- ದ.ಕ ಜಿಲ್ಲೆಯಲ್ಲಿ ಕೊರಗಜ್ಜನ ಪ್ರಭಾವ ಬಹಳಷ್ಟಿದೆ-ಬೂಡಿಯಾರು ರಾಧಾಕೃಷ್ಣ ರೈ
ಚಿತ್ರ: ನವೀನ್ ರೈ ಪಂಜಳ
-ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಪರಶುರಾಮನ ತುಳುನಾಡಿನಲ್ಲಿ ಕೊರಗಜ್ಜ ದೈವವನ್ನು ಬೇರೆ ಬೇರೆ ರೀತಿಯಲ್ಲಿ ಆರಾಧಿಸುತ್ತಾರೆ. ಕೊರಗಜ್ಜ ದೈವವನ್ನು ನಂಬಿದವರಿಗೆ ಎಂದಿಗೂ ಕೆಡುಕಾಗದು ಎಂಬ ಮಾತಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗಜ್ಜ ದೈವರ ಪ್ರಭಾವ ಬಹಳಷ್ಟಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಪ್ರಸ್ತುತ ನಿರ್ದೇಶಕರಾದ ಬೂಡಿಯಾರು ರಾಧಾಕೃಷ್ಣ ರೈರವರು ಹೇಳಿದರು.
ಸರಿಸುಮಾರು ೩೮೦ ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಹಾಗೂ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಪದ್ಮಭೂಷಣ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಜರಗಿದ್ದು, ಈ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಮಾತನಾಡಿದರು. ದೈವ-ದೇವರನ್ನು ಭಕ್ತಿಯಲ್ಲಿ ಆರಾಧಿಸಿದಾಗ ದೈವ-ದೇವರು ನಮ್ಮಲ್ಲಿ ಶಕ್ತಿಯನ್ನು ವೃದ್ಧಿಸುತ್ತಾರೆ. ಶಕ್ತಿ ನಮ್ಮಲ್ಲಿ ವೃದ್ಧಿಯಾದಾಗ ನಮ್ಮಿಂದ ಹೆಚ್ಚಿನ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ. ಹಲವಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದ ಕೊರಗಜ್ಜನ ಮಹಿಮೆಯನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ. ಕೊರಗಜ್ಜನನ್ನು ನಂಬಿದರೆ ಯಾವ ರೀತಿ `ಬೆರಿ ಸಹಾಯ’ ನೀಡುತ್ತಿದ್ದಾರೆ ಎನ್ನುವುದು ಎಲ್ಲಾ ಭಕ್ತರಿಗೆ ಗೊತ್ತಿರುವ ವಿಷಯವೇ ಎಂದ ಅವರು ಹದಿನೈದು ತಲೆಮಾರುಗಳಿಂದ ಈ ಕ್ಷೇತ್ರದಲ್ಲಿ ಕೊರಗಜ್ಜನನ್ನು ಆರಾಧಿಸಿಕೊಂಡು ಬಂದಂತಹ ಕುಟುಂಬ ಇಂದು ನಮ್ಮೊಂದಿಗೆ ಇರುವುದು ಸಂತೋಷವೇ ಸರಿ. ಉದ್ಯಮಿ ರವೀಂದ್ರ ಶೆಟ್ಟಿ ನುಳಿಯಾಲುರವರು ಇಲ್ಲಿನ ಕ್ಷೇತ್ರದ ಸಾರಥ್ಯವನ್ನು ವಹಿಸಿಕೊಂಡಿರುವುದು ಅಲ್ಲದೆ ಇಲ್ಲಿನ ಯುವಸಮೂಹದ ಶಕ್ತಿಯೊಂದಿಗೆ ಈ ಭಾಗದಲ್ಲಿ ಕೊರಗಜ್ಜ ದೈವರ ಪುನರ್ ಪ್ರತಿಷ್ಠೆ ಆಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಯಾವುದೇ ದುರುಪಯೋಗವಾಗದ ರೀತಿಯಲ್ಲಿ ಈ ಕ್ಷೇತ್ರವು ಅಭಿವೃದ್ಧಿ ಪಥದತ್ತ ಮುನ್ನೆಡೆದು ಎಲ್ಲರಿಗೂ ಶಾಂತಿ-ನೆಮ್ಮದಿ ಸಿಗುವಂತಾಗಲಿ ಎಂದು ಅವರು ಹೇಳಿದರು.
