HomePage_Banner
HomePage_Banner
HomePage_Banner
HomePage_Banner

ಆರ್ಯಾಪು-ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಾವೆಲ್ಲರೂ ಒಂದೇ ಎಂಬ ಮನೋಭಾವವಿದ್ದಾಗ ಎಲ್ಲವೂ ಸುಭೀಕ್ಷೆ-ಮೋಹನದಾಸ ಸ್ವಾಮೀಜಿ

ಪುತ್ತೂರು: ಜನನ, ಜೀವನ, ಮರಣ ಈ ಮೂರಕ್ಷರದ ಪದವೇ ನಮ್ಮ ಜನ್ಮವೃತ್ತಾಂತವನ್ನು ಸಾರುತ್ತದೆ. ಭೂಮಿಯಲ್ಲಿ ಬದುಕಿದ್ದಷ್ಟು ದಿನ ಎಲ್ಲರೊಂದಿಗೆ ಪ್ರೀತಿಯಿಂದ, ಆತ್ಮೀಯ ಒಡನಾಟದಿಂದ ಬದುಕಿದಾಗ ಅದುವೇ ಜೀವನ. ಜಾತಿ-ಜಾತಿ ಎಂದು ಕಿತ್ತಾಡುವ ಬದಲು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿದಾಗ ಗ್ರಾಮ, ದೇಶ ಸುಭೀಕ್ಷೆಯತ್ತ ಸಾಗುವುದು ಎಂದು ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಹೇಳಿದರು.

ಆರ್ಯಾಪು ಗ್ರಾಮದ ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿ ಪೂಜೆಯು ಫೆ.೧೬ ರಿಂದ ೧೯ರ ವರೆಗೆ ಶ್ರೀ ಕ್ಷೇತ್ರದಲ್ಲಿ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿವರ್ಯರ ನೇತೃತ್ವದಲ್ಲಿ ನಡೆಯುತ್ತಿದ್ದು, ಫೆ.೧೭ ರಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯ ತಲೆಮಾರುಗಳಿಗೆ ವಿದ್ಯೆ, ಸಂಪತ್ತು ಇರಲಿಲ್ಲ ಆದರೆ ಬುದ್ಧಿವಂತಿಕೆ ಇತ್ತು. ಅವರ ಬುದ್ಧಿವಂತಿಕೆಯ ಫಲವೇ ಇಂದು ದೇವಸ್ಥಾನಗಳು, ದೈವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿರುವುದಾಗಿದೆ. ಇದನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಗೊತ್ತುಪಡಿಸುವುದು ಅತೀ ಮುಖ್ಯವಾಗಿದೆ. ಜಾತಿ-ಜಾತಿಗೆ ದೇವಸ್ಥಾನವಿರಬಾರದು. ಎಲ್ಲಾ ಜಾತಿಯವರ ದೇವಸ್ಥಾನಗಳು ನಮ್ಮದೇ ದೇವಸ್ಥಾನಗಳು ಎಂಬುದಂತೆ ಕಾಣಬೇಕು. ಮನುಷ್ಯ-ಮನುಷ್ಯನಲ್ಲಿ ಮತ್ಸರ ಪಡುವುದು, ಕೀಳಾಗಿ ಕಾಣುವುದು ಹಿಂದು ಸಮಾಜದ ದೊಡ್ಡ ಅನಿಷ್ಟೆಯಾಗಿದೆ. ಬ್ರಾಹ್ಮಣ್ಯ, ಸಂತರು, ರಾಜಸ್ವಿ ಇವೇ ಮೂರು ಶಕ್ತಿಗಳಾದಾಗ ನಮ್ಮ ದೇಶದಲ್ಲಿ ಅಭದ್ರತೆ, ಅನಿಶ್ಚಿತತೆ, ಕ್ರೌರ್ಯ ದೂರವಾಗುವುದು ಎಂದ ಅವರು ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗೆ ಯಾವುದೇ ಸುನಾಮಿ, ಮಾರಕ ವೈರಸ್ ಬರೋದಿಲ್ಲ ಯಾಕೆಂದರೆ ಈ ಭಾಗದಲ್ಲಿ ಭಕ್ತರು ಮಾನವೀಯತೆ, ಶನಿಪೂಜೆ, ನಾಗದೇವರ ಆರಾಧನೆ, ದೈವದೇವರುಗಳನ್ನು ಹಿಂದಿನಿಂದಲೂ ಆರಾಧಿಸಿಕೊಂಡು ಬಂದಿರುವುದಾಗಿದೆ. ಮನುಷ್ಯ ಆಡಂಬರದ ಜೀವನಕ್ಕೆ ಮಾರು ಹೋಗದೆ ಸರಳತೆಯ ಜೀವನವನ್ನು ಕಂಡುಕೊಳ್ಳುವುದರ ಜೊತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಂಡು ಇತರರ ಅಗತ್ಯಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರಬೇಕಾಗುತ್ತದೆ ಎಂದು ಅವರು ಹೇಳಿದರು.

