ರಾಮಕುಂಜ: ರಾಮಕುಂಜ ಸರಕಾರಿ ಹಿ.ಪ್ರಾ.ಶಾಲಾ ಜಾಗ ಅತಿಕ್ರಮಣಗೊಂಡಿದೆ ಎಂದು ಪೋಷಕರ ದೂರಿನ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ರವರು ಫೆ.೧೬ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಮಕುಂಜ ಗ್ರಾಮದ ಸರ್ವೆ ನಂ.೨೬೪/೨ಬಿಯಲ್ಲಿ ೧೦ ಸೆಂಟ್ಸ್ ಜಾಗ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ರಾಮಕುಂಜ ಇವರಿಗೆ ಮಂಜೂರುಗೊಂಡಿದೆ. ಈ ಜಾಗವನ್ನು ಸ್ಥಳೀಯರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಪೋಷಕರು ಹಾಗೂ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ರವರು ಫೆ.೧೬ರಂದು ಸಂಜೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಜಾಗದ ಅಳತೆ ಮಾಡಿ ಮುಂದಿನ ಕ್ರಮಕೈಗೊಳ್ಳುವಂತೆ ಶಾಲಾ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಶಾಲಾ ಮುಖ್ಯಶಿಕ್ಷಕ ಮಹೇಶ್, ಆಲಂಕಾರು ಶಾಲಾ ಮುಖ್ಯಶಿಕ್ಷಕ ನಿಂಗರಾಜು, ಕೊಯಿಲ ಶಾಲಾ ಮುಖ್ಯಶಿಕ್ಷಕ ಕುಶಾಲಪ್ಪ ಗೌಡ, ಎಸ್ಡಿಎಂಸಿ ಸದಸ್ಯ ಕರೀಂ, ಶಾಲಾ ಶಿಕ್ಷಕರು, ಸ್ಥಳೀಯರು ಈ ವೇಳೆ ಉಪಸ್ಥಿತರಿದ್ದರು.