ಯೋಗ, ಭಾಗ್ಯ ಇವೆರಡೂ ಇದ್ದಾಗ ಅನುಗ್ರಹ ಒಲಿಯುತ್ತದೆ-ವೇ.ಸುಬ್ರಹ್ಮಣ್ಯ ಬಳ್ಳುಕುರಾಯ:
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳುಕುಯರವರು ಧಾರ್ಮಿಕ ಭಾಷಣ ನೀಡುತ್ತಾ ಮಾತನಾಡಿ, ತುಳುನಾಡ ಸಂಸ್ಕೃತಿಯು ಧಾರ್ಮಿಕ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ನಿಂತಿದೆ. ಧಾರ್ಮಿಕ ಪದ್ಧತಿ, ವಿಧಿವಿಧಾನಗಳು ತನ್ನದೇ ಆದ ಚೌಕಟ್ಟಿನಡಿಯಲ್ಲಿ ಬಹಳ ಅಚ್ಚುಕಟ್ಟಾಗಿ ಆಚರಣೆಯನ್ನು ಮಾಡಿಕೊಂಡು ಬಂದಿರುವುದು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾಗಿದೆ ಎಂಬುದು ಶ್ಲಾಘನೀಯ. ದೈವ ಹಾಗೂ ದೇವರು ಎರಡರ ಆರಾಧನೆಯನ್ನು ಶ್ರದ್ಧೆಯಿಂದ ಮಾಡಿದಾಗ ದೇವರ ಹಾಗೂ ದೈವ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದ ಅವರು ಭೂಮಿಯಲ್ಲಿ ಯಾವುದೂ ಶಾಶ್ವತವಲ್ಲ. ಲಕ್ಷ್ಮೀದೇವರನ್ನು ಆರಾಧಿಸಿಕೊಂಡು ಬರುತ್ತಿರುವ ಇಲ್ಲಿನ ಕಲ್ಲೂರಾಯ ಕುಟುಂಬಕ್ಕೂ ಶ್ರೀ ಕ್ಷೇತ್ರ ಮಣ್ಣಾಪು ಪರಿಸರಕ್ಕೂ ಬಹಳ ನಂಟಿದೆ. ಈ ಭಾಗದಲ್ಲಿ ದೈವದ ವಿಶೇಷ ಅನುಗ್ರಹವನ್ನು ಹಿಂದಿನವರು ಪಡೆದುಕೊಂಡು ಬಂದಿದ್ದಾರೆ. ಸಂಪತ್ತಿದ್ದರೆ ಸಾಲದು, ಯೋಗ ಮತ್ತು ಭಾಗ್ಯ ಇವೆರಡೂ ಇದ್ದಾಗ ಎಲ್ಲವೂ ಒಲಿಯುತ್ತದೆ ಎಂದು ಅವರು ಹೇಳಿದರು.