 

ಬಲಿಷ್ಟ ಹಿಂದೂ ಸಮಾಜ ನಿರ್ಮಾಣ ಗುರಿಯಾಗಲಿ-ಬೋರ್ಕರ್:
ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ರವರು ಮಾತನಾಡಿ, ಈ ಪರಿಸರದ ಯುವಕರು ಹಿಂದೂ ಸಮಾಜಕೋಸ್ಕರ, ಭಕ್ತಾಭಿಮಾನಿಗಳಿಗೋಸ್ಕರ ಶ್ರೀ ಕ್ಷೇತ್ರದಲ್ಲಿ ಶ್ರೀ ಅಮ್ಮನವರ ಕಟ್ಟೆ ನಿರ್ಮಾಣ ಮಾಡಿ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ. ಈ ಭಾಗದ ಎಲ್ಲಾ ಜಾತಿಯವರನ್ನು ಒಟ್ಟು ಸೇರಿಸಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿರುವುದು ವಿಶೇಷವೇ ಸರಿ. ಶ್ರದ್ಧೆಯಿಂದ ಭಜನೆ ಹಾಡುವ ಮೂಲಕ ಹಿಂದೂ ಸಂಪ್ರದಾಯವನ್ನು ಎತ್ತಿ ಹಿಡಿದ ಯುವಕರು ಬಲಿಷ್ಟ ಹಿಂದೂ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿ ಹೆಜ್ಜೆಯನ್ನಿಟ್ಟಿದ್ದಾರೆ. ಯಕ್ಷಗಾನ ಕಲೆಯು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ಯಕ್ಷಗಾನವನ್ನು ಏರ್ಪಡಿಸಿರುವುದು ಯಕ್ಷಗಾನ ಕಲೆಗೆ ಸಂದ ಗೌರವವಾಗಿದೆ ಎಂದರು.

ಎಲ್ಲಿ ಭಜನೆ ಇದೆ ಅಲ್ಲಿ ವಿಭಜನೆ ಇರದು-ರಾಧಾಕೃಷ್ಣ ಆಳ್ವ:
ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಭಾರತ ದೇಶದಲ್ಲಿನ ದ.ಕ ಹಾಗೂ ಕಾಸರಗೋಡು ಜಿಲ್ಲೆಯ ಈ ಆರ್‍ಯಾಪು ಪರಿಸರ ದೇವಸ್ಥಾನ, ದೈವಸ್ಥಾನಗಳನ್ನೊಳಗೊಂಡ ದೇವರ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಿಂದೆ ಊರಿನ ಹಿರಿಯರು ಆರಾಧನೆ ಮಾಡಿಕೊಂಡು ಬರುತ್ತಿದ್ದರು. ಈಗ ಇಂದಿನ ಪೀಳಿಗೆಯವರು ನಡೆಸಿಕೊಂಡು ಹೋಗುತ್ತಿದ್ದಾರೆ. ಎಲ್ಲಿ ಭಜನೆ ಇದೆ ಅಲ್ಲಿ ವಿಭಜನೆ ಇರೋದಿಲ್ಲ ಬದಲಾಗಿ ಒಗ್ಗಟ್ಟು ಮನೆ ಮಾಡುತ್ತದೆ ಎನ್ನುವುದು ಸತ್ಯ. ಈ ಪರಿಸರದಲ್ಲಿನ ಭಕ್ತಾಭಿಮಾನಿಗಳು, ದಾನಿಗಳು ತಮ್ಮ ದುಡಿಮೆಯಲ್ಲಿನ ಒಂದಂಶವನ್ನು ಈ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸುವ ಮೂಲಕ ಹೃದಯವಂತಿಕೆಯನ್ನು ಮೆರೆದಿದ್ದಾರೆ ಎಂದರು.

