- ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಸಿಕ್ಕಿರುವುದು ಸಂತೋಷ: ಕೆ.ಸೀತಾರಾಮ ರೈ
- ಲಗೋರಿ ಸರ್ವಾಂಗೀಣ ಕ್ರೀಡೆ : ಡಾ.ಯು.ಪಿ.ಶಿವಾನಂದ
ಪುತ್ತೂರು: ಆಧುನಿಕ ಅಬ್ಬರದ ಆಟಗಳ ಪ್ರವಾಹದಿಂದ ನಶಿಸುತ್ತಿರುವ ನಾಡಿನ ಸಂಸ್ಕೃತಿ ಬಿಂಬಿಸುವ ಅಪ್ಪಟ ಗ್ರಾಮೀಣ ಕ್ರೀಡೆ ಲಗೋರಿ ಆಟ ಜ.೨೬ ರಂದು ಮರೀಲ್ ಪುತ್ತೂರು ಕ್ಲಬ್ ನಲ್ಲಿ ಆರಂಭಗೊಂಡಿತು. ಇದು ಲಗೋರಿ ಆಟದ ಮೂಲಕ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಸಿಕ್ಕಂತಾಗಿದೆ. ಲಗೋರಿ ಆಟದ ನೇರ ಪ್ರಸಾರ ಸುದ್ದಿ ಚಾನೆಲ್ ನಲ್ಲಿ ಪ್ರಸಾರಗೊಳ್ಳುತ್ತಿದೆ.
ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಸಿಕ್ಕಿರುವುದು ಸಂತೋಷ:
ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರೂ ದಕ್ಷಿಣ ಕನ್ನಡ ಲಗೋರಿ ಅಸೋಸಿಯೇಶನ್ ಅಧ್ಯಕ್ಷ ಕೆ ಸೀತಾರಾಮ ರೈ ಸವಣೂರು ಅವರು ಕ್ರೀಡಾ ಕೂಟವನ್ನು ಲಗೋರಿ ಆಡುವ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ೨೦೧೨ ರಲ್ಲಿ ಪಿಲೋಮಿನಾ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಮೇಳದಲ್ಲಿ ಗ್ರಾಮೀಣ ಕ್ರೀಡೆ ಲಗೋರಿಯನ್ನು ಸಾಂಕೇತಿಕವಾಗಿ ಆಡಲಾಯಿತು. ಅದಾದ ಬಳಿಕ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆಯವರು ಕ್ರೀಡಾ ಪ್ರೋತ್ಸಾಹದ ಭರವಸೆ ನೀಡಿದರು. ಅವರ ಪ್ರೋತ್ಸಾಹದಂತೆ ಲಗೋರಿ ಆಟದ ಕುರಿತು ಬರಮೇಲು ದೊಡ್ಡಣ್ಣ ಪೆರಾಜೆ ಅವರು ಪುಸ್ತಕವೇ ಬರೆದಿದ್ದಾರೆ. ಈ ನಿಟ್ಟಿನಲ್ಲಿ ನಾನು ಲಗೋರಿ ಆಟದ ಕುರಿತು ಜಿಲ್ಲಾ ಕಮಿಟಿ ಅಧ್ಯಕ್ಷನಾದೆ.ಹಾಗಾಗಿ ಸವಣೂರಿನಲ್ಲಿ ೫ ಲಗೋರಿ ಆಟ ಆಡಿ ಜನತೆಗೆ ಪರಿಚಯಿಸಿದ್ದೇವೆ. ಪ್ರಸ್ತುತ ದಿನದಲ್ಲಿ ಪಟ್ಟಣ ಪ್ರದೇಶದಲ್ಲಿ ಕ್ರಿಕೇಟ್ ಆಡವಾಡಿಸದೆ ಗ್ರಾಮೀಣ ಕ್ರೀಡೆ ಗೆ ಪ್ರೋತ್ಸಾಹ ನೀಡಿ ಲಗೋರಿ ಆಟ ಆಡಿಸುತ್ತಿರುವ ಪುತ್ತೂರು ಕ್ಲಬ್ ಮುತುವರ್ಜಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಲಗೋರಿ ಸರ್ವಾಂಗೀಣ ಕ್ರೀಡೆ:
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ ಶಿವಾನಂದ ಅವರು ಮಾತನಾಡಿ ನಾವೆಲ್ಲ ಮಕ್ಕಳಾಗಿದ್ದಾಗ ಆಡಿದ ಆಟ ಇವತ್ತು ಮತ್ತೋಮ್ಮೆ ಆಡುವ ಅವಕಾಶ ಸಿಕ್ಕಂತಾಗಿದೆ ಎಂದ ಅವರು ಲಗೋರಿಯಲ್ಲಿ ಎಲ್ಲರಿಗೂ ಆಟದ ಅವಕಾಶ ಸಿಗುತ್ತದೆ. ಹಾಗಾಗಿ ಇದು ಸರ್ವಾಂಗೀಣ ಕ್ರೀಡೆ ಆಗಿದೆ. ಸಣ್ಣ ಜಾಗ ಮತ್ತು ಸಿಕ್ಕ ವಸ್ತುಗಳನ್ನು ಬಳಕೆ ಮಾಡುವ ಆಟವಾಗಿರುವ ಲಗೋರಿ ಆಟದ ನೇರ ಪ್ರಸಾರ ಮಾಡಿದ ಮೊದಲ ಕೀರ್ತಿಯು ಇವತ್ತು