ಕೊರಗಜ್ಜ ದೈವಸ್ಥಾನವನ್ನು ಆಡಂಬರದ, ವ್ಯವಹಾರದ ಕ್ಷೇತ್ರವಾಗಿರುವುದು ವಿಷಾದನೀಯ-ಜಯಂತ್:
ಉದ್ಯಮಿ ಸಂಪ್ಯ ಅಕ್ಷಯ ಫಾರ್ಮ್ಸ್ನ ಜಯಂತ್ ನಡುಬೈಲುರವರು ಮಾತನಾಡಿ, ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೊರಗಜ್ಜನನ್ನು ಆರಾಧಿಸಿಕೊಂಡು ಬರುತ್ತಿದ್ದು, ಕೊರಗಜ್ಜರನ್ನು ಹೃದಯದಿಂದ ನಂಬಿಕೊಂಡು ಬಂದವರಿಗೆ ಅವರ ಕೋರಿಕೆಯನ್ನು ಯಾವುದೇ ತಾರತಾಮ್ಯವಿಲ್ಲದೆ ಕೊರಗಜ್ಜ ಈಡೇರಿಸಿಕೊಡುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಕೆಲವು ಕಡೆಗಳಲ್ಲಿ ಕೊರಗಜ್ಜ ದೈವಸ್ಥಾನ ಎಂಬುದು ಆಡಂಬರದ ಮತ್ತು ವ್ಯವಹಾರದ ಕ್ಷೇತ್ರವಾಗಿ ಬಿಟ್ಟಿರುವುದು ವಿಷಾದನೀಯ. ಇದು ಎಂದಿಗೂ ಶಾಶ್ವತವಾಗಿ ಉಳಿಯದು ಎಂದ ಅವರು ದೇವರು ಎಂದಿಗೂ ತನಗೆ ಬೆಳ್ಳಿ, ಬಂಗಾರದ ಕಿರೀಟ ಬೇಕು ಎಂದು ಕೇಳುವುದಿಲ್ಲ. ಕ್ಷೇತ್ರಕ್ಕೆ ಬಂದಂತಹ ಭಕ್ತರಿಗೆ ಒಳ್ಳೆಯದು ಆಗಬೇಕು ಎನ್ನುವ ದೃಷ್ಟಿಕೋನದಿಂದ ಕೊರಗಜ್ಜನ ಕ್ಷೇತ್ರವಾಗಬೇಕು. ಈ ನಿಟ್ಟಿನಲ್ಲಿ ಕೇವಲ ಭಕ್ತರ ಕೋರಿಕೆಯನ್ನು ಮಾತ್ರ ಕೊರಗಜ್ಜನಿಗೆ ಸಲ್ಲಿಸುವಂತಾಗಬೇಕು, ಆ ಮೂಲಕ ಭಕ್ತರಿಗೆ ಒಳ್ಳೆಯದಾಗಬೇಕು ಎನ್ನುವ ಇಲ್ಲಿನ ಮಣ್ಣಾಪು ಕ್ಷೇತ್ರದ ಯುವಜನತೆ ಈ ಭಾಗದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲುರವರ ಸಾರಥ್ಯದಲ್ಲಿ ಕೊರಗಜ್ಜ ದೈವರ ಕ್ಷೇತ್ರವನ್ನು ಪುನರ್ ಪ್ರತಿಷ್ಠೆಯಾಗುತ್ತಿರುವುದು ಭಕ್ತರ ಪಾಲಿಗೆ ಸುದಿನವಾಗಿದ್ದು, ಶ್ರೀ ಕ್ಷೇತ್ರ ಮಣ್ಣಾಪುವಿನಲ್ಲಿ ಕೊರಗಜ್ಜನ ನೆಲೆ ಬೆಳಗಲಿ ಎಂದು ಅವರು ಹೇಳಿದರು.