ಶ್ರೀ ಅಮ್ಮನವರ ಕಟ್ಟೆಯ ನಿರ್ಮಾಣ ಮುಖೇನ ನಮ್ಮಲ್ಲಿ ಪರಿವರ್ತನೆಯಾಗಲಿ-ಕಾವು ಹೇಮನಾಥ:
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹೇಮನಾಥ ಶೆಟ್ಟಿ ಕಾವುರವರು ಮಾತನಾಡಿ, ಆರ್‍ಯಾಪು ಗ್ರಾಮದ ಪರಿಸರದ ಗ್ರಾಮಗಳಾದ ಕೆಯ್ಯೂರು, ಒಳಮೊಗ್ರು, ಕೆದಂಬಾಡಿ ಇಲ್ಲಿ ಯಾವುದೇ ದೇವಸ್ಥಾನವಾಗಲಿ, ದೈವಸ್ಥಾನವಾಗಲಿ ಇಲ್ಲ. ಆದರೆ ಆರ್‍ಯಾಪು ಗ್ರಾಮದಲ್ಲಿ ಏಳು ದೇವಸ್ಥಾನ, ಅನೇಕ ದೈವಸ್ಥಾನಗಳು, ಭಜನಾ ಮಂದಿರಗಳಿದ್ದು ಇಲ್ಲಿನ ಭಕ್ತರ ಶಕ್ತಿ ಎಂಥಹುದು ಎಂದು ನಾವು ತಿಳಿದುಕೊಳ್ಳಬೇಕು. ಈ ಭಾಗದಲ್ಲಿ ಹೆಚ್ಚು ದೇವರು ನೆಲೆಯಾಗಿರುವುದು ಈ ಭಾಗದ ಭಕ್ತರು ನಿಜಕ್ಕೂ ಪುಣ್ಯವಂತರಾಗಿದ್ದಾರೆ. ಪ್ರಾಮಾಣಿಕ ಕೆಲಸ ಕಾರ್ಯಗಳು, ಭಕ್ತಿಯ ಪರಾಕಾಷ್ಟೆ ಸಮಾಜದಲ್ಲಿ ನಾವು ಹೇಗೆ ಬದುಕಬೇಕು, ಹೇಗೆ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಎನ್ನುವುದನ್ನು ತೋರಿಸಿಕೊಡುತ್ತದೆ. ಶ್ರೀ ಅಮ್ಮನವರ ಕಟ್ಟೆಯ ನಿರ್ಮಾಣಗೊಳ್ಳುವ ಮೂಲಕ ನಾವು ನಮ್ಮಲ್ಲಿ ಪರಿವರ್ತನೆಯನ್ನು ತಂದುಕೊಳ್ಳಬೇಕಾಗಿದೆ ಎಂದರು.