ನಮ್ಮ ಸುದ್ದಿ ಚಾನೆಲ್ ಗೆ ಸಿಕ್ಕಿರುವುದು ಸಂತೋಷ. ಒಂದೊಮ್ಮೆ ಲಗೋರಿ ಆಟ ನೋಡ ಬಯಸುವವರು ಯಾವ ಸಂದರ್ಭದಲ್ಲೂ ಯೂ ಟ್ಯೂಬ್ ಮೂಲಕ ನೋಡಬಹುದು ಮತ್ತು ಈ ಆಟ ಒಂದು ದಾಖಲೆಯಾಗಿ ಉಳಿಯಲಿದ್ದು ಮುಂದೆ ಕಬ್ಬಡಿಯಂತೆ ಒಲಂಪಿಕ್ ತನಕ ಈ ಆಟ ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು. ಪವಿತ್ರ ರೂಪೇಶ್ ಶೆಟ್ ಪ್ರಾರ್ಥಿಸಿದರು.ಪುತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ ಸ್ವಾಗತಿಸಿದರು.ಉಪಾಧ್ಯಕ್ಷ ದೀಪಕ್, ಖಜಾಂಚಿ ದಿವಾಕರ್, ರೂಪೇಶ್ ಶೇಟ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
16 ತಂಡಗಳಿಂದ ಆಟ
ಪುತ್ತೂರು ಕ್ಲಬ್ ನ ಸದಸ್ಯರು ತಂಡ ನಾಯಕನಾಗಿ ಅವರ ನೇತೃತ್ವದಲ್ಲಿ ಓರ್ವ ಮಹಿಳೆ, ಓರ್ವ ಬಾಲಕ ಸೇರಿದಂತೆ ೫ ಮಂದಿಯ ಒಂದು ತಂಡದಂತೆ ೧೬ ತಂಡ ಕ್ರೀಡೆಯಲ್ಲಿ ಭಾಗವಹಿಸಿದವು. ಒಟ್ಟು ಕ್ರೀಡಾಕೂಟದಲ್ಲಿ ಮುಖ್ಯ ತೀರ್ಪುಗಾರರಾಗಿ ಇಲ್ಯಾಸ್ ಪಿಂಟೋ ನೇತೃತ್ವದಲ್ಲಿ ನರೇಶ್ ಲೊಬೊ, ರಾಜೇಶ್ ಮೂಲ್ಯ ತೀರ್ಪುಗಾರರಾಗಿ ಸಹಕರಿಸಿದರು.
ಸಾಮಾನ್ಯವಾಗಿ 20 ರಿಂದ 25 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳ ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗಿದ್ದ ಅಪ್ಪಟ ಗ್ರಾಮೀಣ ಕ್ರೀಡೆಗಳಾದ ಲಗೋರಿ,ಚಿನ್ನಿದಾಂಡು,ಮರಕೋತಿ, ಕಪ್ಪೆ ಓಟ, ಕುಂಟೆಬಿಲ್ಲೆ, ಸಾಲು ಚಂಡು, ಹಗ್ಗ ಜಗ್ಗಾಟ, ಕಣ್ಣಾಮುಚ್ಚಾಲೆ, ಹತ್ತಿಕಟಗಿ ಬತ್ತಿಕಟಗಿ,ಚೌಕಮಣಿ,ಹುಲಿಗೇರಿ ಇನ್ನೂ ಅನೇಕ ಆಟಗಳು ಮರೆಯಾಗುವ ಲಕ್ಷಣಗಳಿವೆ. ಇಂತಹ ಸಂದರ್ಭದಲ್ಲಿ ಪುತ್ತೂರು ಕ್ಲಬ್ ಗ್ರಾಮೀಣ ಕ್ರೀಡಗಳಳ್ಳೊಂದಾದ ಲಗೋರಿ ಆಟಕ್ಕೆ ಚಾಲನೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ.
ಆಟಗಳಲ್ಲಿ ಅದ್ಬುತ ಶಕ್ತಿ :
ಮೊದಲಿಗೆ ಮಕ್ಕಳಲ್ಲಿಲೆಕ್ಕದ ಪಾಠ,ಕೈ ಹಾಗೂ ಬೆರಳುಗಳಿಗೆ ಒಳ್ಳೆಯ ಆಕ್ಯುಪಂಚರ್ ಒದಗಿಸುತ್ತಿದ್ದವು. ಆಲೋಚನಾ ಶಕ್ತಿ ಹಾಗೂ ಮುಂದಾಲೋಚನೆ ವೃದ್ಧಿಸುತ್ತಿದ್ದವು.ಕೂಡಿ ಆಡುವ ಹೊಂದಾಣಿಕೆ,ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ,ಮಕ್ಕಳಲ್ಲಿದೇಹದ ಸಮತೋಲನ ಹೆಚ್ಚಿಸುತ್ತಿದ್ದವು. ಕೈ,ಕಾಲುಗಳಲ್ಲಿರಕ್ತ ಸಂಚಾರ ವೃದ್ಧಿಸಿ ಸದೃಢವಾಗುವಂತೆ ಮಾಡುತ್ತಿದ್ದವು. ಜೀವನದಲ್ಲಿಗುರಿ ಹೊಂದುವ ಕಲೆ ಹೀಗೆ ಗ್ರಾಮೀಣ ಆಟಗಳ ವಿಶಿಷ್ಠತೆಗಳು ಅನೇಕ. ಹೀಗಾಗಿ ಹಿರಿಯರು ಶ್ರಮಪಟ್ಟು ಹುಟ್ಟಹಾಕಿರುವ ಆಟಗಳನ್ನು ಕಲಿತು. ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕಲಿಸುವ ಪ್ರಯತ್ನ ನಡೆಯಬೇಕಿದೆ.