- ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮ – ಜೀವಂಧರ್ ಜೈನ್
ಪುತ್ತೂರು: ಪುತ್ತೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿ ಸಮೀಪ ಕುಮಾರಧಾರಾ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಕ್ಕಾಗಿ ಮಾನವ ಶ್ರಮದ ಹಲಗೆ ಜೋಡಣೆ ಪೂರ್ಣಗೊಂಡಿದ್ದು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಪೌರಾಯುಕ್ತರು ಫೆ. 11ರಂದು ಕಿಂಡಿ ಅಣೆಕಟ್ಟು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
12 ವರ್ಷಗಳ ಹಿಂದೆ ಕುಡ್ಸೆಂಪ್ ಯೋಜನೆಯಡಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನಲ್ಲಿ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಅಣೆಕಟ್ಟಿನಲ್ಲಿ ನೀರು ಶೇಖರಣೆಗಾಗಿ ಹಲಗೆ ಜೋಡಣೆ ಮಾಡಲಾಗುತ್ತದೆ. ಈ ಭಾರಿ ಡ್ಯಾಮ್ನಲ್ಲಿ ನೀರಿನ ಅಭಾವ ತಲೆ ದೋರಿದ ಹಿನ್ನೆಲೆಯಲ್ಲಿ ತಕ್ಷಣ ಹಲಗೆ ಜೋಡಣೆ ಮಾಡಲು ಸೂಚಿಸಲಾಗಿತ್ತು. ಇದೀಗ ಹಲಗೆ ಜೋಡಣೆ ಪೂರ್ಣಗೊಂಡಿದೆ ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದರು.
ಅಣೆಕಟ್ಟಿನ ನೀರಿನ ಮಟ್ಟ ಭರ್ತಿ:
ಕುಮಾರಧಾರ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಲ್ಲಿ ಈಗಾಗಲೇ ಒಟ್ಟು 66 ಕಿಂಡಿಗಳಿಗೆ 396 ಹಲಗೆ ಜೋಡಣೆ ಮಾಡಲಾಗಿದೆ. 21 ದಿನಗಳ ಮಾನವ ಶ್ರಮದಿಂದ ಈ ಕೆಲಸ ಕಾರ್ಯ ನಡೆಯುತ್ತದೆ. ಈಗಾಗಲೇ 630 ಎಮ್.ಎಲ್.ಡಿ ನೀರು ಸಂಗ್ರಹವಾಗಿದ್ದು, ಅಣೆಕಟ್ಟಿನಲ್ಲಿ ನೀರಿನ ಮಟ್ಟ ಭರ್ತಿಯಾಗಿ ಹೆಚ್ಚಾದ ನೀರು ಅಣೆಕಟ್ಟಿನ ಮೇಲ್ಮೈಯಿಂದ ಹರಿಯುತ್ತಿದೆ. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಪೌರಾಯುಕ್ತೆ ರೂಪಾ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣ್, ನೀರಿನ ವಿಭಾಗದ ಮುಖ್ಯಸ್ಥ ವಸಂತ್ ಸೇರಿದಂತೆ ಪಂಪ್ಹೌಸ್ ನಿರ್ವಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಈಗಾಗಲೇ ಡ್ಯಾಮ್ನಲ್ಲಿ ನೀರಿನ ಮಟ್ಟ ಇಳಿಕೆ ಕಂಡ ಕಾರಣ ಡ್ಯಾಮ್ಗೆ ಹಲಿಗೆ ಹಾಕಿ ನೀರು ಶೇಖರಣೆ ಮಾಡಲಾಗಿದೆ. 21 ದಿನಗಳಿಂದ ಹಲಿಗೆ ಜೋಡಣೆ ಕೆಲಸ ಪೂರ್ಣಗೊಂಡಿದೆ. ಇನ್ನೂ ಮೂರು ತಿಂಗಳು ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಲಸಿರಿಯಿಂದ ಮುಂದೆ 2 ಹೊಸ ಪಂಪ್, ಜನರೇಟರ್ ಅಳವಡಿಕೆ ನಡೆದು ನಿರಂತರ ನೀರು ಸರಬರಾಜು ಯೋಜನೆ ನಡೆಯಲಿದೆ. ಡ್ಯಾಮ್ ಸೋರಿಕೆಯನ್ನು ಜಲಸಿರಿಯವರೇ ದುರಸ್ಥಿ ಮಾಡಲಿದ್ದಾರೆ – ಜೀವಂದರ್ ಜೈನ್, ಅಧ್ಯಕ್ಷರು ನಗರಸಭೆ ಪುತ್ತೂರು