ಈ ಕ್ಷೇತ್ರವು ಭಕ್ತರ ಆಶಯದಂತೆ ಮತ್ತಷ್ಟು ಅಭಿವೃದ್ಧಿಗೊಳ್ಳಲಿ-ಸತೀಶ್ ರೈ:
ಆರ್ಯಾಪು-ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಗೌರವಾಧ್ಯಕ್ಷರಾದ ಸತೀಶ್ ರೈ ಮಿಷನ್‌ಮೂಲೆರವರು ಮಾತನಾಡಿ, ವ್ಯವಹಾರದ ಒತ್ತಡದ ಮಧ್ಯೆ ಇಲ್ಲಿನ ಪರಿಸರದ ಭಕ್ತರ ಒತ್ತಡಕ್ಕೆ ಮಣಿದು ಇಲ್ಲಿನ ಬ್ರಹ್ಮಕಲಶೋತ್ಸವದ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯವಾಗಿದೆ. ಈ ಪರಿಸರ ಅಭಿವೃದ್ಧಿ ಆಗಬೇಕು ಮತ್ತು ಈ ಶ್ರೀ ಅಮ್ಮನವರ ಕ್ಷೇತ್ರದಲ್ಲಿ ನಿರಂತರ ಪೂಜೆಗಳು ಆಗಬೇಕು, ಯಾವುದೇ ಲೋಪಗಳು ಬರದಂತೆ ಈ ಪರಿಸರ ಅಭಿವೃದ್ಧಿ ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಕಾರ್ಯಗಳು ನಡೀತಿವೆ ಮಾತ್ರವಲ್ಲದೆ ಭಕ್ತರು ಹಾಗೂ ತಂತ್ರಿವರ್ಯರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರವು ಭಕ್ತರ ಆಶಯದಂತೆ ಮತ್ತಷ್ಟು ಅಭಿವೃದ್ಧಿಗೊಳ್ಳಲಿ ಎಂದರು.

ವಾರಕ್ಕೆಮ್ಮೆಯಾದರೂ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ-ಭುಜಂಗ:
ಪುತ್ತೂರು ವಿಶ್ವ ಬ್ರಾಹ್ಮಣ ಸಂಘ ಹಾಗೂ ರಾಧಾಕೃಷ್ಣ ಮಂದಿರದ ಉಪಾಧ್ಯಕ್ಷರಾದ ಎಸ್.ಭುಜಂಗ ಆಚಾರ್ಯರವರು ಮಾತನಾಡಿ, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರವಿಚಂದ್ರ ಆಚಾರ್ಯರವರ ಮನೆಗೆ ನಾನು ಹಲವು ಸಲ ಬಂದಿದ್ದೆ. ಆದರೆ ಇಲ್ಲಿ ಈ ಭಾಗದಲ್ಲಿ ದೇವಸ್ಥಾನವೊಂದಿದೆ ಎಂದು ನನಗೆ ತಿಳಿದೇ ಇರಲಿಲ್ಲ. ಪ್ರಸ್ತುತ ಈ ಭಾಗದಲ್ಲಿ ಶ್ರೀ ಅಮ್ಮನವರ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಹಿರಿಯರ ಮಾರ್ಗದರ್ಶನದಿಂದ ಯಶಸ್ವಿಯಾಗಿ ಆಗುತ್ತಿವೆ. ಊರಿನ ಜನರು ಶ್ರೀ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದರೆ ಉತ್ತಮ, ಇಲ್ಲದಿದ್ದರೆ ವಾರಕ್ಕೆ ಒಂದು ಸಲವಾದರೂ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಬೇಕು ಎಂದರು.

