ಪುತ್ತೂರು : ವಿಶ್ವ ಕೊಂಕಣಿ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ನಿವಾಸಿ ಉಜಿರೆ ಶ್ರೀ.ಧ.ಮ. ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ| ಉಮಾನಾಥ ಶೆಣೈಯವರನ್ನು ಕಶೆಕೋಡಿಯ ಶ್ರೀಲಕ್ಷ್ಮಿ ವೆಂಕಟರಮಣ ದೇವಾಲಯದ ವಾರ್ಷಿಕ ಜಾತ್ರೋತ್ಸವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಜಾತ್ರೋತ್ಸವದಲ್ಲಿ ಪುತ್ತೂರಿನ ಜಿ.ಎಸ್.ಬಿ. ಸಮಾಜದ ಮಹಿಳೆಯರಿಂದ ಶ್ರೀವಿಷ್ಣು ಸಹಸ್ರನಾಮ ಪಠಣ ಮತ್ತು ಭಜನಾ ಕಾರ್ಯಕ್ರಮ ನಡೆಸಲಾಯಿತು.
ದೇವಾಲಯದ ಆಡಳಿತ ಮೊಕ್ತೇಸರ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಪುತ್ತೂರಿನ ನೆಹರುನಗರದ ಸಂಜೀವ ನಾಯಕ್ರವರು ಸ್ವಾಗತಿಸಿ ಶ್ರೀವೆಂಕಟರಮಣ ಸ್ವಾಮಿಯ ಶಾಲು ಪ್ರಸಾದಗಳನ್ನಿತ್ತು ಉಮಾನಾಥ ಶೆಣೈ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಶಾಂತರಾಮ ಶೆಣೈ ಪ್ರಸ್ತಾವನೆಗೈದು ಮಾತನಾಡಿ ಕೊಂಕಣಿ ಭಾಷೆಯನ್ನಾಡುವ ವಿಶ್ವದ ಏಳು ಸಮಾಜಗಳು ಒಟ್ಟು ಸೇರಿ ಕೊಡಮಾಡಿದ ಈ ವಿಶ್ವ ಕೊಂಕಣಿ ಪ್ರಶಸ್ತಿ ಅಮೂಲ್ಯವಾದುದು. ಒಂದು ಲಕ್ಷ ರೂಪಾಯಿಯನ್ನು ಒಳಗೊಂಡಿದ್ದು ನಾವೆಲ್ಲ ಅಭಿಮಾನ ಪಡುವಂಥಾದ್ದೆಂದು ತಿಳಿಸಿದರು.
ವಿಜಯ ಕುಮಾರಿ ಯು. ಶೆಣೈ, ಕಂಟಿಕ ಗೋಪಾಲ್ ಶೆಣೈ, ಸುಬ್ರಹ್ಮಣ್ಯ ಶೆಣೈ, ವತ್ಸಲಾ ನಾಯಕ್, ಮಂಗಳೂರಿನ ಜಗದೀಶ್ ಶೆಣೈ, ವಿಜಯಾ ಆರ್. ನಾಯಕ್, ಉಷಾ ಭಟ್, ವೀಣಾ ನಾಯಕ್ ಮುಂತಾದ ಸಮಾಜ ಬಾಂಧವರು ಉಪಸ್ಥಿತರಿದ್ದರು.