಪಸ್ವರವಿದೆ. ಇಂತಹ ಸಂದರ್ಭದಲ್ಲಿ ಟ್ಯೂಷನ್ ಕೇಂದ್ರಗಳಿಗೆ ಅಪಾರವಾದ ಬೇಡಿಕೆ ಇದೆ. ಗ್ರಾಮೀಣ ಪ್ರದೇಶವಾದ ಆಲಂಕಾರಿನಲ್ಲಿ ಜನಾರ್ದನ ಬಿ.ಎಲ್.,ಹಾಗೂ ರಾಘವೇಂದ್ರ ಮುಚ್ಚಿಂತಾಯರವರು ಸೇರಿಕೊಂಡು ಆರಂಭಿಸಿರುವ ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ ಈ ಪರಿಸರದಲ್ಲಿ ಜ್ಞಾನಸುಧೆ ಪಸರಿಸಲಿ. ಅನೇಕ ಕಡೆಗಳಲ್ಲಿ ಶಾಖೆಗಳನ್ನು ತೆರೆದು ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಲಿ, ವಿದ್ಯಾರ್ಥಿಗಳಿಗೂ ಕೀರ್ತಿ ಸಿಗಲಿ ಎಂದು ಸ್ವಾಮೀಜಿ ಹೇಳಿದರು.
ಸಮಾರಂಭದ ಉದ್ಘಾಟಿಸಿದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲುರವರು ಮಾತನಾಡಿ, ಗ್ರಾಮೀಣ ಪ್ರದೇಶವಾದ ಆಲಂಕಾರಿನಲ್ಲಿ ವಿದ್ಯೆಗೆ ಆಸರೆಯಾಗಿ ಈ ಟ್ಯೂಷನ್ ಕೇಂದ್ರ ಆರಂಭಗೊಂಡಿದೆ. ಮಕ್ಕಳ ಭವಿಷ್ಯ ನಿರ್ಮಾಣದ ಇಂತಹ ಸಂಸ್ಥೆಗಳಿಗೆ ಗ್ರಾಮಸ್ಥರೂ ಬೆಂಬಲ ನೀಡಬೇಕು. ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ ಪುತ್ತೂರಿನಲ್ಲಿಯೂ ಶಾಖೆ ಆರಂಭಿಸಲಿ. ಈ ಮೂಲಕ ಎಲ್ಲೆಡೆ ಜ್ಞಾನ ಪಸರಿಸುವ ಕೆಲಸ ಆಗಲಿ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ವಿದ್ಯಾಸಂಸ್ಥೆ ಆರಂಭಿಸುವುದು ಸುಲಭ, ಆದರೆ ಮುಂದುವರಿಸಿಕೊಂಡು ಹೋಗುವುದು ಕಷ್ಟ. ವಿದ್ಯೆ, ಆರೋಗ್ಯ ಇದ್ದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿದೆ. ಸಾಧಿಸುವ ಹಠಬೇಕು, ದೃಢವಾದ ದೃಷ್ಟಿಕೋನ ಇರಬೇಕು. ಆಲಂಕಾರಿನಲ್ಲಿ ಆರಂಭಗೊಂಡ ವಿದ್ಯಾಬೋಧನಾ ಕೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನರವರು ಮಾತನಾಡಿ, ಶಿಕ್ಷಕ ಎಲ್ಲರಿಗೂ ಮಾರ್ಗದರ್ಶಕ. ಟ್ಯೂಷನ್ ಕೇಂದ್ರಗಳ ಮೂಲಕ ಉತ್ತಮ ಶಿಕ್ಷಣ ನೀಡಲು ಸಾಧ್ಯವಿದೆ. ಆಲಂಕಾರಿನಲ್ಲಿ ಆರಂಭಗೊಂಡಿರುವ ಈ ವಿದ್ಯಾಕೇಂದ್ರ ಉತ್ತರೋತ್ತರವಾಗಿ ಬೆಳೆಯಲಿ ಎಂದರು. ಅರಸಿನಮಕ್ಕಿ ಸರಕಾರಿ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಎಸ್.