ಕಡಬ: ತಾಲೂಕಿನ 21 ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಫೆ,೧೬ರಂದು ಮರ್ದಾಳ ಗ್ರಾ.ಪಂ.ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಹರೀಶ್ ಕೋಡಂದೂರು ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪುರಂದರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ಬಿಜೆಪಿ ಬೆಂಬಲಿತರಾಗಿದ್ದಾರೆ. ೯ ಸದಸ್ಯ ಬಲದ ಮರ್ದಾಳ ಗ್ರಾ.ಪಂ.ನಲ್ಲಿ ೬ ಮಂದಿ ಬಿಜೆಪಿ ಬೆಂಬಲಿತರು ಹಾಗೂ ೩ ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿತ್ತು. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ಆನಂದ ಗೌಡ ಸಹಕರಿಸಿದರು. ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಮರ್ದಾಳ ಶಕ್ತಿ ಕೇಂದ್ರ ಉಸ್ತುವಾರಿ ಉಮೇಶ್ ಶೆಟ್ಟಿ ಸಾಯಿರಾಂ, ಎಪಿಎಂಸಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ನಿರ್ದೇಶಕರಾದ ಮೇದಪ್ಪ ಗೌಡ ಡೆಪ್ಪುಣಿ, ಪುಲಸ್ತ್ಯಾ ರೈ, ಬಿಜೆಪಿಯ ಹಿರಿಯ ಮುಖಂಡರಾದ ಎ.ಬಿ.ಮನೋಹರ ರೈ ಜನಾರ್ದನ ಗೌಡ ಪುತ್ತಿಲ ಮತ್ತಿತರರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಗ್ರಾ.ಪಂ.ನ ನೂತನ ಸದಸ್ಯರು ಆಯ್ಕೆ ವೇಳೆ ಹಾಜರಿದ್ದರು.