- ವಿದ್ಯಾರ್ಥಿಗಳಿಂದ ಸಾಧನೆಯ ಪ್ರಗತೀಕರಣವಾಗಬೇಕು-ಮಠಂದೂರು
ಉಪ್ಪಿನಂಗಡಿ: ಶಾಲಾ ಕಾಲೇಜುಗಳಿಂದ ಪ್ರತಿಭಾ ಅನಾವರಣವಾಗಬೇಕು. ಶಿಕ್ಷಣ ಹಾಗೂ ಕ್ರೀಡೆ, ಸಂಶೋಧನಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಂದ ಸಾಧನೆಯ ಪ್ರಗತೀಕರಣವಾಗುವ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವಾಗಲಿ ಎಂದು ಶಾಸಕ ಸಂಜೀವ ಮಟಂದೂರು ಹೇಳಿದರು.
ಅವರು ಫೆ. ೨೨ರಂದು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ತನ್ನ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ ೧ ಹಾಗೂ ವಿ-ಗಾರ್ಡ್ ಸಂಸ್ಥೆಯ ವತಿಯಿಂದ ನೀಡಲಾದ ೨ ಶುದ್ದ ನೀರಿನ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಬುದ್ದಿವಂತರ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವಂತಾಗಬೇಕು ಎಂದರು.
೨ ಶುದ್ಧ ಕುಡಿಯುವ ನೀರಿನ ಘಟಕ ಘಟಕವನ್ನು ಒದಗಿಸಿದ ವಿ-ಗಾರ್ಡ್ ಸಂಸ್ಥೆಯ ಬ್ರಾಂಚ್ ಮೆನೇಜರ್ ಹರ್ಷೇಂದ್ರ ಪ್ರಸಾದ್ ಮಾತನಾಡಿ ಸಂಸ್ಥೆಯ ಸಮಾಜಮುಖಿ ಕಾರ್ಯಚಟುವಟಿಕೆಯ ಅಂಗವಾಗಿ ಈ ಕೊಡುಗೆಯನ್ನು ನೀಡಲಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಸಂದರ್ಭೋಚಿತವಾಗಿ ಮಾತನಾಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧೀರ್, ಪ್ರೌಢ ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎನ್. ಉಮೇಶ್ ಶೆಣೈ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಜಗದೀಶ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಜೆ.ಕೆ ಪೂಜಾರಿ, ಸುರೇಶ್ ಅತ್ರಮಜಲು, ಸುನಿಲ್ ಕುಮಾರ್ ದಡ್ಡು, ಆದಂ ಕೊಪ್ಪಳ, ಸುಮನ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಸ್ವಾಗತಿಸಿ, ಲಕ್ಷ್ಮೀಶ ನಾಯ್ಕ್ ವಂದಿಸಿದರು. ಶಿಕ್ಷಕ ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು.