ಪುತ್ತೂರು: ವಿದ್ಯಾರ್ಥಿಗಳು ಶಿಸ್ತು ಹಾಗೂ ಗುಣಮಟ್ಟದ ಶಿಕ್ಷಣವನ್ನು ಕಾಯ್ದುಕೊಳ್ಳುವುದರ ಜೊತೆಗೆ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಾಗ ಯಶಸ್ಸನ್ನು ಗಳಿಸಬಹುದು ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಹೇಳಿದರು.
ಅವರು ಫೆ.1ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವವನ್ನು ಕಾಲೇಜಿನ ಆವರಣದಲ್ಲಿನ ವೇದಿಕೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕೊರೋನಾ ಹಾವಳಿಯ ಬಳಿಕ ಬಹಳ ತಡವಾಗಿ ಕಾಲೇಜನ್ನು ಆರಂಭಿಸಲಾಗಿದ್ದು, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಸ್ಪೆಷಲ್ ಬ್ಯಾಚಿನ ವಿದ್ಯಾರ್ಥಿಗಳು ಎಂದು ಹೇಳಬಹುದಾಗಿದೆ. ಯಾಕೆಂದರೆ ಈ ಕೋವಿಡ್ ವರ್ಷವನ್ನು ಯಾರೂ ಮರೆಯುವ ಹಾಗಿಲ್ಲದೆ ಜೀವನದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವರ್ಷವಾಗಿದೆ. ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿ ಕಲಿಕೆಗೆ ಬೇಕಾದ ಪೂರಕ ವಾತಾವರಣವಿದ್ದು, ಈ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮೆರೆದಿದೆ. ದೇವರು ಕೊಟ್ಟ ಈ ಜೀವನವನ್ನು ಸಂತೋಷದಿಂದ ಬಾಳುವುದರ ಜೊತೆಗೆ, ಒಂದು ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡುವುದರಿಂದ ಜೀವನ ನಿಜವಾದ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾರಾದ ವಂ|ವಿಜಯ್ ಲೋಬೋರವರು ಮಾತನಾಡಿ, ಪ್ರಸ್ತುತ ವರ್ಷ ಕೋವಿಡ್ನಿಂದಾಗಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷಾ ಸಮಯದ ಸಂದರ್ಭದಲ್ಲಿ ತರಗತಿಗಳನ್ನು ಆರಂಭಿಸುವ ಸ್ಥಿತಿಗೆ ಬಂದಿದ್ದೇವೆ. ಕಳೆದ ವರ್ಷ ನಮ್ಮ ಸಂಸ್ಥೆಯು ರಾಜ್ಯಮಟ್ಟದಲ್ಲಿ ನಾಲ್ಕು ರ್ಯಾಂಕ್ಗಳನ್ನು ಗಳಿಸಿದ ಹಿರಿಮೆ ನಮ್ಮದಾಗಿದೆ. ಮಂಗಳೂರು ಕಥೋಲಿಕ್ ಬೋರ್ಡ್ನ ಅಧೀನದಲ್ಲಿರುವ ನಮ್ಮ ಸಂಸ್ಥೆಯ ಜೊತೆಗೆ ಇತರ ಹನ್ನೊಂದು ಸಂಸ್ಥೆಯು ಒಳಗೊಂಡಿದ್ದು, ಫಿಲೋಮಿನಾ ವಿದ್ಯಾಸಂಸ್ಥೆಯು ಎಲ್ಲಾ ವಿಭಾಗಗಳಲ್ಲೂ ಉನ್ನತ ಸ್ಥಾನದಲ್ಲಿದೆ. ವಿದ್ಯಾರ್ಥಿಗಳು ಕಲಿಕೆಗೆ ಸದಾ ಒತ್ತು ನೀಡಿ, ಉತ್ತಮ ವರ್ತನೆಯನ್ನು ಬೆಳೆಸಿಕೊಂಡಾಗ ಸಾಧನೆ ಒಲಿಯಲು ಸಾಧ್ಯ ಎಂದರು.
ವಿಜ್ಞಾನ ವಿಭಾಗದ ಡೀನ್ ಯಶ್ವಂತ್ ಎಂ.ಡಿರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸುಮನಾ ಪ್ರಶಾಂತ್ ನೇತೃತ್ವದ ಪ್ರದಶಣ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕಿ ಡಾ|ಆಶಾ ಸಾವಿತ್ರಿರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಎಸೆಸ್ಸೆಲ್ಸಿ ಗರಿಷ್ಟ ಅಂಕ ಗಳಿಸಿದವರಿಗೆ ಗೌರವ…
ಕಳೆದ ವರ್ಷ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಪಡೆದ, ಪ್ರಸ್ತುತ ಫಿಲೋಮಿನಾ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪಿಸಿಎಂಬಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪುಣ್ಯ ಎಂ.ರೈ(೬೨೦/೬೨೫) ಹಾಗೂ ನೆಹರುನಗರ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿ ರೋಹನ್ ಜಿ.(೬೧೦/೬೨೫)ರವರಿಗೆ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಸ್ಮರಣಿಕೆ ನೀಡಿ ಗೌರವಿಸಿದರು.