ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಇದರ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ಅಧಿಕೃತ ಭೇಟಿ ಕಾರ್ಯಕ್ರಮವು ಫೆ. 3ರಂದು ಸಂಜೆ ಸರಕಾರಿ ನೌಕರರ ಸಂಘದ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.
ರೋಟರಿ ಕ್ಲಬ್ ಯುವದ ವತಿಯಿಂದ ವಿವಿಧ ಸಮಾಜ ಸೇವೆಗಳನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ರವರು, ಯುವ ತರುಣರ ಸಮೂಹವನ್ನು ಹೊಂದಿರುವ ಯುವ ಹೊಸ ಹೊಸ ಯೋಜನೆಗಳಿಗೆ ಆಧ್ಯತೆ ನೀಡಿದೆ. ರೋಟರಿ ಕ್ಲಬ್ ಉತ್ತಮ ಅವಕಾಶಗಳನ್ನು ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದರು.
ಸಹಾಯಕ ಗವರ್ನರ್ ರತ್ನಾಕರ ರೈ, ವಲಯ ಸೇನಾನಿ ಜಗಜ್ಜೀವನ್ ದಾಸ್ ರೈ ಮಾತನಾಡಿ ಶುಭಹಾರೈಸಿದರು. ಮಂಗಳೂರು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ರಜನಿ ಭಟ್, ಕ್ಲಬ್ ನ ಪೂರ್ವಾಧ್ಯಕ್ಷ ಡಾ.ಚೇತನ್ ಪ್ರಕಾಶ್, ನಿಯೋಜಿತ ಅಧ್ಯಕ್ಷ ಭರತ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಜಿಲ್ಲಾ ಗವರ್ನರ್ ರಂಗನಾಥ್ ಭಟ್, ಧನ್ವಂತರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಚಂದ್ರಶೇಖರ ಕಜೆ, ಸಾವಯವ ಕೃಷಿಕ ಸತೀಶ್ ಗೌಡ ಬಲ್ನಾಡುರವರನ್ನು ಸನ್ಮಾನಿಸಲಾಯಿತು.
ಸಿವಿಲ್ ಇಂಜಿನಿಯರ್ ಶಿವಪ್ರಸಾದ್, ಕಾರ್ತಿಕ್ ಪೆರ್ವೋಡಿ ಯವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆ ಗೊಳಿಸಲಾಯಿತು. ಜೀವಿಕ ಕಜೆ ಪ್ರಾರ್ಥಿಸಿದರು. ಅಧ್ಯಕ್ಷ ಡಾ.ಹರ್ಷಕುಮಾರ್ ರೈ ಸ್ವಾಗತಿಸಿದರು. ಉಮೇಶ್ ನಾಯಕ್ ವರದಿ ವಾಚಿಸಿದರು. ಕುಸುಮ್ ರಾಜ್, ದೀಕ್ಷಾ, ವಿನೀತ್ ಶೆಣೈ, ಸೂರಜ್ ಶೆಟ್ಟಿ, ದಿನೇಶ್ ಶೆಣೈ,ದೇವಿಚರಣ್, ಕೀರ್ತನ್ ಹೆಗ್ಡೆ, ಸಚಿನ್ ನಾಯಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಅಶ್ವಿನಿ ಕೃಷ್ಣ ಹಾಗೂ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಉಮೇಶ್ ನಾಯಕ್ ವಂದಿಸಿದರು.