ಮಣ್ಣಾಪುದ ಮಾಯೆ ಆಲ್ಬಂ ಬಿಡುಗಡೆ:
ಎಸ್.ಬಿ.ಎಂ ಕ್ರಿಯೇಷನ್ಸ್ನಡಿಯಲ್ಲಿ ರಚಿಸಲಾದ `ಮಣ್ಣಾಪುದ ಮಾಯೆ’ ವೀಡಿಯೋ ಆಲ್ಬಂನ್ನು ಉದ್ಯಮಿ ಜಯಂತ್ ನಡುಬೈಲುರವರು ಬಿಡುಗಡೆಗೊಳಿಸಿದ್ದು, ಯೂಟ್ಯೂಬ್ ಚ್ಯಾನೆಲ್ನಲ್ಲಿ ಈ ವೀಡಿಯೋ ಆಲ್ಬಂನ್ನು ವೀಕ್ಷಿಸಬಹುದಾಗಿದೆ. ಈ ವೀಡಿಯೋ ಆಲ್ಬಂಗೆ ತರುಣ ನವೀನ್ ಎಂ.ರವರು ಸಾಹಿತ್ಯ ಬರೆದು, ಹಿನ್ನಲೆ ಸಂಗೀತ ನೀಡಿ ನಿರ್ದೇಶಿಸಿದ್ದಾರೆ. ಹಾಡುಗಾರರಾದ ಭರತ್ ಎ.ಜಿ ಹಾಗೂ ಸವಿತರವರ ಮಧುರ ಕಂಠವು ಈ ಆಲ್ಬಂ ಹೊಂದಿದೆ. ರಾಕೇಶ್ ಎಣ್ಮೂರುರವರ ಸಹ ನಿರ್ದೇಶನ ಹಾಗೂ ಪ್ರೋತ್ಸಾಹ, ಜನನಿ ಕ್ರಿಯೇಷನ್ಸ್ನ ಮಹೇಶ್ರವರ ಕ್ಯಾಮೆರಾ ಕೈಚಳಕದಲ್ಲಿ ಎಡಿಟಿಂಗ್, ಕಬಕ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಇದರ ಮಿಥುನ್ ರಾಜ್ ವಿದ್ಯಾಪುರರವರ ಮಿಕ್ಸಿಂಗ್ ಮತ್ತು ಮಸ್ಟರಿಂಗ್ ಉತ್ತಮವಾಗಿ ಮೂಡಿ ಬಂದಿದೆ.
ಸಹಕರಿಸಿದವರಿಗೆ ಗೌರವ:
ಶ್ರೀ ಕ್ಷೇತ್ರದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಲು ಸಹಕರಿಸಿದ ಪಂಚಮಿ ಶಾಮಿಯಾನದ ವಿಶ್ವನಾಥ ನಾಯ್ಕ, ಲೈಟಿಂಗ್ಸ್ ವ್ಯವಸ್ಥೆ ಮಾಡಿದ ಸಹ್ಯಾದ್ರಿ ಲೈಟಿಂಗ್ಸ್ನ ಭವಿತ್ ಶಿಬರ, ಕೊರಗಜ್ಜ ದೈವದ ಕಟ್ಟೆ ಅಲಂಕಾರ ಮಾಡಿದ ರಾಧಾಕೃಷ್ಣ ಮೊಟ್ಟೆತ್ತಡ್ಕ, ನೀರಿನ ಟಾಂಕಿಯ ವ್ಯವಸ್ಥೆ ಮಾಡಿದ ಯಶವಂತ ನಾಯಕ್ ಪೇರಾಜೆ, ವಿಶ್ವನಾಥ ನಾಯ್ಕ ಅಮ್ಮುಂಜ, ಕಟ್ಟೆ ನಿರ್ಮಾಣ ಮಾಡುವಲ್ಲಿ ಸಹಕರಿಸಿದ ಆನಂದ ಗೌಡ, ಕಾರ್ಯಕ್ರಮದ ವಿಡೀಯೋ ಚಿತ್ರೀಕರಿಸಿದ ನಮ್ಮ ಟಿವಿ ಚಾನೆಲ್ನ ಚೇತನ್, ಕೊರಗಜ್ಜ ದೈವಕ್ಕೆ ತಟ್ಟೆ ನೀಡಿ ಸಹಕರಿಸಿದ ಲಕ್ಷ್ಮೀ ರಾಮು ಕೆಮ್ಮಿಂಜೆ, ಕಾರ್ಯಕ್ರಮವನ್ನು ಸುದ್ದಿ ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡಿದ ಸುದ್ದಿಯ ಪರವಾಗಿ ಶಿವಪ್ರಸಾದ್, ಪೊಟೋಗ್ರಾಫರ್ ನವೀನ್ ರೈ ಪಂಜಳ ಸಹಿತ ಹಲವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಭಾಗವಹಿಸಿದ ಭಜನಾ ತಂಡಗಳು:
ಶ್ರೀ ಕ್ಷೇತ್ರದಲ್ಲಿ ವಿವಿಧ ಭಜನಾ ತಂಡಗಳಾದ ನೆಲ್ಲಿಕಟ್ಟೆ ಶ್ರೀ ವಜ್ರಮಾತಾ ಭಜನಾ ಮಂಡಳಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಪಾಲಿಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ, ಮೊಟ್ಟೆತ್ತಡ್ಕ-ಮಿಶನ್ಮೂಲೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಮೊಟ್ಟೆತ್ತಡ್ಕ-ಮಣ್ಣಾಪು ಶ್ರೀ ಸ್ವಾಮಿ ಕೊರಗಜ್ಜ ಭಜನಾ ಮಂಡಳಿ ತಂಡದಿಂದ ಭಜನಾ ಕಾರ್ಯಕ್ರಮ ಜರಗಿತು.
ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಮೊಟ್ಟೆತ್ತಡ್ಕ, ಕಾರ್ಯದರ್ಶಿ ದಿನೇಶ್ ಎಂ.ಕೆಮ್ಮಿಂಜೆ, ಸಹ-ಕಾರ್ಯದರ್ಶಿ ವಿಶ್ವನಾಥ್ ನಾಯ್ಕ ಅಮ್ಮುಂಜ, ಕೋಶಾಧಿಕಾರಿ ಯಶವಂತ ನಾಯ್ಕ ಪೇರಾಜೆ, ಮಣ್ಣಾಪು-ಕೆಮ್ಮಿಂಜೆಯ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಕಾರ್ಯದರ್ಶಿ ಉಮೇಶ್ ಮಣ್ಣಾಪು, ಉಪಾಧ್ಯಕ್ಷ ಕೇಶವ ಮಣ್ಣಾಪು, ಕೋಶಾಧಿಕಾರಿ ಅಂಗಾರ ಮಣ್ಣಾಪು ಕೆಮ್ಮಿಂಜೆ, ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆ, ದೈವದ ಪ್ರಧಾನ ಅರ್ಚಕ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ಗುರುವ ಬದಿಯಡ್ಕ ಮುಂಡೂರು, ಸದಸ್ಯರುಗಳಾದ ರವಿ ಕೆ.ಮಣ್ಣಾಪು, ಸಾಂತಪ್ಪ ಮಣ್ಣಾಪು, ಸತೀಶ ಕೆ.ಮಣ್ಣಾಪು, ಪ್ರವೀಣ ಎಸ್.ಮಣ್ಣಾಪು, ಸುಶೀಲ ಮಣ್ಣಾಪು, ದೇವಕಿ ಮಣ್ಣಾಪು, ಗುರುವ ಮಣ್ಣಾಪು, ಬಾಬು ಮಣ್ಣಾಪು, ನಾರಾಯಣ ಮಣ್ಣಾಪು, ಕೃಷ್ಣಪ್ಪ ಮಣ್ಣಾಪು, ಲಕ್ಷ್ಮೀ ಮಣ್ಣಾಪು, ಚನ್ನು ಮಣ್ಣಾಪು, ಹಸಿರುವಾಣಿ ಸಮಿತಿಯ ಸಿ.ಎಸ್ ಚಂದ್ರ ಸಿಂಹವನ, ಸುಧೀರ್ ಅತ್ತಾಳ, ಅಶೋಕ್ ಬಂಟ್ವಾಳ ದೇವಸ್ಯ ಮನೆ, ಕೇಶವ ಮೂಲ್ಯ ಮೊಟ್ಟೆತ್ತಡ್ಕ, ಚಂದ್ರಕಾಂತ ಅತ್ತಾಳ, ರಾಧಾಕೃಷ್ಣ ಆಚಾರ್ಯ, ಅಲಂಕಾರ ಸಮಿತಿಯ ಸತೀಶ್ ಕೆ.ಮಣ್ಣಾಪು, ಲೋಕೇಶ್ ಜಿ.ಆರ್ ಮಣ್ಣಾಪು, ನಿತೀನ್ ಮಣ್ಣಾಪು, ಆದಿತ್ಯ ಮಣ್ಣಾಪು, ಉಗ್ರಾಣ ಸಮಿತಿಯ ಆಶ್ರಯ ಕಾಲನಿ ಜಯ ಸ್ಟೋರ್ನ ಜಯಂತ, ಮನೋಹರ್ ಮಣ್ಣಾಪುರವರು ವಿವಿಧ ಕಾರ್ಯಗಳನ್ನು ನಿರ್ವಹಿಸಿದರು.
ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೇಣುಗೋಪಾಲ ಗೌಡ, ಉದ್ಯಮಿ ಉಪೇಂದ್ರ ಬಲ್ಯಾಯ, ನಗರಸಭಾ ಸದಸ್ಯ ಶೀನಪ್ಪ ನಾಯ್ಕ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ್, ತಂತ್ರಿತ್ತಾಯ ಮನೆತನದ ಶಿವಪ್ರಸಾದ್ ಕಲ್ಲೂರಾಯ, ಶ್ರೀ ಕ್ಷೇತ್ರ ಮಣ್ಣಾಪು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಮಣ್ಣಾಪುರವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಗಂಗಾಧರ ಮಣ್ಣಾಪು ಸ್ವಾಗತಿಸಿದರು. ಕು|ಸವಿತಾ ಪ್ರಾರ್ಥಿಸಿ, ವಂದಿಸಿದರು. ಪುರುಷೋತ್ತಮ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ಯುವಕರೇ ಶ್ರೀ ಕ್ಷೇತ್ರದ ಶಕ್ತಿ….
ಇಂದಿನ ಈ ಕಲಿಯುಗದಲ್ಲಿ ಮಾನವನಿಗೆ ಪ್ರಾರ್ಥಿಸಿದ್ದನ್ನು ಕರುಣಿಸುವ ಕೊರಗಜ್ಜ ದೈವವೇ ದೇವರು ಆಗಿದ್ದಾರೆ. ಈ ಕ್ಷೇತ್ರದ ಮೂಲ ಕುತ್ತಾರ್ಪದವು ಆಗಿದ್ದು, ಸಂಪ್ರದಾಯ ಪ್ರಕಾರ ಕೊರಗಜ್ಜನ ಕಟ್ಟೆಯನ್ನು ಸಿಮೆಂಟ್ ಬಳಸದೆ ಕೆಂಪು ಕಲ್ಲು ಮತ್ತು ಲಾವಾ ಮರದ ತೊಗಟೆ ರಸಮಿಶ್ರಿತ ಮಣ್ಣು ಹಾಗೂ ಬೆಲ್ಲ ಸೇರಿಸಿ ನಿರ್ಮಾಣ ಮಾಡಲಾಗಿದೆ. ಈ ಮಣ್ಣಾಪು ಕ್ಷೇತ್ರದಲ್ಲಿ ಶ್ರೀಮಂತರಿಲ್ಲ ಬದಲಾಗಿ ಹೃದಯವಂತರು ಇದ್ದಾರೆ. ಕೇವಲ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಇಲ್ಲಿನ ಕುಟುಂಬವಾಗಿದೆ. ಯಾವುದೇ ಸರಕಾರದ ಅನುದಾನಗಳಲ್ಲಿದೆ ಇಲ್ಲಿನ ಕೊರಗಜ್ಜ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕೈಂಕರ್ಯಕ್ಕೆ ಇಲ್ಲಿನ ಯುವಜನತೆ ಒಂದಾಗಿದೆ. ಯುವಕರೇ ಈ ಕ್ಷೇತ್ರದ ಶಕ್ತಿಯಾಗಿದ್ದು, ಈ ಕ್ಷೇತ್ರದ ಮಕ್ಕಳಿಗೆ ಒಳ್ಳೆಯ ಉದ್ಯೋಗ ಕೊಡಿಸುವ ಮೂಲಕ ಸುಖ, ಸಂಪತ್ತು, ಆರೋಗ್ಯವನ್ನು ಕರುಣಿಸುವ ಭಾಗ್ಯ ಕೊರಗಜ್ಜ ದೇವರು ನೀಡಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ.
-ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಕ್ಷೇತ್ರ ಮಣ್ಣಾಪು
ಪವಾಡ..
ಕ್ಷೇತ್ರದ ಕೊರಗಜ್ಜನ ಮೂಲಶಿಲೆಯನ್ನು ತರಲು ಮೂಲಸ್ಥಾನಕ್ಕೆ ಹೊರಡುವಾಗ ಕತ್ತಲು ಆವರಿಸಬೇಕಂತೆ. ಈ ನಿಟ್ಟಿನಲ್ಲಿ ಪ್ರಧಾನ ದ್ವಾರದ ಬಳಿ ಸ್ವಿಚ್ನ್ನು ಅಳವಡಿಸಲಾಗಿದ್ದು ಓರ್ವರಿಗೆ ಇದರ ಜವಾಬ್ದಾರಿಯನ್ನು ಕೂಡ ನೀಡಲಾಗಿತ್ತು. ಆದರೆ ಹೊರಡುವಷ್ಟರಲ್ಲಿ ಜನರೇಟರ್ ಯಥಾಸ್ಥಿತಿಯಲ್ಲಿರುವಾಗಲೇ ಹಠಾತ್ತನೆ ಕರೆಂಟ್ ಹೋಗಿ ಕತ್ತಲು ಆವರಿಸಿತ್ತು. ಜವಾಬ್ದಾರಿ ವಹಿಸಿಕೊಂಡವರು ತಾನು ಸ್ವಿಚ್ ಆಫ್ ಮಾಡಿಲ್ಲ ಎನ್ನುವ ವಿಷಯ ಬೆಳಕಿಗೆ ಬಂತು. ದೈವವು ಪ್ರವೇಶ ದ್ವಾರಕ್ಕೆ ಬಂದೊಡನೆಯೇ ಕರೆಂಟ್ ಆಗಮಿಸಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. ನೆರೆದ ಭಕ್ತರೆಲ್ಲಾ ಇದು ನಿಜವಾಗಿಯೂ ಕೊರಗಜ್ಜನ ಪವಾಡವಾಗಿದೆ ಎಂದು ಆಡಿಕೊಳ್ಳುತ್ತಿದ್ದರು. .
ನಾಲ್ವರಿಗೆ ಸನ್ಮಾನ…
ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಹಾಗೂ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವದ ನೇತೃತ್ವ ವಹಿಸಿದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ದೈವದ ಅರ್ಚಕರಾಗಿ ಸೇವೆಗೈಯುತ್ತಿರುವ ಹರೀಶ್ ಕೇಪು ವಿಟ್ಲ, ಶ್ರೀ ಕ್ಷೇತ್ರದಲ್ಲಿ ಮಧ್ಯಸ್ತರಾಗಿ ಸೇವೆ ಸಲ್ಲಿಸುತ್ತಿರುವ ಗಣೇಶ್ ಪೂಜಾರಿ ಕೆಮ್ಮಿಂಜೆ ಹಾಗೂ ಶ್ರೀ ಕ್ಷೇತ್ರದ ಪ್ರಚಾರವನ್ನು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಉತ್ತಮ ರೀತಿಯಲ್ಲಿ ಪ್ರಚಾರ ಪಡಿಸಿದ ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರನ್ನು ಗುರುತಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.