ದುಗ್ಗಪ್ಪ ಗೌಡರವರು ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳೇ ಟ್ಯೂಷನ್ ಕೇಂದ್ರಕ್ಕೆ ಹೋಗುತ್ತಾರೆ. ಇವರಿಗೆ ನುರಿತ ಶಿಕ್ಷಕರಿಂದ ಟ್ಯೂಷನ್ ಕೊಡುವ ಜೊತೆಗೆ ಶಿಕ್ಷಣ, ಮನೋ ತಜ್ಞರ ಜೊತೆ ಆಪ್ತಸಮಾಲೋಚನೆ ಮಾಡುವ ಕೆಲಸವೂ ಆಗಬೇಕು. ಇದರ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದ ವಿಶೇಷ ಕಾರ್ಯಾಗಾರವೂ ನಡೆಯಬೇಕೆಂದು ಹೇಳಿದರು. ಆಲಂಕಾರು ಗ್ರಾ.ಪಂ.ಪಿಡಿಒ ಜಗನ್ನಾಥ ಶೆಟ್ಟಿಯವರು ಮಾತನಾಡಿ, ಹಿಂದುಳಿದ ಪ್ರದೇಶವಾದ ಆಲಂಕಾರಿನಲ್ಲಿ ಆರಂಭಗೊಂಡಿರುವ ಜ್ಞಾನಸುಧಾ ವಿದ್ಯಾಬೋಧನ ಕೇಂದ್ರ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಶ್ರೀದುರ್ಗಾ ಟವರ್ಸ್ನ ಮಾಲಕ ರಾಧಾಕೃಷ್ಣ ರೈ ಪರಾರಿಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಚಾಲಕ ಜನಾರ್ದನ ಬಿ.ಎಲ್.ರವರು, ೫ ವರ್ಷಗಳ ಹಿಂದೆ ಹಿಂದುಳಿದ ಪ್ರದೇಶವಾಗಿದ್ದ ಆಲಂಕಾರಿನಲ್ಲಿ ಈಗ ಎಲ್ಲಾ ಸೌಲಭ್ಯಗಳಿದ್ದು ಬೆಳೆಯುತ್ತಿರುವ ಪಟ್ಟಣವಾಗಿದೆ. ಇಲ್ಲಿ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶವಿಟ್ಟುಕೊಂಡು ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ ಆರಂಭಿಸಲಾಗಿದೆ. ಇನ್ನೊಂದು ವಾರದಲ್ಲಿ ಇದರ ಶಾಖೆ ಕಡಬದಲ್ಲೂ ಆರಂಭಿಸಲಾಗುವುದು. ೨ ವರ್ಷದ ಒಳಗೆ ಆಲಂಕಾರಿನಲ್ಲಿ ಎಲ್ಕೆಜಿಯಿಂದ ೭ನೇ ತರಗತಿ ತನಕದ ಸಿಬಿಎಸ್ಇ ಸಿಲೆಬಸ್ನ ಆಂಗ್ಲಮಾಧ್ಯಮ ಶಾಲೆ ತೆರೆಯುವ ಕನಸೂ ಇದೆ. ಇದಕ್ಕೆಲ್ಲಾ ಶಿಕ್ಷಣ ಪ್ರೇಮಿಗಳ, ಪೋಷಕರ ಸಹಕಾರ ಬೇಕಿದೆ ಎಂದರು.
ಸಿಬ್ಬಂದಿಗಳಿಗೆ ಗೌರವಾರ್ಪಣೆ:
ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರದ ಪ್ರಾಂಶುಪಾಲ ರಾಘವೇಂದ್ರ ಮುಚ್ಚಿಂತಾಯ, ಶಿಕ್ಷಕರಾದ ಡಾ.ವಿದ್ಯಾವತಿ, ಸರಿತಾ ಜನಾರ್ದನ, ಮೋಕ್ಷ ಎಸ್.ಆರ್., ಅನುಷಾ ಎ., ಜ್ಯೋತ್ಸ್ನಾ ಎ.,ರವರನ್ನು ಸ್ವಾಮೀಜಿ ಗೌರವಿಸಿದರು. ಪ್ರಾಂಶುಪಾಲ ರಾಘವೇಂದ್ರ ಮುಚ್ಚಿಂತಾಯ ವಂದಿಸಿದರು. ಸಿಆರ್ಪಿ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು.
ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಕೊಣಾಲುಗುತ್ತು, ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ, ತಾ.ಪಂ.ಸದಸ್ಯ ಗಣೇಶ್ ಕೈಕುರೆ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಮಲಾಕ್ಷ ರೈ ಪರಾರಿಗುತ್ತು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರೈ ಮನವಳಿಕೆ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೆಯ್ಯಲ್ಗ, ನಿಕಟಪೂರ್ವಾಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೆಯ್ಯಲ್ಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ಕುಮಾರ್ ಅಗತ್ತಾಡಿ, ಜೆಸಿಐ ಪೂರ್ವ ವಲಯಾಧಿಕಾರಿ ಪ್ರಶಾಂತ್ ರೈ, ಆಲಂಕಾರು ಜೆಸಿಐ ಅಧ್ಯಕ್ಷ ಗಣೇಶ್ ಕಟ್ಟಪುಣಿ, ಮಾಜಿ ಅಧ್ಯಕ್ಷೆ ಹೇಮಲತಾಪ್ರದೀಪ್, ಆಲಂಕಾರು ಗಣೇಶ್ ಎಲೆಕ್ಟ್ರಿಕಲ್ಸ್ನ ಪೂವಪ್ಪ ನಾಯ್ಕ್ ಶಾಂತಿಗುರಿ, ಆಲಂಕಾರು ಕೋಟಿಚೆನ್ನಯ ಮಿತ್ರವೃಂದದ ಅಧ್ಯಕ್ಷ ರವಿ ಮಾಯಿಲ್ಗ, ಆಲಂಕಾರು ಆಕಾರ್ ಎಸೋಸಿಯೇಟ್ಸ್ನ ಲಕ್ಷ್ಮಿನಾರಾಯಣ ಅಲೆಪ್ಪಾಡಿ, ಮಾಯಿಲ್ಗ ಶ್ರೀ ರಕ್ತೇಶ್ವರಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಲಿಂಗಪ್ಪ ಪೂಜಾರಿ ಮಾಯಿಲ್ಗ, ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಶಿವಪ್ರಸಾದ್ ನೂಚಿಲ, ಕಿರಿಯ ಆರೋಗ್ಯ ಸಹಾಯಕಿ ಸರೋಜಿನಿ ರಮೇಶ್ ಮೂಲೆತ್ತಮಜಲು, ಕೃಷ್ಣಕುಮಾರ್ ಅತ್ರಿಜಾಲು, ಬಾಲಕೃಷ್ಣ ಮುಚ್ಚಿಂತಾಯ, ನವೀನ ಮಾಯಿಲ್ಗ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.
ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರದಲ್ಲಿ ಎಲ್ಕೆಜಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮ ವಿಷಯಗಳಲ್ಲಿ ಬೋಧನೆ ಮಾಡಲಾಗುವುದು. ಈಗಾಗಲೇ ದಾಖಲಾತಿ ಆರಂಭಗೊಂಡಿದೆ. ನುರಿತ ಮತ್ತು ವೃತ್ತಿಪರ ಶಿಕ್ಷಕರಿಂದ ಬೋಧಿಸಲಾಗುವುದು, ನವೀನ ರೀತಿಯ ಕಲಿಕಾ ವಿಧಾನ, ಕ್ರಮಬದ್ಧ ಪಠ್ಯ ಯೋಜನೆ, ನಿಖರ ಫಲಿತಾಂಶದ ಭರವಸೆಯೊಂದಿಗೆ ಟ್ಯೂಷನ್ ನೀಡಲಾಗುವುದು. ಮಾಹಿತಿಗಾಗಿ 9481229381(ಸಂಚಾಲಕರು), 9741427339(ಪ್ರಾಂಶುಪಾಲರು)ನಂಬ್ರಕ್ಕೆ ಸಂಪರ್ಕಿಸಬಹುದು –ಜನಾರ್ದನ ಬಿ.ಎಲ್.,ಸಂಚಾಲಕರು ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ, ಆಲಂಕಾರು