ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ, ಸಂಸ್ಥೆಯ ತತ್ವಗಳು ಮತ್ತು ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು.ಆಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ಸರಕಾರದ ಎಡಿಷನಲ್ ಅಡ್ವೊಕೇಟ್ ಜನರಲ್ ಅರುಣ ಶ್ಯಾಮ್ ಹೇಳಿದರು.
ಅವರು ವಿವೇಕಾನಂದ ಕಾನೂನು ಕಾಲೇಜು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂ ಡೆಲ್ಲಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಪ್ರೇರಣಾ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿಭಾಗವಹಿಸಿ, ಮಾತನಾಡಿದರು.
ಸಂವಿಧಾನ ಇರುವುದರಿಂದ ಸಮಾಜ ಅಜಾಗರೂಕತೆ ಇಲ್ಲದೆ ಇದೆ. ಹಾಗಾಗಿ ಕಾನೂನು ವಿದ್ಯಾರ್ಥಿಗಳು ಕಾನೂನಿನ ಜೊತೆಗೆ ಸಮಾಜದ ಏಳಿಗೆಗೆ ಕೈಜೋಡಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಕಾಲೇಜಿನ ವಕೀಲ ಮತ್ತು ಹಿರಿಯ ವಿದ್ಯಾರ್ಥಿ ಸುಧೀರ್ ಕುಮಾರ್ ತೋಳ್ಪಾಡಿಯವರ ಸಾಕ್ಷ್ಯದ ಕಾನೂನು ಎಂಬ ಪುಸ್ತಕವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ಬಿಡುಗಡೆಗೊಳಿಸಿದರು. ಎಡಿಷನಲ್ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಂ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸುಧೀರ್ ಕುಮಾರ್ ತೋಳ್ಪಾಡಿ ಮಾತನಾಡಿ, ಒಬ್ಬ ಕಾನೂನು ವಿದ್ಯಾರ್ಥಿ ಕಾನೂನಿನ ಜೊತೆಗೆ ಮನುಷ್ಯನ ವರ್ತನೆಯ ಬಗ್ಗೆ ಅಧ್ಯಯನ ಮಾಡುತ್ತಾನೆ . ಆದ್ದರಿಂದ ಮೊದಲು ಆತ ಕಾನೂನಿನ ಬಗ್ಗೆ ಹೇಗೆ, ಏನು,ಯಾಕೆ ಎನ್ನುದನ್ನು ಅರಿತು ಕೊಂಡರೆ ಮಾತ್ರ, ಸಂಪೂರ್ಣವಾಗಿ ತಿಳಿಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಭಾರತದವು ಪ್ರಜಾಪ್ರಭುತ್ವ ದೇಶವಾಗಿದೆ. ಕಾನೂನು ವಿದ್ಯಾರ್ಥಿಗಳು ಕಾನೂನನ್ನು ಕಲಿಯುವುದರ ಜೊತೆಗೆ ಪ್ರಜೆಗಳಿಗೆ ಅದರ ಬಗ್ಗೆ ಅರಿವು ಮೂಡಿಸಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಕಡೆಗೆ ಹೆಚ್ಚೆ ಹಾಕಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ವಿವೇಕಾನಂದ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ವಿಶ್ವೇಶ್ವರ ಭಟ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ., ವಕೀಲ ಮತ್ತು ಹಳೆಯ ವಿದ್ಯಾರ್ಥಿ ದೀಪಕ್ ಬೊಲ್ವರ್ , ಕಾನೂನು ಅಧ್ಯಯನದ ನಿರ್ದೇಶಕ ಡಾ. ಬಿ.ಕೆ. ರವೀಂದ್ರ ಮತ್ತು ವಕೀಲ ಅರವಿಂದ್ ವಿ ಉಪಸ್ಥಿತರಿದ್ದರು.
ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿ ಗಾಯತ್ರಿ ಮತ್ತು ಬಳಗ ಪ್ರಾರ್ಥಸಿ, ಪ್ರಾಂಶುಪಾಲ ಅಕ್ಷತಾ ಎ.ಪಿ ಸ್ವಾಗತಿಸಿ, ಉಪನ್ಯಾಸಕಿ ಸಂಗೀತ ಎಸ್.ಎಮ್. ವಂದಿಸಿದರು. ಕಾರ್ಯಕ್ರಮವನ್ನು ಆಂಗ್ಲ ಉಪನ್ಯಾಸಕಿ ಸಂಧ್ಯಾ ಪಿ.ಎಮ್ ಮತ್ತು ಕಾನೂನು ಉಪನ್ಯಾಸಕಿ ಹಿತ ದೇಚಮ್ಮ ನಿರೂಪಿಸಿದರು.