- ಅಧ್ಯಕ್ಷತೆಗೆ ಕಾಂಗ್ರೆಸ್ ಬೆಂಬಲಿತೆಯಾಗಿ ವಿದ್ಯಾಲಕ್ಷ್ಮಿ, ಬಿಜೆಪಿ.ಯಿಂದ ಉಷಾ ಮುಳಿಯ ಸ್ಪರ್ಧೆ
- ಉಪಾಧ್ಯಕ್ಷತೆಗೆ ಕಾಂಗ್ರೆಸ್ನಿಂದ ಯು.ಟಿ. ಮಹಮ್ಮದ್ ತೌಸೀಫ್, ಬಿಜೆಪಿ.ಯಿಂದ ವಿನಾಯಕ ಪೈ ಸ್ಪರ್ಧೆ
- ಸಮಮತ, ಚೀಟಿ ಎತ್ತುವ ಮೂಲಕ ಆಯ್ಕೆ.
ಉಪ್ಪಿನಂಗಡಿ: ಬಿಜೆಪಿ ಬಂಡಾಯ ಸದಸ್ಯ ಕಾಂಗ್ರೆಸ್ ತೆಕ್ಕೆಗೆ, ಬಿಜೆಪಿ. ಬೆಂಬಲಿತೆಯಾಗಿದ್ದ ಸದಸ್ಯೆ ಕಾಂಗ್ರೆಸ್ ತೆಕ್ಕೆಗೆ, ಕಾಂಗ್ರೆಸ್ ಬೆಂಬಲಿತ ಸದಸ್ಯ ಬಿಜೆಪಿ. ತೆಕ್ಕೆಗೆ ಹೀಗೆ ವಿಚಿತ್ರ ರೀತಿಯಲ್ಲಿ ರಾಜಕೀಯ ತಿರುವು ಪಡೆಯುವುದರೊಂದಿಗೆ ಬಹಳ ಕುತೂಹಲಕಾರಿಯಾಗಿ ನಡೆದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಚುನಾವಣೆಯಲ್ಲಿ ೨೦ ಸದಸ್ಯ ಸ್ಥಾನದ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ. ಬೆಂಬಲಿತ ಸದಸ್ಯರು ಸಮಮತ ೧೦ ಮತ್ತು ೧೦ ಪಡೆದುಕೊಂಡು ಬಳಿಕ ನಡೆದ ಅದೃಷ್ಠ ಚೀಟಿ ಎತ್ತುವಿಕೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳು ಬಿಜೆಪಿ. ಪಾಲಿಗೆ ಒಲಿದು ಅಧಿಕಾರ ಪಡೆದುಕೊಂಡಿದೆ.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಮಹಿಳೆ ಮೀಸಲು ಅಧ್ಯಕ್ಷೆ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತೆಯಾಗಿ ವಿದ್ಯಾಲಕ್ಷ್ಮಿ ಮತ್ತು ಬಿಜೆಪಿ. ಬೆಂಬಲಿತರಾಗಿ ಉಷಾ ಚಂದ್ರ ಮುಳಿಯ ಕಣದಲ್ಲಿ ಇದ್ದು, ಈರ್ವರೂ ೧೦ ಸಮಮತ ಪಡೆದರು. ಬಳಿಕ ಚೀಟಿ ಎತ್ತಲಾಗಿ ಅದೃಷ್ಠ ಚೀಟಿ ಎತ್ತುವಿಕೆಯಲ್ಲಿ ಉಷಾ ಚಂದ್ರ ಮುಳಿಯ ಅಧ್ಯಕ್ಷರಾಗಿ ಆಯ್ಕೆಯಾದರು.
ಸಾಮಾನ್ಯ ಸ್ಥಾನ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಯು.ಟಿ. ಮಹಮ್ಮದ್ ತೌಸೀಫ್ ಮತ್ತು ಬಿಜೆಪಿ. ಬೆಂಬಲಿತರಾಗಿ ವಿನಾಯಕ ಪೈ ಕಣದಲ್ಲಿ ಇದ್ದರು. ಈರ್ವರೂ ೧೦ ಸಮಮತ ಪಡೆದರು. ಹೀಗಾಗಿ ಚೀಟಿ ಎತ್ತಲಾಗಿ ಚೀಟಿ ಎತ್ತುವಿಕೆಯಲ್ಲಿ ವಿನಾಯಕ ಪೈ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಕಾಂಗ್ರೆಸ್ನಿಂದ ಬಿಜೆಪಿ. ತೆಕ್ಕೆಗೆ, ಬಿಜೆಪಿ.ಯಿಂದ ಕಾಂಗ್ರೆಸ್ ತೆಕ್ಕೆಗೆ:
ಒಟ್ಟು ೨೦ ಸದಸ್ಯ ಬಲದಲ್ಲಿ ವಿದ್ಯಾಲಕ್ಷ್ಮಿ, ಲೋಕೇಶ್ ಪೂಜಾರಿ, ಉಷಾ ಮುಳಿಯ, ಉಷಾ ನಾಯಕ್, ಧನಂಜಯ, ರುಕ್ಮಿಣಿ, ಶೋಭಾ, ಸುರೇಶ್ ಅತ್ರಮಜಲು, ವನಿತಾ, ಜಯಂತಿ ಹೀಗೆ ೧೦ ಮಂದಿ ಬಿಜೆಪಿ. ಬೆಂಬಲಿತರಾಗಿ, ಮಹಮ್ಮದ್ ತೌಸೀಫ್, ವಿನಾಯಕ ಪೈ, ಲಲಿತ, ಯು.ಕೆ. ಇಬ್ರಾಹಿಂ, ಕೆ. ಅಬ್ದುಲ್ ರಹಿಮಾನ್ ಹೀಗೆ ೫ ಮಂದಿ ಕಾಂಗ್ರೆಸ್ ಬೆಂಬಲಿತರಾಗಿ, ಮೈಸಂ ಇಬ್ರಾಹಿಂ, ಅಬ್ದುಲ್ ರಶೀದ್, ನೆಬಿಸ, ಸೌದ ಹೀಗೆ ೪ ಮಂದಿ ಎಸ್.ಡಿ.ಪಿ.ಐ. ಬೆಂಬಲಿತ ಸದಸ್ಯರಾಗಿ, ಸಣ್ಣಣ್ಣ ಪಕ್ಷೇತರನಾಗಿ ಚುನಾಯಿತರಾಗಿದ್ದರು.