ಗುರುತಿಸುವಿಕೆ:
ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ತಡೆಗೋಡೆ ನಿರ್ಮಿಸುವಲ್ಲಿ ನೆರವಾದ ಮುಕುಂದ ಗುತ್ತಿಗಾರು ಹಾಗೂ ಸುಭಾಷ್ ಗುತ್ತಿಗಾರು, ಅನುವಂಶಿಕ ಆಡಳಿತ ಮೊಕ್ತೇಸರ ಗಂಗಾಧರ ಸೀಗೆಬಲ್ಲೆ, ರಮೇಶ್ ಸೀಗೆಬಲ್ಲೆ, ಮಚ್ಚೇಂದ್ರನಾಥ ಆರ್ಯಾಪು, ಗೋಪಾಲ್ ಜಿ.ಬೆಟ್ಟಂಪಾಡಿ, ಸಂತೋಷ್ ನಂದಾವರ, ಹೊನ್ನಪ್ಪ ಆರ್ಯಾಪು, ಯಾದವ ಪೈಂಟರ್, ಕೊರಗಪ್ಪ ಆರ್ಯಾಪು, ಸತತ ಮೂರು ಶ್ರೀ ಕ್ಷೇತ್ರದಲ್ಲಿ ನೃತ್ಯ ಭಜನಾ ಕಾರ್ಯಕ್ರಮವನ್ನು ನೆರವೇರಿಸಿದ ಕಾರ್ಕಳ ಕೆಳಗಿನಮನೆ ಆದಿಶಕ್ತಿ ಕಾಳಿಕಾಂಬ ಭಜನಾ ಮಂಡಳಿಯ ಸದಸ್ಯರನ್ನು, ಮನಿವಂಶಿ ಮ್ಯೂಸಿಕ್ ಪುತ್ತೂರು ಇದರ ಬಿ.ಕೆ. ಸುಂದರ್ ನೆಲ್ಲಿಗುಂಡಿ ಬಪ್ಪಳಿಗೆ, ಅರ್ಥ್‌ಮೂವರ್‍ಸ್ ಕೆಲಸ ಮಾಡಿದ ಮೋಹನ್‌ದಾಸ್ ಕುಂಬ್ರ, ರಾಜೇಶ್ ನಾಕ್ ಪರ್ಲಡ್ಕ, ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕಗಳನ್ನು ಪಡೆದ ಶ್ರೀ ಕ್ಷೇತ್ರದ ಪರಿಸರದ ಕು|ಹಿತಾ ರೈ ಹಾಗೂ ಕು|ನಿಶ್ಮಿತಾ ಹೊಸಮನೆ, ಸುದ್ದಿ ಪತ್ರಿಕೆಯಲ್ಲಿ ಸವಿಸ್ತಾರ ಪ್ರಚಾರ ನೀಡಿದ ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪುತ್ತೂರು ಆದಿ ದ್ರಾವಿಡ ಸಮಾಜದ ಮುಖಂಡರಾದ ಮೋಹನ್ ನೆಲ್ಲಿಗುಂಡಿ, ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಗಂಗಾಧರ ಸೀಗೆಬಲ್ಲೆ, ಆರ್ಯಾಪು ವ್ಯ.ಸೇ.ಸ.ಬ್ಯಾಂಕ್‌ನ ನಿರ್ದೇಶಕರಾದ ಸತೀಶ್ ನಾಕ್ ಪರ್ಲಡ್ಕ, ಪಣಿರಾಜ ಜೈನ್ ಗುತ್ತಿನ ಮನೆ ಆರ್ಯಾಪು, ಆರ್ಯಾಪು ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಆರ್ಯಾಪು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪೂರ್ಣಿಮಾ ರೈ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರವಿಚಂದ್ರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ದಿನೇಶ್ ರೈ ಮೊಡಪ್ಪಾಡಿಮೂಲೆ, ಕಾರ್ಯದರ್ಶಿ ಲೋಕೇಶ್ ರೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು|ಧನ್ಯಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವದ ಸ್ವಾಗತ ಸಮಿತಿಯ ಸಂಚಾಲಕ ನೇಮಾಕ್ಷ ಸುವರ್ಣ ಸ್ವಾಗತಿಸಿ, ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಅಮ್ಮನವರ ಮೂರ್ತಿ ಪ್ರತಿಷ್ಟಾಪನೆ…
ಪ್ರಾತ:ಕಾಲ ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರನ್ನು ಪ್ರತಿಷ್ಟಾಪಿಸಿ, ಪ್ರಾತ:ಕಾಲ ಶ್ರೀ ಅಮ್ಮನವರ ದೂತರಿಗೆ ಬಲಿ ನೀಡುವುದು. ಮಧ್ಯಾಹ್ನ ಶ್ರೀ ಅಮ್ಮನವರಿಗೆ ಮಹಾಪೂಜೆ ದೈವಗಳಿಗೆ ಪೂಜೆ, ಮಧ್ಯಾಹ್ನ ಮಡಸ್ಥಾನ ಸೇವೆ, ಶ್ರೀ ಅಮ್ಮನವರು ಹಾಗೂ ಇತರೇ ದೈವಗಳಿಂದ ಅಭಯ ಸ್ವೀಕಾರ, ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರ ಮಹಾಪ್ರಸಾದ ವಿತರಣೆ, ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಅಮ್ಮನ ಪ್ರಸಾದ ಜರಗಿತು. ಸಂಜೆ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳ ಭಂಡಾರವನ್ನು ಆರ್ಯಾಪು ನೇರಳಕಟ್ಟೆಯಿಂದ ದೇವಸ್ಥಾನಕ್ಕೆ ಕೊಂಡೊಯ್ದು ಪ್ರತಿಷ್ಟಾಪಿಸಲಾಯಿತು. ಫೆ.೧೯ ರಂದು ಶುಕ್ರವಾರ ಪೂರ್ವಾಹ್ನ ಶುದ್ಧ ಕಲಶ ಮತ್ತು ತಂಬಿಲ ನಡೆಯಿತು. ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ಅಮ್ಮನ ಪ್ರಸಾದ ಬಳಿಕ ಶ್ರೀ ಬೆಂಕೆನಾಥೇಶ್ವರ, ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು, ಬಾಳ, ಮಂಗಳೂರು ದ.ಕ. ಇವರಿಂದ ಯಕ್ಷಗಾನ ಬಯಲಾಟ ಜಗದೀಶ ರೈ, ಲೋಕೋಪಯೋಗಿ ಇಲಾಖೆ ೧ನೇ ದರ್ಜೆ ಗುತ್ತಿಗೆದಾರರು ಮಡಿಕೇರಿ ಇವರ ಪ್ರಾಯೋಜಕತ್ವದ ತುಳುನಾಡಿನ ಜನರ ಮನಗಳಲ್ಲಿ ನೆಲೆಯಾದ ಶ್ರೀ ದೇವಿಯ ಭಕ್ತಿಪ್ರಧಾನ ಸತ್ಯಕಥೆ `ಮಹಿಮೆದ ಮಂತ್ರ ದೇವತೆ’ಯು ಪ್ರದರ್ಶನಗೊಂಡಿತು.

