ವಿಟ್ಲ: ಸಮಭಲ ಸಾಧಿಸಿ ಕುತೂಹಲಕ್ಕೆ ಕಾರಣವಾಗಿದ್ದ ಗ್ರಾಮ ಪಂಚಾಯತ್ ಗಳ ಪೈಕಿ ಕೆದಿಲ ಗ್ರಾಮ ಪಂಚಾಯತ್ ನ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಆಯ್ಕೆಯಾಗಿ ಬಳಿಕ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಜಯಂತಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಉಮೇಶ್ ಪೂಜಾರಿ ಮುರುವ ರವರು ಆಯ್ಕೆಯಾಗಿದ್ದಾರೆ.
ಕೆದಿಲ ಗ್ರಾಮ ಪಂಚಾಯತ್ ನಲ್ಲಿ ಒಟ್ಟು ೧೪ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ತಲಾ ೭ ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಮಬಲ ಸಾಧಿಸಿದ್ದರು. ಈ ಮಧ್ಯೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಜಯಂತಿಯವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಫೆ.12ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಜಯಂತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್ ಪೂಜಾರಿ ಮುರುವ ರವರು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಬಿಪಾತುಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಜೀಜ್ ರವರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದ ಬಳಿಕ ಮತ ಎಣಿಕೆ ವೇಳೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಮಾನ ಮತ ಲಭಿಸಿದ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಗ್ರಾ.ಪಂ ಆಡಳಿತಾಧಿಕಾರಿ ಪ್ರವೀಣ್ ಜೋಶಿಯವರು ಚುನಾವಣೆ ನಡೆಸಿಕೊಟ್ಟರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ದಿನೇಶ್ ರವರು ಸಹಕರಿಸಿದರು.