ಕಾಂಗ್ರೆಸ್ ಬೆಂಬಲಿತ ಬಿಜೆಪಿ ತೆಕ್ಕೆಗೆ, ಬಿಜೆಪಿ. ಪಕ್ಷೇತರ, ಬೆಂಬಲಿತೆ ಕಾಂಗ್ರೆಸ್ ತೆಕ್ಕೆಗೆ:
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎಸ್.ಡಿ.ಪಿ.ಐ. ಬೆಂಬಲಿತರಾಗಿದ್ದ ೪ ಮಂದಿ ಮತ್ತು ಪಕ್ಷೇತರ ಸದಸ್ಯ ಸೇರಿದಂತೆ ೫ ಮಂದಿ ಕಾಂಗ್ರೆಸ್ ಬೆಂಬಲಕ್ಕೆ ನಿಂತರು. ಬಿಜೆಪಿ. ಬೆಂಬಲಿತೆಯಾಗಿದ್ದ ವಿದ್ಯಾಲಕ್ಷ್ಮಿಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡು ಅಧ್ಯಕ್ಷ ಅಭ್ಯರ್ಥಿಯನ್ನಾಗಿ ಮಾಡಿ ಕಣಕ್ಕೆ ಇಳಿಸಿತ್ತು. ಈ ಮಧ್ಯೆ ಕಾಂಗ್ರೆಸ್ ಬೆಂಬಲಿತನಾಗಿದ್ದ ವಿನಾಯಕ ಪೈಯವರನ್ನು ಬಿಜೆಪಿ. ತನ್ನ ತೆಕ್ಕೆಗೆ ಸೆಳೆದುಕೊಂಡು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಮಾಡಿ ಕಣಕ್ಕೆ ಇಳಿಸಿತ್ತು. ಈ ರೀತಿಯಾಗಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ. ಮತ್ತು ಕಾಂಗ್ರೆಸ್ ೧೦ ಸಮಬಲ ಪಡೆದುಕೊಂಡು ಕೊನೆಗೆ ಅದೃಷ್ಠ ಚೀಟಿಯ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡುವಂತಾಯಿತು.
ಕಳೆದ ಸಾಲಿನಲ್ಲಿ ಅಧ್ಯಕ್ಷ ಹುದ್ದೆ ಅದೃಷ್ಠ ಚೀಟಿ ಮೂಲಕ ಆಯ್ಕೆ ಆಗಿದ್ದು
ಕಳೆದ ೨೦೧೫ರ ಸಾಲಿನಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ೧೦, ಬಿಜೆಪಿ. ೧೦ ಸ್ಥಾನ ಗಳಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಕೆ. ಅಬ್ದುಲ್ ರಹಿಮಾನ್ ಮತ್ತು ಬಿಜೆಪಿ.ಯಿಂದ ಗೋಪಾಲ ಹೆಗ್ಡೆ ಸ್ಪರ್ಧಿಸಿದ್ದರು. ಇಬ್ಬರೂ ಸಮಮತ ಪಡೆದು ಬಳಿಕ ಚೀಟಿ ಎತ್ತುವ ಮೂಲಕ ಅಬ್ದುಲ್ ರಹಿಮಾನ್ ಅಧ್ಯಕ್ಷರಾಗಿದ್ದರು.
ಉಪಾಧ್ಯಕ್ಷತೆಗೆ ಕಾಂಗ್ರೆಸ್ ಬೆಂಬಲಿತೆಯಾಗಿ ಚಂದ್ರಾವತಿ ಹೆಗ್ಡೆ ಮತ್ತು ಬಿಜೆಪಿ.ಯಿಂದ ಹೇಮಲತಾ ಶೆಟ್ಟಿ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ಸದಸ್ಯರೋರ್ವರು ಅಡ್ಡಮತ ಚಲಾವಣೆ ಆದ ಪರಿಣಾಮ ಬಿಜೆಪಿ. ಬೆಂಬಲಿತೆ ಹೇಮಲತಾ ಶೆಟ್ಟಿ ಉಪಾಧ್ಯಕ್ಷರಾಗಿದ್ದರು.