೧೦ ಮಂದಿಗೆ ಸನ್ಮಾನ…
ವಿದೇಶದಲ್ಲಿದ್ದರೂ ಶ್ರೀ ಕ್ಷೇತ್ರದ ಪ್ರತೀ ರೂಪುರೇಷೆಯನ್ನು ನಿರ್ವಹಿಸಿದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ ಮಿಷನ್‌ಮೂಲೆ, ದಿನದ ೨೪ ಗಂಟೆಗಳಲ್ಲಿ ೧೮ ಗಂಟೆ ಶ್ರೀ ಕ್ಷೇತ್ರಕ್ಕೋಸ್ಕರ ಶ್ರಮಿಸಿದ ಹಾಗೂ ಪ್ರತೀದಿನ ಸುಮಾರು ೫೦ ಜನರಿಗೆ ಊಟದ ವ್ಯವಸ್ಥೆ ಮಾಡಿದ ಅಧ್ಯಕ್ಷ ರವಿಚಂದ್ರ ಆಚಾರ್ಯ ದಂಪತಿ ಆರ್ಯಾಪು, ಗ್ರಾನೈಟ್ ವೆಚ್ಚಗಳಿಗೆ ಸಹಕರಿಸಿದ ಪ್ರಧಾನ ಕಾರ್ಯದರ್ಶಿ ದಿನೇಶ್ ರೈ ಮೊಡಪ್ಪಾಡಿಮೂಲೆ, ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಗಳಿಗೆ ಸಹಕರಿಸಿದ ಕಾರ್ಯದರ್ಶಿ ಲೋಕೇಶ್ ರೈ ಮೇರ್ಲ, ಸ್ವಾಗತ ಸಮಿತಿ ಸಂಚಾಲಕ ನೇಮಾಕ್ಷ ಸುವರ್ಣ, ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ಸಂತೋಷ್ ಸುವರ್ಣ ಮೇರ್ಲ, ಸುಧಾಕರ್ ರೈ ಮೊಟ್ಟೆತ್ತಡ್ಕ, ರಾಘವೇಂದ್ರ ರೈ ಮೇರ್ಲ, ನಾಗೇಶ್ ಸಂಪ್ಯರವರನ್ನು ಗುರುತಿಸಿ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.