- ಪರವಾನಿಗೆ ರಹಿತ ಗಣಿಗಾರಿಕೆ ಮಾಡಿದರೆ ಕಾನೂನುಕ್ರಮ: ಪಿಡಿಒ ಎಚ್ಚರಿಕೆ
ಪುತ್ತೂರು: ಬಡಗನ್ನೂರು ಗ್ರಾಮದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದ್ದು , ಗಣಿಗಾರಿಕೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿದ್ದರೂ ಅವೆಲ್ಲವನ್ನೂ ಗಾಳಿಗೆ ತೂರಿ ಈ ಭಾಗದಲ್ಲಿ ನಿರಂತರ ಗಣಿಗಾರಿಕೆ ನನಡೆಯುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದೆ.
ಗಡಿಗ್ರಾಮವಾದ ಬಡಗನ್ನೂರಿನಲ್ಲಿ ಪಕ್ಕದ ಕೇರಳ ಗಡಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ಈ ಹಿಂದೆಯೂ ನಡೆಯುತ್ತಿತ್ತು. ಗಡಿಭಾಗದಲ್ಲಿ ನಡೆಯುವ ಗಣಿಗಾರಿಕೆಗೆ ಕೇರಳ ಸರಕಾರದ ಅನುಮತಿ ಇದೆ ಆದರೆ ಕರ್ನಾಟಕದ ಯಾವುದೇ ಭಾಗದಲ್ಲಿ ಗಣಿಗಾರಿಕೆ ನಡೆಯುವುದಾದರೂ ಅದಕ್ಕೆ ಪರವಾನಿಗೆ ಅತೀ ಅಗತ್ಯವಾಗಿದೆ. ಇತ್ತೀಚೆಗಿನ ದಿನಗಳ ವರೆಗೆ ಪರವಾನಿಗೆ ರಹಿತವಾಗಿ ಗಡಿಗ್ರಾಮದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಕಳೆದ ಒಂದು ತಿಂಗಳ ಹಿಂದೆ ಕೆಂಪು ಕಲ್ಲು ಗಣಿಗಾರಿಕೆಗೆ ಪರವಾನಿಗೆ ಕಡ್ಡಾಯವಾಗಿ ಪಡೆಯಬೇಕು ಎಂಬ ನಿಯಮವನ್ನು ಸರಕಾರ ಜಾರಿ ಮಾಡಿದೆ. ಈ ಕಾರಣಕ್ಕೆ ಕೆಲದಿನಗಳ ಕಾಲ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಪರವಾನಿಗೆ ರಹಿತವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾನೂನು ಜಾರಿಯಾದರೆ ಅದು ಎಲ್ಲರಿಗೂ ಅನ್ವಯವಾಗಬೇಕಿದೆ, ಉಳ್ಳವರಿಗೊಂದು ಕಾನೂನು , ಬಡವರಿಗೊಂದು ನಿಯಮ ಎಂಬಂತಗಬಾರದು ಎಂದು ಆರೋಪಿಸುವ ಗ್ರಾಮಸ್ಥರು ಅಕ್ರಮ ಕಲ್ಲು ಗಣಿಗಾರಿಕೆಯ ಹಿಂದೆ ತಳಮಟ್ಟದ ಅಧಿಕಾರಿಗಳ ಬೆಂಬಲವೂ ಇದೆ ಎಂದು ಆರೋಪಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಅಕ್ರಮ ಗಣಿಗಾರಿಕೆಗೆ ತಡೆ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಬಡಗನ್ನೂರು ಗ್ರಾಮದಲ್ಲಿ ಎರಡು ಪರವಾನಿಗೆ ಸಹಿತ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನಾನು ಖುದ್ದಾಗಿ ತೆರಳಿ ಪರಿಶೀಲನೆ ಮಾಡಿ ಅಕ್ರಮ ಪತ್ತೆಯಾದರೆ ಕಾನೂನು ಕ್ರಮಕೈಗೊಳ್ಳುತ್ತೇನೆ- ವಸೀಂ ಗಂಧದ, ಗ್ರಾಪಂ ಪಿಡಿಒ
ಗಣಿಗಾರಿಕೆ ನಡೆಸಬೇಕಾದರೆ ಜಿಲ್ಲಾಧಿಕಾರಿಗಳಿಂದ ಪರವಾನಿಗೆ ಪಡೆಯಬೇಕು. ಸ್ಥಳೀಯ ಗ್ರಾಪಂ ಪಿಡಿಒ ಪರವಾನಿಗೆ ನೀಡಲು ಸಾಧ್ಯವಿಲ್ಲ. ಯಾವುದೇ ಗ್ರಾಪಂ ಪಿಡಿಒಗಳು ಗಣಿಗಾರಿಕೆ ನೆಸುವಲ್ಲಿ ಪರವಾನಿಗೆ ಅಥವಾ ತಾತ್ಕಾಲಿಕ ಪರವಾನಿಗೆ ನೀಡುವಂತಿಲ್ಲ. ನೀಡಿದರೆ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ – ನವೀನ್ ಭಂಡಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಪುತ್ತೂರು